Asianet Suvarna News Asianet Suvarna News

Guest Lectures Protest : ಅತಿಥಿ ಉಪನ್ಯಾಸಕರ ಮುಷ್ಕರ - ವಿದ್ಯಾರ್ಥಿಗಳ ಸಂಕಷ್ಟ

  • 19000 ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ
  • 13 ದಿನಗಳಿಂದ ಪದವಿ ಕಾಲೇಜುಗಳು ‘ಬಂದ್‌’
Guest Lectures Protest Continue in Karnataka snr
Author
Bengaluru, First Published Dec 23, 2021, 7:10 AM IST

ಸಾಗರ (ಡಿ.23) : ಇಲ್ಲಿನ ಶ್ರೀಮತಿ ಇಂದಿರಾ ಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಬುಧವಾರ ಉಪವಿಭಾಗಾಧಿಕಾರಿ ಮುಖೇನ ಸರ್ಕಾರಕ್ಕೆ ಮನವಿ ಸಲ್ಲಿಸಿದರು.  ಪದವಿ ಕಾಲೇಜಿನಲ್ಲಿ (College)  ಪೂರ್ಣಕಾಲಿಕ ಪ್ರಾಧ್ಯಾಪಕರ ಕೊರತೆ ಇದೆ. ಬಹುತೇಕ ಅತಿಥಿ ಉಪನ್ಯಾಸಕರೇ ಪಾಠ ನಿರ್ವಹಿಸುತ್ತಿದ್ದಾರೆ. ಡಿ.10ರಿಂದ ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತರಗತಿಗಳನ್ನು ಬಹಿಷ್ಕರಿಸಿ ಮುಷ್ಕರ (Protest) ಕೈಗೊಂಡಿದ್ದಾರೆ. ಆದ್ದರಿಂದ ಪದವಿ ತರಗತಿಗಳು ನಡೆಯುತ್ತಿಲ್ಲ ಎಂದು ವಿದ್ಯಾರ್ಥಿನಿಯರು ದೂರಿದರು.

ಉಪನ್ಯಾಸಕರು ಮುಷ್ಕರ ಕೈಗೊಂಡು 12 ದಿನಗಳಾಗುತ್ತಿವೆ. ಅಂದಿನಿಂದ ಇಂದಿನವರೆಗೂ ಯಾವುದೇ ತರಗತಿಗಳು (Class) ಸರಿಯಾಗಿ ನಡೆಯುತ್ತಿಲ್ಲ. ಸರ್ಕಾರ ಸಹ ಸ್ಪಂದಿಸಿ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಬೇಸರದ ಸಂಗತಿ. ತಕ್ಷಣ ಸರ್ಕಾರ ಅತಿಥಿ ಉಪನ್ಯಾಸಕರ ಸಮಸ್ಯೆಯನ್ನು ಬಗೆಹರಿಸುವ ಮೂಲಕ ತರಗತಿಗಳು ಎಂದಿನಂತೆ ನಡೆಯಲು ಅನುವು ಮಾಡಿಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟುಉಗ್ರವಾದ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.

ಇದಕ್ಕೂ ಮೊದಲು ಇಂದಿರಾ ಗಾಂಧಿ ಕಾಲೇಜಿನಿಂದ 1 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ಮೆರವಣಿಗೆ ಮೂಲಕ ಉಪವಿಭಾಗಾಧಿಕಾರಿ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು.

 ಕೊಪ್ಪಳ :  ಸೇವಾ ಭದ್ರತೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರು ( Guest Lectures ) ನಡೆಸುತ್ತಿರುವ ಪ್ರತಿಭಟನೆ ಬುಧವಾರ 13ನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರಿ ಪದವಿ ಕಾಲೇಜು (College)  ವಿದ್ಯಾರ್ಥಿಗಳು (Students)  ಪಾಠ-ಪ್ರವಚನ ಇಲ್ಲದೆ ಪರದಾಡುವಂತಾಗಿದೆ.

