ಬೆಂಗಳೂರು(ಆ.01): ಕಾರ್ಮಿಕ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ಕಾರ್ಮಿಕ ಕಾನೂನುಗಳಾದ ಕೈಗಾರಿಕೆ ಕಾಯ್ದೆ, ಕೈಗಾರಿಕಾ ವಿವಾದ ಕಾಯ್ದೆ ಮತ್ತು ಗುತ್ತಿಗೆ ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತಂದು ರಾಜ್ಯ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ಶುಕ್ರವಾರ ರಾಜ್ಯಪಾಲ ವಜುಭಾಯಿ ವಾಲಾ ಅವರು ಅಂಕಿತ ಹಾಕಿದ್ದಾರೆ.

ಏನಿದು ತಿದ್ದುಪಡಿ?: ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ಕೈಗಾರಿಕಾ ವಿವಾದ ಕಾಯ್ದೆಯ ಸೆಕ್ಷನ್‌ 25 (ಕೆ) ತಿದ್ದುಪಡಿ ತಂದಿದ್ದು ಕಾರ್ಖಾನೆಯ ಕಾರ್ಮಿಕರ ಮಿತಿಯನ್ನು 100 ರಿಂದ 300ಕ್ಕೆ ಹೆಚ್ಚಿಸಲಾಗಿದೆ. ಕಾರ್ಖಾನೆಗಳ ಕಾಯ್ದೆಯ ಸೆಕ್ಷನ್‌ 65(3) ಅಡಿಯಲ್ಲಿ ಯಾವುದೇ ತ್ರೈಮಾಸಿಕ ಅಧಿಕಾವಧಿ ಕೆಲಸವನ್ನು (ಒ.ಟಿ) 75ರಿಂದ 125 ಗಂಟೆಯವರೆಗೆ ಹೆಚ್ಚಿಸಲಾಗಿದೆ. ಅಲ್ಲದೇ, ರಾತ್ರಿ 7ರಿಂದ ಬೆಳಗ್ಗೆ 6 ಗಂಟೆಯವರೆಗೆ ಕಾರ್ಯನಿರ್ವಹಿಸಲು ಮುಂದೆ ಬರುವ ಮಹಿಳಾ ಕಾರ್ಮಿಕರಿಗೆ ಅವಕಾಶ ನೀಡಲಾಗುವುದು.

ಎಚ್‌ಡಿಕೆಗೆ ಕದ್ದು ಮುಚ್ಚಿ ಹೋಗುವ ಅಗತ್ಯವಿಲ್ಲ: ಗೌಡ

ಈ ಮೂಲಕ ಸರ್ಕಾರದ ಪ್ರಕಾರ ರಾಜ್ಯದಲ್ಲಿ ಕಾರ್ಖಾನೆಗಳ ಸ್ಥಾಪನೆಗೆ ಆಕರ್ಷಿಸಲು ತಿದ್ದುಪಡಿ ಸಹಾಯವಾಗುತ್ತದೆ ಎಂದು ಹೇಳಲಾಗಿದೆ. ಆದರೆ, ಕಾರ್ಮಿಕರ ಹಕ್ಕುಗಳನ್ನು ಸಂಪೂರ್ಣ ಕಸಿದುಕೊಂಡು ಬಂಡವಾಳಶಾಹಿಗಳ ಪರ ಸರ್ಕಾರ ತಿದ್ದುಪಡಿಗಳನ್ನು ತಂದಿದೆ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ.

ಇದಲ್ಲದೆ ಗುತ್ತಿಗೆ ಕಾರ್ಮಿಕ ಮತ್ತು ಕಾರ್ಖಾನೆಗಳ ಕಾಯ್ದೆಗೆ ತಿದ್ದುಪಡಿ ತಂದು ಕಾರ್ಮಿಕರ ಮಿತಿಯನ್ನು ಹೆಚ್ಚಳ ಮಾಡಲಾಗಿದೆ. ಹೊರಗುತ್ತಿಗೆ ಏಜೆನ್ಸಿಗಳು ಕಾರ್ಖಾನೆಗಳಿಗೆ ಪೂರೈಸುವ 30ಕ್ಕಿಂತ ಕಡಿಮೆ ಕಾರ್ಮಿಕರಿಗೆ ಯಾವುದೇ ಕಾರ್ಮಿಕ ಕಾನೂನಡಿಯ ಸೌಲಭ್ಯ ಅನ್ವಯಿಸುತ್ತಿರಲಿಲ್ಲ. ಇದೀಗ ಈ ಮಿತಿಯನ್ನು 50ಕ್ಕೆ ಹೆಚ್ಚಳ ಮಾಡಲಾಗಿದೆ.

