ಶುಕ್ರವಾರ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಬಾಬಾಬುಡನಗಿರಿ ವಿವಾದ ಸಂಬಂಧ ಮಾ.24ರೊಳಗೆ ಸರ್ಕಾರದ ಅಭಿಪ್ರಾಯ ತಿಳಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ ಹಿನ್ನೆಲೆಯಲ್ಲಿ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆದುಕೊಳ್ಳಲಾಯಿತು.
ಬೆಂಗಳೂರು(ಜ.18): ಇನಾಂ ದತ್ತಾತ್ರೇಯ ಪೀಠ ಬಾಬಾಬುಡನಗಿರಿ ದರ್ಗಾ ವಿಚಾರಕ್ಕೆ ಸಂಬಂಧಿಸಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಚಿಕ್ಕಮಗಳೂರು ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರೊಂದಿಗೆ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆಯಲು ಸಭೆ ನಡೆಸಿದರು.
ಮುಂದಿನ ವಾರ ಪರಮೇಶ್ವರ್ ಅವರು ಸಚಿವ ಸಂಪುಟ ಉಪಸಮಿತಿ ಸಭೆ ಕರೆದು ಜನಪ್ರತಿನಿಧಿಗಳು ಹಾಗೂ ಧಾರ್ಮಿಕ ಮುಖಂಡರು ತಿಳಿಸಿರುವ ಸಲಹೆಗಳನ್ನು ಮತ್ತು ದಾಖಲೆಗಳನ್ನು ಪರಿಶೀಲಿಸಿ ನ್ಯಾಯಾಲಯಕ್ಕೆ ತಿಳಿಸಲಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಬಾಬಾಬುಡನಗಿರಿ ವಿವಾದ ಸಂಬಂಧ ಮಾ.24ರೊಳಗೆ ಸರ್ಕಾರದ ಅಭಿಪ್ರಾಯ ತಿಳಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ ಹಿನ್ನೆಲೆಯಲ್ಲಿ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆದುಕೊಳ್ಳಲಾಯಿತು.
ಮಸೀದಿ, ಚರ್ಚ್‌ನಲ್ಲೂ ಪೂಜೆಗೆ ಅವಕಾಶ ನೀಡಿ: ಪ್ರಮೋದ್ ಮುತಾಲಿಕ್
ಶಾಂತಿ ಸಾಮರಸ್ಯ ನೆಲೆಸುವಂತೆ ಮಾಡಬೇಕು. ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವಂತೆ ಸರ್ಕಾರ ತೀರ್ಮಾನ ಮಾಡಬೇಕು ಎಂಬ ಸಲಹೆ ನೀಡಲಾಯಿತು. ಅಲ್ಲದೆ, ದಾಖಲೆಗಳು ಶಾಶ್ವತವಾಗಿ ಇರುವಂಥದ್ದಾಗಿದ್ದು, ಈ ವಿಚಾರದಲ್ಲಿ ಕಾನೂನು ಸಲಹೆ ಪಡೆಯಬೇಕಾಗುತ್ತದೆ. ರಾಜ್ಯಕ್ಕೆ ದೇಶದಲ್ಲಿ ಒಳ್ಳೆಯ ಹೆಸರಿರುವ ಕಾರಣ ಈ ಸಮಸ್ಯೆಯನ್ನು ಹೆಚ್ಚು ದಿನ ಮುಂದಕ್ಕೆ ತೆಗೆದುಕೊಂಡು ಹೋಗುವುದು ಸೂಕ್ತವಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾದವು.
ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಡಾ.ಜಿ.ಪರಮೇಶ್ವರ್, ಚಂದ್ರದೋಣ ಪರ್ವತದಲ್ಲಿರುವ ದತ್ತಾತ್ರೇಯ ಬಾಬಾ ಬುಡನ್‌ಗಿರಿ ದರ್ಗಾ ರಾಜ್ಯದಲ್ಲಿ ಭಾವೈಕ್ಯತೆ ತೋರಿಸುವ ಸ್ಥಳವಾಗಿದೆ. 1975ರವರೆಗೆ ಒಂದು ರೀತಿಯ ಕಾರ್ಯಕ್ರಮಗಳು ನಡೆದರೆ, ತದನಂತರದ ದಿನಗಳಲ್ಲಿ ಅನೇಕ ಗೊಂದಲಗಳು ಸೃಷ್ಟಿಯಾಗಿವೆ. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಪ್ರಯತ್ನಗಳನ್ನು ಮಾಡಿದೆ ಎಂದು ಹೇಳಿದರು.
