ACB Raids: ಭ್ರಷ್ಟ ಎಂಜಿನಿಯರ್ ಮನೆ ಕಸದ ಬುಟ್ಟಿಯಲ್ಲೂ ಚಿನ್ನ..!
* ಎಸಿಬಿ ದಾಳಿ ವೇಳೆ ಕೃಷ್ಣ ಭಾಗ್ಯ ಜಲನಿಗಮದ ಎಂಜಿನಿಯರ್ ಮನೆಯಲ್ಲಿ ಅಪಾರ ಸಂಪತ್ತು ಪತ್ತೆ
* ಚಿನ್ನಾಭರಣ ಬಚ್ಚಿಡುವ ಯತ್ನ ವಿಫಲ
* ಲಭ್ಯವಾದ ಆಸ್ತಿ ಪ್ರಮಾಣ ಇನ್ನೂ ಲೆಕ್ಕಕ್ಕೆ ಸಿಕ್ಕಿಲ್ಲ
ರಾಯಚೂರು(ಮಾ.17): ಕೃಷ್ಣ ಭಾಗ್ಯ ಜಲ ನಿಗಮ ಲಿಮಿಟೆಡ್(KBJNL) ಉಪವಿಭಾಗ-13ರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್(Engineer) ಅಶೋಕರೆಡ್ಡಿ ಪಾಟೀಲ್ ಮನೆ ಮೇಲೆ ಎಸಿಬಿ(ACB Raid) ತಂಡವು ದಾಳಿ ನಡೆಸಿದ ವೇಳೆ, ಕಸದ ಬುಟ್ಟಿಯಲ್ಲೂ ಚಿನ್ನಾಭರಣ(Gold) ಪತ್ತೆಯಾಗಿದೆ. ದಾಳಿ ವೇಳೆ ಅಧಿಕಾರಿಗಳ ಕೈಗೆ ಸಿಗದಿರಲಿ ಎಂದು ಅಶೋಕ ರೆಡ್ಡಿ ಚಿನ್ನಾಭರಣಗಳನ್ನು ಕಸದ ಬುಟ್ಟಿಗೆ ಎಸೆದಿದ್ದ ಎನ್ನಲಾಗಿದೆ.
ರಾಯಚೂರಿನ(Raichur) ಬಸವೇಶ್ವರ ನಗರದಲ್ಲಿರುವ ರೆಡ್ಡಿ ನಿವಾಸ, ಅವರ ಕಚೇರಿ, ಹುಟ್ಟೂರು ಯಾದಗಿರಿಯ ಜಿಲ್ಲೆಯ ಕುದ್ರಾಪುರದಲ್ಲಿರುವ ಮನೆ ಮೇಲೆ ದಾಳಿ ನಡೆದಿದೆ. ಈ ವೇಳೆ 7 ಲಕ್ಷ ರು. ನಗದು, 400 ಗ್ರಾಂ ಚಿನ್ನ, 600 ಗ್ರಾಂ ಬೆಳ್ಳಿ ಪತ್ತೆಯಾಗಿದೆ. ಜತೆಗೆ ಬೇನಾಮಿ ಆಸ್ತಿ ಸಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ರಾಜ್ಯಾದ್ಯಂತ ಎಸಿಬಿ ಬೃಹತ್ ದಾಳಿ: 18 ಭ್ರಷ್ಟ ಅಧಿಕಾರಿಗಳಿಗೆ ನಡುಕ, 75 ಕಡೆ ಶೋಧ ಕಾರ್ಯ!
ಆರ್‌ಎಫ್‌ಒ ಬಳಿ ನೋಟು ಎಣಿಸುವ ಯಂತ್ರ, ಶ್ರೀಗಂಧ
ಬಾಗಲಕೋಟೆ(Bagalkot) ಜಿಲ್ಲೆಯ ಬಾದಾಮಿಯ(Badami) ವಲಯ ಅರಣ್ಯಾಧಿಕಾರಿ ಶಿವಾನಂದ ಖೇಡಗಿ ಅವರ ಮನೆಯಲ್ಲಿ ನೋಟು ಎಣಿಸುವ ಯಂತ್ರ ಪತ್ತೆಯಾಗಿದೆ. ಇದರ ಜೊತೆಗೆ ಶ್ರೀಗಂಧದ(Sandalwood) ತುಂಡುಗಳು ಸಹ ಪತ್ತೆಯಾಗಿವೆ. ಇದೇ ವೇಳೆ ಅಧಿಕಾರಿಗಳೇ ದಂಗಾಗುವಷ್ಟು ಅಪಾರ ಪ್ರಮಾಣದ ಚಿನ್ನಾಭರಣಗಳು ಸಿಕ್ಕಿದ್ದು, ಇವುಗಳ ಮೌಲ್ಯ ತಿಳಿದುಕೊಳ್ಳಲು ಅಕ್ಕಸಾಲಿಗರ ನೆರವು ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಖೇಡಗಿಯವರ ಇಬ್ಬರು ಅಳಿಯಂದಿರ ಮನೆ, ಕಚೇರಿಗಳ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದು, ಅಲ್ಲೂ ಅಪಾರ ಪ್ರಮಾಣದ ಆಸ್ತಿ ದಾಖಲೆಗಳು ಪತ್ತೆಯಾಗಿವೆ.
