ರಾಜ್ಯದ ಏಳ್ಗೆಗೆ ಜಿಮ್ ಭದ್ರ ಬುನಾದಿ: ಸಿಎಂ ಹೂಡಿಕೆ ಒಪ್ಪಂದಗಳನ್ನು ನಾವೇ ಜಾರಿ ಮಾಡುತ್ತೇವೆ ಕೋವಿಡ್ ನಂತರ ಅನ್ಯ ದೇಶಗಳತ್ತ ಜಾಗತಿಕ ಕಂಪನಿ ನೋಟ ಈ ಅವಕಾಶಗಳನ್ನು ಬಳಸಿಕೊಳ್ಳಲು ಕರ್ನಾಟಕ ಸರ್ವಸನ್ನದ್ಧ ಅನ್ಯ ದೇಶಗಳ ಆರ್ಥಿಕತೆ ಅಷ್ಟುಸರಿಯಿಲ್ಲ, ಭಾರತ ಸದೃಢ
ಬೆಂಗಳೂರು (ನ.2) :‘ಕೋವಿಡ್ ನಂತರ ಹಲವು ದೇಶಗಳು ಚೀನಾ ಹೊರತಾಗಿ ಬೇರೆ ದೇಶಗಳಲ್ಲಿ ವ್ಯಾಪಾರ-ವ್ಯವಹಾರ ಮಾಡಲು ಉತ್ಸುಕವಾಗಿವೆ. ಯಾರು ಮೊದಲು ಈ ಅವಕಾಶವನ್ನು ಬಳಸಿಕೊಳ್ಳಲಿದ್ದಾರೋ ಅವರಿಗೆ ಹೆಚ್ಚು ಲಾಭವಾಗಲಿದೆ. ಈ ಕಾರಣದಿಂದ ನಾವು ಧೈರ್ಯ ಮಾಡಿ ‘ಜಿಮ್’ ಸಮಾವೇಶ (ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ) ನಡೆಸಲು ತೀರ್ಮಾನಿಸಿದ್ದೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Global Investors Meet: ಬಂಡವಾಳ, ಉದ್ಯೋಗ ಸೃಷ್ಟಿಯ ನಿರೀಕ್ಷೆಯಲ್ಲಿ ಸಚಿವ ಮುರುಗೇಶ್ ನಿರಾಣಿ
ಬುಧವಾರದಿಂದ ನಗರದ ಅರಮನೆ ಮೈದಾನದಲ್ಲಿ ಆರಂಭವಾಗುವ ಮೂರು ದಿನಗಳ ‘ಜಾಗತಿಕ ಹೂಡಿಕೆದಾರರ ಸಮಾವೇಶ-ಇನ್ವೆಸ್ಟ್ ಕರ್ನಾಟಕ’ ಇಡೀ ಜಗತ್ತಿನ ಗಮನ ಸೆಳೆಯಲಿದೆ. ಜಾಗತಿಕ ಉದ್ದಿಮೆಗಳಿಗೆ ಬೆಂಗಳೂರೇ ಗಮ್ಯವಾಗಲಿದೆ. ಎಲ್ಲ ಜಾಗತಿಕ ಉದ್ದಿಮೆಗಳ ಹಾದಿಗಳು ಬೆಂಗಳೂರಿಗೆ ಬಂದು ಸೇರುತ್ತಿವೆ. ಈ ಇನ್ವೆಸ್ಟ್ ಕರ್ನಾಟಕ ಮುಂದಿನ ಐದು ವರ್ಷಗಳ ರಾಜ್ಯದ ಬೆಳವಣಿಗೆಗೆ ಭದ್ರ ಬುನಾದಿ ಹಾಕಲಿದೆ. ಈ ಸಮಾವೇಶ ಅತ್ಯಂತ ಯಶಸ್ವಿಯಾಗಲಿದೆ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಮುಂಬರುವ ಚುನಾವಣೆಯಲ್ಲೂ ನಮ್ಮದೇ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಹೀಗಾಗಿ, ಈ ಸಮಾವೇಶದಲ್ಲಿ ಆಗುವ ಒಪ್ಪಂದಗಳ ಅನುಷ್ಠಾನದಲ್ಲಿ ಯಾವುದೇ ವಿಳಂಬವಾಗುವುದಿಲ್ಲ’ ಎಂದೂ ಅವರು ಪ್ರತಿಪಾದಿಸಿದ್ದಾರೆ.
