ಕರ್ನಾಟಕ ರಾಜ್ಯ ಎಂಜಿನಿಯರ್‌ಗಳ ಕಣಜವಾಗಿದ್ದು, ಇಷ್ಟು ದೊಡ್ಡ ದೊಡ್ಡ ಜ್ಞಾನ ಸಂಪತ್ತನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ರಾಜ್ಯ ನಿಂತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಬೆಂಗಳೂರು (ಅ.19): ಕರ್ನಾಟಕ ರಾಜ್ಯ ಎಂಜಿನಿಯರ್‌ಗಳ ಕಣಜವಾಗಿದ್ದು, ಇಷ್ಟು ದೊಡ್ಡ ದೊಡ್ಡ ಜ್ಞಾನ ಸಂಪತ್ತನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ರಾಜ್ಯ ನಿಂತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಕನ್ನಡಪ್ರಭ-ಏಷಿಯಾನೆಟ್‌ ಸುವರ್ಣ ನ್ಯೂಸ್‌ ಏರ್ಪಡಿಸಿದ್ದ ‘ಎಮಿನೆಂಟ್‌ ಎಂಜಿನಿಯರ್‌ -2025’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶ್ವದ ನಾಯಕರು ಮೊದಲು ಬೆಂಗಳೂರಿಗೆ ಬಂದು ನಂತರ ದೆಹಲಿಗೆ ಹೋಗುತ್ತಾರೆ ಎಂದು ಹಿಂದೆ ಅಟಲ್‌ ಬಿಹಾರಿ ವಾಜಪೇಯಿ ಹೇಳಿದ್ದರು. ಅದರಂತೆ ಮೆಟ್ರೋ ಉದ್ಘಾಟನೆಗೆ ಬಂದಿದ್ದ ಪ್ರಧಾನಿ ಮೋದಿ ಕೂಡ ಬೆಂಗಳೂರು ಒಂದು ಗ್ಲೋಬಲ್‌ ಸಿಟಿ ಎಂದು ಕರೆದಿದ್ದಾರೆ.

ಹಿಂದೊಮ್ಮೆ ಯೋಚನೆ ಮಾಡಲೂ ಸಾಧ್ಯವಾಗದಷ್ಟು ಬೆಂಗಳೂರಿನ ತಾಂತ್ರಿಕತೆ ಬೆಳೆದಿದ್ದು, ಜಗತ್ತನ್ನು ಸೆಳೆದಿದೆ. ನಗರದಲ್ಲಿ 25 ಲಕ್ಷ ಐಟಿ ಎಂಜಿನಿಯರ್‌ಗಳು, 15 ಲಕ್ಷ ಸಿವಿಲ್‌ ಎಂಜಿನಿಯರ್‌ಗಳು, ಎಲೆಕ್ಟ್ರಿಕಲ್‌ ಎಂಜಿನಿಯರ್‌ಗಳು ಸೇರಿ 40 ಲಕ್ಷ ಜನ ಅಧಿಕೃತವಾಗಿ ಕೆಲಸ ಮಾಡುತ್ತಿದ್ದು, ಸರಿಸುಮಾರು 250 ಎಂಜಿನಿಯರಿಂಗ್ ಕಾಲೇಜು ಇರುವುದಾಗಿ ಕೇಳಿದ್ದೇವೆ. ಇಷ್ಟು ದೊಡ್ಡ ಜ್ಞಾನ ಸಂಪತ್ತನ್ನು ನಗರ ಹೊಂದಿದ್ದು, ಇದನ್ನು ನಾವು ಯಾವ ರೀತಿ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯವಾಗುತ್ತದೆ ಎಂದರು.

