ರಾಜ್ಯ ಸರ್ಕಾರ ಮಾಜಿ ಸಚಿವ ಎಚ್‌ಎಂ ರೇವಣ್ಣ ಅವರನ್ನು ಸರ್ಕಾರದ ಪ್ರಮುಖ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಕ್ಯಾಬಿನೆಟ್‌ ದರ್ಜೆ ಸ್ಥಾನಮಾನ ನೀಡಿ ಆದೇಶ ಹೊರಡಿಸಿದೆ. 

ಬೆಂಗಳೂರು (ಫೆ,28): ರಾಜ್ಯ ಸರ್ಕಾರದ ಐತಿಹಾಸಿಕ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸಮಿತಿಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ. ಮಾಜಿ ಸಚಿವ ಹೆಚ್.ಎಂ.ರೇವಣ್ಣ ಅವರು ಈ ಸಮಿತಿಯ ಅಧ್ಯಕ್ಷರಾಗಿ ಇರಲಿದ್ದು, ಕ್ಯಾಬಿನೆಟ್‌ ದರ್ಜೆ ಸ್ಥಾನಮಾನವನ್ನು ಹೊಂದಿರಲಿದ್ದಾರೆ. ರಾಜ್ಯ ಸರ್ಕಾರದಲ್ಲಿ ಈಗಾಗಲೇ 91 ಮಂದಿ ಕ್ಯಾಬಿನೆಟ್‌ ದರ್ಜೆ ಸ್ಥಾನಮಾನ ಹೊಂದಿರುವ ಪ್ರತಿನಿಧಿಗಳಿದ್ದು, ಈ ಪಟ್ಟಿಗೆ ಎಚ್‌ಎಂ ರೇವಣ್ಣ ಹೊಸ ಸೇರ್ಪಡೆಯಾಗಿದ್ದಾರೆ. ಈ ಸಮಿತಿಗೆ ಉಪಾಧ್ಯಕ್ಷರಾಗಿ ಮೆಹರೂಜ್ ಖಾನ್, ಪುಷ್ಪ ಅಮರನಾಥ್, ಎಸ್.ಆರ್.ಪಾಟೀಲ್ ಮತ್ತು ಸೂರಜ್ ಹೆಗ್ಡೆ ಅವರ ಹೆಸರನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅನುಮೋದಿಸಿದ್ದಾರೆ. ಇದರೊಂದಿಗೆ ಸಿದ್ಧರಾಮಯ್ಯ ಸರ್ಕಾರ ಇದೇ ಮೊದಲ ಬಾರಿಗೆ ದಾಖಲೆಯ ಸಂಖ್ಯೆಯಲ್ಲಿ ಸಂಪುಟ ದರ್ಜೆ ಸ್ಥಾನಮಾನವನ್ನು ಘೋಷಣೆ ಮಾಡಿದಂತಾಗಿದೆ. ಇದರಲ್ಲಿ ಎಚ್‌ಎಂ ರೇವಣ್ಣ ಸೇರಿದಂತೆ 10 ಮಂದಿ ಜನಪ್ರತಿನಿಧಿಗಳೇ ಅಲ್ಲ ಎನ್ನುವುದು ಗಮನಿಸಬೇಕಾದ ಅಂಶವಾಗಿದೆ.

ರಾಜ್ಯ ಸರ್ಕಾರದಲ್ಲಿ ಈವರೆಗೂ 78 ಶಾಸಕರಿಗೆ ಕ್ಯಾಬಿನೆಟ್‌ ದರ್ಜೆಯ ಸ್ಥಾನಮಾನವನ್ನು ನೀಡಲಾಗಿದ್ದು, ಈಗಾಗಲೇ ಇದು ರಾಜ್ಯದ ಆರ್ಥಿಕ ಇಲಾಖೆಗೆ ಭಾರಿ ಹೊರೆ ಆಗುತ್ತಿದೆ ಎನ್ನುವ ವರದಿಗಳಿವೆ. ವಿಶೇಷವೆಂದರೆ, ರಾಜ್ಯದ ಮುಖ್ಯಮಂತ್ರಿಗಳಿಗೆ 9 ಮಂದಿ ಸಲಹೆಗಾರರು ನೇಮಕ ಮಾಡಲಾಗಿದೆ. ಇವರುಗಳು ವಿಧಾನಸಭೆಯಾಗಲಿ, ವಿಧಾನಪರಿಷತ್‌ನ ಸದಸ್ಯರಲ್ಲ. ಹಾಗಿದ್ದರೂ ಈ ಎಲ್ಲರಿಗೂ ಕ್ಯಾಬಿನೆಟ್‌ ದರ್ಜೆಯ ಸ್ಥಾನಮಾನ ನೀಡಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಬಹುದೊಡ್ಡ ಗೆಲುವಿಗೆ ಕಾರಣರಾಗಿದ್ದ ಚುನಾವಣ ತಂತ್ರಗಾರ ಸುನೀಲ್‌ ಕುನಗೋಳು, ಮುಖ್ಯಮಂತ್ರಿಗಳ ವೈದ್ಯಕೀಯ ಸಲಹೆಗಾರ ಡಾ ಎಚ್‌ ರವಿಕುಮಾರ್‌, , ಮಾಜಿ ಐಎಎಸ್‌ ಅಧಿಕಾರಿ ಹಾಗೂ ಬ್ರಾಂಡ್‌ ಬೆಂಗಳೂರು ತಜ್ಞ ಬಿಎಸ್‌ ಪಾಟೀಲ್‌ ಹಾಗೂ ಎನ್‌ಆರ್‌ಐ ಸೆಲ್‌ನ ಉಪಾಧ್ಯಕ್ಷೆ ಡಾ ಆರತಿ ಕೃಷ್ಣ ಅವರಿಗೂ ಕ್ಯಾಬಿನೆಟ್‌ ದರ್ಜೆಯ ಸ್ಥಾನಮಾನ ನೀಡಲಾಗಿದೆ.

