Asianet Suvarna News Asianet Suvarna News

ಅರಣ್ಯ ಕುಸಿತ: ರಾಜ್ಯದಲ್ಲಿ ಶಿವಮೊಗ್ಗ ನಂ.1!

ಅರಣ್ಯ ಕುಸಿತ: ರಾಜ್ಯದಲ್ಲಿ ಶಿವಮೊಗ್ಗ ನಂ.1| ಅರಣ್ಯ ಹೆಚ್ಚಳದಲ್ಲಿ ದೇಶದಲ್ಲೇ ಕರ್ನಾಟಕ ಪ್ರಥಮ| ಶಿವಮೊಗ್ಗದಲ್ಲಿ ಮಾತ್ರ ಭಾರಿ ಕುಸಿತ: ಅರಣ್ಯ ಸಮೀಕ್ಷೆಯಲ್ಲಿ ಬೆಳಕಿಗೆ

Govt report says Karnataka increased most forest cover Shivamogga witness heavy deforestation
Author
Bangalore, First Published Jan 2, 2020, 11:40 AM IST

ಬೆಂಗಳೂರು[ಜ.02]: ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಕಳೆದ ಎರಡು ವರ್ಷಗಳಲ್ಲಿ ಅತಿ ಹೆಚ್ಚು ಅರಣ್ಯ ಭೂಮಿ ನಾಶವಾಗಿದೆ ಎಂಬ ಆಘಾತಕಾರಿ ಅಂಶ ಭಾರತೀಯ ಅರಣ್ಯ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.

ದೇಶದಲ್ಲಿ ಅತಿ ಹೆಚ್ಚು ಅರಣ್ಯ ವಿಸ್ತರಣೆಯಾಗಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಆದರೆ, ಶಿವಮೊಗ್ಗ ಜಿಲ್ಲೆಯಲ್ಲಿ ಅರಣ್ಯ ವ್ಯಾಪ್ತಿ ಕ್ಷೀಣಿಸುತ್ತಿದ್ದು, ಪರಿಸರವಾದಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.

ಕರ್ನಾಟಕ ಅರಣ್ಯ ಪ್ರದೇಶ ಹೆಚ್ಚಳ : ನಂಬರ್ 1 ಸ್ಥಾನಕ್ಕೆ

ಇತ್ತೀಚೆಗೆ ಬಿಡುಗಡೆಯಾಗಿರುವ ಫಾರೆಸ್ಟ್‌ ಸರ್ವೇ ಆಫ್‌ ಇಂಡಿಯಾ (ಎಫ್‌ಎಸ್‌ಐ) ವರದಿ ಪ್ರಕಾರ, ರಾಜ್ಯದ 30 ಜಿಲ್ಲೆಗಳ ಪೈಕಿ 25 ಜಿಲ್ಲೆಗಳಲ್ಲಿ ಅರಣ್ಯ ವಿಸ್ತರಣೆಯಾಗಿದ್ದರೆ, ಐದು ಜಿಲ್ಲೆಗಳಲ್ಲಿ ಅರಣ್ಯ ವ್ಯಾಪ್ತಿ ಕ್ಷೀಣಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಅರಣ್ಯ ವ್ಯಾಪ್ತಿ ಕುಸಿದರೆ ಹಾವೇರಿ, ಧಾರವಾಡ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ಕುಸಿತ ಕಂಡು ಬಂದಿದೆ. ರಾಜ್ಯದಲ್ಲಿ ಒಟ್ಟು 1025 ಚದರ ಕಿಲೋಮೀಟರ್‌ ಅರಣ್ಯ ವಿಸ್ತರಣೆಯಾಗಿದೆ. ಆದರೆ, ನಾಲ್ಕೂ ಜಿಲ್ಲೆಗಳಲ್ಲಿ 76 ಚದರ ಕಿಲೋಮೀಟರ್‌ ಅರಣ್ಯ ಕುಸಿತವಾಗಿರುವ ಸಂಬಂಧ ಎಫ್‌ಎಸ್‌ಐ ನೀಡಿರುವ ವರದಿಯಲ್ಲಿ ತಿಳಿಸಲಾಗಿದೆ.

