Asianet Suvarna News Asianet Suvarna News

ನೇಕಾರರಿಗೆ ಬಜೆಟ್‌ನಲ್ಲಿ ಮತ್ತಷ್ಟು ಸ್ಕೀಂ: ಸಿಎಂ ಬೊಮ್ಮಾಯಿ

ಮನುಕುಲಕ್ಕೆ ಅನಾದಿ ಕಾಲದಿಂದಲೂ ರೈತ ಅನ್ನ ನೀಡುತ್ತಿದ್ದರೆ, ನೇಕಾರ ಬಟ್ಟೆ ನೇಯ್ದು ಕೊಡುವ ಕಾಯಕದಿಂದ ಇಡೀ ಸಮಾಜಕ್ಕೆ ಮರ್ಯಾದೆ ತುಂಬುವ ಕೆಲಸ ಮಾಡುತ್ತಿದ್ದಾನೆ. ಅಂತಹ ನೇಕಾರರ ಮೂಲ ವೃತ್ತಿ ಉಳಿಸಿ ಬೆಳೆಸಬೇಕು. ನೇಕಾರರಿಗೆ ಸರ್ಕಾರಗಳು ಹಲವಾರು ಸಂದರ್ಭಗಳಲ್ಲಿ ಸಹಾಯ ಮಾಡಿವೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

Further Schemes in Budget for Weavers Says CM Basavaraj Bommai  grg
Author
First Published Jan 23, 2023, 1:00 AM IST

ಬೆಂಗಳೂರು(ಜ.23): ನೇಕಾರರಿಗೆ 2 ಲಕ್ಷ ರು. ವರೆಗೆ ಶೂನ್ಯ ಬಡ್ಡಿ ದರದ ಸಾಲ, ಸಾಲದ ಸಬ್ಸಿಡಿ ಪ್ರಮಾಣ ಶೇ.50ಕ್ಕೆ ಹೆಚ್ಚಳ ಸೇರಿದಂತೆ ನೇಕಾರ ಸಮುದಾಯದ ಬಹುತೇಕ ಬೇಡಿಕೆಗಳನ್ನು ಸರ್ಕಾರ ಈಡೇರಿಸಿದ್ದು, ಮುಂದಿನ ಬಜೆಟ್‌ನಲ್ಲಿ ಸಮುದಾಯದ ಸಮಗ್ರ ಅಭಿವೃದ್ಧಿಗೆ ಇನ್ನಷ್ಟು ಹೊಸ ಯೋಜನೆ ರೂಪಿಸಿ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

‘ಕರ್ನಾಟಕ ರಾಜ್ಯ ತೊಗಟವೀರ ಕ್ಷತ್ರಿಯ ನೇಕಾರ ಸಂಘ’ ಭಾನುವಾರ ನಗರದ ಸೆಂಟ್ರಲ್‌ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಂಘದ ‘ಅಮೃತ ಮಹೋತ್ಸವ 2023’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನೇಕಾರರ ಸಂಘದ ಪ್ರಮುಖ ಬೇಡಿಕೆಯಂತೆ ಕೈಮಗ್ಗ ನೇಕಾರರಿಗೆ ನೇಕಾರ ಸಮ್ಮಾನ್‌ ಯೋಜನೆಯಡಿ ನೀಡುವ ಅನುದಾನವನ್ನು 5 ಸಾವಿರ ರು.ಗಳಿಗೆ ಹೆಚ್ಚಿಸಲಾಗಿದೆ. ಪವರ್‌ಲೂಮ್‌ಗೆ 80 ರು. ಇದ್ದ ಪ್ರತಿ ಯೂನಿಟ್‌ ವಿದ್ಯುತ್‌ ದರವನ್ನು ಶೇ.50ರಷ್ಟು ಇಳಿಸಲಾಗಿದೆ. 2 ಲಕ್ಷ ರು. ವರೆಗಿನ ಸಹಾಯಧನಕ್ಕೆ ಇದ್ದ ಸಬ್ಸಿಡಿಯನ್ನು ಶೇ.50ಕ್ಕೆ ಹೆಚ್ಚಿಸಲಾಗಿದೆ. ಶೂನ್ಯ ಬಡ್ಡಿ ದರದಲ್ಲಿ 2 ಲಕ್ಷ ರು.ವರೆಗೆ ಸಾಲ, ಕಾಟೇಜ್‌ ಉದ್ದಿಮೆ ಮಾಡಲು ಒಪ್ಪಿಗೆ ಸೇರಿದಂತೆ ಎಲ್ಲ ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆ. ನೇಕಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ವಿಸ್ತರಿಸಲಾಗಿದೆ ಎಂದರು.

