ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತಾಧಿಕಾರಿಯನ್ನಾಗಿ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದೆ.
ಬೆಂಗಳೂರು (ಮೇ.23): ಮಠಗಳಿಗೆ ಆಡಳಿತಾಧಿಕಾರಿ ನೇಮಕ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದಿರುವ ಹೈಕೋರ್ಟ್, ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತಾಧಿಕಾರಿಯನ್ನಾಗಿ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದೆ. ಕರ್ನಾಟಕ ಹಿಂದೂ ಧಾರ್ಮಿಕ ಮತ್ತು ಧರ್ಮದಾಯ ದತ್ತಿ ಸಂಸ್ಥೆಗಳು ಕಾಯ್ದೆ-1997ಕ್ಕೆ ತಿದ್ದುಪಡಿ ತಂದು ಮಠಗಳ ಆಡಳಿತ ನಿರ್ವಹಣೆ ನಿಯಂತ್ರಣ ವಿಚಾರವನ್ನು ಸರ್ಕಾರದ ಅಧಿಕಾರ ವ್ಯಾಪ್ತಿಯಿಂದ ಹೊರಗಿಟ್ಟಿರುವ ಕಾರಣ, ಸರ್ಕಾರ ಆದೇಶ ಕಾನೂನು ಬಾಹಿರವಾಗಿದೆ ಎಂದು ಹೈಕೋರ್ಟ್ ಹೇಳಿದೆ.
ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಪೀಠಾಧಿಪತಿಯಾಗಿದ್ದ ಡಾ.ಶಿವಮೂರ್ತಿ ಮರುಘಾ ಶರಣರು ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಹಿನ್ನೆಲೆಯಲ್ಲಿ ಪಿ.ಎಸ್.ವಸ್ತ್ರದ ಅವರನ್ನು ಮಠದ ಆಡಳಿತಾಧಿಕಾರಿಯನ್ನಾಗಿ ರಾಜ್ಯ ಸರ್ಕಾರ ನೇಮಿಸಿತ್ತು. ಆದರೆ ಇದನ್ನು ಎಸ್‌ಜೆಎಂ ವಿದ್ಯಾಪೀಠದ ಅಧ್ಯಕ್ಷ, ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಹಾಗೂ ಭಕ್ತರು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳ ಕುರಿತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನ್ಯಾಯಪೀಠ ಸೋಮವಾರ ತೀರ್ಪು ಪ್ರಕಟಿಸಿತು.
ತಾತ, ಅಪ್ಪನಂತೆ ಸೋಲದೆ ಗೆದ್ದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್!
ಕಾನೂನು ಬಾಹಿರ: ಮಠಗಳ ಕಾರ್ಯ ನಿರ್ವಹಣೆಗೆ ನಿಯಂತ್ರಣ ಹೇರುವ ಕರ್ನಾಟಕ ಹಿಂದೂ ಧಾರ್ಮಿಕ ಮತ್ತು ಧರ್ಮದಾಯ ದತ್ತಿ ಸಂಸ್ಥೆಗಳು ಕಾಯ್ದೆ-1997ರ ಸೆಕ್ಷನ್ 78 ಅನ್ನು ತೆಗೆದುಹಾಕಲಾಗಿದೆ. ಈ ಕಾಯ್ದೆಗೆ 2011ರಲ್ಲಿ ತಿದ್ದುಪಡಿ ತರಲಾಗಿದೆ. ಈ ಕುರಿತು ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದ ರಾಜ್ಯ ಸರ್ಕಾರ, ಮಠಗಳ ಆಡಳಿತ ನಿರ್ವಹಣೆ ನಿಯಂತ್ರಣ ವಿಚಾರವನ್ನು ಸರ್ಕಾರದ ಅಧಿಕಾರ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಇದರಿಂದ ಮಠದ ನಿರ್ವಹಣೆಯಲ್ಲಿ ಮಧ್ಯಪ್ರವೇಶ ಮಾಡುವ ಹಾಗೂ ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲು ಸರ್ಕಾರಕ್ಕೆ ಅಧಿಕಾರ ಒದಗಿಸುವ ಯಾವುದೇ ಶಾಸನ ಇಲ್ಲವಾಗಿದೆ. ಹೀಗಿದ್ದರೂ ರಾಜ್ಯ ಸರ್ಕಾರವು ಸಂವಿಧಾನದ ಪರಿಚ್ಛೇದ 162ರ ಅಡಿ ಕಾರ್ಯಕಾರಿ ಅಧಿಕಾರವನ್ನು ಬಳಸಿ ಮರುಘಾಮಠದ ಆಡಳಿತ ನಿರ್ವಹಣೆಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ. ಇಂತಹ ಕಾರ್ಯಕಾರಿ ಆದೇಶದ ಮೂಲಕ ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲು ರಾಜ್ಯ ಸರ್ಕಾರ ಶಾಸಕನಾತ್ಮಕ ಅಧಿಕಾರ ಹೊಂದಿಲ್ಲ. ಆದ್ದರಿಂದ ಸರ್ಕಾರದ ಆದೇಶ ಅಸಿಂಧುವಾಗಿದ್ದು, ಅದನ್ನು ರದ್ದುಪಡಿಸಲಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ನುಡಿದಿದೆ.
