Asianet Suvarna News Asianet Suvarna News

ಕರ್ನಾಟಕ ಅರಣ್ಯ ಪ್ರದೇಶ ಹೆಚ್ಚಳ : ನಂಬರ್ 1 ಸ್ಥಾನಕ್ಕೆ

2017ಕ್ಕೆ ಹೋಲಿಸಿದರೆ ಕರ್ನಾಟಕದ ಅರಣ್ಯ ಪ್ರದೇಶವು 1025 ಚದರ ಕಿ.ಮೀ.ನಷ್ಟುಹೆಚ್ಚಾಗಿದೆ. ನಂ.2 ಹಾಗೂ ನಂ.3 ಸ್ಥಾನಗಳಲ್ಲಿ ಕ್ರಮವಾಗಿ ಆಂಧ್ರಪ್ರದೇಶ  ಹಾಗೂ ಕೇರಳ ರಾಜ್ಯಗಳು ಇವೆ. 

Karnataka adds over 1000 sqkm forest in two years
Author
Bengaluru, First Published Dec 31, 2019, 8:02 AM IST

ನವದೆಹಲಿ [ಡಿ.31]: ‘ಅರಣ್ಯ ನಾಶ ಹೆಚ್ಚಾಗುತ್ತಿದೆ’ ಎಂಬ ಆತಂಕದ ನಡುವೆಯೇ, ಭಾರತದ ಅರಣ್ಯ ಪ್ರದೇಶವು ಕಳೆದ ಎರಡು ವರ್ಷದಲ್ಲಿ ಶೇ.0.56ರಷ್ಟುವೃದ್ಧಿಯಾಗಿದೆ. ಅದರಲ್ಲೂ ಅರಣ್ಯ ವೃದ್ಧಿಯಲ್ಲಿ ಕರ್ನಾಟಕವು ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ ಎಂಬ ಸಿಹಿ ಸುದ್ದಿ ಹೊರಬಿದ್ದಿದೆ. ಇನ್ನೊಂದು ವಿಶೇಷವೆಂದರೆ ದೇಶದ ಒಟ್ಟಾರೆ ಅರಣ್ಯ ವೃದ್ಧಿಯಲ್ಲಿ ಕರ್ನಾಟಕ ಪಾಲೇ ಶೇ.20ರಷ್ಟಿದೆ.

2017ಕ್ಕೆ ಹೋಲಿಸಿದರೆ ಕರ್ನಾಟಕದ ಅರಣ್ಯ ಪ್ರದೇಶವು 1025 ಚದರ ಕಿ.ಮೀ.ನಷ್ಟುಹೆಚ್ಚಾಗಿದೆ. ನಂ.2 ಹಾಗೂ ನಂ.3 ಸ್ಥಾನಗಳಲ್ಲಿ ಕ್ರಮವಾಗಿ ಆಂಧ್ರಪ್ರದೇಶ (ವೃದ್ಧಿ ಪ್ರಮಾಣ 990 ಚ.ಕಿ.ಮೀ.) ಹಾಗೂ ಕೇರಳ (823 ಚ.ಕಿ.ಮೀ.) ಇವೆ. 4 ಮತ್ತು 5ನೇ ಸ್ಥಾನವನ್ನು ತಲಾ 300 ಚ.ಕಿ.ಮೀ.ನಷ್ಟುಅರಣ್ಯ ವೃದ್ಧಿಸಿಕೊಂಡ ಜಮ್ಮು-ಕಾಶ್ಮೀರ ಹಾಗೂ ಹಿಮಾಚಲ ಪ್ರದೇಶ ಅಲಂಕರಿಸಿವೆ.

ಇನ್ನು ಭಾರತದ ಅರಣ್ಯ ಪ್ರದೇಶವು 2017ರ ಅಂಕಿ-ಅಂಶಗಳಿಗೆ ಹೋಲಿಸಿದರೆ 5,188 ಚದರ ಕಿ.ಮೀ.ನಷ್ಟುವರ್ಧಿಸಿದೆ. ಇದರ ಶೇಕಡಾವಾರು ಪ್ರಮಾಣ 0.56. ದೇಶದಲ್ಲಿ 7,12,249 ಚ.ಕಿ.ಮೀ. ವ್ಯಾಪ್ತಿಯಲ್ಲಿ ಅರಣ್ಯ ವ್ಯಾಪಿಸಿದ್ದು, ಇದು ಭಾರತದ ಭೌಗೋಳಿಕ ಪ್ರದೇಶದ ಶೇ.21.67ರಷ್ಟಾಗುತ್ತದೆ. ಕೇಂದ್ರ ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ಸೋಮವಾರ ‘ಭಾರತದ ಅರಣ್ಯ ಸ್ಥಿತಿಗತಿ-2019’ನ್ನು ಬಿಡುಗಡೆ ಮಾಡಿದರು. ಅದರಲ್ಲಿ ಈ ಅಂಶಗಳಿವೆ.