ಮಂತ್ರಿಗಿರಿ ತಪ್ಪಿಸಲು ಡಿಕೆಶಿ ನಿರಾಧಾರ ಆರೋಪ: ಯೋಗೇಶ್ವರ್‌

ಇನ್ನು ವಿದ್ಯುಚ್ಛಕ್ತಿ ಬಳಸುವ ಘಟಕಗಳಲ್ಲಿ ಕಾರ್ಮಿಕರ ಮಿತಿಯನ್ನು 10ರಿಂದ 20ಕ್ಕೆ ಹೆಚ್ಚಿಸಲು ಮತ್ತು ವಿದ್ಯುಚ್ಛಕ್ತಿ ಬಳಸದ ಕಾರ್ಖಾನೆಗಳಲ್ಲಿ 20ರಿಂದ 40ಕ್ಕೆ ಹೆಚ್ಚಿಸಲು ಕೈಗಾರಿಕೆ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ. ಇದರಿಂದಾಗಿ ವಿದ್ಯುಚ್ಛಕ್ತಿ ಬಳಸುವ ಘಟಕಗಳು 30 ಮಂದಿಯೊಳಗೆ ಹಾಗೂ ಬಳಸದ ಕಾರ್ಖಾನೆಗಳು 40 ಕಾರ್ಮಿಕರೊಳಗೆ ನೇಮಿಸಿಕೊಂಡರೆ ಅವರಿಗೆ ಕಾರ್ಮಿಕ ಕಾನೂನಡಿ ಸಿಗುವ ಪಿಎಫ್‌, ಇಎಸ್‌ಐ, ಉದ್ಯೋಗ ಭದ್ರತೆಯಂತಹ ಸೌಲಭ್ಯಗಳನ್ನು ನೀಡುವಂತಿಲ್ಲ.

ತಿದ್ದುಪಡಿಯ ಪರಿಣಾಮವೇನು:

ಕೈಗಾರಿಕೆ ವಿವಾದ ಕಾಯ್ದೆಯಡಿ 100ಕ್ಕಿಂತ ಹೆಚ್ಚು ಮಂದಿ ಕಾರ್ಮಿಕರಿರುವ ಕಾರ್ಖಾನೆ ಎಲ್ಲಾ ಕಾರ್ಮಿಕ ಕಾನೂನು ಪಾಲಿಸಬೇಕಾಗಿತ್ತು. ಒಂದು ವೇಳೆ ಕಾರ್ಖಾನೆ ಮುಚ್ಚಲು, ಕೆಲಸಗಾರರನ್ನು ವಜಾಗೊಳಿಸಲು ಸರ್ಕಾರದ ಅನುಮತಿ ಬೇಕಿತ್ತು. ಈ ಸಂಖ್ಯೆಯನ್ನು 300ಕ್ಕೆ ಹೆಚ್ಚಳ ಮಾಡಲಾಗಿದೆ. ಹೀಗಾಗಿ ಕಾರ್ಖಾನೆ ಮುಚ್ಚಲು ಅಥವಾ ಕಾರ್ಮಿಕರನ್ನು ಕೆಲಸದಿಂದ ತೆಗೆಯಲು ಸರ್ಕಾರದ ಅನುಮತಿ ಬೇಕಾಗಿಲ್ಲ ಎಂದು ತಿಳಿದುಬಂದಿದೆ.

ಗುತ್ತಿಗೆ ಕಾರ್ಮಿಕರ ಕಾಯಿದೆಗೆ ತಂದಿರುವ ತಿದ್ದುಪಡಿಯಿಂದ ಯಾವುದೇ ಕಾರ್ಖಾನೆಗೆ ಏಜೆನ್ಸಿ ಮೂಲಕ ನೇಮಿಸಿಕೊಳ್ಳುವ 50ಕ್ಕಿಂತ ಕಡಿಮೆ ಕಾರ್ಮಿಕರಿಗೆ ಏಜೆನ್ಸಿ ವತಿಯಿಂದ ಕಾರ್ಮಿಕ ಕಾನೂನು ಸೌಲಭ್ಯ ಅನ್ವಯಿಸುವುದಿಲ್ಲ. ಈ ತಿದ್ದುಪಡಿಗಳಿಗೆ ಕಾರ್ಮಿಕರಿಗೆ ಅನ್ಯವಾಗಲಿದೆ ಎಂಬುದು ಕಾರ್ಮಿಕ ಸಂಘಟನೆಗಳ ಆರೋಪ.