ಬೆಂಗಳೂರು(ಮೇ.08): ದೇಶಾದ್ಯಂತ ಎರಡನೇ ಕೊರೊನಾ ಅಲೆ ನಡುವೆಯೂ ಕೊರೋನಾ ಲಸಿಕೆ ಅಭಿಯಾನ ಭರದಿಂದ ಸಾಗಿದೆ. ಕರ್ನಾಟಕದಲ್ಲೂ ಈ ಮಹಾಮಾರಿ ಜನರ ನಿದ್ದೆಗೆಡಿಸಿದೆ. ರಾಜ್ಯಾದ್ಯಂತ ಕಠಿಣ ಕ್ರಮ ಹೇರಿದ್ದರೂ ಪ್ರಕರಣಗಳ ಸಂಖ್ಯೆ ಇಳಿಯದಿರುವುದು ಹೊಸ ತಲೆ ನೋವಾಗಿದೆ. ಹೀಗಿದ್ದರೂ ರಾಜ್ಯದಲ್ಲಿ ಲಸಿಕೆ ಅಭಿಯಾನ ಮುಂದುವರೆದಿದೆ. ಲಸಿಕೆಗಾಗಿ ಜನ ಮುಗಿ ಬೀಳುತ್ತಿದ್ದು ಅತ್ತ ಪೂರೈಕೆಯಲ್ಲೂ ವ್ಯತ್ಯಯವಾಗುತ್ತಿದೆ. ಹೀಗಿರುವಾಗ ಲಸಿಕೆ ನೀಡುವಾಗ ಎರಡನೇ ಡೋಸ್ ಪಡೆಯಲು ಬಂದವರಿಗೆ ಮೊದಲ ಆದ್ಯತೆ ನೀಡುವಂತೆ ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.

ಹೌದು ಈ ಸಂಬಂಧ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ರಾಜ್ಯದಲ್ಲಿ ಲಭ್ಯವಿರುವ ಕೋವಿಶೀಲ್ಡ್ ಲಸಿಕೆಯಲ್ಲಿ 70%ರಷ್ಟನ್ನು 2ನೇ ಡೋಸ್ ಬಾಕಿಯಿರುವ 45 ವರ್ಷ ಮೇಲ್ಪಟ್ಟವರಿಗೆ ಆದ್ಯತೆ ಮೇರೆಗೆ ನೀಡಲಾಗುವುದು. ಉಳಿದ 30% ಲಸಿಕೆಯನ್ನು 45 ವರ್ಷ ಮೇಲ್ಪಟ್ಟವರಿಗೆ 1ನೇ ಡೋಸ್ ನೀಡಲು ಬಳಸಲಾಗುವುದು. ಕೋವ್ಯಾಕ್ಸಿನ್ ಲಸಿಕೆಯನ್ನು 2ನೇ ಡೋಸ್ ಬಾಕಿ ಇರುವ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ನೀಡಲಾಗುವುದು ಎಂದಿದ್ದಾರೆ. 

ಸಿಗುತ್ತಿಲ್ಲ ಲಸಿಕೆ

ರಾಜ್ಯದಲ್ಲಿ ಕೋವಿಡ್‌ ಲಸಿಕೆಯ ಕೊರತೆ ತೀವ್ರವಾಗಿ ಕಾಡುತ್ತಿದ್ದು, ಮೊದಲ ಡೋಸ್‌ ಲಸಿಕೆ ಪಡೆದುಕೊಂಡ ಹಿರಿಯ ನಾಗರಿಕರು ಮತ್ತು 45 ವರ್ಷ ಮೇಲ್ಪಟ್ಟವರು ಸಹ ಅಸ್ವಸ್ಥತೆ ಹೊಂದಿರುವವರು ಎರಡನೇ ಡೋಸ್‌ ಲಸಿಕೆಗಾಗಿ ಆಸ್ಪತ್ರೆಗಳಿಗೆ ಅಲೆದಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆಯ ಕೊರತೆ ಕಳೆದ ಹತ್ತು- ಹದಿನೈದು ದಿನಗಳಿಂದಲೂ ಇದೆ. ಇದೀಗ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಲಸಿಕೆ ಸಮಸ್ಯೆ ಕಾಡಲಾರಂಭಿಸಿದೆ. ಈ ಹಿಂದೆ ಪೂರೈಕೆ ಆಗುತ್ತಿದ್ದ ಲಸಿಕೆಯ ಅರ್ಧದಷ್ಟು ಕೂಡ ಸದ್ಯ ಆಸ್ಪತ್ರೆಗಳಿಗೆ ಸಿಗುತ್ತಿಲ್ಲ. ಇದರಿಂದಾಗಿ ಗಂಟೆಗಟ್ಟಲೇ ಕಾದರು ಕೂಡ ಲಸಿಕೆ ಸಿಗದೆ ಹಿರಿಯ ಜೀವಗಳು ನಿರಾಸೆಯಿಂದ ಹಿಂತಿರುಗುವಂತೆ ಆಗಿದೆ.