ಸಮಾವೇಶದ ಹಿನ್ನೆಲೆಯಲ್ಲಿ ಮಂಗಳವಾರ ‘ಕನ್ನಡಪ್ರಭ’ಕ್ಕೆ ವಿಶೇಷ ಸಂದರ್ಶನ ನೀಡಿದ ಅವರು ಹೂಡಿಕೆದಾರರ ಸಮಾವೇಶದ ಉದ್ದೇಶ, ಗುರಿ ಹಾಗೂ ರಾಜ್ಯದ ಬೆಳವಣಿಗೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗ ಹೀಗಿದೆ...
ರಾಜ್ಯದಲ್ಲಿ ಈ ಹಿಂದೆ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೂ (ಜಿಮ್) ಈ ಬಾರಿಯ ಹೂಡಿಕೆದಾರರ ಸಮಾವೇಶಕ್ಕೂ ಪ್ರಮುಖ ವ್ಯತ್ಯಾಸವೇನು?
ಈ ಬಾರಿ ಕರ್ನಾಟಕದಲ್ಲಿ 5ನೇ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಇನ್ವೆಸ್ಟ್ ಕರ್ನಾಟಕ ನಡೆಯಲಿದೆ. ಈ ಹಿಂದಿನ ಸಮಾವೇಶಗಳಿಗಿಂತ ವಿಭಿನ್ನವಾಗಿ ಈ ಬಾರಿಯ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಕೋವಿಡ್ ನಂತರ ಬಹಳ ದೊಡ್ಡ ಪ್ರಮಾಣದಲ್ಲಿ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ನಡೆದಿದೆ. ಹಲವು ರಾಜ್ಯಗಳು ಕೋವಿಡ್ ಬಳಿಕ ಜಿಮ್ ಸಮಾವೇಶ ನಡೆಸಬೇಕೋ ಅಥವಾ ಬೇಡವೋ? ಕೈಗಾರಿಕೆಗಳು ಹೇಗೆ ಪ್ರತಿಕ್ರಿಯಿಸಲಿವೆಯೋ ಎನ್ನುವಾಗ ನಾವು ಧೈರ್ಯವಾಗಿ ಜಿಮ್ ಸಮಾವೇಶ ಮಾಡುತ್ತಿದ್ದೇವೆ. ಕಳೆದ ಅಕ್ಟೋಬರ್ ಮತ್ತು ನವೆಂಬರ್ ವೇಳೆಗೆ ಕೋವಿಡ್ ಕಡಿಮೆಯಾದ ಬಳಿಕ ಕರ್ನಾಟಕದಲ್ಲಿ ಆರ್ಥಿಕ ಬೆಳವಣಿಗೆ ದೊಡ್ಡ ಪ್ರಮಾಣದಲ್ಲಿ ರಿಕವರಿ ಆಯಿತು. ಕಳೆದ ಬಾರಿ ತೆರಿಗೆ ಸಂಗ್ರಹದಲ್ಲಿ ನಿಗದಿತ ಗುರಿಗಿಂತ 12-13 ಸಾವಿರ ಕೋಟಿ ರು. ಹೆಚ್ಚುವರಿ ತೆರಿಗೆ ಸಂಗ್ರಹವಾಯಿತು. ಈ ವರ್ಷವೂ ಅತಿಹೆಚ್ಚು ಜಿಎಸ್‌ಟಿ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಇದರ ಅರ್ಥ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆ, ವ್ಯಾಪಾರ ವಹಿವಾಟು ಹೆಚ್ಚಾಗಿದೆ.
