ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಆರ್ಥಿಕ ಅಭಿವೃದ್ಧಿಯನ್ನು ವ್ಯವಸ್ಥಿತಗೊಳಿಸುವ ಸಂಬಂಧ ಜಂಟಿ ಹೊಣೆಗಾರಿಕೆ ಗುಂಪುಗಳ ರಚನೆಗೆ ಸರ್ಕಾರ ಉದ್ದೇಶಿಸಿದ್ದು, ಈ ಸಂಬಂಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.
ಬೆಂಗಳೂರು (ಆ.01): ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಆರ್ಥಿಕ ಅಭಿವೃದ್ಧಿಯನ್ನು ವ್ಯವಸ್ಥಿತಗೊಳಿಸುವ ಸಂಬಂಧ ಜಂಟಿ ಹೊಣೆಗಾರಿಕೆ ಗುಂಪುಗಳ ರಚನೆಗೆ ಸರ್ಕಾರ ಉದ್ದೇಶಿಸಿದ್ದು, ಈ ಸಂಬಂಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು. ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸಭೆ ನಡೆಸಿದ ಲಕ್ಷ್ಮೀ ಹೆಬ್ಬಾಳ್ಕರ್, ಗೃಹ ಲಕ್ಷ್ಮೀ ಯೋಜನೆ ಈಗಾಗಲೇ ಯಶಸ್ವಿಯಾಗಿದೆ. ಹೀಗಾಗಿ ಯೋಜನೆಯಿಂದ ಲಾಭ ಪಡೆಯುತ್ತಿರುವ ಮಹಿಳೆಯರ ಆರ್ಥಿಕ ಶಕ್ತಿ ಮತ್ತಷ್ಟು ಹೆಚ್ಚಿಸಲು ಜಂಟಿ ಹೊಣೆಗಾರಿಕೆ ಗುಂಪುಗಳನ್ನು ರಚಿಸಲು ಉದ್ದೇಶಿಸಲಾಗಿದೆ.
ಪ್ರಾಯೋಗಿಕವಾಗಿ 500 ಸಂಘಗಳ ರಚನೆ ಮಾಡಬೇಕು. ಅದಕ್ಕಾಗಿ ಸಂಘದ ರೂಪುರೇಷೆಗಳನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕರ್ನಾಟಕದಲ್ಲಿ ಅಂಗನವಾಡಿ ಕೇಂದ್ರಗಳು ಆರಂಭಗೊಂಡು 50 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 2ರಂದು ಸುವರ್ಣ ಮಹೋತ್ಸವ ಸಮಾರಂಭ ಏರ್ಪಡಿಸಲಾಗುತ್ತಿದೆ. ಈ ವೇಳೆಯಲ್ಲೇ ಜಂಟಿ ಹೊಣೆಗಾರಿಕೆ ಗುಂಪುಗಳ ರಚನೆಗೆ ಚಾಲನೆ ನೀಡಲಾಗುವುದು. ಅಷ್ಟರೊಳಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು.
ಸಂಘಗಳ ರಚನೆ, ಮಹಿಳೆಯರ ಪಾತ್ರ, ಇಲಾಖೆಯ ಕಾರ್ಯಗಳು, ಬ್ಯಾಂಕ್‌ಗಳ ಕೆಲಸಗಳ ಕುರಿತು ಸ್ಪಷ್ಟ ರೂಪುರೇಷೆ ಸಿದ್ಧಪಡಿಸಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಡಾ.ಶಾಮ್ಲಾ ಇಕ್ಬಾಲ್, ನಬಾರ್ಡ್ ಬ್ಯಾಂಕ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಡಾ. ಸುರೇಂದ್ರ ಬಾಬು, ಸ್ತ್ರೀ ಶಕ್ತಿ ಯೋಜನೆಯ ಯೋಜನಾ ನಿರ್ದೇಶಕ ಎಂ.ಜಿ. ಪಾಲಿ, ನಬಾರ್ಡ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಡಾ. ಅಶುತೋಷ್ ಕುಮಾರ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕಿ ವಿ.ಎಂ. ರುಕ್ಮಿಣಿ ಇತರರಿದ್ದರು.
ಮಲಪ್ರಭಾ ಕಾಲುವೆಗಳಿಗೆ ನೀರು ಪೂರೈಕೆ: ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಭಾಗದಲ್ಲಿ ಕಳೆದ ಒಂದು ತಿಂಗಳಿಂದ ಮಳೆ ಆಗದ್ದರಿಂದ ರೈತರ ಬೆಳೆಗೆ ಅನುಕೂಲವಾಗಲೆಂದು ಮಲಪ್ರಭಾ ಕಾಲುವೆಗಳಿಗೆ ನೀರು ಪೂರೈಕೆ ಮಾಡಲಾಗುವುದೆಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಬೆಳಗಾವಿಯ ಕ್ಲಬ್ ರಸ್ತೆಯಲ್ಲಿರುವ ಮುಖ್ಯ ಎಂಜಿನಿಯರರು, ಉತ್ತರ ವಲಯದ ಕಚೇರಿಯಲ್ಲಿ ಮಲಪ್ರಭಾ ಯೋಜನೆಯ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ಅಧಿಕಾರಿಗಳೊಂದಿಗೆ, ರೈತರೊಂದಿಗೆ ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿದರು.
ರೈತರ ಅನುಕೂಲಕ್ಕಾಗಿ ಶುಕ್ರವಾರದಿಂದಲೇ ಕಾಲುವೆಗಳಿಗೆ ನೀರು ಬಿಡಲು ಆದೇಶ ಮಾಡಿ ಆನಂತರ ಮಾತನಾಡಿ, ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ರೈತ ಸಮುದಾಯ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಆದರೆ ಕಳೆದ ಒಂದ ತಿಂಗಳದಿಂದ ಮಳೆ ಆಗದೆ ಬೆಳೆಗಳು ಒಣಗುತ್ತಿರುವುದನ್ನು ಮನಗಂಡು ಮಲಪ್ರಭಾ ಬಲದಂಡೆ, ಎಡದಂಡೆ, ಕೊಳಚಿ ಕಾಲುವೆಗಳಗೆ ನೀರು ಪೂರೈಕೆ ಮಾಡಲಾಗುವುದೆಂದು ಹೇಳಿದರು.