ಇಂದು ಇಡೀ ವಿಶ್ವವೇ ಭಾರತದ ಯೋಗದಿಂದ ಆರೋಗ್ಯ ಪದ್ಧತಿಯನ್ನು ಅಳವಡಿಸಿಕೊಂಡಿದೆ. ನಮ್ಮ ಪ್ರಧಾನಿ ಮೋದಿ ಅವರು ಇಡೀ ವಿಶ್ವಕ್ಕೆ ಯೋಗದ ಮಹತ್ವದ ಬಗ್ಗೆ ಹೇಳಿಕೊಟ್ಟಿದ್ದಾರೆ ಎಂದು ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಹೇಳಿದರು.
ಉಡುಪಿ (ಜೂ.22): ಇಂದು ಇಡೀ ವಿಶ್ವವೇ ಭಾರತದ ಯೋಗದಿಂದ ಆರೋಗ್ಯ ಪದ್ಧತಿಯನ್ನು ಅಳವಡಿಸಿಕೊಂಡಿದೆ. ನಮ್ಮ ಪ್ರಧಾನಿ ಮೋದಿ ಅವರು ಇಡೀ ವಿಶ್ವಕ್ಕೆ ಯೋಗದ ಮಹತ್ವದ ಬಗ್ಗೆ ಹೇಳಿಕೊಟ್ಟಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಹೇಳಿದರು. ಅವರು ಶನಿವಾರ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಇವತ್ತಿನ ಆಧುನಿಕ ಜಗತ್ತಿನಲ್ಲಿ ಯೋಗ ಬೇಕೇ ಬೇಕು. ಯೋಗದಿಂದ ಮನಸ್ಸಿಗೆ ದೇಹಕ್ಕೆ ಉಲ್ಲಾಸ ಸಿಗುತ್ತದೆ. ನಾನು ಕಳೆದ 25 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದೇನೆ. ನಾನು ದಿನಕ್ಕೆ 15 ಗಂಟೆ ಕೆಲಸ ಮಾಡುವ ಸಾಮರ್ಥ್ಯದ ಹಿಂದೆ ನನ್ನ ಯೋಗಾಭ್ಯಾಸವಿದೆ. ನಾನು ವಾರಕ್ಕೆ 5 ದಿನ ಯೋಗ ಮಾಡುತ್ತಿದ್ದೆ. ಪ್ರತಿ ದಿನ 25 ರಿಂದ 50 ಸೂರ್ಯ ನಮಸ್ಕಾರ ಮಾಡುತ್ತಿದ್ದೆ. ಭುಜಂಗಾಸನ, ವೀರಭದ್ರಾಸನ, ಪ್ರಾಣಾಯಾಮ ನನ್ನ ಆರೋಗ್ಯದ ಗುಟ್ಟು. ಆದರೆ ಇತ್ತೀಚೆಗೆ ನನಗೆ ಅಪಘಾತದಿಂದ ಬೆನ್ನು ನೋವು ಕಾಡುತ್ತಿದೆ, ಆದ್ದರಿಂದ ಇಂದು ಯೋಗ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಯೋಗವೆಂದರೆ ಕೇವಲ ವ್ಯಾಯಾಮ, ಪ್ರಾಣಾಯಾಮ ಮಾತ್ರ ಅಲ್ಲ, ಅದೊಂದು ಆರೋಗ್ಯಕರ ಜೀವನದ ವಿಧಾನ. ಯೋಗವಿದ್ದಲ್ಲಿ ರೋಗವಿಲ್ಲ, ಯೋಗವೇ ಭೋಗವಾದರೆ ಮನುಷ್ಯನ ಎಲ್ಲ ಚಟುವಟಿಕೆಗಳು ಸ್ವಾಭಿಮಾನದಿಂದ ಸ್ವಾತಂತ್ರ್ಯದಿಂದ ನಡೆಯುತ್ತದೆ ಎಂದರು. ಕಾರ್ಯಕ್ರಮದಲ್ಲಿ ಶಾಸಕರಾದ ಯಶ್ಪಾಲ್ ಎ. ಸುವರ್ಣ ಮತ್ತು ಸುರೇಶ್ ಶೆಟ್ಟಿ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ರಮೇಶ್ ಕಾಂಚನ್, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿ.ಪಂ. ಸಿಇಒ ಪ್ರತೀಕ್ ಬಾಯಲ್, ಡಿಎಫ್‌ಒ ಗಣಪತಿ, ವಿದ್ಯಾರ್ಥಿಗಳು ಹಾಗೂ ಮತ್ತಿತರು ಉಪಸ್ಥಿತರಿದ್ದರು. ಜಿಲ್ಲಾ ಆಯುಷ್ ಅಧಿಕಾರಿ ಡಾ. ಸತೀಶ್ ಆಚಾರ್ಯ ಸ್ವಾಗತಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿದರು. ಡಾ. ಹೇಮಲತಾ ವಂದಿಸಿದರು.
ವಿಶ್ವಕ್ಕೆ ಯೋಗ ಪರಿಚಯಿಸಿದ್ದು ಭಾರತ: ನಗರದ ಶಾಂತಿನಿಕೇತನ ಅಂತಾರಾಷ್ಟ್ರೀಯ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ವಿಶ್ವ ಸಂಗೀತ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷೆ ಶೀಲಾ ಬಿರಾದಾರ ಹಾಗೂ ಮುಖ್ಯ ಅತಿಥಿ ಗಿರಿಜಾ ಕೋವಳ್ಳಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ವಿವಿಧ ಬಗೆಯ ಯೋಗಾಸನಗಳ ಕುರಿತು ತಿಳಿಸಿದರು. ಭಾರತವು ಶಾಂತಿಪ್ರಿಯ ರಾಷ್ಟ್ರವಾಗಿದ್ದು, ಇಡೀ ಜಗತ್ತಿಗೆ ಯೋಗವನ್ನು ಪರಿಚಯಿಸಿದ ಕೀರ್ತಿ ನಮ್ಮ ದೇಶದ್ದಾಗಿದೆ ಎಂದು ಹೇಳಿದರು. ಇದೇ ವೇಳೆ ವಿಶ್ವ ಸಂಗೀತ ದಿನದ ಅಂಗವಾಗಿ ಶಾಸ್ತ್ರೀಯ ಸಂಗೀತವನ್ನು ಮಕ್ಕಳು ಪ್ರಸ್ತುತಪಡಿಸಿದರು. ಪ್ರಾಂಶುಪಾಲ ಪಿ.ಎನ್.ರಿಜೇಶ, ಶೈಕ್ಷಣಿಕ ಸಂಯೋಜಕಿ ಕಮರ್ ಪರಾ ಖಾಜಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.