ದೇಶದ ಬೇರೆ ರಾಜ್ಯಗಳಿಗಿಂತ ಮುಂಚೆಯೇ ಕರ್ನಾಟಕ ಜಿಮ್ ಸಮಾವೇಶ ನಡೆಸಲು ಪ್ರಮುಖ ಕಾರಣವೇನು?
ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೂರೋಪ್, ಕೆನಡಾ, ಅಮೇರಿಕಾ ಸೇರಿದಂತೆ ಇತರೆ ರಾಷ್ಟ್ರಗಳಲ್ಲಿ ಹಣದುಬ್ಬರ ಹೆಚ್ಚಳವಾಗಿದೆ. ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಆರ್ಥಿಕ ಹಿಂಜರಿತ ಶುರುವಾಗಿದೆ. ಆದರೆ, ಭಾರತದಲ್ಲಿ ಆರ್ಥಿಕತೆಯ ಬೆಳವಣಿಗೆ ದರ ಶೇ.8ರಷ್ಟಿದೆ. ಅಂದರೆ, ಇದು ಭಾರತದ ಆರ್ಥಿಕ ಸದೃಢತೆ ತೋರಿಸುತ್ತದೆ. ಅದೇ ರೀತಿ ಕರ್ನಾಟಕದಲ್ಲಿ ಆರ್ಥಿಕ ಬೆಳವಣಿಗೆ ಹೆಚ್ಚಾಗಿದೆ. ಕೋವಿಡ್ ಸಂದರ್ಭ ಹಾಗೂ ನಂತರದ ಹಲವು ದೇಶಗಳು ಚೀನಾ ದೇಶದ ಮೇಲೆ ಭರವಸೆ ಕಳೆದುಕೊಂಡಿವೆ. ಹೀಗಾಗಿ ಚೀನಾ ಪ್ಲಸ್ ಪಾಲಿಸಿ ಬರುತ್ತಿದೆ. ಅಂದರೆ, ಚೀನಾ ಹೊರತಾಗಿ ಬೇರೆ ದೇಶಗಳಲ್ಲಿ ವ್ಯಾಪಾರ-ವ್ಯವಹಾರ ಮಾಡಲು ಉತ್ಸುಕವಾಗಿವೆ. ಇದರ ಲಾಭ ಭಾರತ ದೇಶಕ್ಕೆ ದೊಡ್ಡ ಪ್ರಮಾಣದಲ್ಲಿದೆ. ಯಾರು ಮೊದಲು ಈ ಅವಕಾಶವನ್ನು ಬಳಸಿಕೊಳ್ಳಲಿದ್ದಾರೋ ಅವರಿಗೆ ಹೆಚ್ಚು ಲಾಭವಾಗಲಿದೆ. ಈ ಕಾರಣದಿಂದ ನಾವು ಧೈರ್ಯ ಮಾಡಿ ಜಿಮ್ ಸಮಾವೇಶ ನಡೆಸಲು ತೀರ್ಮಾನಿಸಿದ್ದೇವೆ.
ಈ ಬಾರಿ ಜಿಮ್ ಸಮಾವೇಶಕ್ಕೆ ಏನೆಲ್ಲ ತಯಾರಿ ಮಾಡಿಕೊಳ್ಳಲಾಗಿದೆ?