60 ವರ್ಷ ಮೇಲ್ಪಟ್ಟವರಿಗೆ ಮತ್ತು 45 ವರ್ಷ ಮೇಲ್ಪಟ್ಟು ಸಹ ಅಸ್ವಸ್ಥತೆ ಹೊಂದಿರುವವರಿಗೆ ಮಾರ್ಚ್ 1ರಿಂದ ಮತ್ತು 45 ವರ್ಷ ಮೇಲ್ಪಟ್ಟಎಲ್ಲರಿಗೂ ಏ.1ರಿಂದ ಲಸಿಕೆ ಅಭಿಯಾನ ಆರಂಭವಾಗಿದೆ. ಕೋವಿಶೀಲ್ಡ್‌ ಲಸಿಕೆ ಪಡೆದವರಿಗೆ ಎರಡನೇ ಡೋಸ್‌ ಪಡೆಯಲು 6 ರಿಂದ 8 ವಾರಗಳ ಅವಧಿ ನಿಗದಿಯಾಗಿದೆ. ಕೋವ್ಯಾಕ್ಸಿನ್‌ ಲಸಿಕೆ ಪಡೆದವರು ಮೊದಲ ಡೋಸ್‌ ಲಸಿಕೆ ಪಡೆದ ನಾಲ್ಕರಿಂದ ಆರು ವಾರದೊಳಗೆ ಎರಡನೇ ಡೋಸ್‌ ಪಡೆಯಬೇಕಿದೆ. ರಾಜ್ಯದಲ್ಲಿ ಕೋವಿಶೀಲ್ಡ್‌ ಲಸಿಕೆಯನ್ನೇ ಹೆಚ್ಚು ವಿತರಿಸಲಾಗಿದೆ.

ತಮ್ಮ ಸರದಿ ಬಂದಾಗ ಸುಮ್ಮನಾದ ಜನರು

ದೇಶದಲ್ಲಿ ಎರಡು ಸ್ವದೇಶೀ ಲಸಿಕೆಗಳಾದ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್‌ಗೆ ಅನುಮತಿ ಸಿಕ್ಕ ಬಳಿಕ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಯ್ತು. ಇದಾದ ಬಳಿಕ 45 ವರ್ಷ ಮೇಲ್ಪಟ್ಟ, ಹಿರಿಯ ವರ್ಗಕ್ಕೆ ಲಸಿಕೆ ನೀಡುವ ಅಭಿಯಾನ ಆರಂಭವಾಗಿತ್ತು. ಆದರೆ ಅಷ್ಟರಲ್ಲಾಗಲೇ ಮೊದಲ ಕೊರೋನಾ ಅಲೆ ಹಾವಳಿ ಕೊಂಚ ಕುಸಿದಿದ್ದು, ಜನರು ಕೂಡಾ ಲಸಿಕೆ ಪಡೆಯಲು ಹಿಂದೇಟು ಹಾಕಿದ್ದರು. ಇದರ ಪರಿಣಾಮ ಎಂಬಂತೆ ಅನೇಕ ರಾಜ್ಯಗಳಲ್ಲಿ ಲಸಿಕೆಗಳು ಬಳಸದೆ ಹಾಳಾದವು. ಇನ್ನೂ ಕೆಲವರು ಕೊಂಚ ಸಮಯ ಕಾದು ನೋಡೋಣ ಆಮೇಲೆ ಹಾಕಿಸಿಕೊಳ್ಳೋಣ ಎಂದು ಸುಮ್ಮನಾದರು. ಇದರಿಂದಾಗಿ ಅನೇಕ ಮಂದಿ ಮೊದಲ ಡೋಸ್‌ ಪಡೆದಿದ್ದೇ ವಿಳಂಬವಾಯ್ತು.

ಈ ನಡುವೆ ಸರ್ಕಾರವೂ ಮತ್ತೊಂದು ಹಂತದ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿತು. ಇದರನ್ವಯ ಮೇ 1 ರಿಂದ ಹದಿನೆಂಟಕ್ಕೂ ಮೇಲಿನವರು ನೋಂದಾವಣೆ ಮಾಡಿ ಲಸಿಕೆ ಪಡೆಯಲು ಅನುಮತಿ ನೀಡಿತು. ಆದರೆ ಈ ಲಸಿಕೆ ಅಭಿಯಾನ ಆರಂಭವಾಗುವ ಮುನ್ನವೇ ಏಕಾಏಕಿ ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾಯ್ತು. ಕರ್ನಾಟಕದಲ್ಲೂ ಪರಿಸ್ಥಿತಿ ಕೈ ಮೀರಿತ್ತು. ಹೀಗಿರುವಾಗ ಅನೇಕ ಮಂದಿ ಲಸಿಕೆಡ ಪಡೆಯಲು ದೌಡಾಯಿಸಿದರು. ಮೊದಲ ಡೋಸ್‌ ಪಡೆಯಲು ವಿಳಂಬ ಮಾಡಿದವರೂ ಲೈನ್‌ನಲ್ಲಿದ್ದಾರೆ. ಇತ್ತ ಹದಿನೆಂಟಕ್ಕೂ ಮೇಲಿನ ಅನೇಕ ಮಂದಿ ನೋಂದಾವಣೆ ಮಾಡಿದ್ದಾರೆ, ಇವರೂ ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ.

