ಬೆಂಗಳೂರು(ಆ.01): ಇನ್ನು ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಚಿವ ಸಂಪುಟವನ್ನು ವಿಸ್ತರಣೆ ಮಾಡಲಿದ್ದಾರೆ ಎಂಬ ಸುಳಿವನ್ನು ಅರಿತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ನನಗೆ ಸಚಿವ ಪದವಿ ನೀಡುವುದನ್ನು ತಪ್ಪಿಸಲು ದುರುದ್ದೇಶದಿಂದ ನಿರಾಧಾರ ಆರೋಪ ಮಾಡಿದ್ದಾರೆ ಎಂದು ಆಡಳಿತಾರೂಢ ಬಿಜೆಪಿಯ ನೂತನ ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಕಿಡಿಕಾರಿದ್ದಾರೆ.

ಬಿಜೆಪಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ನನಗೆ ವಿಧಾನಪರಿಷತ್‌ ಸ್ಥಾನ ಹಾಗೂ ಸಚಿವ ಸ್ಥಾನ ನೀಡುವ ಬಗ್ಗೆ ಆರು ತಿಂಗಳ ಹಿಂದೆಯೇ ರಾಷ್ಟ್ರೀಯ ಹಾಗೂ ರಾಜ್ಯ ಘಟಕದ ನಾಯಕರು ಸ್ಪಷ್ಟಭರವಸೆ ನೀಡಿದ್ದರು ಎಂದೂ ಅವರು ಹೇಳಿದ್ದಾರೆ.

ಜೆಎನ್‌ಯು ಕನ್ನಡ ಪೀಠ ರದ್ದಿಲ್ಲ: ಸಚಿವ ರವಿ ಸ್ಪಷ್ಟನೆ

ಇಷ್ಟೆಲ್ಲ ಇರುವಾಗ 30 ತಿಂಗಳ ನಂತರ ಬರಲಿರುವ ವಿಧಾನಸಭೆ ಚುನಾವಣೆಗೆ ಟಿಕೆಟ್‌ ನೀಡುವಂತೆ ನಾನು ಡಿ.ಕೆ.ಶಿವಕುಮಾರ್‌ ಮನೆಗೆ ಹೋಗಿ ಏಕೆ ಟಿಕೆಟ್‌ ಕೇಳಲಿ? ಶಿವಕುಮಾರ್‌ ಅವರ ಹಸಿ ಸುಳ್ಳನ್ನು ಮೂರ್ಖರೂ ನಂಬುವುದಿಲ್ಲ, ಇನ್ನು ಜನಸಾಮಾನ್ಯರು ನಂಬುವ ಪ್ರಶ್ನೆ ಉದ್ಭವಿಸುವುದೇ ಇಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.ಕೆ. ಸಹೋದರರು ಬಿಜೆಪಿ, ರಾಜ್ಯ ಸರ್ಕಾರ ಹಾಗೂ ನನ್ನ ನಡುವೆ ವಿಷ ಬೀಜ ಬಿತ್ತುವ ವಿಫಲ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅವರು ಅದರಲ್ಲಿ ಯಶಸ್ವಿಯಾಗುವುದಿಲ್ಲ. ಒಂದು ವೇಳೆ ಶಿವಕುಮಾರ್‌ ಮಾಧ್ಯಮಗಳ ಎದುರು ಹೇಳಿರುವುದು ನಿಜವಾದರೆ ಅದನ್ನು ಸಾಬೀತು ಮಾಡಲು ಅವರ ಮನೆ ತುಂಬಾ ಹಾಗೂ ರಸ್ತೆಯಲ್ಲಿ ಕ್ಯಾಮರಾಗಳನ್ನು ಹಾಕಲಾಗಿದೆ. ದಯವಿಟ್ಟು ಅವರು ಸಾಕ್ಷಿಯನ್ನು ರಾಜ್ಯದ ಜನತೆ ಮುಂದೆ ಇಡಲಿ ಎಂದು ಯೋಗೇಶ್ವರ್‌ ಒತ್ತಾಯಿಸಿದ್ದಾರೆ.

ರೌಡಿಶೀಟರ್ ಬರ್ಬರ ಹತ್ಯೆ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಇನ್ನು ಮುಂದೆ ಇಂತಹದೇ ಆರೋಪಗಳನ್ನು ಮಾಡುವುದು ಮುಂದುವರಿಸಿದರೆ ಬೆಂಗಳೂರು ಹಾಗೂ ರಾಮನಗರದಲ್ಲಿ ಸುದ್ದಿಗೋಷ್ಠಿ ಕರೆದು ಅವರ ರಾಜಕೀಯ ಜೀವನದ ಬಗ್ಗೆ ರಾಜ್ಯದ ಜನತೆ ಮುಂದೆ ಹೇಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.