ಜೊತೆಗೆ, ಡಾ.ಶಿವಮೂರ್ತಿ ಮರುಘಾ ಶರಣು ಜೈಲಿನಲ್ಲಿರುವ ಹಿನ್ನೆಲೆಯಲ್ಲಿ ಮಠ ಮತ್ತು ಅದಕ್ಕೆ ಸಂಬಂಧಿತ ಶೈಕ್ಷಣಿಕ ಸಂಸ್ಥೆಗಳ ಆಡಳಿತ ಹಾಗೂ ನಿರ್ವಹಣೆಗಾಗಿ ಮಠದ ಭಕ್ತರು ಮತ್ತು ವೀರಶೈವ/ಲಿಂಗಾಯತ ಸಮುದಾಯದ ಪ್ರಮುಖ ವ್ಯಕ್ತಿಗಳು ಸೂಕ್ತ ಕ್ರಿಯಾ ಯೋಜನೆ ರೂಪಿಸಬೇಕು. ಈ ಮಧ್ಯಂತರ ವ್ಯವಸ್ಥೆ ಮಾಡುವವರೆಗೆ ಸರ್ಕಾರ ನೇಮಿಸಿರುವ ಆಡಳಿತಾಧಿಕಾರಿಯನ್ನು ಮುಂದಿನ 6 ವಾರಗಳ ಕಾಲ ಮುಂದುವರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಅವರು ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳದೇ ದೈನಂದಿನ ಚಟುವಟಿಕೆಯನ್ನಷ್ಟೇ ನಿರ್ವಹಿಸಬೇಕು ಎಂದು ಸ್ಪಷ್ಟಪಡಿಸಿದೆ.
ಅಲ್ಲದೆ, ಟ್ರಸ್ಟಿಯನ್ನು ತೆಗೆದುಹಾಕುವ, ಹೊಸ ಟ್ರಸ್ಟಿಯನ್ನು ನೇಮಕ ಮಾಡುವ ಮತ್ತು ಯಾವುದೇ ಟ್ರಸ್ಟಿಯ ಸುಪರ್ದಿಗೆ ಟ್ರಸ್ಟ್‌ನ ಆಸ್ತಿ ಒಪ್ಪಿಸುವುದು ಸೇರಿದಂತೆ ಸಿವಿಲ್ ಕ್ರಿಯಾ ಸಂಹಿತೆಯ ಸೆಕ್ಷನ್ 92 ಅಡಿ ವ್ಯಾಪ್ತಿಗೆ ಪ್ರಕರಣದ ವಿಚಾರ/ವ್ಯಾಜ್ಯಗಳ ಪರಿಹಾರಕ್ಕಾಗಿ ವೀರಶೈವ/ಲಿಂಗಾಯತ ಸಮುದಾಯದ ಪ್ರಮುಖ ವ್ಯಕ್ತಿಗಳು ಹಾಗೂ ಭಕ್ತಾಧಿಕಾರಿಗಳು ಸಂಬಂಧಪಟ್ಟನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿ ಪರಿಹಾರ ಪಡೆದುಕೊಳ್ಳಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅಧಿಕಾರ ಮೊಟಕು ಆದೇಶ ರದ್ದು: ಮಠದಲ್ಲಿ ಸರಣಿ ಅಪರಾಧಗಳು ನಡೆದಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ-1988ರ ಅಡಿ ಮಠ ಮತ್ತದರ ವಿದ್ಯಾಪೀಠದ ಆಡಳಿತ ನಿರ್ವಹಣೆ ವಿಚಾರದಲ್ಲಿ ಪೀಠಾಧಿಪತಿ ಶಿವಮೂರ್ತಿ ಶರಣರು ಅಧಿಕಾರ ಚಲಾವಣೆ ಮಾಡಲು ನಿರ್ಬಂಧ ಹೇರಿ ಚಿತ್ರದುರ್ಗ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ಶಿವಮೂರ್ತಿ ಶರಣರು ಮತ್ತೊಂದು ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಇದೇ ವೇಳೆ ಪುರಸ್ಕರಿಸಿರುವ ಹೈಕೋರ್ಟ್, ಚಿತ್ರದುರ್ಗ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.