ಹಿಂದು, ಮುಸ್ಲಿಂ ಸಮುದಾಯದವರು ನ್ಯಾಯಾಲಯದ ಮೊರೆ ಹೋಗಿರುವುದನ್ನು ಗಮನಿಸಿದ್ದೇವೆ. ಸಮಿತಿ, ಸಚಿವ ಸಂಪುಟ ಉಪ ಸಮಿತಿಗಳನ್ನು ರಚಿಸಿ ದಾಖಲೆಗಳನ್ನು ಪರಿಶೀಲಿಸಿ ನ್ಯಾಯಾಲಯಕ್ಕೆ ತಿಳಿಸಲಾಗಿದ್ದು, ತೀರ್ಪುಗಳು ಬಂದಿವೆ. ಕೆಲವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ ಎಂದು ತಿಳಿಸಿದರು.
ಮಾಂಸ ಕೈಯಲ್ಲಿಡಿದು ಓಡಾಡುವ ಮುಜಾವರ್‌ಗಳನ್ನ ದತ್ತಪೀಠದಿಂದ ಹೊರಹಾಕಿ: ಶರಣ್ ಪಂಪ್ ವೆಲ್ ಆಗ್ರಹ
ಕಾಂಗ್ರೆಸ್ ಸರ್ಕಾರ ದತ್ತಾತ್ರೇಯ ಬಾಬಾ ಬುಡನ್‌ಗಿರಿ ದರ್ಗಾ ಗೊಂದಲ ಬಗೆಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಉಪ ಸಮಿತಿ ರಚಿಸಿದ್ದಾರೆ. ಈವರೆಗೆ ನಾಲ್ಕು ಸಭೆಗಳನ್ನು ನಡೆಸಿ, ಅನೇಕ ದಾಖಲೆಗಳನ್ನು ಪರಿಶೀಲಿಸಿ ದಾವೆಗೆ ಬೇಕಾದ ಮಾಹಿತಿಗಳನ್ನು ನ್ಯಾಯಾಲಯಕ್ಕೆ ನೀಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ, ಎಲ್ಲರ ಅಭಿಪ್ರಾಯ ಮತ್ತು ಸಲಹೆ ಪಡೆದುಕೊಳ್ಳಲಾಗಿದೆ. ಮುಂದಿನ ವಾರ ಸಚಿವ ಸಂಪುಟ ಉಪಸಮಿತಿ ಸಭೆ ಕರೆದು ಜನಪ್ರತಿನಿಧಿಗಳು ಹಾಗೂ ಧಾರ್ಮಿಕ ಮುಖಂಡರು ತಿಳಿಸಿರುವ ಸಲಹೆಗಳನ್ನು ಮತ್ತು ದಾಖಲೆಗಳನ್ನು ಪರಿಶೀಲಿಸಿ ನ್ಯಾಯಾಲಯಕ್ಕೆ ತಿಳಿಸುತ್ತೇವೆ. ನಂತರ ನ್ಯಾಯಾಲಯ ನೀಡುವ ಆದೇಶದಂತೆ ನಡೆದುಕೊಳ್ಳಲಾಗುತ್ತದೆ ಎಂದರು.
ಸಭೆಯಲ್ಲಿ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ಇಂಧನ ಸಚಿವ ಕೆ.ಜೆ.ಜಾರ್ಜ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್‌ಖಾನ್, ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ, ಶಾಸಕರಾದ ಎಚ್.ಡಿ.ತಮ್ಮಯ್ಯ, ನಯನಾ ಮೋಟಮ್ಮ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹಾಗೂ ಧಾರ್ಮಿಕ ಮುಖಂಡರು, ಚಿಕ್ಕಮಗಳೂರು ಜಿಲ್ಲೆಯ ಅಧಿಕಾರಿಗಳು ಭಾಗವಹಿಸಿದ್ದರು.