ಪ್ರಸ್ತುತ ಬಿಎಸ್‌ಸಿ, ಬಿಕಾಂ, ಬಿಇ ಸೇರಿ ಬೇರೆ ಬೇರೆ ಡಿಗ್ರಿ ಪಡೆದವರು ಎಂಜಿನಿಯರಿಂಗ್ ಮಾಡಿಕೊಂಡರೆ ಬೆಂಗಳೂರಿನಲ್ಲಿ ಕೆಲಸ ಮಾಡಬಹುದು ಎಂಬ ಭಾವನೆ ಬೆಳೆದಿದೆ. ಎಂಜಿನಿಯರ್‌ಗಳು ಬದ್ಧತೆಯಿಂದ, ಸೂಕ್ಷ್ಮತೆಯಿಂದ ಕೆಲಸ ಮಾಡಬೇಕಾಗುತ್ತದೆ. ರಾಜ್ಯದ ದೊಡ್ಡ ಸಂಪತ್ತಾಗಿರುವ ಎಂಜಿನಿಯರ್‌ಗಳನ್ನು ಗುರುತಿಸಿ ಸನ್ಮಾನಿಸುವುದು ಶ್ಲಾಘನೀಯ ಎಂದು ಹೇಳಿದರು. ಇಂಧನ ಸಚಿವನಾಗಿದ್ದ ಸಂದರ್ಭದಲ್ಲಿ ಕೆಪಿಟಿಸಿಎಲ್‌, ಬೆಸ್ಕಾಂ ವಿದ್ಯುತ್‌ ಕಂಪನಿಗಳಗೆ ಎಂಜಿನಿಯರ್‌ಗಳ ಹುದ್ದೆ ಭರ್ತಿ ಮಾಡುವಾಗ ಒಬ್ಬರೂ ಒಂದು ರುಪಾಯಿ ಲಂಚವನ್ನೂ ನೀಡದೆ ಪಾರದರ್ಶಕತೆಯಿಂದ ನೇಮಕಾತಿ ಮಾಡಿಕೊಳ್ಳಬೇಕು ಎಂದು ನಿರ್ಧಾರ ಕೈಗೊಂಡಿದ್ದೆ. ಪ್ರಸ್ತುತ ನಮ್ಮ ರಾಜ್ಯದಲ್ಲಿ ಸಿಇಟಿ ಸೇರಿ ಇತರೆ ಪರೀಕ್ಷೆಗಳನ್ನು ನಡೆಸುವಾಗ ಪಾರದರ್ಶಕತೆಯಿಂದ ನಡೆಸಲು ಕ್ರಮ ವಹಿಸಲಾಗಿದೆ ಎಂದರು.

ಎತ್ತಿನಹೊಳೆ ಅದ್ಭುತ ಯೋಜನೆ: ಎತ್ತಿನಹೊಳೆ ಯೋಜನೆ ಒಂದು ಅದ್ಭುತ ಎಂಜಿನಿಯರಿಂಗ್‌ ಯೋಜನೆ ಆಗಲಿದೆ. ಸಕಲೇಶಪುರ ವಿಭಾಗದಿಂದ ಎಷ್ಟು ನೀರನ್ನು ಲಿಫ್ಟ್‌ ಮಾಡಲಾಗುತ್ತಿದೆ, ಎಷ್ಟು ಪಂಪ್‌ ಮಾಡುತ್ತಿದ್ದೇವೆ. ಯಾವ ಮಾರ್ಗದ ಮೂಲಕ ಬೆಂಗಳೂರಿಗೆ, ಕೋಲಾರಕ್ಕೆ ತರಲಾಗುತ್ತಿದೆ ಎಂಬುದೇ ವಿಶೇಷ. 45 ಮೀಟರ್‌ ಎತ್ತರದಲ್ಲಿ ಕಾಲುವೆ ಮೂಲಕ ಹೋಗುತ್ತದೆ ಎಂಬುದು ಎಂಜಿನಿಯರಿಂಗ್‌ ವಿಶೇಷ. ಇದು ಏಷ್ಯಾದಲ್ಲೇ ಅತ್ಯಂತ ಪ್ರಮುಖ ಪ್ರವಾಸಿ ಯೋಜನೆಯೂ ಆಗಲಿದೆ ಎಂದು ಅವರು ಹೇಳಿದರು.