ಲಸಿಕೆ ಪಡೆಯಲು ಇನ್ನು ಒಟಿಪಿ ಕಡ್ಡಾಯ!

ಇವೆಲ್ಲದರ ಪರಿಣಾಮ ಎಂಬಂತೆ ಏಕಾಏಕಿ ಲಸಿಕೆಗೆ ಬೇಡಿಕೆ ಹೆಚ್ಚಿತು. ಅನೇಕ ಕಡೆ ಲಸಿಕೆ ಕೊರತೆಯೂ ಎದುರಾಗಿದೆ. ಕರ್ನಾಟಕ ಸೇರಿ ಅನೇಕ ರಾಜ್ಯಗಳು ಹದಿನೆಂಟಕ್ಕಿಂತ ಮೇಲಿನವರಿಗೆ ಲಸಿಕೆ ನೀಡುವ ಕಾರ್ಯವನ್ನು ಕೆಲ ದಿನ ಪೋಸ್ಟ್‌ಪೋನ್ ಮಾಡಿತು. ಆದರೀಗ ಮತ್ತೆ ನೋಂದಾವಣೆ ಆರಂಭವಾಗಿದೆ. ಆದರೆ ಎಲ್ಲಾ ಗೊಂದಲ, ಎಡವಟ್ಟುಗಳಿಂದಾಗಿ ಲಸಿಕೆ ಕೇಂದ್ರದೆದುರು ಭಾರೀ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ.

ಹೌದು ಲಸಿಕೆ ಪಡೆಯುವ ಧಾವಂತದಲ್ಲಿ ಸದ್ಯ ಹದಿನೆಂಟಕ್ಕಿಂತ ಮೇಲಿನವರೆಲ್ಲಾ(ನಲ್ವತ್ತೈದು ವರ್ಷಕ್ಕೂ ಮೇಲಿನವರು ಸೇರಿ) ಲಸಿಕೆ ಕೇಂದ್ರದೆದುರು ಜಮಾಯಿಸುತ್ತಿದ್ದಾರೆ. ಇದು ಲಸಿಕೆ ನೀಡುವ ಸಿಬ್ಬಂದಿಯನ್ನೂ ಗೊಂದಲಕ್ಕೀಡು ಮಾಡಿದೆ. ಲಸಿಕೆ ಕೊರತೆ ಹಾಗೂ ಹದಿನೆಂಟು ವರ್ಷಕ್ಕಿಂತ ಮೇಲಿನವರೂ ಲಸಿಕೆಗಾಗಿ ಬರುತ್ತಿರುವುದರಿಂದ ಮೊದಲ ಡೋಸ್ ಲಡಿಕೆ ಪಡೆದ ಅನೇಕರಿಗೆಡ ಎರಡನೇ ಡೋಸ್‌ ಸಿಗುತ್ತಿಲ್ಲ. ಹೀಗಾಗೇ ಆರೋಗ್ಯ ಸಚಿವರು ಎರಡನೇ ಡೋಸ್‌ ಪಡೆಯುವವರಿಗೆ ಆದ್ಯತೆ ನೀಡಲು ತಿಳಿಸಿದ್ದಾರೆ.

"

ಈ ಗೊಂದಲಕ್ಕೇನು ಕಾರಣ:

ಲಸಿಕೆ ಪಡೆಯಲು ಸರ್ಕಾರ ಒಂದು ವ್ಯವಸ್ಥಿತವಾದ ಕ್ರಮ ಜಾರಿಗೊಳಿಸಬೇಕಿತ್ತು. ನಲ್ವತ್ತೈದು ವರ್ಷ ಮೇಲ್ಪಟ್ಟ ಮೊದಲ ಡೋಸ್‌ ಪಡೆದವರಿಗೆ ಎರಡನೇ ಡೋಸ್‌ ಕೊಟ್ಟ ಬಳಿಕವೇ ಮುಂದಿನ ಹಂತದ ಲಸಿಕೆ ಅಭಿಯಾನ ಆರಂಭಿಸಬೇಕಿತ್ತು. ಇದರಿಂದಾಗಿ ಲಸಿಕೆ ಕೊರತೆ ಇದ್ದರೂ ಒಂದು ವಯೋಮಿತಿಯ ಜನರಿಗೆ ಲಸಿಕೆಯ ಎರಡೂ ಡೋಸ್‌ ಸಿಗುತ್ತಿತ್ತು. ವಿಳಂಬವಾದರೂ ಸರಿ ಎಂದು ಹದಿನೆಂಟು ವರ್ಷ ಮೇಲ್ಪಟ್ಟವರಿಗೆ ಬಳಿಕ ಲಸಿಕೆ ನೀಡುವ ಅಭಿಯಾನ ಆರಂಭಿಸಬೇಕಿತ್ತು.