ಕರ್ನಾಟಕ ಈ ಬಾರಿ ಯಶಸ್ವಿಯಾಗಿ ಜಿಮ್ ಸಮಾವೇಶ ನಡೆಸಲು ಹಲವು ತಯಾರಿ ಮಾಡಿಕೊಂಡಿದೆ. ನಮ್ಮ ಸರ್ಕಾರದ ಪಾಲಿಸಿಗಳು, ಈಜಿ ಆಫ್ ಡೂಯಿಂಗ್ ಬಿಜಿನೆಸ್, ಕೈಗಾರಿಕಾ ನೀತಿಗಳು, ಮೂಲಸೌಕರ್ಯಗಳು ಸಾಕಷ್ಟುಸುಧಾರಿಸಿವೆ. ಬೆಂಗಳೂರು ಹಾಗೂ ಬೆಂಗಳೂರು ಹೊರಗೆ ಸಾಕಷ್ಟುಮೂಲಸೌಕರ್ಯ ಅಭಿವೃದ್ಧಿಪಡಿಸಲಾಗಿದೆ. ಹಲವು ಕ್ಷೇತ್ರಗಳಲ್ಲಿ ತಂತ್ರಜ್ಞಾನ, ಕೌಶಲ್ಯಭರಿತ ಮಾನವ ಸಂಪನ್ಮೂಲವಿದೆ. ಇವೆಲ್ಲವನ್ನೂ ಇರಿಸಿಕೊಂಡು ಕರ್ನಾಟಕ ಜಿಮ್ ಸಮಾವೇಶ ಮಾಡುತ್ತಿದೆ.
ಹಿಂದಿನ ಜಿಮ್ ಸಮಾವೇಶಗಳಿಗೂ ಈ ಬಾರಿಯ ಜಿಮ್ ಸಮಾವೇಶದ ನಡುವಿನ ಪ್ರಮುಖ ವ್ಯತ್ಯಾಸ ಏನು?
ಈ ಹಿಂದಿನ ಜಿಮ್ ಸಮಾವೇಶಗಳಲ್ಲಿ ಹೂಡಿಕೆದಾರರೊಂದಿಗೆ ಎಂಒಯು (ಒಪ್ಪಂದ) ಆಗುತ್ತಿದ್ದವು. ಇದರಲ್ಲಿ ಕೆಲವು ಅನುಷ್ಠಾನಕ್ಕೆ ಬರುತ್ತಿದ್ದೆವು. ಕೆಲವು ಆಗುತ್ತಿರಲಿಲ್ಲ. ಈ ಬಾರಿ ಈ ಸಮಾವೇಶಕ್ಕೂ 3-4 ತಿಂಗಳು ಹಿಂದೆಯೇ ಆಸಕ್ತ ಹೂಡಿಕೆದಾರರ ಅರ್ಜಿ ಕರೆಯಲಾಗಿತ್ತು. ಸಾಕಷ್ಟುಮಂದಿ ಮೆಗಾ ಪ್ರಾಜೆಕ್ಟ್ಗಳಿಗೆ ಅರ್ಜಿ ಹಾಕಿದ್ದರು. ರಾಜ್ಯ ಉನ್ನತ ಮಟ್ಟದ ಸಮಿತಿಯಲ್ಲಿ 2.8 ಲಕ್ಷ ಕೋಟಿ ರು. ಹೂಡಿಕೆಗೆ ಅನುಮತಿ ನೀಡಲಾಗಿದೆ. ಈ ಬಾರಿ 5 ಲಕ್ಷ ಕೋಟಿ ರು. ಬಂಡವಾಳ ಹೂಡಿಕೆಯ ನಿರೀಕ್ಷೆಯಿದೆ. ಈಗಾಗಲೇ 2.8 ಲಕ್ಷ ಕೋಟಿ ರು. ಬಂಡವಾಳಕ್ಕೆ ಅನುಮತಿ ನೀಡಲಾಗಿದೆ. ಈ ಸಮಾವೇಶದಲ್ಲಿ ಹೂಡಿಕೆದಾರರೊಂದಿಗೆ ನಡೆಯುವ ಒಪ್ಪಂದಗಳಿಗೆ ಮುಂದಿನ ಎರಡು ತಿಂಗಳಲ್ಲಿ ರಾಜ್ಯ ಉನ್ನತ ಮಟ್ಟದ ಸಮಿತಿಯಲ್ಲಿ ಅನುಮೋದನೆ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಂದರೆ, ಸಮಾವೇಶಕ್ಕೂ ಮೊದಲೇ ಒಂದು ಹೆಜ್ಜೆ ಮುಂದಿರಿಸಿದ್ದೇವೆ. ಇದೇ ಹಿಂದಿನ ಮತ್ತು ಇಂದಿನ ಜಿಮ್ ಸಮಾವೇಶಕ್ಕೂ ಇರುವ ವ್ಯತ್ಯಾಸ.
ಜಾಗತಿಕ ಬಂಡವಾಳ ಹೂಡಿಕೆದಾರರನ್ನು ಸೆಳೆಯಲು ಏನೆಲ್ಲಾ ಕ್ರಮ ಕೈಗೊಳ್ಳಲಾಗಿದೆ? ಈ ಸಮಾವೇಶಕ್ಕೆ ಪ್ರತಿಕ್ರಿಯೆ ಹೇಗಿದೆ?
ನಾವು ಯಾವುದೇ ಉತ್ತೇಜನಕಾರಿ ಕ್ರಮಗಳ ಮೇಲೆ ಈ ಸಮಾವೇಶ ಮಾಡುತ್ತಿಲ್ಲ. ನಮ್ಮ ಶಕ್ತಿಯ ಮೇಲೆ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ ತಂತ್ರಜ್ಞಾನವಿದೆ. ಕೌಶಲ್ಯಭರಿತ ಮಾನವ ಸಂಪನ್ಮೂಲವಿದೆ. ಬಹು ಸಂಸ್ಕೃತಿ ವಾತಾವರಣ, ಉತ್ತಮ ಪರಿಸರ, ಜಾಗತಿಕ ವಾತಾವರಣವಿದೆ. ಇವೆಲ್ಲವನ್ನೂ ಬಳಕೆ ಮಾಡಿಕೊಂಡು ರಾಜ್ಯಕ್ಕೆ ಹೂಡಿಕೆದಾರರನ್ನು ಆಹ್ವಾನಿಸಲಾಗಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳು ಆಸಕ್ತಿ ತೋರಿಸಿವೆ. ಎಲ್ಲ ವಲಯಗಳಿಗೂ ಬಂಡವಾಳ ಬರಲಿದೆ. ಈ ಸಮಾವೇಶಕ್ಕೆ ಉತ್ತಮ ಪ್ರತಿಕ್ರಿಯೆ ನಿರೀಕ್ಷೆ ಮಾಡಿದ್ದೇವೆ. ಅಷ್ಟೇ ಅಲ್ಲದೆ, ಸಮಾವೇಶದಲ್ಲಿ ಪ್ರತಿ ದಿನ ಯಾವ ಕಂಪನಿ, ಯಾವ ಕ್ಷೇತ್ರದಲ್ಲಿ ಬಂಡಾವಳ ಹೂಡಿಕೆ ಮಾಡಲು ಒಪ್ಪಂದ ಮಾಡಲಿದೆ, ಎಷ್ಟುಬಂಡವಾಳ, ಯಾವ ಪ್ರದೇಶ ಇತ್ಯಾದಿ ಮಾಹಿತಿಯನ್ನು ಅದೇ ದಿನ ಪತ್ರಿಕೆಗಳಿಗೆ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಪಾರದರ್ಶಕತೆ ಕೇವಲ ಮಾತಿಗೆ ಸೀಮಿತವಾಗದೆ ಕೃತಿಯಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ.
ಬಂಡವಾಳ ಹೂಡಿಕೆ ಎಂದರೆ ಬೆಂಗಳೂರು ಕೇಂದ್ರಿತವಾಗುತ್ತಿದೆ. ಬೆಂಗಳೂರು ಹೊರತಾದ ನಗರಗಳಲ್ಲಿ ಹೂಡಿಕೆಗೆ ಏನು ಕ್ರಮ ಕೈಗೊಳ್ಳಲಾಗಿದೆ?
ಬೆಂಗಳೂರಿನ ಆಚೆಗೂ ಹೂಡಿಕೆಗೆ ಬಹಳಷ್ಟುಹೂಡಿಕೆದಾರರು ಆಸಕ್ತಿ ತೋರಿದ್ದಾರೆ. ರಾಮನಗರ, ಹುಬ್ಬಳ್ಳಿ- ಧಾರವಾಡ, ಬಳ್ಳಾರಿ, ಕಲಬುರಗಿ, ಮೈಸೂರು ಎಲ್ಲ ಕಡೆ ಬಂಡವಾಳ ಹೂಡಿಕೆಗೆ ಕೈಗಾರಿಕೆಗಳು ಬರುತ್ತಿವೆ. ಪ್ರಾದೇಶಿಕ ಅಡೆತಡೆಗಳನ್ನು ದಾಟಿ ಇಂದು ಕೈಗಾರಿಕೆಗಳು ಬರುತ್ತಿವೆ. ‘ಬಿಯಾಂಡ್ ಬೆಂಗಳೂರು’ ಕನಸು ನನಸಾಗುತ್ತಿದೆ. ಸಮಗ್ರ ಕರ್ನಾಟಕದಲ್ಲಿ ಸಮಗ್ರ ಕೈಗಾರಿಕಾ ಅಭಿವೃದ್ಧಿಯನ್ನು ಕೈಗೊಳ್ಳಲಾಗಿದೆ. ಇತ್ತೀಚೆಗೆ ಧಾರವಾಡದಲ್ಲಿ ಎಫ್‌ಎಂಸಿಜಿ ಕ್ಲಸ್ಟರ್ ಉದ್ಘಾಟಿಸಲಾಗಿದೆ. ಸುಮಾರು 10 ಸಾವಿರ ಕೋಟಿ ರು. ಹೂಡಿಕೆಯಾಗಿ ಒಂದು ಲಕ್ಷ ಜನರಿಗೆ ಉದ್ಯೋಗ ನೀಡುವ ಅವಕಾಶವಿದೆ. ಕಲಬುರಗಿ, ವಿಜಯಪುರ, ರಾಯಚೂರು ಜಿಲ್ಲೆಗಳಲ್ಲಿ ಜವಳಿ ಪಾರ್ಕ್, ಯಾದಗಿರಿಯಲ್ಲಿ ಫಾರ್ಮಾ ಪಾರ್ಕ್, ಮೈಸೂರಿನಲ್ಲಿ ಎಲೆಕ್ಟ್ರಾನಿಕ್, ತುಮಕೂರಿನಲ್ಲಿ ರಕ್ಷಣಾ ಉತ್ಪಾದನೆ ಘಟಕ ಬರಲಿವೆ. ಯಾವ ಜಿಲ್ಲೆಗೆ ಏನು ಮಾಡಬೇಕು ಎಂಬುದರ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ.
ಈ ಹಿಂದಿನ ಜಿಮ್ ಸಮಾವೇಶದಲ್ಲಿ ಸಾಕಷ್ಟುಒಪ್ಪಂದಗಳು ನಡೆದಿವೆ. ಆದರೆ, ಅನುಷ್ಠಾನದ ಪ್ರಮಾಣ ನೋಡಿದರೆ ಕಡಿಮೆಯಿದೆ. ಈ ಬಾರಿ ಏನಾದರೂ ಅನುಷ್ಠಾನದ ಪ್ರಮಾಣ ಹೆಚ್ಚಳ ನಿರೀಕ್ಷಿಸಬಹುದೇ?
-ಕಳೆದ ಜಿಮ್ ಸಮಾವೇಶದಲ್ಲಿ ನಡೆದ ಒಪ್ಪಂದಗಳ ಪೈಕಿ ಶೇ.32ರಷ್ಟುಅನುಷ್ಠಾನವಾಗಿದೆ. ಈ ಬಾರಿ ಅನುಷ್ಠಾನದ ಪ್ರಮಾಣ ಹೆಚ್ಚಿರಲಿದೆ. ಈಗಾಗಲೇ ಪೂರ್ವಭಾವಿಯಾಗಿ 2.8 ಲಕ್ಷ ಕೋಟಿ ರು. ಬಂಡವಾಳ ಹೂಡಿಕೆಗೆ ಅನುಮೋದನೆ ನೀಡಲಾಗಿದೆ. ಈ ಸಮಾವೇಶದಲ್ಲಿ ನಡೆಯುವ ಒಪ್ಪಂದಗಳಿಗೆ ಶೀಘ್ರದಲ್ಲೇ ಅನುಮತಿ ನೀಡಿ, ಬಂಡವಾಳ ಹೂಡಿಕೆಗೆ ಅಗತ್ಯವಿರುವ ಎಲ್ಲ ಸವಲತ್ತು ನೀಡಲಿದ್ದೇವೆ. ಸಮಾವೇಶದ ಹೆಸರಿನಲ್ಲಿ ಸುಮ್ಮನೆ ಪ್ರದರ್ಶನ ಮಾಡುವುದಿಲ್ಲ. ಬಹಳ ಗಂಭೀರವಾಗಿ ಈ ಸಮಾವೇಶ ಮಾಡಲಾಗುತ್ತಿದೆ. ಏಕೆಂದರೆ, ಮುಂದಿನ ಐದು ವರ್ಷಗಳಲ್ಲಿ ಆರ್ಥಿಕ ಬೆಳವಣಿಗೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿರಬೇಕು. ಇದಕ್ಕೆ ದಿಕ್ಸೂಚಿಯಾಗಿ ಈ ಸಮಾವೇಶ ಮಾಡುತಿದ್ದೇವೆ. ಹೀಗಾಗಿಯೇ ನಾವು ‘ಬಿಲ್ಡ್ ಫಾರ್‌ದ ವಲ್ಡ್‌ರ್’ ಘೋಷವಾಕ್ಯದಡಿ ಈ ಸಮಾವೇಶ ಮಾಡುತ್ತಿದ್ದೇವೆ.
ಸರ್ಕಾರದ ಅವಧಿ ಮುಗಿವುದರೊಳಗೆ ಜಿಮ್ ಸಮಾವೇಶದ ಒಪ್ಪಂದಗಳ ಶೇ.100ರಷ್ಟುಅನುಷ್ಠಾನ ಸಾಧ್ಯವೇ?
ಮುಂದಿನ ಅವಧಿಗೂ ನಮ್ಮ ಸರ್ಕಾರವೇ ಇರಲಿದೆ. ಹೀಗಾಗಿ ನಾವೇ ಅನುಷ್ಠಾನ ಮಾಡಲಿದ್ದೇವೆ ಎಂಬ ವಿಶ್ವಾಸವಿದೆ. ಇದೊಂದು ರಾಜ್ಯಕ್ಕೆ ಒಳಿತಾಗುವ ಮಹತ್ವಾಕಾಂಕ್ಷೆಯ ಕೆಲಸ. ಯಾವುದೇ ಸರ್ಕಾರಗಳು ಇದ್ದರೂ ಮುಂದುವರೆಸಿಕೊಂಡು ಹೋಗುವ ಅವಶ್ಯಕತೆಯಿದೆ. ಇಂದಿನ ರಾಜಕೀಯ ಪರಿಸ್ಥಿತಿ ಅವಲೋಕಿಸಿದಾಗ ನಾವೇ ಮುಂದಿನ ಅವಧಿಗೂ ಇದನ್ನು ಮುಂದುವರೆಸಿಕೊಂಡು ಹೋಗುತ್ತೇವೆ. ಬಂಡವಾಳ ಹೂಡಿಕೆ ವಿಚಾರದಲ್ಲಿ ನಾವು ಗಂಭೀರವಾಗಿ ಇದ್ದೇವೆ. ಹೂಡಿಕೆ ಮಾಡುವುದಾದರೆ ಮಾತ್ರ ಬನ್ನಿ ಎಂದು ಹೂಡಿಕೆದಾರರಿಗೆ ಹೇಳಿದ್ದೇವೆ. ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಶೀಘ್ರದಲ್ಲೇ ಬಂಡವಾಳ ಹೂಡಿಕೆಗೆ ಅನುಮೋದನೆ ನೀಡುತ್ತೇವೆ. ಹೂಡಿಕೆ ಮಾಡಬೇಕು, ಉತ್ಪಾದಿಸಬೇಕು. ಉದ್ಯೋಗ ಸೃಷ್ಟಿಯಾಗಬೇಕು ಎಂಬುದು ನಮ್ಮ ಗುರಿಯಾಗಿದೆ.
ಕರ್ನಾಟಕದಲ್ಲಿ 1,747 ಕೋಟಿ ಹೂಡಿಕೆಗೆ ಅಸ್ತು, 4,900 ಉದ್ಯೋಗ ಸೃಷ್ಟಿ, ಸಚಿವ ನಿರಾಣಿ
ಕರ್ನಾಟಕದ ಯಾವ ವಲಯಗಳಿಗೆ ಹೆಚ್ಚಿನ ಬಂಡವಾಳ ಹೂಡಿಕೆ ನಿರೀಕ್ಷೆಯಿದೆ? ಕರ್ನಾಟಕ ಯಾವ ಕ್ಷೇತ್ರಗಳಲ್ಲಿ ಮುಂದಿದೆ?
ದೇಶದಲ್ಲಿ ಕರ್ನಾಟಕ ಚೀನಾ ಮಾದರಿಯ ಇಕೋ ಸಿಸ್ಟಮ್ ಹೊಂದಿದೆ. ಇಲ್ಲಿನ ಕೃಷಿ ಕ್ಷೇತ್ರ ಅತ್ಯಂತ ಸದೃಢವಾಗಿದೆ. ದ್ವಿತೀಯ ವಲಯದ ಉತ್ಪಾದನೆಯಲ್ಲಿ ಕರ್ನಾಟಕ ದೊಡ್ಡ ಮಟ್ಟದ ಸಾಧನೆ ಮಾಡಿದೆ. ಕಳೆದ 4 ದಶಕಗಳಲ್ಲಿ ಉತ್ಪಾದನೆಯಲ್ಲಿ ಕರ್ನಾಟಕ ಬಹಳಷ್ಟುಸಾಧನೆಯನ್ನು ಮಾಡಿದೆ. ಎಲೆಕ್ಟ್ರಿಕಲ…, ಮೆಕ್ಯಾನಿಕಲ…, ಇಂಧನ ವಲಯ, ಕಬ್ಬಿಣ ಮತ್ತು ಉಕ್ಕು ಹೀಗೆ ಎಲ್ಲಾ ವಲಯಗಳಲ್ಲಿ ಕರ್ನಾಟಕ ಮುಂದಿದೆ. ಇದರ ಜತೆಗೆ ಎಲೆಕ್ಟ್ರಾನಿಕ್, ಕೃತಕ ಬುದ್ಧಿಮತ್ತೆಯಲ್ಲಿ ರಾಜ್ಯದಲ್ಲಿ ಭದ್ರ ಬುನಾದಿ ಹಾಕಲಾಗಿದೆ. ಐಟಿ-ಬಿಟಿಯಲ್ಲಿ ಕಳೆದ ಎರಡು ದಶಕಗಳಿಂದ ನಾವು ಮುಂಚೂಣಿಯಲ್ಲಿದ್ದೇವೆ. ದೇಶದ ಶೇ.40ರಷ್ಟುಐಟಿ-ಬಿಟಿ ರಫ್ತು ಕರ್ನಾಟಕದಿಂದ ಆಗುತ್ತಿದೆ. ಈ ಐಟಿ-ಬಿಟಿ ಕ್ಷೇತ್ರದಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ. ಕೃಷಿ ಉತ್ಪಾದನೆ, ಐಟಿ-ಬಿಟಿ, ಸ್ಟಾರ್ಚ್‌ಅಪ್, ಯೂನಿಕಾರ್ ಹಾಗೂ ಡೆಕಾ ಕಾರ್ನರ್‌ನಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ.