ದೇವರು ವರವನ್ನೂ ಕೊಡಲ್ಲ, ಶಾಪವನ್ನೂ ಕೊಡಲ್ಲ. ಅವಕಾಶವನ್ನು ಮಾತ್ರ ಕೊಡುತ್ತಾನೆ. ಅವಕಾಶ ಕೊಟ್ಟಾಗ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸನ್ಮಾನದ ಹಾರ ಬಲು ಭಾರವಾಗಿರುತ್ತದೆ. ಸುದ್ದಿ ಸಂಸ್ಥೆಯವರು ಸನ್ಮಾನ ಮಾಡಿದ್ದಾರೆ ಎಂದು ಇಲ್ಲಿಗೆ ನಮ್ಮ ಸಾಧನೆ ಮುಗಿಯಿತು ಎಂದುಕೊಳ್ಳಬೇಡಿ. ಪ್ರತಿದಿನ ಎಂಜಿನಿಯರಿಂಗ್‌ ಕೌಶಲ್ಯ ಹೆಚ್ಚಿಸಿಕೊಳ್ಳಿ. ದಿನವೂ ಕಲಿಯುತ್ತಿರಿ, ಮುಂದಿನ ಪೀಳಿಗೆಗೆ ಕಲಿಸುತ್ತಿರಿ ಎಂದರು. ನಿರಂತವಾಗಿ ಕೆಲಸ ಮುಂದುವರಿಸಿ. ಸಮಾಜಕ್ಕೆ ಹೆಚ್ಚಿನ ಕೊಡುಗೆಯನ್ನು ನೀಡುತ್ತಿರಿ. ಖಾಸಗಿಯಾಗಾದರೂ ಕೆಲಸ ಮಾಡಿ, ಸರ್ಕಾರಕ್ಕಾದರೂ ಕೆಲಸ ಮಾಡಿ. ಕೊನೆಯ ಉಸಿರು ಇರುವವರೆಗೆ ದುಡಿಯಬೇಕು. ಅದು ಬಿಟ್ಟು ನಿವೃತ್ತಿ ಮನೋಭಾವ ಬೆಳೆಸಿಕೊಳ್ಳಬೇಡಿ ಎಂದು ಹೇಳಿದರು.

ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಈಗ ಮಹಿಳೆಯರು ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ. ಸಿವಿಲ್‌, ಎಲೆಕ್ಟ್ರಿಕಲ್‌ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಪಂಚದ ಯಾವುದೇ ಭಾಗಕ್ಕೆ ಹೋದರೂ ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಭಾರತೀಯರೇ ಹೆಚ್ಚಾಗಿದ್ದಾರೆ. ಉನ್ನತ ಹುದ್ದೆಯಿಂದ ಹಿಡಿದು ಎರಡನೇ ಹಂತದ ಪ್ರಮುಖ ಸ್ಥಾನಗಳಲ್ಲಿ ನಮ್ಮ ಎಂಜಿನಿಯರ್‌ಗಳೇ ಹೆಚ್ಚಿದ್ದಾರೆ. ವಿಶ್ವೇಶ್ವರಯ್ಯ ಅವರು ದೇಶಕ್ಕೆ ಬಹುದೊಡ್ಡ ಎಂಜಿನಿಯರಿಂಗ್‌ ಬುನಾದಿ ಹಾಕಿಕೊಟ್ಟಿದ್ದಾರೆ. ಅವರ ಹಾದಿಯಲ್ಲಿ ನಾವು ಮುನ್ನಡೆಯಬೇಕಾಗಿದೆ. ನಾನು ಇಂಧನ ಸಚಿವ ಆಗಿದ್ದಾಗ ಗಾಳಿ ವಿದ್ಯುತ್‌, ಜಲವಿದ್ಯುತ್‌ ಜತೆಗೆ ಸೋಲಾರ್‌ ವಿದ್ಯುತ್‌ ಬೃಹತ್‌ ಪ್ರಮಾಣದಲ್ಲಿ ಉತ್ಪಾದಿಸಲು ಮುಂದಾದೆವು. ರೈತರ ಒಂದು ಎಕರೆ ಜಾಗವನ್ನೂ ತೆಗೆದುಕೊಳ್ಳದೆ, ಲೀಸ್‌ ಆಧಾರದ ಮೇಲೆ ಜಮೀನು ಪಡೆಯಲಾಯಿತು. ಪರಿಣಾಮ ಒಂದೇ ಕಡೆ 2400 ಮೆ.ವ್ಯಾ. ವಿದ್ಯುತ್‌ ಉತ್ಪಾದಿಸುವ ಪಾವಗಡ ಸೋಲಾರ್ ಪಾರ್ಕ್‌ ಮಾಡಲಾಯಿತು. ಇದು ನಮ್ಮ ರಾಜ್ಯದಲ್ಲಿ ಐತಿಹಾಸಿಕ ಮೈಲುಗಲ್ಲಾಗಿದೆ ಎಂದರು.