ನೋಂದಾವಣೆಯೂ ಆಗುತ್ತಿಲ್ಲ

ಸದ್ಯ ಸರ್ಕಾರ ಲಸಿಕೆ ಪಡೆಯುವವರು ನೋಂದಾವಣೆ ಮಾಡಲೇಬೇಕು. ಲಸಿಕೆ ಪಡೆಯಲು ಒಟಿಪಿ ಕಡ್ಡಾಯ ಎಂದಿದೆ. ಆದರೀಗ ತಾಂತ್ರಿಕ ದೋಷಗಳಿಂದ ನೋಂದಾವಣೆ ಮಾಡಿಸಿಕೊಳ್ಳಲು ಬೇಕಾದ ಒಟಿಪಿಯೂ ಅಲಭ್ಯವಾಗಿದೆ.

ಲಸಿಕೆ ಕೇಂದ್ರದ ಬಳಿ ಜನಸಂದಣಿ, ಕೊರೋನಾ ಹರಡುವುದಿಲ್ವೇ?

ಸದ್ಯ ಈಗಾಗಲೇ ಹರಡಿರುವ ಈ ಮಹಾಮಾರಿ ನಿಯಂತ್ರಿಸಲು ಸಾಧ್ಯವಾಗದೇ ಸರ್ಕಾರ ಸರ್ಕಸ್ ನಡೆಸುತ್ತಿದೆ. ಜನರ ಬಳಿ ಗುಂಪು ಸೇರಬೇಡಿ ಎಂದು ಪರಿ ಪರಿಯಾಗಿ ವಿನಂತಿಸುತ್ತಿದೆ. ಆದರೆ ಲಸಿಕೆ ಕೇಂದ್ರದ ಎದುರಿನ ದೃಶ್ಯಗಳು ಬೇರೆಯೇ ಕತೆ ಹೇಳುತ್ತಿವೆ. ಹೌದು ಲಸಿಕೆ ಪಡೆಯುವ ಧಾವಂತದಲ್ಲಿ ಕೇಂದ್ರಗಳೆದುರು ಜನ ಭಾರೀ ಸಂಖ್ಯೆಯಲ್ಲಿ ನೆರೆಯುತ್ತಿದ್ದಾರೆ. ಹೀಗಿರುವಾಗ ಈ ಜನ ಸಂದಣಿಯಿಂದ ಕೊರೋನಾ ಹರಡುವುದಿಲ್ವೇ ಎಂಬ ಮಾತುಗಳೂ ಕೇಳಿ ಬಂದಿವೆ.

ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕಟ್ಟು ನಿಟ್ಟಿನ ಕ್ರಮ ವಹಿಸಬೇಕಿದೆ. ಲಸಿಕೆ ಅಭಿಯಾನದಲ್ಲಿ ಉದ್ಭವಿಸಿರುವ ಈ ಎಲ್ಲಾ ಗೊಂದಲ ನಿವಾರಿಸಿ ವ್ಯವಸ್ಥಿತವಾದ ಕ್ರಮ ಜಾರಿಗೊಳಿಸಬೇಕಾದ ಅಗತ್ಯವಿದೆ. ಜನರು ಕೂಡಾ ಏಕಾಏಕಿ ಕೆಂದ್ರಗಳತ್ತ ಧಾವಿಸದೆ, ಲಸಿಕೆ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಬಳಿಕ ಮುಂದುವರೆಯಬೇಕಾಗಿದೆ. ಇದರೊಂದಿಗೆ ಕೇಂದ್ರಗಳೆದುರು ಸಾಮಾಜಿಕ ಅಂತರ ಅಗತ್ಯವಾಗಿ ಕಾಪಾಡಬೇಕಿದೆ. ಸರ್ಕಾರದ ಕಠಿಣ ನಿಯಮದಿಂದಷ್ಟೇ ಈ ಎಲ್ಲಾ ಗೊಂದಲಗಳಿ ನಿವಾರಣೆಯಾಗಿ ಲಸಿಕೆ ಅಭಿಯಾನವೂ ಯಶಸ್ವಿಯಾಗಲಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona