Asianet Suvarna News Asianet Suvarna News

ರೇಷನ್‌ ಕಾರ್ಡ್‌ನಲ್ಲಿ ಯಜಮಾನಿ ಹೆಸರು ಬದಲಿಸಬೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ..

ಗೃಹಲಕ್ಷ್ಮಿ ಯೋಜನೆಯ 2000 ರೂ. ಹಣ ಪಡೆಯಲು ಪಡಿತರ ಚೀಟಿಯ ಮುಖ್ಯಸ್ಥರ ಹೆಸರು ಬದಲಾವಣೆಗೆ ಅವಕಾಶ ನೀಡಿದ್ದು, ನೀವು ಕೂಡ ಈ ಮಾರ್ಗ ಅನುಸರಿಸಿ ಯಜಮಾನಿ ಹೆಸರು ಬದಲಿಸಿ.

Gruha lakshmi Karnataka ration card woman owner name change Here is the complete information sat
Author
First Published Jul 22, 2023, 8:36 PM IST

ಬೆಂಗಳೂರು (ಜು.22): ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ 4ನೇ ಗ್ಯಾರಂಟಿಯಾದ ಗೃಹಲಕ್ಷ್ಮಿ ಯೋಜನೆ (ಮನೆ ಯಜಮಾನಿಗೆ 2000 ರೂ. ಹಣ) ಜಾರಿಗೊಳಿಸಲಾಗಿದೆ. ಆದರೆ, ಇದಕ್ಕೆ ಪಡಿತರ ಚೀಟಿ (ರೇಷನ್‌ ಕಾರ್ಡ್‌)ಯಲ್ಲಿ ಮಹಿಳೆಯೇ ಮನೆಯ ಯಜಮಾನಿ ಆಗಿರಬೇಕು. ಈ ಹಿನ್ನೆಲೆಯಲ್ಲಿ ರೇಷನ್‌ಕಾರ್ಡ್‌ನಲ್ಲಿ ಮನೆ ಯಜಮಾನಿ ಬದಲಾವಣೆಗೆ ಅವಕಾಶ ನೀಡಲಾಗಿದ್ದು, 31 ಲಕ್ಷ ಕುಟುಂಬಗಳಿಗೆ ಅನುಕೂಲ ಆಗಲಿದೆ. ನೀವು ಕೂಡ ಈ ಮಾರ್ಗಗಳನ್ನು ಅನುಸರಿಸಿ ಪಡಿತರ ಚೀಟಿಯಲ್ಲಿ ಯಜಮಾನಿಯನ್ನು ಬದಲಿಸಬಹುದು.

ಇನ್ನು ರಾಜ್ಯದಲ್ಲಿ ಒಟ್ಟು 1.53 ಕೋಟಿ ಜನರು ಪಡಿತರ ಚೀಟಿಗಳನ್ನು ಹೊಂದಿದ್ದಾರೆ. ಅದರಲ್ಲಿ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ (ಮನೆ ಯಜಮಾನಿಗೆ 2,000 ರೂ. ಹಣ) ಹಣವನ್ನು ಪಡೆಯಲು ರೇಷನ್‌ ಕಾರ್ಡ್‌ಗೆ ಮಹಿಳೆಯೇ ಮುಖ್ಯಸ್ಥೆ ಆಗಿರಬೇಕು. ಆದರೆ, 1.22 ಕೋಟಿ ಪಡಿತರ ಚೀಟಿಯಲ್ಲಿ ಮಾತ್ರ ಮಹಿಳಾ ಮುಖ್ಯಸ್ಥರಿದ್ದು, ಇವರು ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಅರ್ಹರಾಗಿದ್ದಾರೆ. ಉಳಿದಂತೆ 31 ಕೋಟಿ ಪಡಿತರ ಚೀಟಿಗಳಲ್ಲಿ ಪುರುಷರು ಮುಖ್ಯಸ್ಥರಾಗಿದ್ದು, ಇವರು 2000 ರೂ. ಪಡೆಯಲು ಅರ್ಹರಾಗಿಲ್ಲ. ಆದ್ದರಿಂದ, ಈಗ ಪಡಿತರ ಚೀಟಿಗಳಲ್ಲಿ ಮನೆ ಯಜಮಾನರನ್ನು ಬದಲಿಸಲು ಅವಕಾಶ ನೀಡಿದ್ದು, ಕೂಡಲೇ ನೀವು ಕೂಡ ಇದನ್ನು ಸದುಪಯೋಗ ಮಾಡಿಕೊಳ್ಳಬಹುದು.

ಗೃಹಲಕ್ಷ್ಮಿ ಯೋಜನೆ 2000 ರೂ. ಪಡೆಯಲು ಯಾವೆಲ್ಲ ದಾಖಲೆಗಳು ಅಗತ್ಯ: ಯಾರು ಅರ್ಜಿ ಸಲ್ಲಿಸಬಹುದು?

ರೇಷನ್ ಕಾರ್ಡ್‌ ಮುಖ್ಯಸ್ಥರ ಹೆಸರು ಬದಲಾವಣೆಗೆ ಹೀಗೆ ಮಾಡಿ..
ನಿಮ್ಮ ಸಮೀಪದ ಪಡಿತರ ಚೀಟಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ.
ಮುಖ್ಯಸ್ಥರ ಹೆಸರು ಬದಲಾವಣೆ ಮಾಡುವುದಕ್ಕೆ ಅರ್ಜಿಯನ್ನು ಭರ್ತಿ ಮಾಡಿ.
ಅರ್ಜಿಯೊಂದಿಗೆ ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಿ.
ಬಯೋಮೆಟ್ರಿಕ್‌ ದೃಡೀಕರಣದ ಮೂಲಕ ದಾಖಲೆಗಳನ್ನು ದೃಢೀಕರಿಸಿ.
ಪಡಿತರ ಸೇವಾ ಕೇಂದ್ರದಲ್ಲಿ ಮಾಹಿತಿಯನ್ನು ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಲಾಗುತ್ತದೆ.
ಅಲ್ಲಿ ನೀಡಲಾಗುವ ಸ್ವೀಕೃತಿಯನ್ನು ಜಾಗ್ರತೆಯಿಂದ ಸಂರಕ್ಷಿಸಿ ಇಟ್ಟುಕೊಂಡಿರಿ.
ಅರ್ಜಿ ಸಲ್ಲಿಕೆ ನಂತರ, ಆಹಾರ ಕಚೇರಿಯಿಂದ ನಿಮಗೆ ಎಸ್‌ಎಂಎಸ್ ಬರಲಿದೆ
ಎಸ್‌ಎಂಎಸ್‌ ಬಂದ ಬಳಿಕ ನಿಮ್ಮಲ್ಲಿರುವ ಸ್ವೀಕೃತಿ ಪತ್ರವನ್ನು ನೀಡಿ ಹೊಸ (ಮನೆ ಯಜಮಾನಿಯನ್ನು ಬದಲಿಸಿದ) ಪಡಿತರ ಚೀಟಿ ಪಡೆಯಬಹುದು. 

