ದೇಶದಲ್ಲಿನ ಇಂಧನ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಕಾರಣವಲ್ಲ, ಬದಲಾಗಿ ಮಧ್ಯಪ್ರಾಚ್ಯದಲ್ಲಿನ ಯುದ್ಧದಂತಹ ಅಂತಾರಾಷ್ಟ್ರೀಯ ವಿದ್ಯಮಾನಗಳೇ ಕಾರಣ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ. ಯುದ್ಧದ ವಾತಾವರಣ ತಿಳಿಯಾದ ನಂತರ ಬೆಲೆಗಳು ಇಳಿಕೆಯಾಗಲಿವೆ ಎಂದು ಅವರು ಭರವಸೆ ನೀಡಿದರು.

ಕೂಡ್ಲಿಗಿ: ದೇಶದಲ್ಲಿ ಪೆಟ್ರೋಲ್, ಡೀಸೆಲ್, ಅನಿಲ ಬೆಲೆ ಹೆಚ್ಚಳವಾಗಿದ್ದು, ಇದು ಅನಿವಾರ್ಯವಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಕಾರಣವಲ್ಲ; ಬದಲಾಗಿ ಪ್ರಸುತ್ತ ಉಂಟಾಗಿರುವ ಅಂತಾರಾಷ್ಟ್ರೀಯ ವಿದ್ಯಮಾನವೇ ಕಾರಣವಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಹೊರ್ಮುಜ್ ಜಲಸಂಧಿ ಬಂದಾಗಿದ್ದಲ್ಲದೇ ಹಲವಾರು ಗಲ್ಫ್‌ ರಾಷ್ಟ್ರಗಳು ತೈಲ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಇದರ ಎಫೆಕ್ಟ್ ಕೇವಲ ಭಾರತಕ್ಕಲ್ಲ, ಸಾಕಷ್ಟು ದೇಶಗಳಿಗೂ ತಟ್ಟಿದೆ. ತೈಲ ಪೂರೈಕೆಯಲ್ಲಿ ಹಠಾತ್ ಕೊರತೆ ಮತ್ತು ಕಚ್ಚಾ ತೈಲದ ಬ್ಯಾರೆಲ್‌ನ ಬೆಲೆ ಏರಿಕೆಯಾಗಿರುವುದು ಜನಸಾಮಾನ್ಯರ ಮೇಲೆ ಹೊರೆಯಾಗಿದೆ. ಇರಾನ್- ಇಸ್ರೇಲ್- ಅಮೆರಿಕ ನಡುವಿನ ಭೌಗೋಳಿಕ ರಾಜಕೀಯ ಸಂಘರ್ಷ ಸದ್ಯ ಬಿಕ್ಕಟ್ಟಿಗೆ ಮೂಲವಾಗಿದೆ. ದೇಶ ಅರ್ಥಿಕತೆ ಸ್ಥಿರತೆಯಲ್ಲಿದೆ, ವ್ಯತ್ಯಾಸವಾಗಿಲ್ಲ ಎಂದರು.

ಡಾಲರ್ ಲೆಕ್ಕದಲ್ಲಿ ಹೆಚ್ಚಿನ ಟ್ಯಾಕ್ಸ್

ಹಾರ್ಮುಜ್ ಜಲಸಂಧಿಯಲ್ಲಿ ಇಂಧನ ಹೊತ್ತ ಹಡಗುಗಳು ಸಾಗಿ ಬರಲು ಡಾಲರ್ ಲೆಕ್ಕದಲ್ಲಿ ಹೆಚ್ಚಿನ ಟ್ಯಾಕ್ಸ್ ಕಟ್ಟಬೇಕಿದೆ. ಹೀಗಾಗಿ, ನಮ್ಮ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯೂ ಸ್ವಲ್ಪ ಹೆಚ್ಚಳವಾಗಿದೆ. ಇನ್ನು, ರಸಗೊಬ್ಬರವನ್ನು ಹೆಚ್ಚಿನ ಬೆಲೆಗೆ ಆಮದು ಮಾಡಿಕೊಂಡು ರೈತರಿಗೆ ಒಂದು ಬ್ಯಾಗ್‌ಗೆ ₹300 ಯಂತೆ ಕಡಿಮೆ ಬೆಲೆಗೆ ನೀಡಲಾಗುತ್ತಿದೆ. ಯುದ್ಧದ ವಾತಾವರಣ ತಿಳಿಯಾದರೆ ಬೆಲೆ ಇಳಿಕೆಯಾಗಲಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಗಿಡ ನೆಟ್ಟ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌

ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಸಮೀಪದ ಚಿಕ್ಕಜೋಗಿಹಳ್ಳಿಯಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅಮ್ಮನಿಗಾಗಿ ಒಂದು ಗಿಡ ಎಂಬ ಅಭಿಯಾನಕ್ಕೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗಿಡ ನೆಡುವ ಮೂಲಕ ಚಾಲನೆ ನೀಡಿದರು.