ಕ್ಯಾಬಿನೆಟ್‌ ದರ್ಜೆ ಸ್ಥಾನಮಾನ ಯಾಕೆ ಹೊರೆ: ಕ್ಯಾಬಿನೆಟ್‌ ದರ್ಜೆ ಸ್ಥಾನಮಾನ ಎನ್ನುವುದು ಯಾವುದೇ ಸರ್ಕಾರಕ್ಕಾದರೂ ಹೊರೆ. ಇವರಿಗೆ ಹೆಚ್ಚಿನ ವೇತನ ಇರುವುದು ಮಾತ್ರವಲ್ಲದೆ, ಗರಿಷ್ಠ 14 ಸಿಬ್ಬಂದಿ ನೇಮಕ ಮಾಡಿಕೊಳ್ಳಬಹುದಾಗಿರುತ್ತದೆ. ಅದರೊಂದಿಗೆ ಸರ್ಕಾರದ ವತಿಯಿಂದಲೇ ಕಾರು, ಪೊಲೀಸ್‌ ಭದ್ರತೆಯ ಸೌಲಭ್ಯವೂ ಇರುತ್ತದೆ. ಇದರಿಂದಾಗಿ ಸಾಮಾನ್ಯವಾಗಿ ರಾಜ್ಯ ಸರ್ಕಾರದ ಮಂತ್ರಿಗಳ ಹೊರತಾಗಿ ಮತ್ತೆ ಯಾರಿಗೂ ಕ್ಯಾಬಿನೆಟ್‌ ದರ್ಜೆಯ ಸ್ಥಾನಮಾನ ನೀಡೋದಿಲ್ಲ. ಆದರೆ, ಈ ಬಾರಿ ರಾಜ್ಯ ಸರ್ಕಾರ ನಿಗಮ - ಮಂಡಳಿಗಳು, ಮುಖ್ಯ ಸಚೇತಕರು ಅಥವಾ ರಾಜಕೀಯ ಕಾರ್ಯದರ್ಶಿಗಳಿಗೆ ಕ್ಯಾಬಿನೆಟ್‌ ದರ್ಜೆ ಸ್ಥಾನಮಾನ ನೀಡಿದೆ. 

ಪಾಕಿಸ್ತಾನ ಸರ್ಕಾರದಲ್ಲಿ ಸಚಿವೆಯಾದ ಭಯೋತ್ಪಾದಕ ಯಾಸಿನ್‌ ಮಲೀಕ್‌ ಪತ್ನಿ!

ಇದರ ಬಗ್ಗೆ ಈ ಹಿಂದೆ ಮಾತನಾಡಿದ್ದ ಮಾಜಿ ಸಿಎಂ ಬಸವರಾಜ್‌ ಬೊಮ್ಮಾಯಿ, ಕ್ಯಾಬಿನೆಟ್‌ ದರ್ಜೆಯ ಸ್ಥಾನಮಾನ ನೀಡುವ ಸಂಖ್ಯೆ ಕರ್ನಾಟಕ ವಿಧಾನಸಭೆಯ ಒಟ್ಟು ಸದಸ್ಯರ ಪೈಕಿ ಶೇ.15 ಮೀರಬಾರದು ಎಂಬ ನಿಯಮ ಇದೆ. ಆದರೆ, ಸಿದ್ಧರಾಮಯ್ಯ ಸರ್ಕಾರ ಇದನ್ನು ಮೀರಿದ್ದು, ಇದು ಶೇ. 40ರಷ್ಟು ಹೋಗಿದೆ ಎಂದಿದ್ದರು. ಇದು ಬೊಕ್ಕಸಕ್ಕೆ ಹೊರೆಯಾಗಲಿದೆ ಎನ್ನುವ ಎಚ್ಚರಿಕೆ ನೀಡಿದ್ದರು.

ಶಾಸಕ ವಿಜಯಾನಂದ ಕಾಶಪ್ಪನವರಗೆ ಡಬಲ್ ಧಮಾಕ; ವೀರಶೈವ ನಿಗಮ ಅಧ್ಯಕ್ಷ ಸ್ಥಾನದೊಂದಿಗೆ ಸಂಪುಟ ದರ್ಜೆ ಸ್ಥಾನಮಾನ!