ಪರಿಸರ ಅಧಿಕಾರಿ ಬಳಿ 10 ಮನೆ, 10 ಎಕ್ರೆ ಜಮೀನು
ದಾವಣಗೆರೆಯ(Davanagere) ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಮಹೇಶ್ವರಪ್ಪ ಅವರ ಮನೆ ಹಾಗೂ ಅವರ ಸೋದರನ ಮನೆಯಲ್ಲೂ ಅಪಾರ ಪ್ರಮಾಣದ ಆಸ್ತಿ ಸಿಕ್ಕಿದೆ. ಏಕಕಾಲಕ್ಕೆ ಮಹೇಶ್ವರಪ್ಪನವರ ಕಚೇರಿ, ವಿದ್ಯಾನಗರದ ರಂಗನಾಥ ಬಡಾವಣೆಯ ಮನೆ, ಅವರ ಹುಟ್ಟೂರಾದ ಚನ್ನಗಿರಿ ತಾಲೂಕಿನ ಕಂಸಾಗರ ಗ್ರಾಮ, ಸಹೋದರನ ಮನೆ ಮೇಲೆ ಎಸಿಬಿ ತಂಡವು ದಾಳಿ ನಡೆಸಿತು. ಈ ವೇಳೆ 10 ಮನೆ, 2 ನಿವೇಶನ, 10 ಎಕರೆ ಜಮೀನು, 1 ಕಾರು, 1 ಬೈಕ್, ಲಕ್ಷಾಂತರ ರು. ನಗದು, ಅಪಾರ ಪ್ರಮಾಣದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಸೇರಿದಂತೆ ದುಬಾರಿ ವಸ್ತುಗಳನ್ನು ಪತ್ತೆ ಮಾಡಿದೆ. ಸಹೋದರನ ಮನೆಯಲ್ಲೂ ಅಪಾರ ಪ್ರಮಾಣದ ಆಸ್ತಿಪತ್ರ, ಬ್ಯಾಂಕ್ ಪಾಸ್‌ಬುಕ್‌ಗಳು ಸೇರಿದಂತೆ ಅನೇಕ ದಾಖಲೆಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಯೋಜನಾ ವ್ಯವಸ್ಥಾಪಕ 12 ಕೋಟಿ ಆಸ್ತಿ ಒಡೆಯ
ವಿಜಯಪುರ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಗೋಪಿನಾಥಸಾ ಮಲಜಿ ಮನೆ, ಕಚೇರಿ, ಸ್ಟೋರ್‌ಗಳು, ಕಚೇರಿ ಸಿಬ್ಬಂದಿ-ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು .12 ಕೋಟಿಗೂ ಅಧಿಕ ಚರಾಸ್ತಿ, ಸ್ಥಿರಾಸ್ತಿ ಪತ್ತೆಹಚ್ಚಿದ್ದಾರೆ. ಅವರ ಮನೆಯಲ್ಲಿ 3ರಿಂದ 5 ಲಕ್ಷ ಬೆಲೆ ಬಾಳುವ ಜಾಗ್ವಾರ್ ಕಂಪನಿಯ ಜಾಕುಜಿ ಸ್ಟಿಮ್ ಬಾತ್ ಕೂಡ ಪತ್ತೆಯಾಗಿದೆ. ಅವರ ಐಷಾರಾಮಿ ಜೀವನ ಶೈಲಿ ಕಂಡು ಅಧಿಕಾರಿಗಳು ಬೆರಗಾಗಿದ್ದಾರೆ.
ವಿವಿಧ ಬ್ಯಾಂಕ್ ಖಾತೆಗಳಲ್ಲಿ .5 ಕೋಟಿ ಬ್ಯಾಂಕ್ ಬ್ಯಾಲೆನ್ಸ್, .1 ಕೋಟಿ ಎಫ್‌ಡಿ, 450 ಗ್ರಾಂ ಚಿನ್ನಾಭರಣ, ವಿವಿಧೆಡೆ 41 ಎಕರೆ ಜಮೀನು, ವಿಜಯಪುರದಲ್ಲಿ ಒಂದು ಮನೆ ಸುಮಾರು .60 ಲಕ್ಷ ಮೌಲ್ಯ, ಸುಮಾರು 08 ನಿವೇಶನಗಳು, ಎರಡು ಬೇನಾಮಿ ಕಾರ್‌ಗಳು, 2 ಸ್ಕೂಟಿ ಸೇರಿದಂತೆ ಚರ, ಸ್ಥಿರಾಸ್ಥಿ ಸೇರಿ ಒಟ್ಟು .12 ಕೋಟಿಗೂ ಹೆಚ್ಚು ಅಕ್ರಮ ಆಸ್ತಿಯನ್ನು ಎಸಿಬಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಎಮ್ಮೆ ಖರೀದಿಗೆ ಮಹಿಳೆ ಸಾಲ ಕೇಳಿದ್ದಕ್ಕೆ ಲಂಚ ಕೇಳಿದ ಅಧಿಕಾರಿ ಎಸಿಬಿ ಬಲೆಗೆ, ಉಗಿಯುತ್ತಿರೋ ಜನ..