ರಾಜ್ಯದಲ್ಲಿ 420 ಸರ್ಕಾರಿ ಪದವಿ ಕಾಲೇಜುಗಳಿದ್ದು, 8 ಲಕ್ಷ ವಿದ್ಯಾರ್ಥಿಗಳಿದ್ದಾರೆ. ನಾಲ್ಕು ಸಾವಿರ ಕಾಯಂ ಉಪನ್ಯಾಸಕರಿದ್ದರೆ, 19 ಸಾವಿರ ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊಪ್ಪಳ (Koppala) ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ 3,500 ವಿದ್ಯಾರ್ಥಿಗಳಿಗೆ 7 ಕಾಯಂ ಉಪನ್ಯಾಸಕರಿದ್ದರೆ, 130 ಅತಿಥಿ ಉಪನ್ಯಾಸಕರಿದ್ದಾರೆ. ಗ್ರಾಮೀಣ (Rural) ಭಾಗದ ಅನೇಕ ಕಾಲೇಜುಗಳಲ್ಲಿ ಒಂದಿಬ್ಬರು ಕಾಯಂ ಉಪನ್ಯಾಸಕರಿದ್ದರೆ, ಉಳಿದವರೆಲ್ಲರೂ ಅತಿಥಿ ಉಪನ್ಯಾಸಕರೇ ಆಗಿದ್ದಾರೆ. ಒಂದು ರೀತಿಯಲ್ಲಿ ಸರ್ಕಾರಿ ಪದವಿ ಕಾಲೇಜುಗಳಲ್ಲಿ ತರಗತಿಗಳು ನಡೆಯುತ್ತಿರುವುದೇ ಅತಿಥಿ ಉಪನ್ಯಾಸಕರಿಂದಾಗಿ ಎನ್ನುವಂತಾಗಿದೆ.

ಕೊರೋನಾ (Corona)  2ನೇ ಅಲೆಯಿಂದಾಗಿ ಸರಿಯಾಗಿ ಪಾಠ-ಪ್ರವಚನಗಳು ನಡೆದಿರಲಿಲ್ಲ. ಕಾಲೇಜುಗಳಲ್ಲಿ ಭೌತಿಕ ತರಗತಿಗಳು ಆರಂಭವಾಗಿ ಮೂರ್ನಾಲ್ಕು ತಿಂಗಳಷ್ಟೇ ಕಳೆದಿದೆ. ಇನ್ನು ಅತಿಥಿ ಉಪನ್ಯಾಸಕರನ್ನು ವಿಳಂಬವಾಗಿ ಅಂದರೆ ಒಂದೂವರೆ ತಿಂಗಳ ಹಿಂದಷ್ಟೇ ಕೆಲಸಕ್ಕೆ ನಿಯೋಜಿಸಿಕೊಂಡ ಹಿನ್ನೆಲೆಯಲ್ಲಿ ಬಹುತೇಕ ಕಾಲೇಜುಗಳಲ್ಲಿ ಸರಿಯಾಗಿ ತರಗತಿಗಳೇ ನಡೆದಿರಲಿಲ್ಲ. ಇದೀಗ ಕಳೆದೆರಡು ವಾರಗಳಿಂದ ಅತಿಥಿ ಉಪನ್ಯಾಸಕರೇ ಪ್ರತಿಭಟನೆಗೆ ಇಳಿದಿರುವ ಕಾರಣ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿದೆ. ಪರೀಕ್ಷೆಗೆ ಸಿದ್ಧತೆ ನಡೆಸುವುದು ಹೇಗೆನ್ನುವ ಆತಂಕ ಕಾಡಲು ಶುರುವಾಗಿದೆ.

ಆಯಾ ಕಾಲೇಜುಗಳ ಮುಂಭಾಗ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿದ್ದು, ಬೇಡಿಕೆ ಈಡೇರಿಸುವರೆಗೂ ತರಗತಿ ತೆಗೆದುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದು ಕೂತಿದ್ದಾರೆ. 50-60 ತರಗತಿಗಳನ್ನು 7 ಕಾಯಂ ಉಪನ್ಯಾಸಕರು ತೆಗೆದುಕೊಳ್ಳಲಾಗದೆ ಪರದಾಡುತ್ತಿದ್ದಾರೆ.

