'ಮಂಗಳೂರು ಗೋಲಿಬಾರಲ್ಲಿ ಪೊಲೀಸರದು ತಪ್ಪಿಲ್ಲ'
* ಮ್ಯಾಜಿಸ್ಪ್ರೇಟ್ ವರದಿ ಹೈಕೋರ್ಟ್‌ಗೆ ಸಲ್ಲಿಸಿದ ಸರ್ಕಾರ
* ಪೌರತ್ವ ಕಾಯ್ದೆ ಪ್ರತಿಭಟನೆ ವೇಳೆ ನಡೆದಿದ್ದ ಗೋಲಿಬಾರ್
* ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ
ಬೆಂಗಳೂರು(ಅ.23): ಪೌರತ್ವ ಕಾಯ್ದೆ(Citizenship Act) ವಿರೋಧಿಸಿ 2019ರಲ್ಲಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಗೋಲಿಬಾರ್ ಪ್ರಕರಣ ಕುರಿತ ಮ್ಯಾಜಿಸ್ಪ್ರೇಟ್ ತನಿಖೆ ಪೂರ್ಣಗೊಂಡಿದ್ದು, ಪ್ರಕರಣದಲ್ಲಿ ಪೊಲೀಸರು ತಪ್ಪಿತಸ್ಥರಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಗೋಲಿಬಾರ್(Golibar) ಪ್ರಕರಣವನ್ನು ಹೈಕೋರ್ಟ್(High Court) ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಗಳಿಂದ ಸ್ವತಂತ್ರ ನ್ಯಾಯಾಂಗ ತನಿಖೆಗೆ(investigation) ವಹಿಸುವಂತೆ ಕೋರಿ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಎಚ್.ಎಸ್.ದೊರಸ್ವಾಮಿ ಹಾಗೂ ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು.
ಮಂಗಳೂರು ಗೋಲಿಬಾರ್ ಪ್ರತೀಕಾರಕ್ಕೆ ಕಾರ್ಖಾನಾ ಗ್ಯಾಂಗ್!
ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ವಾದ ಮಂಡಿಸಿ, ಮಂಗಳೂರು(Mangaluru) ಗೋಲಿಬಾರ್ ಘಟನೆ ಸಂಬಂಧ ಮ್ಯಾಜಿಸ್ಪ್ರೇಟ್ ತನಿಖೆ ಪೂರ್ಣಗೊಂಡಿದೆ. ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಘಟನೆಯಲ್ಲಿ ಪೊಲೀಸರು(Police) ಸೇರಿದಂತೆ ಯಾರೊಬ್ಬರು ತಪ್ಪಿತಸ್ಥರಲ್ಲ ಎಂದು ವರದಿ ಹೇಳಿದೆ. ಆ ವರದಿಯನ್ನು ಸರ್ಕಾರ(Government)ಪೂರ್ಣವಾಗಿ ಒಪ್ಪಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಅಲ್ಲದೆ, ಗಲಭೆಗೆ ಕಾರಣರಾದವರ ವಿರುದ್ಧ ದೋಷಾರೋಪ ಪಟ್ಟಿಸಲ್ಲಿಸಲಾಗಿದ್ದು, ದೂರುಗಳ ಬಗ್ಗೆ ಸಿಐಡಿ(CID)ತನಿಖೆ ನಡೆಸುತ್ತಿದೆ ಎಂದು ಮಾಹಿತಿ ನೀಡಿದರು.
ಇದಕ್ಕೆ ತೀವ್ರವಾಗಿ ಆಕ್ಷೇಪಿಸಿದ ಅರ್ಜಿದಾರರ ಪರ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್, ಘಟನೆ ಸಂಬಂಧ ಪೊಲೀಸರ ವಿರುದ್ಧ 10 ದೂರು ದಾಖಲಾಗಿವೆ. ಆದರೆ, ಯವೊಂದು ದೂರಿನ ಸಂಬಂಧ ಎಫ್‌ಐಆರ್(FIR) ದಾಖಲಾಗಿಲ್ಲ ಹಾಗೂ ತನಿಖೆಯೂ ನಡೆದಿಲ್ಲ. ಪೊಲೀಸರ ವಿರುದ್ಧ ದಾಖಲಾದ ದೂರುಗಳ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ವಿವರಣೆ ನೀಡುವಂತೆ ಸರ್ಕಾರಕ್ಕೆ ಜುಲೈ ತಿಂಗಳಲ್ಲಿ ನ್ಯಾಯಾಲಯ ಸೂಚಿಸಿದೆ. ಆದರೆ, ಸರ್ಕಾರ ಮಾತ್ರ ಈ ವಿಚಾರದಲ್ಲಿ ಇದುವರೆಗೂ ಪ್ರತಿಕ್ರಿಯಿಸಿಲ್ಲ. ಮ್ಯಾಜಿಸ್ಪ್ರೇಟ್ ತನಿಖೆ ಪೊಲೀಸರಿಂದ, ಪೊಲೀಸರಿಗಾಗಿ, ಪೊಲೀಸರಿಗೋಸ್ಕರ ಎಂಬಂತಿದೆ ಎಂದು ದೂರಿದರು.
ಈ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ನ್ಯಾಯಾಲಯವು ಮುಚ್ಚಿದ ಲಕೋಟೆ ತೆರೆದು ವರದಿ ನೋಡಿದ ಬಳಿಕ ಅದನ್ನು ಅರ್ಜಿದಾರರ ಪರ ವಕೀಲರಿಗೆ ನೀಡುವಂತೆ ಸೂಚಿಸಲಾಗುವುದು ಎಂದು ತಿಳಿಸಿ ವಿಚಾರಣೆಯನ್ನು ನ.30ಕ್ಕೆ ಮುಂದೂಡಿತು.