  • ಆನ್‌ಲೈನ್‌ನಲ್ಲಿ ರೇಷನ್‌ ಕಾರ್ಡ್ ತಿದ್ದುಪಡಿ ಹೇಗೆ?
  • ಮೊದಲಿಗೆ https://ahara.kar.nic.in/ ಗೆ ಲಾಗ್ ಇನ್ ಆಗಿ
  • ಮೇನ್ ಪೇಜ್‌ನಲ್ಲಿ ಇ-ಸೇವೆಗಳ ಮೇಲೆ ಕ್ಲಿಕ್‌ ಮಾಡಿ (https://ahara.kar.nic.in/lpg/) ಈ ಲಿಂಕ್‌ ತೆರೆದುಕೊಳ್ಳಲಿದೆ.
  • ಬಳಿಕ ತಿದ್ದುಪಡಿ/ಹೊಸ ಸೇರ್ಪಡೆಗೆ ವಿನಂತಿ ಆಯ್ಕೆ ಕಾಣಿಸಲಿದೆ, ಅಲ್ಲಿ ಕ್ಲಿಕ್‌ ಮಾಡಿರಿ
  • ಈಗ ಹೊಸ ಪೇಜ್ ತೆರೆಯಲಿದೆ.
  • ನಿಮ್ಮ ಜಿಲ್ಲೆಗೆ ಅನುಗುಣವಾಗಿ ಕಾಣಿಸುವ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ
  • ಹೊಸ ಸೇರ್ಪಡೆ/ ತಿದ್ದುಪಡಿ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.
  • ತಿದ್ದುಪಡಿಗೆ ಬೇಕಾದ ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪಲೋಡ್ ಮಾಡಿ.
  • ಅಪ್ಲೋಡ್ ಮಾಡಿದ ನಂತರ ಫಾರ್ಮ್ ಅನ್ನು ಸಬ್‌ಮಿಟ್ ಮಾಡಿರಿ.
  • ಅರ್ಜಿ ಸಲ್ಲಿಕೆಯ ರಿಜಿಸ್ಟರ್‌ ನಂಬರ್‌ ಸಿಗಲಿದೆ
  • ಈ ನಂಬರ್‌ ಮೂಲಕ ನಿಮ್ಮ ಅರ್ಜಿಯ ಸ್ಟೇಟಸ್‌ ಅನ್ನು ಟ್ರ್ಯಾಕ್‌ ಮಾಡಬಹುದು.

ಗೃಹಲಕ್ಷ್ಮಿ ಯೋಜನೆ ಅಧಿಕೃತ ಆರಂಭ: ಮೊದಲ ಫಲಾನುಭವಿ ಮಹಿಳೆಯರು ಇವರೇ.. ಸುಮಾ, ಆನಂದಿ, ಸತ್ಯಾ

ರೇಷನ್‌ ಕಾರ್ಡ್‌ ಮನೆ ಯಜಮಾನಿ ಹೆಸರು ಬದಲಿಸಲು ಯಾವೆಲ್ಲ ದಾಖಲೆಗಳು ಬೇಕು?
ರೇಷನ್ ಕಾರ್ಡ್‌ನಲ್ಲಿ ಕುಟುಂಬದ ಮುಖ್ಯಸ್ಥರ ಹೆಸರುನ್ನು ಬದಲಾವಣೆ ಮಾಡಬೇಕಾದರೆ ಕುಟುಂಬದ ಮುಖ್ಯಸ್ಥ ಮರಣ ಹೊಂದಿದ್ದರೆ ಅವರ ಮರಣ ಪ್ರಮಾಣಪತ್ರ, ಪಡಿತರ ಚೀಟಿ, ಅರ್ಜಿದಾರರ ವಿಳಾಸದ ಪುರಾವೆಯಾಗಿ ಆಧಾರ್ ಕಾರ್ಡ್ ಪ್ರತಿ ಅಥವಾ ಇತರೆ ದಾಖಲೆ ಜೊತೆಗಿರಬೇಕು. ಇನ್ನು ಅರ್ಜಿದಾರರ ಗುರುತಿನ ಪುರಾವೆಯಾಗಿ ಆಧಾರ್ ಕಾರ್ಡ್ ಪ್ರತಿ ಅಥವಾ ಇತರೆ ದಾಖಲೆಗಳು, ಹೊಸ ಕುಟುಂಬ ಸದಸ್ಯರ ಪಾಸ್‌ಪೋರ್ಟ್ ಅಳತೆಯ ಫೋಟೋ, ಆಧಾರ್ ಕಾರ್ಡ್ ಬೇಕಾಗುತ್ತದೆ.

Follow Us:
Download App:
  • android
  • ios