Asianet Suvarna News Asianet Suvarna News

ಯಾವುದಾದರೂ ವರ್ಗ ಕೊಡಿ ನಮಗೆ ಮೀಸಲಾತಿ ಬೇಕಷ್ಟೆ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಕೂಡಲಸಂಗಮ ಪಂಚಮಸಾಲಿಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸಮುದಾಯದ ಸಾವಿರಾರು ಜನರು ಚನ್ನಮ್ಮ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿ, ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು. 
 

Give any Category we need Reservation Says BasavaJaya Mruthyunjaya Swamiji gvd
Author
First Published Dec 14, 2023, 12:30 PM IST

ಬೆಳಗಾವಿ (ಡಿ.14): ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಕೂಡಲಸಂಗಮ ಪಂಚಮಸಾಲಿಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸಮುದಾಯದ ಸಾವಿರಾರು ಜನರು ಚನ್ನಮ್ಮ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿ, ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆದ ಸಭೆಯಲ್ಲಿ 2 ವಾರ ಕಾಲಾವಕಾಶ ಕೇಳಿದ್ದು, ಅಲ್ಲಿಯವರೆಗೆ ಕಾಲಾವಕಾಶ ನೀಡೋಣ ಎಂದು ಬಸವಜಯ ಮೃತ್ಯುಂಜಯ ಶ್ರೀಗಳು ಘೋಷಿಸಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಹತ್ತಾರು ವರ್ಷಗಳಿಂದ ನಮ್ಮ ಸಮಾಜದ ಹಿರಿಯರು ಹೋರಾಟ ಮಾಡಿಕೊಂಡು ಬಂದಿದ್ದಾರೆ. ಸ್ವಾಮೀಜಿಯವರು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ಮಠ ಬಿಟ್ಟು ಹೋರಾಟ ಮಾಡಿದ್ದಾರೆ. ಸಮಾಜಕ್ಕೂ ಸಹನಶಕ್ತಿ ಇದೆ.‌ ನಮ್ಮದೇ ಸರ್ಕಾರ ಇದ್ದರೂ ಸದನದ ಬಾವಿಗಿಳಿದು ಹೋರಾಟ ಮಾಡಿದ್ದೇನೆ. ನೀವು ಯಾವುದಾದರೂ ವರ್ಗ ಕೊಡಿ, ನಮಗೆ ಮೀಸಲಾತಿ ಬೇಕಷ್ಟೆ ಎಂದು ಒತ್ತಾಯಿಸಿದರು.

ಶಾಸಕ ಯತ್ನಾಳ್ ಒಬ್ಬ ಸುಸಂಸ್ಕೃತ ರಾಜಕಾರಣಿ: ವಿ.ಸೋಮಣ್ಣ

ಈ ಅಧಿವೇಶನ ಮುಗಿದ ತಕ್ಷಣ ಬೆಂಗಳೂರಿಗೆ ಹೋಗಿ ಹಿಂದುಳಿದ ವರ್ಗಗಳ ಆಯುಕ್ತರು, ಸರ್ಕಾರದ ವಕೀಲರು, ಸಂಬಂಧಿಸಿದ ಇಲಾಖೆಯವರೊಂದಿಗೆ ಚರ್ಚೆ ನಡೆಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಆದ್ದರಿಂದ ಇಷ್ಟು ದಿನ ಕಾಯ್ದಿದ್ದೇವೆ. ಇನ್ನೊಂದು ವಾರ ಕಾದು ನೋಡೋಣ. ಸರ್ಕಾರದ ವಿರುದ್ಧ ಮಾತನಾಡುವ ಶಕ್ತಿಯನ್ನು ಕಾಂಗ್ರೆಸ್ ಶಾಸಕರು,‌ ಸಚಿವರಿಗೆ ನೀಡುವಂತೆ ಚನ್ನಮ್ಮ ಆಶೀರ್ವದಿಸಲಿ ಎಂದು ವ್ಯಂಗ್ಯವಾಡಿದರು. ಏನೂ ಆಗುವುದಿಲ್ಲ ಹೆದರಬೇಡಿ. ಯಾರೇ ಮಾಡಿಕೊಂಡು ಬಂದರೂ ನಮ್ಮದೇನೂ ಸಮಸ್ಯೆ ಇಲ್ಲ. ಅವರು ಮಾಡಿಕೊಂಡು ಬಂದರೆ ಸದಾಕಾಲ ಅವರಿಗೆ ಆಶೀರ್ವಾದ ಮಾಡಬೇಕು ಎಂದರು.

ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸರ್ಕಾರದ ಪರವಾಗಿ ಆಗಮಿಸಿ ಮಾತನಾಡಿ, ತಾಂತ್ರಿಕ ಮಾಹಿತಿಗಳನ್ನು ಪಡೆದು, ಒಂದು ವಾರದೊಳಗಾಗಿ ಪಂಚಮಸಾಲಿ ಮುಖಂಡರ ಸಭೆ ಕರೆದು, ಮತ್ತೊಮ್ಮೆ ಮಾತನಾಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ನಾವು ಪಂಚಮಸಾಲಿ‌ ಮಂತ್ರಿಗಳು ಹಾಗೂ ಶಾಸಕರು ಹಲವು ಬಾರಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದೇವೆ. ನಿನ್ನೆ (ಮಂಗಳವಾರ) ಕೂಡ ಭೇಟಿಯಾಗಿ ಮಾತನಾಡಿದ್ದೇವೆ‌. ವಾರದೊಳಗಾಗಿ ಹಿಂದುಳಿದ ವರ್ಗಗಳ ಆಯೋಗದ ಜತೆ ಚರ್ಚಿಸಿ, ಪಂಚಮಸಾಲಿ ಪ್ರಮುಖರ ಸಭೆ ಕರೆಯುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. 

ನಾವು ಯಾರ ಪಾಲನ್ನೂ ಕೇಳುತ್ತಿಲ್ಲ, ಬೇರೆಯವರಿಗೆ ಕೊಡಲು ನಮ್ಮ ಅಭ್ಯಂತರವಿಲ್ಲ. ನಮಗೆ ನ್ಯಾಯಯುತವಾಗಿ ಸಿಗಬೇಕಾದದ್ದನ್ನು ಮಾತ್ರ ಕೇಳುತ್ತಿದ್ದೇವೆ. ನಾವು ನ್ಯಾಯ ಸಿಗುವವರೆಗೂ ಶಾಂತಿಯುತವಾಗಿ ಹೋರಾಟ ಮಾಡೋಣ, ಸಮಾಜದ ಮಗಳಾಗಿ ನಾನು ಹೋರಾಟದಲ್ಲಿ‌ ಹಿಂದಿನಿಂದಲೂ ಭಾಗವಹಿಸುತ್ತ ಬಂದಿದ್ದೇನೆ. ಮುಂದೆಯೂ ಹೋರಾಟದಲ್ಲಿ ಇರುತ್ತೇನೆ. ನಮಗೆ ಖಂಡಿತ ಜಯ ಸಿಗುವ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಶಿವಾನಂದ ಪಾಟೀಲ ಮಾತನಾಡಿ, ಹಿಂದಿನ ಸರ್ಕಾರದ ನಿರ್ಣಯವನ್ನು ಪುನರ್ ಪರಿಶೀಲಿಸುವಂತೆ ಸಮಾಜದಿಂದ ಒತ್ತಡ ಕೇಳಿ ಬಂದಿದೆ. ಹಾಗಾಗಿ, ಪಂಚಮಸಾಲಿ‌ ಸಮಾಜಕ್ಕೆ 2ಎ ಮೀಸಲಾತಿ ನೀಡುವ ವಿಚಾರದಲ್ಲಿ ಆದಷ್ಟು ತೀವ್ರವಾಗಿ ನಿರ್ಣಯ ತೆಗೆದುಕೊಳ್ಳುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಹಾಗಾಗಿ ಅಲ್ಲಿಯವರೆಗೂ ಸ್ವಾಮೀಜಿ ಮತ್ತು ಸಮಾಜದವರು ಕಾಲಾವಕಾಶ ನೀಡಬೇಕು. ಎಲ್ಲರೂ ಕೂಡಿಕೊಂಡು ಸರ್ಕಾರದ ಮನವೊಲಿಸುವ ಕೆಲಸ ಮಾಡೋಣ ಎಂದರು.

ಸತ್ಯವನ್ನು ಯಾರೂ ಮರೆಮಾಚಲು ಆಗಲ್ಲ: ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದೇನು?

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. 2ಡಿ ಬಗ್ಗೆ ಕಾನೂನಿನಲ್ಲಿ ತೊಡಕಿದೆ. ಹಾಗಾಗಿ ಅದನ್ನು ಹಿಂಪಡೆಯುವವರೆಗೂ ಏನೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಮಾಡು ಇಲ್ಲವೇ ಮಡಿ, ಮೀಸಲಾತಿ ಪಡಿ, ಇಲ್ಲದಿದ್ದರೆ ಮಡಿ ಎಂದು ಘೋಷಿಸಿದರು. ಪ್ರತಿಭಟನೆಯಲ್ಲಿ ವಿನಯ ಕುಲಕರ್ಣಿ, ಅಶೋಕ ಮನಗೂಳಿ, ಮಾಜಿ ಶಾಸಕ ಎಚ್.ಎಂ.ಶಿವಶಂಕರಪ್ಪ, ಮಾಜಿ ಸಚಿವ ಎ.ಬಿ.ಪಾಟೀಲ, ಶಶಿಕಾಂತ ನಾಯಿಕ, ಮುಖಂಡರಾದ ಆರ್.ಕೆ.ಪಾಟೀಲ, ರೋಹಿಣಿ ಪಾಟೀಲ ಸೇರಿ ಸಾವಿರಾರು ಜನರು ಭಾಗವಹಿಸಿದ್ದರು.

Follow Us:
Download App:
  • android
  • ios