groom dies of heart attack in Bhadravati: ಭದ್ರಾವತಿಯಲ್ಲಿ ಮದುವೆಯಾದ ಕೇವಲ ಎರಡು ದಿನಕ್ಕೆ 30 ವರ್ಷದ ವರ ರಮೇಶ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ವಧುವಿನ ಮನೆಯಲ್ಲೇ ಈ ದುರಂತ ಸಂಭವಿಸಿದ್ದು, ರಾಜ್ಯದಲ್ಲಿ ಯುವಕರ ಹೃದಯಾಘಾತ ಸರಣಿ ಸಾವುಗಳ ಬಗ್ಗೆ ಆತಂಕ ಹೆಚ್ಚಿಸಿದೆ.
ಭದ್ರಾವತಿ (ಡಿ.4): ರಾಜ್ಯದಲ್ಲಿ ಯುವಕರೂ ಹೃದಯಾಘಾತದಿಂದ ಸಾವು ಸಂಭವಿಸುತ್ತಿರುವ ಆತಂಕಕಾರಿ ಸರಣಿ ಮುಂದುವರಿದಿದ್ದು, ಇದೀಗ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಮದುವೆಯಾಗಿ ಕೇವಲ ಎರಡೇ ದಿನಕ್ಕೆ ವರ ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ. ಈ ದುರ್ಘಟನೆಯಿಂದಾಗಿ ಮದುವೆಯ ಸಂಭ್ರಮದಲ್ಲಿದ್ದ ಎರಡೂ ಕುಟುಂಬಗಳಲ್ಲಿ ತೀವ್ರ ಶೋಕ ಮನೆಮಾಡಿದೆ.
ಭದ್ರಾವತಿ ತಾಲೂಕಿನ ಹನುಮಂತಾಪುರ ನಿವಾಸಿ ರಮೇಶ್ (30) ಹೃದಯಾಘಾತದಿಂದ ಮೃತಪಟ್ಟ ವರ. ನವೆಂಬರ್ 28 ರಂದು ಹಸೆಮಣೆ ಏರಿದ್ದರು. ವಿವಾಹವಾದ ಎರಡೇ ದಿನ ಕಳೆಯುವಷ್ಟರಲ್ಲಿ ಈ ದುರಂತ ಸಂಭವಿಸಿದೆ.
ವಧುವಿನ ಮನೆಯಲ್ಲೇ ಹೃದಯಾಘಾತ:
ಮದುಮಗನಾಗಿ ರಮೇಶ್ ಅವರು ಶಿವಮೊಗ್ಗ ತಾಲೂಕು ಗಾಜನೂರು ಸಮೀಪದ ಬಂಡ್ರಿಯಲ್ಲಿರುವ ವಧುವಿನ ಮನೆಗೆ ಹೋದ ಸಂದರ್ಭದಲ್ಲಿ ಏಕಾಏಕಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆದರೂ, ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದಾರೆ.
ಹೃದಯಾಘಾತ ಪ್ರಕರಣ ಹೆಚ್ಚಳ ಆತಂಕ:
ಇತ್ತೀಚೆಗೆ ಹಾಸನ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಹೃದಯಾಘಾತದಿಂದ ಸಾಲು ಸಾಲು ಸಾವುಗಳು ವರದಿಯಾಗಿದ್ದವು. ಇದೀಗ ಭದ್ರಾವತಿಯಲ್ಲೂ ಈ ಮರಣ ಮೃದಂಗ ಮುಂದುವರಿದಿರುವುದು ಆತಂಕಕ್ಕೆ ಕಾರಣವಾಗಿದೆ. ಮೃತ ರಮೇಶ್ ಅವರ ಅಂತ್ಯಸಂಸ್ಕಾರವನ್ನು ಅವರು ವಾಸವಿದ್ದ ಹೊಸಕೊಪ್ಪ ಗ್ರಾಮದಲ್ಲಿ ಮಂಗಳವಾರ ನೆರವೇರಿಸಲಾಯಿತು.