ವಿದ್ಯಾರ್ಥಿಗಳ ಆಕ್ರೋಶ:  ಉತ್ತಮ ಭವಿಷ್ಯದ ದೃಷ್ಟಿಯಿಂದ ಗ್ರಾಮೀಣ (Rural)  ಪ್ರದೇಶದಿಂದ ನಿತ್ಯ ಬಸ್‌ ಹಿಡಿದುಕೊಂಡು ಕಾಲೇಜಿಗೆ ಬರುತ್ತಿದ್ದೇವೆ. ಆದರೆ, ಇಲ್ಲಿ ಕಾಯಂ ಉಪನ್ಯಾಸಕರೇ ಇಲ್ಲ. ಇರುವ ಅತಿಥಿ ಉಪನ್ಯಾಸಕರೂ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಹೀಗಾದರೆ ನಾವು ಪರೀಕ್ಷೆ ಎದುರಿಸುವುದು ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ವಿದ್ಯಾರ್ಥಿಗಳು.

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಅತಿಥಿ ಉಪನ್ಯಾಸಕರ ಸಮಸ್ಯೆ ಕುರಿತು ಚರ್ಚೆಯಾಗಿದೆ. ಸುವರ್ಣ ಸೌಧದ ಹೊರಗೂ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಉನ್ನತ ಶಿಕ್ಷಣ ಸಚಿವರು (Education Minister)  ಬೇಡಿಕೆ ಈಡೇರಿಸುವ ಭರವಸೆಯನ್ನೂ ನೀಡಿದ್ದಾರೆ. ಆದರೆ, ಸೇವಾಭದ್ರತೆ ಹಾಗೂ ವಿವಿಧ ಬೇಡಿಕೆ ಈಡೇರಿಕೆ ಕುರಿತು ಲಿಖಿತ ಭರವಸೆ ನೀಡುವಂತೆ ಉಪನ್ಯಾಸಕರು ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಮುಂದುವರೆದಿದೆ.

ನಮ್ಮ ಬೇಡಿಕೆ ನ್ಯಾಯಯುತವಾಗಿದ್ದು, ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. 15-20 ವರ್ಷಗಳಿಂದ ಅತಂತ್ರ ಸ್ಥಿತಿಯಲ್ಲಿಯೇ ಸೇವೆ ಸಲ್ಲಿಸುತ್ತಿದ್ದೇವೆ. ಇನ್ನಾದರೂ ನಮಗೆ ಸೇವಾ ಭದ್ರತೆ ನೀಡಬೇಕು ಎಂದರು.

ಸೇವಾ ಭದ್ರತೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರು ( Guest Lectures ) ನಡೆಸುತ್ತಿರುವ ಪ್ರತಿಭಟನೆ

19000 ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ

13 ದಿನಗಳಿಂದ ಪದವಿ ಕಾಲೇಜುಗಳು ‘ಬಂದ್‌’

420  ರಾಜ್ಯದಲ್ಲಿರುವ ಸರ್ಕಾರಿ ಪದವಿ ಕಾಲೇಜುಗಳು

8 ಲಕ್ಷ  ಪದವಿ ಕಾಲೇಜುಗಳಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ

4000  ಪದವಿ ಕಾಲೇಜುಗಳಲ್ಲಿರುವ ಕಾಯಂ ಉಪನ್ಯಾಸಕರು

19000  ಪದವಿ ಕಾಲೇಜುಗಳಲ್ಲಿರುವ ಅತಿಥಿ ಉಪನ್ಯಾಸಕರು

 ಬೇಡಿಕೆ ಏನು?

1.ಸೇವೆ ಕಾಯಂ ಮಾಡಬೇಕು

2.ಗೌರವಧನ ಹೆಚ್ಚಿಸಬೇಕು

Follow Us:
Download App:
  • android
  • ios