ಟನಲ್‌ ನನಗಾಗಿ ಮಾಡಿಕೊಳ್ತಿಲ್ಲ

ಇಷ್ಟಾದರೂ ಎಲ್ಲಾ ಹಂತದಲ್ಲೂ ಟೀಕೆ ಎದುರಿಸಿದ್ದೇವೆ. ಟ್ರಾಫಿಕ್‌ ವಿಚಾರ, ಟನಲ್‌ ರಸ್ತೆ ವಿಚಾರದಲ್ಲಿ ಟೀಕೆಗಳು ಬರುತ್ತವೆ. ನಮ್ಮನ್ನು ತಿದ್ದಿ ತೀಡಲು ಟೀಕೆ ಮಾಡಲಾಗುತ್ತಿದೆ ಎಂದು ಭಾವಿಸಿ ಕೆಲಸ ಮಾಡುತ್ತೇವೆ. 1.20 ಕೋಟಿ ವಾಹನಗಳು ಬೆಂಗಳೂರಿನಲ್ಲಿ ನೋಂದಣಿ ಆಗಿವೆ. 1.40 ಕೋಟಿ ಜನಸಂಖ್ಯೆ ಇದೆ. 20 ಲಕ್ಷ ಜನ ಪ್ರತಿದಿನ ಬೆಂಗಳೂರಿಗೆ ಬಂದು ಹೋಗುತ್ತಾರೆ. ಬೇರೆ ದೇಶಗಳಲ್ಲಿ 50 ವರ್ಷಗಳ ಹಿಂದೆಯೇ ಟನಲ್‌ ರಸ್ತೆ ಮಾಡಲಾಗಿದೆ. ಅನಿವಾರ್ಯವಾಗಿ ಬೇರೆ ಆಯ್ಕೆ ಇಲ್ಲದೆ ನಾವು ಟನಲ್‌ ರಸ್ತೆ ನಿರ್ಮಾಣಕ್ಕೆ ತೀರ್ಮಾನ ಕೈಗೊಂಡಿದ್ದೇವೆ. ನನಗೋಸ್ಕರ ಈ ಯೋಜನೆ ಮಾಡಿಲ್ಲ. ನಾನು ಶಾಶ್ವತವಾಗಿ ಇರಲ್ಲ ಎಂಬುದು ಗೊತ್ತಿದೆ. ನಾವು ಅಧಿಕಾರದಲ್ಲಿ ಇರುವ ಹೊತ್ತಲ್ಲಿ ಸಾಕ್ಷಿಗುಡ್ಡೆ ಬಿಟ್ಟುಹೋಗಬೇಕು ಎಂಬ ಉದ್ದೇಶದಿಂದ, ಕೊಡುಗೆ ನೀಡಬೇಕು ಎಂಬ ಧ್ಯೇಯದೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.