ಮಹಿಳೆಯರ ಸುರಕ್ಷತೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ರಚಿಸಿರುವ ಮಹಿಳಾ ಪೊಲೀಸ್ ‘ಅಕ್ಕಪಡೆ’ ಅತ್ಯಂತ ಶ್ಲಾಘನೀಯವಾಗಿದ್ದು, ಇದನ್ನು ರಾಜ್ಯದಾದ್ಯಂತ ವಿಸ್ತರಿಸಲು ಗೃಹ ಸಚಿವರೊಂದಿಗೆ ಚರ್ಚಿಸುವುದಾಗಿ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಬೀದರ್ (ಜು.06): ಮಹಿಳೆಯರ ಸುರಕ್ಷತೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ರಚಿಸಿರುವ ಮಹಿಳಾ ಪೊಲೀಸ್ ‘ಅಕ್ಕಪಡೆ’ ಅತ್ಯಂತ ಶ್ಲಾಘನೀಯವಾಗಿದ್ದು, ಇದನ್ನು ರಾಜ್ಯದಾದ್ಯಂತ ವಿಸ್ತರಿಸಲು ಗೃಹ ಸಚಿವರೊಂದಿಗೆ ಚರ್ಚಿಸುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಹಿಳೆಯರ ರಕ್ಷಣೆ ಹಾಗೂ ಸಮಸ್ಯೆ ಬಗೆಹರಿಸಲು ‘ಅಕ್ಕಪಡೆ’ ರಚಿಸಲಾಗಿದೆ. ಇಂಥ ಪಡೆಯನ್ನು ಪ್ರತಿ ಜಿಲ್ಲೆಯಲ್ಲೂ ರಚಿಸುವಂತೆ ಗೃಹ ಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಅಕ್ಕ ಪಡೆಯ ಹಿನ್ನೆಲೆ: ದಕ್ಷಿಣ ಸುಡಾನ್ ದೇಶಕ್ಕೆ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ತರಬೇತಿಗೆ ತೆರಳಿದ್ದ ಈ ಹಿಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಇದರ ಹಿಂದಿನ ರುವಾರಿ. 2023ರ ನವೆಂಬರ್‌ನಲ್ಲಿ ಅವರು ಜಿಲ್ಲೆಯಲ್ಲಿರುವ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಬಳಸಿಕೊಂಡು, ಪ್ರತಿ ಪೊಲೀಸ್ ಠಾಣೆಯಿಂದ ಒಟ್ಟು 35 ಮಹಿಳಾ ಪೊಲೀಸ್ ಸಿಬ್ಬಂದಿ ತಂಡವನ್ನು ರಚಿಸಿ, ಅದಕ್ಕೆ ‘ಅಕ್ಕಪಡೆ’ ಎಂದು ಹೆಸರಿಟ್ಟರು. ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಗಟ್ಟುವುದು, ಮಹಿಳೆಯರ ಸಮಸ್ಯೆಗಳಿಗೆ ಧ್ವನಿಯಾಗುವುದು ಮತ್ತು ಶಾಲಾ ಮಕ್ಕಳಲ್ಲಿ ಜಾಗೃತಿ ಮತ್ತು ಧೈರ್ಯ ಮೂಡಿಸುವ ತರಬೇತಿಯೊಂದಿಗೆ ಮಹಿಳೆ ಮತ್ತು ಹೆಣ್ಣು ಮಗುವಿಗೆ ಒಂದು ಆಧಾರವಾಗಿ ನಿಲ್ಲಲು ಅಕ್ಕಪಡೆ ರಚನೆಯಾಗಿದೆ.
ಬಡವರ ಹೊಟ್ಟೆ ತುಂಬಿಸುತ್ತಿದೆ: ಜನಸಾಮಾನ್ಯರ ದೃಷ್ಟಿಯಿಂದ ಯೋಜನೆಗಳನ್ನು ರೂಪಿಸಿ, ಬದ್ಧತೆಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಅವರು ಬೈಂದೂರು ವಿಧಾನಸಭಾ ಕ್ಷೇತ್ರದ ಅರ್ಹ ಫಲಾನುಭವಿಗಳಿಗೆ 94ಸಿ ಹಕ್ಕು ಪತ್ರಗಳು ಮತ್ತು ವಿವಿಧ ಸರ್ಕಾರಿ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಕೂಸು ಇಂದಿರಾ ಕ್ಯಾಂಟೀನ್, ಬಡವರಿಗೆ ಕಡಿಮೆ ದರದಲ್ಲಿ ಪೌಷ್ಟಿಕ ಆಹಾರ ನೀಡುವ ಉದ್ದೇಶದಿಂದ ಈ ಕ್ಯಾಂಟೀನ್ ಆರಂಭಿಸಲಾಯಿತು. ಐದು ರೂಪಾಯಿಗೆ ತಿಂಡಿ, ಹತ್ತು ರೂಪಾಯಿಗೆ ಮಧ್ಯಾಹ್ನದ ಊಟ, ಇಷ್ಟು ಕಡಿಮೆ ದುಡ್ಡಿನಲ್ಲಿ ಬಡವರ ಹೊಟ್ಟೆ ತುಂಬಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.ಬೈಂದೂರು ಕ್ಷೇತ್ರದಲ್ಲಿ ಮಾಜಿ ಶಾಸಕ ಗೋಪಾಲ್ ಪೂಜಾರಿ ಹಾಗೂ ಶಾಸಕ ಗುರುರಾಜ್ ಗಂಟಿಹೊಳೆ ಇಬ್ಬರು ಕ್ಷೇತ್ರದ ದೃಷ್ಟಿಯಿಂದ ಯಾವುದೇ ರಾಜಕೀಯ ಇಲ್ಲದೆ, ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಇದು ರಾಜಕಾರಣಿಗಳಿಗೆ ಬೇಕಿರುವ ಬದ್ಧತೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
