ಬೆಂಗಳೂರಿನ ಮೂಲಸೌಲಭ್ಯ ಸಮಸ್ಯೆ ಕುರಿತು ಧ್ವನಿ ಎತ್ತಿದ ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ ವಿರುದ್ಧದ ಟೀಕೆ ವಿಚಾರವಾಗಿ ಆರ್‌ಪಿಜಿ ಎಂಟರ್‌ಪ್ರೈಸಸ್‌ ಮುಖ್ಯಸ್ಥ, ಉದ್ಯಮಿ ಹರ್ಷ್‌ ಗೋಯೆಂಕಾ ಅವರು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಹೆಸರತ್ತದೆ ತೀವ್ರ ಕಿಡಿಕಾರಿದ್ದಾರೆ.

ಮುಂಬೈ: ಬೆಂಗಳೂರಿನ ಮೂಲಸೌಲಭ್ಯ ಸಮಸ್ಯೆ ಕುರಿತು ಧ್ವನಿ ಎತ್ತಿದ ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ ವಿರುದ್ಧದ ಟೀಕೆ ವಿಚಾರವಾಗಿ ಆರ್‌ಪಿಜಿ ಎಂಟರ್‌ಪ್ರೈಸಸ್‌ ಮುಖ್ಯಸ್ಥ, ಉದ್ಯಮಿ ಹರ್ಷ್‌ ಗೋಯೆಂಕಾ ಅವರು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಹೆಸರತ್ತದೆ ತೀವ್ರ ಕಿಡಿಕಾರಿದ್ದಾರೆ.

‘ಸಮಸ್ಯೆಯನ್ನು ಬಗೆಹರಿಸುವ ಬದಲು ಆ ಕುರಿತು ಪ್ರಶ್ನೆ ಮಾಡುವವರ ಮೇಲೆ ದಾಳಿ ನಡೆಸಲಾಗುತ್ತದೆ’ ಎಂದು ಅಸಮಾದಾನ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಅವರು, ‘ನಮ್ಮ ರಾಜಕಾರಣಿಗಳ ಚರ್ಮ ಎಷ್ಟು ತೆಳುವಾಗಿದೆ ನೋಡಿ. ಕಿರಣ್‌ ಮಜುಂದಾರ್‌ ಶಾ ಅವರು ಬೆಂಗಳೂರಿನ ಮೂಲಸೌಲಭ್ಯ ಸಮಸ್ಯೆ ಕುರಿತು ಪ್ರಶ್ನಿಸಿದಾಗ ಅದನ್ನು ಸರಿಪಡಿಸುವ ಬದಲು ರಾಜಕಾರಣಕ್ಕೆ ಇಳಿದರು. ಈಗ ಧನಾತ್ಮಕ ಟ್ವೀಟ್‌ಗಳನ್ನು ಮಾಡುವಂತೆ ಆಕೆ ಮೇಲೆ ಒತ್ತಡ ಹಾಕುತ್ತಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸುವ ಬದಲು ಆ ಕುರಿತು ಟೀಕೆ ಮಾಡುವವರ ಮೇಲೆ ದಾಳಿ ಮಾಡಿ ಎಂಬ ಭಾವನೆಯ ಮನಸ್ಥಿತಿ ಇದು’ ಎಂದು ಡಿ.ಕೆ.ಶಿವಕುಮಾರ್‌ ವಿರುದ್ಧ ಗೋಯೆಂಕಾ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರಿನ ರಸ್ತೆ, ಮೂಲಸೌಲಭ್ಯ ವಿರುದ್ಧ ಧ್ವನಿ ಎತ್ತಿದ್ದ ಉದ್ಯಮಿಗಳಾದ ಕಿರಣ್‌ ಮಜುಂದಾರ್‌ ಶಾ, ಮೋಹನ್‌ ದಾಸ್‌ ಪೈ ವಿರುದ್ಧ ಡಿ.ಕೆ.ಶಿವಕುಮಾರ್‌ ತೀವ್ರ ಅಸಮಾಧಾನ ಹೊರಹಾಕಿದ್ದರು. ಅವರು ಬಿಜೆಪಿ ಸರ್ಕಾರ ಇದ್ದಾಗ ಯಾಕೆ ಈ ವಿಚಾರವಾಗಿ ಧ್ವನಿ ಎತ್ತಲಿಲ್ಲ ಎಂದು ಪ್ರಶ್ನಿಸಿದ್ದರು. ಅವರಿಗೆ ವೈಯಕ್ತಿಕ ಅಜೆಂಡಾ ಇದ್ದಂತಿದೆ ಎಂದು ಹೇಳಿಕೊಂಡಿದ್ದರು.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದ ಕಿರಣ್‌ ಮಜುಂದಾರ್‌ ಶಾ ಅವರು, ನಾನು ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲೂ ಮೂಲಸೌಲಭ್ಯ ವಿಚಾರವಾಗಿ ಧ್ವನಿ ಎತ್ತಿದ್ದೆ ಎಂದು ಹೇಳಿಕೊಂಡಿದ್ದರು. ಬಳಿಕ ‘ಕಾಂಗ್ರೆಸ್ ಈಜಿಪುರ ಫ್ಲೈಓವರ್ ಪೂರ್ಣ ಮಾಡುತ್ತಿದೆ. ಇದನ್ನು ಬಿಜೆಪಿ-ಜೆಡಿಎಸ್‌ ಕೂಡ ಮಾಡಿರಲಿಲ್ಲ’ ಎಂದು ಇನ್ನೊಂದು ಟ್ವೀಟ್ ಮಾಡಿದ್ದರು. ಅದನ್ನೇ ಮುಂದಿಟ್ಟುಕೊಂಡು ಹರ್ಷ ಗೋಯೆಂಕಾ ಅವರು ಡಿ.ಕೆ.ಶಿವಕುಮಾರ್‌ರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.