ಸಹಾಯಕ ಎಂಜಿನಿಯರ್ 1.5 ಕೋಟಿ ಮನೆಯೊಡೆಯ
ಹಾವೇರಿ ಎಪಿಎಂಸಿಯಲ್ಲಿ ಸಹಾಯಕ ಎಂಜಿನಿಯರ್ ಕೃಷ್ಣ ಆರೇರ ಅವರು ಇಲ್ಲಿನ ಬಸವೇಶ್ವರ ನಗರದಲ್ಲಿ ಬರೋಬ್ಬರಿ ಒಂದೂವರೆ ಕೋಟಿ ರು. ಮನೆ ಹೊಂದಿದ್ದು, ಎಸಿಬಿ ದಾಖ ವೇಳೆ .2.29 ಲಕ್ಷ ನಗದು, 476 ಗ್ರಾಂ ಚಿನ್ನಾಭರಣ, 2 ಕೆ.ಜಿ. ಬೆಳ್ಳಿ ಆಭರಣ ಸಿಕ್ಕಿದೆ. 12 ಕಡೆಗಳಲ್ಲಿ ಆಸ್ತಿ ಖರೀದಿಸಿರುವ ಇವರು, ಹಾನಗಲ್ಲ ತಾಲೂಕಿನ ಡೊಳ್ಳೇಶ್ವರ ಸುತ್ತಮುತ್ತ ಸುಮಾರು 20 ಎಕರೆ ಜಮೀನು ಖರೀದಿ ಮಾಡಿದ್ದಾರೆ. ಪತ್ನಿ ಹೆಸರಿನಲ್ಲಿ ಕೂಡ ಸೈಟ್ ಖರೀದಿಸಿದ್ದಾರೆ.
ಹುಟ್ಟೂರು ಡೊಳ್ಳೇಶ್ವರ ಗ್ರಾಮದ ನಿವಾಸ ಹಾಗೂ ಸಹೋದರನ ಮನೆಯಲ್ಲಿ .6 ಲಕ್ಷ ನಗದು, 600 ಗ್ರಾಂ ಚಿನ್ನಾಭರಣ ಸಿಕ್ಕಿದೆ. ಬ್ಯಾಂಕ್ ಪಾಸ್‌ಬುಕ್‌ಗಳು, ಆಸ್ತಿಗಳ ದಾಖಲೆಗಳು ಲಭಿಸಿದೆ.
ಬೆಂಗ್ಳೂರಲ್ಲಿ ಕಾಂಪ್ಲೆಕ್ಸ್ ಕಟ್ಟಿಸಿದ ಗುಂಡ್ಲುಪೇಟೆ ಅಬಕಾರಿ ನಿರೀಕ್ಷಕ
ಎಸಿಬಿ ಅಧಿಕಾರಿಗಳು ನಡೆಸಿದ ದಾಳಿ ವೇಳೆ ಗುಂಡ್ಲುಪೇಟೆ ಅಬಕಾರಿ ನಿರೀಕ್ಷಕ ಚೆಲುವರಾಜ್ ಅವರು ಮೈಸೂರು ಮತ್ತು ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ 4 ನಿವೇಶನ, 5 ಮನೆ ಹಾಗೂ ಒಂದು ಕಾಂಪ್ಲೆಕ್ಸ್ ಹೊಂದಿರುವ ಪತ್ರಗಳು ಪತ್ತೆಯಾಗಿವೆ. ಅಪಾರ ಪ್ರಮಾಣದಲ್ಲಿ ಚಿನ್ನಾಭರಣ ಪತ್ತೆಯಾಗಿದ್ದು, ಅಧಿಕಾರಿಗಳು ತಡರಾತ್ರಿ ತನಕ ಕಾರ್ಯಾಚರಣೆ ಮುಂದುವರೆಸಿದ್ದರು. ಲಭ್ಯವಾದ ಆಸ್ತಿ ಪ್ರಮಾಣ ಇನ್ನೂ ಲೆಕ್ಕಕ್ಕೆ ಸಿಕ್ಕಿಲ್ಲ ಎಂದು ಹೇಳಲಾಗಿದೆ.