ಬೆಂಗಳೂರು ಸೇರಿದಂತೆ ರಾಜ್ಯವನ್ನು ಸಂಪೂರ್ಣ ಭಿಕ್ಷಾಟನೆ ಮುಕ್ತವಾಗಿಸಲು ಸರ್ಕಾರ ಕ್ರಮ ವಹಿಸುತ್ತಿದೆ ಎಂದು ಸಚಿವ ಡಾ. ಎಚ್‌.ಸಿ. ಮಹದೇವಪ್ಪ ತಿಳಿಸಿದ್ದಾರೆ. ಭಿಕ್ಷಾಟನೆ ಮಾಫಿಯಾವಾಗಿ ಮಾರ್ಪಟ್ಟಿದ್ದು, ನಿರಾಶ್ರಿತರ ಪುನರ್ವಸತಿಗಾಗಿ ಈಗಾಗಲೇ ₹69 ಕೋಟಿ ವ್ಯಯಿಸಲಾಗಿದೆ 

ವಿಧಾನ ಪರಿಷತ್ತು (ಮಾ.14): ಬೆಂಗಳೂರು ಸೇರಿ ರಾಜ್ಯವನ್ನು ಸಂಪೂರ್ಣ ಭಿಕ್ಷಾಟನೆಯಿಂದ ಮುಕ್ತವಾಗಿಸಲು ಸರ್ಕಾರ ಕ್ರಮ ವಹಿಸುತ್ತಿದೆ ಎಂದು ಸಚಿವ ಡಾ. ಎಚ್‌.ಸಿ. ಮಹದೇವಪ್ಪ ತಿಳಿಸಿದರು.

Add Asianetnews Kannada as a Preferred SourcegooglePreferred

ಕಾಂಗ್ರೆಸ್‌ನ ಡಾ। ಕೆ.ಗೋವಿಂದರಾಜ್‌ ಪ್ರಶ್ನೆಗೆ ಉತ್ತರಿಸಿದ ಅವರು ಬೆಂಗಳೂರು ಪಾರಂಪರಿಕ ನಗರವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಜತೆಗೆ ಕೈಗಾರಿಕೆಗಳು ಬೆಳೆಯುತ್ತಿರುವುದರಿಂದ ಭಿಕ್ಷಾಟನೆ ಹೆಚ್ಚುತ್ತಿದೆ. ಇತರ ರಾಜ್ಯಗಳಿಂದ ಉದ್ಯೋಗ ಅರಸಿಕೊಂಡು ಬಂದವರು ಇಲ್ಲಿ ಉದ್ಯೋಗ ದೊರೆಯದೆ ಭಿಕ್ಷಾಟನೆಯಲ್ಲಿ ತೊಡಗಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ ಎಂದರು.

ಭಿಕ್ಷಾಟನೆ ಮಾಫಿಯಾವಾಗಿ ಮಾರ್ಪಟ್ಟಿರುವ ಕುರಿತು ಮಾಹಿತಿ ಇದ್ದು, ಈ ಬಗ್ಗೆ ನಗರ ಪೋಲಿಸ್ ಕಮಿಷನರ್ ಸೇರಿ ಮಹಿಳಾ ಮತ್ತ ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪುನರ್‌ ವಸತಿಗೆ ₹69 ಕೋಟಿ ವೆಚ್ಚ:

ಭಿಕ್ಷುಕರಿಗೆ ಪುನರ್‌ವಸತಿ ಕಲ್ಪಿಸಲು ಸರ್ಕಾರ ಫೆ.26ರ ಅಂತ್ಯಕ್ಕೆ ₹69.07 ಕೋಟಿ ವ್ಯಯಿಸಿದೆ. ರಾಜ್ಯದಲ್ಲಿರುವ 15 ನಿರಾಶ್ರಿತ ಪರಿಹಾರ ಕೇಂದ್ರಗಳಿಂದ 796 ಪುರುಷ ಮತ್ತು 230 ಮಹಿಳೆಯರು ಸೇರಿ 1,026 ನಿರಾಶ್ರಿತರನ್ನು ಅವರ ಕುಟುಂಬಗಳನ್ನು ಪತ್ತೆ ಹಚ್ಚಿ ಮನೆಗೆ ಮರಳಿ ಕಳುಹಿಸಲಾಗಿದೆ. ನಿರಾಶ್ರಿತರ ಒಳಿತಿಗಾಗಿ ಮಾನಸಿಕ ಆರೋಗ್ಯ ಕೇಂದ್ರ, ಡಾ। ಬಿ.ಆರ್.ಅಂಬೇಡ್ಕರ್‌ ತರಬೇತಿ ಕೇಂದ್ರ ಮತ್ತು ಸಿದ್ಧ ಉಡುಪು ಘಟಕವನ್ನು ಸ್ಥಾಪಿಸಲು ಕೇಂದ್ರ ಪರಿಹಾರ ಸಮಿತಿಗೆ ಸೂಚಿಸಲಾಗಿದೆ ಎಂದರು.