ಶಿವವæೂಗ್ಗದಲ್ಲಿ ಅತಿ ಹೆಚ್ಚು ಕುಸಿತ:

ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 6631.44 ಚ.ಕಿ.ಮೀ. ಅರಣ್ಯ ಪ್ರದೇಶವಿದ್ದು, ಅದು ಪ್ರತಿ ವರ್ಷವೂ ಕುಸಿಯುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಒಟ್ಟು 50 ಚದರ ಕಿಲೋಮೀಟರ್‌ ಕಡಿತಗೊಂಡಿದೆ. ಈ ಬೆಳವಣಿಗೆ ಹಿಂದೆ ಸ್ಥಳೀಯ ರಾಜಕಾರಣಿಗಳು ಹಾಗೂ ಅಧಿಕಾರಿಗಳ ‘ಕೊಡುಗೆ’ ದೊಡ್ಡದು ಎಂದು ಆರೋಪಿಸಲಾಗುತ್ತಿದೆ.

ಸ್ಥಳೀಯ ಜನಪ್ರತಿನಿಧಿಗಳು ತಮ್ಮ ಬೆಂಬಲಿಗರು ಮತ್ತು ಸಂಬಂಧಿಕರಿಗೆ ಅರಣ್ಯ ಭೂಮಿ ಒತ್ತುವರಿಗೆ ಪ್ರೇರಣೆ ನೀಡುತ್ತಾರೆ. ಅಲ್ಲದೆ, ಒತ್ತುವರಿ ಮಾಡಿಕೊಂಡವರ ಪರವಾಗಿ ಅರಣ್ಯ ಇಲಾಖೆಯಲ್ಲಿ ವಕಾಲತ್ತು ವಹಿಸುತ್ತಾರೆ. ಇದರಿಂದ ಒಂದು ಎಕರೆ ಜಮೀನು ಹೊಂದಿದ್ದವರು, ಎರಡು ವರ್ಷ ಕಳೆಯುವಷ್ಟರಲ್ಲಿ 20 ಎಕರೆ ಅರಣ್ಯ ಜಮೀನನ್ನು ಒತ್ತುವರಿ ಮಾಡಿಕೊಳ್ಳುತ್ತಾರೆ. ಇದನ್ನು ತಡೆಯಲು ಸಾಧ್ಯವಿಲ್ಲದಂತಾಗಿದೆ. ಅಲ್ಲದೆ, ಪ್ರಶ್ನೆ ಮಾಡುವ ಅರಣ್ಯ ಅಧಿಕಾರಿಗಳಿಗೆ ಧಮಕಿ ಹಾಕುತ್ತಾರೆ. ಇದಕ್ಕೆ ಒಪ್ಪದಿದ್ದಲ್ಲಿ ತಮ್ಮ ಪ್ರಭಾವ ಬಳಸಿ ಅಧಿಕಾರಿಗಳನ್ನೇ ವರ್ಗಾವಣೆ ಮಾಡಿಸುತ್ತಾರೆ ಎಂದು ಸ್ಥಳೀಯ ಪರಿಸರವಾದಿಗಳು ಆರೋಪಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಅನಗತ್ಯವಾಗಿ ಬಡಾವಣೆಗಳು ನಿರ್ಮಾಣವಾಗುತ್ತಿವೆ. ಅಲ್ಲದೆ, ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳ ಯೋಜನೆಗಳ ಅನುಷ್ಠಾನಕ್ಕೆ ಅರಣ್ಯ ಭೂಮಿಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ವಿನಾಕಾರಣ ರಸ್ತೆಗಳ ವಿಸ್ತರಣೆ ಮಾಡಲಾಗಿದೆ. ಈ ಕಾರಣದಿಂದಾಗಿಯೂ ಅರಣ್ಯ ನಾಶವಾಗುತ್ತಿದೆ.

ಚಾಮರಾಜನಗರ: ಹೊಸ ವರ್ಷಕ್ಕೆ ಅರಣ್ಯ ಪ್ರವೇಶ ನಿಷಿದ್ಧ

3 ವರ್ಷದಲ್ಲಿ 4 ಅಧಿಕಾರಿಗಳ ವರ್ಗ:

ಕಳೆದ ಮೂರು ವರ್ಷದಲ್ಲಿ ಶಿವಮೊಗ್ಗದ ನಾಲ್ಕು ಜನ ಉಪ ವಲಯ ಅರಣ್ಯಾಧಿಕಾರಿಗಳು ಬದಲಾಗಿದ್ದಾರೆ. ಅರಣ್ಯ ಭಾಗದಲ್ಲಿನ ಅಕ್ರಮಗಳನ್ನು ಪ್ರಶ್ನೆ ಮಾಡುತ್ತಿದ್ದಂತೆ ಅಧಿಕಾರಿಗಳು ವರ್ಗಾವಣೆಯಾಗುತ್ತಾರೆ ಎಂದು ಆರೋಪಿಸಲಾಗುತ್ತಿದೆ.

Govt report says Karnataka increased most forest cover Shivamogga witness heavy deforestation

Follow Us:
Download App:
  • android
  • ios