ದೇಶದ ಭದ್ರತೆಗೆ ಅಪಾಯ ಒಡ್ಡಬಹುದಾದಂತಹ ಅಪರಾಧಗಳ ಆರೋಪವಿದ್ದಾಗ ಮಾತ್ರ ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ ಅನ್ವಯಿಸಬಹುದಾಗಿದೆ. ಆದರೆ, ಅಂತಹ ಯಾವುದೇ ಅಪರಾಧ ಚಟುವಟಿಕೆ ನಡೆಸಿದ ಆರೋಪ ಮಠದ ಪೀಠಾಧಿಪತಿಗಳ ಮೇಲಿಲ್ಲ. ಆದ್ದರಿಂದ, ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ಶರಣರ ಪರ ವಕೀಲರು ಮನವಿ ಮಾಡಿದ್ದರು. ಈ ವಾದವನ್ನು ಮಾನ್ಯ ಮಾಡಿರುವ ಹೈಕೋರ್ಟ್, ಪ್ರಕರಣದಲ್ಲಿ ಧಾರ್ಮಿಕ ಸಂಸ್ಥೆಗಳ ದುರುಪಯೋಗ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಸಚಿವ ಸಂಪುಟ ವಿಸ್ತರಣೆ: ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಜಟಾಪಟಿ!
ಪ್ರಕರಣದ ಹಿನ್ನೆಲೆ: ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯ ವಿವಿಧ ಸೆಕ್ಷನ್ ಅಡಿ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಚಿತ್ರದುರ್ಗದ ಗ್ರಾಮೀಣ ಠಾಣೆಗೆ ವರ್ಗಾಯಿಸಲಾಗಿತ್ತು. ಪ್ರಕರಣ ಸಂಬಂಧ 2022ರ ಸೆ.1ರಂದು ಮುರುಘಾ ಶರಣರನ್ನು ಬಂಧಿಸಲಾಗಿತ್ತು. ನಂತರವೂ ಮತ್ತೊಂದು ಪೋಕ್ಸೊ ಪ್ರಕರಣ ಸ್ವಾಮೀಜಿ ವಿರುದ್ಧ ದಾಖಲಾಗಿತ್ತು. ಸದ್ಯ ಅವರು ಚಿತ್ರದುರ್ಗದ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಮಧ್ಯೆ ಮಠದ ಆಡಳಿತ ನಿರ್ವಹಣೆಗಾಗಿ ನಿವೃತ್ತ ಐಎಎಸ್ ಅಧಿಕಾರಿ ವಸ್ತ್ರದ ಅವರನ್ನು ನೇಮಕ ಮಾಡಿ 2022ರ ಡಿ.13ರಂದು ಸರ್ಕಾರ ಆದೇಶ ಹೊರಡಿಸಿತ್ತು. ಇದಾದ ಬಳಿಕ ಪೀಠಾಧಿಪತಿಗಳ ಅಧಿಕಾರ ಚಲಾವಣೆಗೆ ನಿರ್ಬಂಧ ವಿಧಿಸಿ 2022ರ ಡಿ.15ರಂದು ವಿಚಾರಣಾ ನ್ಯಾಯಾಲಯ ಆದೇಶಿಸಿತ್ತು. ಈ ಎರಡು ಆದೇಶಗಳನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.