ವರದಿ ಬಿಡುಗಡೆ ಮಾಡಿ ಮಾತನಾಡಿದ ಸಚಿವ ಜಾವಡೇಕರ್‌, ‘ಭಾರತದಲ್ಲಿನ ಅರಣ್ಯ ಪ್ರಮಾಣದ ವೃದ್ಧಿಯು ಸಮಾಧಾನಕರ ವಿಚಾರ. ಇದರಿಂದಾಗಿ ಹಸಿರು ಪ್ರಮಾಣ ಹೆಚ್ಚಿಸಿ ಇಂಗಾಲದ ಪ್ರಮಾಣ ತಗ್ಗಿಸುವಿಕೆಯ ‘ಪ್ಯಾರಿಸ್‌ ಒಪ್ಪಂದ’ದ ಗುರಿ ತಲುಪುವ ವಿಶ್ವಾಸವನ್ನು ಇದು ವೃದ್ಧಿಸಿದೆ’ ಎಂದರು.

ಶತಮಾನದ ಚಳಿಗೆ ರಾಜಧಾನಿ ಗಡಗಡ! ಕನಿಷ್ಠ ತಾಪಮಾನ ದಾಖಲು...

ಕರ್ನಾಟಕದಲ್ಲಿ ಶೇ.20 ಅರಣ್ಯ:  ಕರ್ನಾಟಕ ಒಟ್ಟಾರೆ 1,91,791 ಚ.ಕಿ.ಮೀ. ವಿಸ್ತಾರ ಹೊಂದಿದೆ. ಇದರಲ್ಲಿ ಅರಣ್ಯ ವ್ಯಾಪ್ತಿ 38,575 ಚ.ಕಿ.ಮೀ ಆಗಿದೆ. ಅರಣ್ಯದ ಶೇಕಡಾವಾರು ಪ್ರಮಾಣ ಶೇ.20.11 ಎಂದು ವರದಿ ವಿವರಿಸಿದೆ. 2017ರಲ್ಲಿ ಇದರ ಪ್ರಮಾಣ 37,550 ಚ.ಕಿ.ಮೀ. ಇತ್ತು.

ಮ.ಪ್ರ. ನಂ.1: ಇದೇ ವೇಳೆ ದೇಶದಲ್ಲೇ ಹೆಚ್ಚು ಅರಣ್ಯ ಹೊಂದಿರುವ ರಾಜ್ಯವೆಂದರೆ ಮಧ್ಯಪ್ರದೇಶ. ನಂತರದ ಸ್ಥಾನಗಳಲ್ಲಿ ಆಂಧ್ರಪ್ರದೇಶ ಹಾಗೂ ಛತ್ತೀಸ್‌ಗಢ ಇವೆ. 12 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಚಾಚಿರುವ ಮ್ಯಾಂಗ್ರೋವ್‌ (ಉಷ್ಣ ವಲಯದ ಪೊದೆ) ಕಾಡುಗಳ ಪ್ರಮಾಣ ಶೇ.1.10 (54 ಚದರ ಕಿ.ಮೀ.) ಹೆಚ್ಚಿದೆ. ಅರಣ್ಯ ಹೊರತಾದ ಪ್ರದೇಶದಲ್ಲಿನ ಗಿಡಮರಗಳ ಪ್ರಮಾಣ 1 ಹೆಕ್ಟೇರ್‌ಗಿಂತ ಕಡಿಮೆ ಇದ್ದು, 95,027 ಚ.ಕಿ.ಮೀ. ಇದೆ. ಇದರ ಶೇಕಡಾವಾರು ಪ್ರಮಾಣ 2.89 ಆಗಿದೆ. ಆದರೆ ಅಸ್ಸಾಂ ಹಾಗೂ ತ್ರಿಪುರಾ ಹೊರತುಪಡಿಸಿ ಮಿಕ್ಕ ಈಶಾನ್ಯ ರಾಜ್ಯಗಳಲ್ಲಿ ಅರಣ್ಯ ಪ್ರಮಾಣ ಶೇ.0.45 (765 ಚ.ಕಿ.ಮೀ.) ನಷ್ಟುಇಳಿದಿದೆ ಎಂದು ವರದಿ ಹೇಳಿದೆ.

ಕರ್ನಾಟಕದ ಅರಣ್ಯ ಪ್ರಮಾಣ (ಚ.ಕಿ.ಮೀ.ಗಳಲ್ಲಿ)

2017 2018 ವೃದ್ಧಿ

37,550 38,575 1025

Follow Us:
Download App:
  • android
  • ios