ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿಗೆ ನಿಷೇಧ ಹೇರಲು ಹೈಕೋರ್ಟ್ ನಿರಾಕರಿಸಿದೆ. ಸಫಾರಿ ನಡೆಸುತ್ತಿರುವ ನಿಖರ ಸ್ಥಳಗಳು ಮತ್ತು ವಲಯಗಳನ್ನು ಸೂಚಿಸುವ ನಕ್ಷೆಗಳೊಂದಿಗೆ ವಿಸ್ತೃತ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ಸೂಚನೆ ನೀಡಿದೆ.
ಬೆಂಗಳೂರು (ಏ.16): ರಾಜ್ಯದಲ್ಲಿ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿಗೆ ನಿಷೇಧ ಹೇರಲು ಹೈಕೋರ್ಟ್ ಬುಧವಾರ ನಿರಾಕರಿಸಿದೆ.
ಮೈಸೂರಿನ ವಿ.ರವಿಕುಮಾರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ವಿಭಾಗೀಯ ಪೀಠ ಸಫಾರಿಗೆ ನಿಷೇಧ ಹೇರಲು ನಿರಾಕರಿಸಿತು. ಅಲ್ಲದೆ, ಹುಲಿ ಸಂರಕ್ಷಿತ ಪ್ರದೇಶದ ಕೋರ್, ಬಫರ್ ಮತ್ತು ಪ್ರವಾಸೋದ್ಯಮ ವಲಯಗಳ ಗಡಿರೇಖೆ, ಸಫಾರಿಗಳನ್ನು ನಡೆಸುತ್ತಿರುವ ನಿಖರವಾದ ಸ್ಥಳಗಳು ಮತ್ತು ಈ ವಲಯಗಳನ್ನು ಸೂಚಿಸುವ ನಕ್ಷೆಗಳನ್ನು ಸ್ಪಷ್ಟಪಡಿಸುವ ವಿವರಗಳನ್ನು ಒಳಗೊಂಡ ವಿಸ್ತೃತ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿತು.
ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ರಾಜ್ಯದಲ್ಲಿ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿ ನಿಷೇಧಿಸಲ್ಪಟ್ಟಿದೆ. ಆದರೆ, ರಾಜಕೀಯ ಮತ್ತು ವಾಣಿಜ್ಯ ಹಿತಾಸಕ್ತಿ ಹೊಂದಿರುವವರ ಒತ್ತಡಕ್ಕೆ ಮಣಿದು ಹುಲಿಗಳು ನೆಲೆಸಿರುವ ಪ್ರಮುಖ ಸ್ಥಳಗಳಲ್ಲಿ ಸಫಾರಿ ಪುನಾರಂಭಿಸಲಾಗಿದೆ. ಸಫಾರಿ ಚಟುವಟಿಕೆ ಮುಂದುವರಿಸುವುದರಿಂದ ಮಾನವ-ವನ್ಯಜೀವಿಗಳ ಸಂಘರ್ಷ ವ್ಯಾಪಕವಾಗಲಿದೆ ಎಂದು ಪ್ರತಿವಾದಿಸಿದರು.
ಆಗ ನ್ಯಾಯಪೀಠ, ನಿರ್ಣಾಯಕ ಹುಲಿ ಆವಾಸ ಸ್ಥಾನವು ಯಾವಾಗಲೂ ಕೋರ್ ವಲಯಕ್ಕೆ ಸಮಾನಾರ್ಥಕವಲ್ಲ ಮತ್ತು ಸರಿಯಾದ ವರ್ಗೀಕರಣವನ್ನು ಪರಿಶೀಲಿಸಬೇಕು. ಹುಲಿ ಸಂರಕ್ಷಿತ ಪ್ರದೇಶಗಳು ಸಾಮಾನ್ಯವಾಗಿ ಕೋರ್, ಬಫರ್ ಮತ್ತು ಪ್ರವಾಸೋದ್ಯಮ ವಲಯಗಳನ್ನು ಒಳಗೊಂಡಿರುತ್ತವೆ, ಸಫಾರಿಯನ್ನು ಸಾಮಾನ್ಯವಾಗಿ ಬಫರ್ ಅಥವಾ ಗೊತ್ತುಪಡಿಸಿದ ಪ್ರವಾಸೋದ್ಯಮ ವಲಯಗಳಲ್ಲಿ ಮಾತ್ರ ಅನುಮತಿಸಲಾಗುತ್ತದೆ, ಕಟ್ಟುನಿಟ್ಟಾಗಿ ಸಂರಕ್ಷಿತ ಕೋರ್ ಪ್ರದೇಶಗಳಲ್ಲಿ ಅಲ್ಲ ಎಂದು ಹೇಳಿತು.
ಹಾಗೆಯೇ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಬಫರ್ ವಲಯಗಳೊಳಗಿನ ಅರಣ್ಯೇತರ ಅಥವಾ ಅವನತಿ ಹೊಂದಿದ ಭೂಮಿಯಲ್ಲಿ ಸಫಾರಿಗಳನ್ನು ನಡೆಸಬೇಕು. ನಿರ್ಣಾಯಕ ಆವಾಸಸ್ಥಾನಗಳು ಮತ್ತು ಹುಲಿ ಕಾರಿಡಾರ್‌ಗಳನ್ನು ತಪ್ಪಿಸಬೇಕು. ಸಫಾರಿಗೆ ಸಂಬಂಧಿಸಿದಂತೆ ಹುಲಿ ಸಂರಕ್ಷಿತ ಪ್ರದೇಶದ ಕೋರ್, ಬಫರ್ ಮತ್ತು ಪ್ರವಾಸೋದ್ಯಮ ವಲಯಗಳ ಗಡಿರೇಖೆ, ಸಫಾರಿಗಳನ್ನು ನಡೆಸುತ್ತಿರುವ ನಿಖರವಾದ ಸ್ಥಳಗಳು ಮತ್ತು ಈ ವಲಯಗಳನ್ನು ಸೂಚಿಸುವ ನಕ್ಷೆಗಳನ್ನು ಸ್ಪಷ್ಟಪಡಿಸುವ ವಿವರಗಳನ್ನು ಒಳಗೊಂಡ ಪ್ರಮಾಣ ಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತು.
ಕಳೆದ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ವ್ಯಾಪಕವಾಗಿ, ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಬಗ್ಗೆ ಸಾರ್ವಜನಿಕವಾಗಿ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಮೂರು ತಿಂಗಳಿಗೂ ಅಧಿಕ ಕಾಲ ಸಫಾರಿಗೆ ನಿಷೇಧ ಹೇರಿತು. ಕಳೆದ ಫೆಬ್ರವರಿಯಲ್ಲಿ ತಾಂತ್ರಿಕ ಸಮಿತಿಯ ಶಿಫಾರಸ್ಸುಗಳ ಆಧಾರದ ಮೇಲೆ ಶೇ. 50ರಷ್ಟು ಸಫಾರಿಗೆ ಸರ್ಕಾರ ಅನುಮತಿಸಿದೆ. ಇದನ್ನು ಪ್ರಶ್ನಿಸಿ ಹುಲಿ ಆವಾಸ ಸ್ಥಾನಗಳಲ್ಲಿ ಹುಲಿ ಸಫಾರಿಗಳನ್ನು ಶಾಶ್ವತವಾಗಿ ನಿಷೇಧಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.