25 ತಾಲೂಕಿನಲ್ಲಿ ಮಿನಿ ಜವಳಿ ಪಾರ್ಕ್: ಸಿಎಂ ಬೊಮ್ಮಾಯಿ

ಮನುಕುಲಕ್ಕೆ ಅನಾದಿ ಕಾಲದಿಂದಲೂ ರೈತ ಅನ್ನ ನೀಡುತ್ತಿದ್ದರೆ, ನೇಕಾರ ಬಟ್ಟೆ ನೇಯ್ದು ಕೊಡುವ ಕಾಯಕದಿಂದ ಇಡೀ ಸಮಾಜಕ್ಕೆ ಮರ್ಯಾದೆ ತುಂಬುವ ಕೆಲಸ ಮಾಡುತ್ತಿದ್ದಾನೆ. ಅಂತಹ ನೇಕಾರರ ಮೂಲ ವೃತ್ತಿ ಉಳಿಸಿ ಬೆಳೆಸಬೇಕು. ನೇಕಾರರಿಗೆ ಸರ್ಕಾರಗಳು ಹಲವಾರು ಸಂದರ್ಭಗಳಲ್ಲಿ ಸಹಾಯ ಮಾಡಿವೆ. ಆದರೂ, ಶಾಶ್ವತವಾಗಿ ಸಹಾಯವಾಗಲು ನೇಕಾರರ ಬಟ್ಟೆಗಳಿಗೆ ನಿರಂತರವಾಗಿ ಮಾರುಕಟ್ಟೆ ದೊರೆಯಬೇಕು. ಇದಕ್ಕಾಗಿ ಫ್ಲಿಪ್‌ಕಾರ್ಚ್‌, ಅಮೆಜಾನ್‌ನಂತಹ ಆನ್‌ಲೈನ್‌ ಮಾರುಕಟ್ಟೆಗಳಲ್ಲೂ ನೇಕಾರರ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ನೇಕಾರರು ಮಾತ್ರವಲ್ಲ ಕುಲಕಸುಬುಗಳನ್ನು ನಂಬಿ ಬದುಕುತ್ತಿರುವ ಕಂಬಾರರು, ಕುಂಬಾರರು, ಬಡಿಗೇರರು, ವಿಶ್ವಕರ್ಮರು ಸೇರಿದಂತೆ ಅನೇಕ ಸಮುದಾಯಗಳನ್ನು ಉಳಿಸಿದಾಗ ಗ್ರಾಮೀಣ ಪ್ರದೇಶದ ಬಡವರ ಆರ್ಥಿಕ ಅಭಿವೃದ್ಧಿಯಾಗುತ್ತದೆ. ಇದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಶಾಲಾ ಮಕ್ಕಳಿಗೆ ನೇಕಾರರು ಉತ್ಪಾದಿಸಿದ ಬಟ್ಟೆಯನ್ನು ನೇಕಾರರ ಮಂಡಳಿಯಿಂದ ಖರೀದಿಸಿ ಸಮವಸ್ತ್ರ ಒದಗಿಸುತ್ತಿದ್ದೇವೆ. ಪ್ರತಿ ವರ್ಷ ನೇಕಾರರು ಉತ್ಪಾದಿಸುವ ಎಲ್ಲ ಬಟ್ಟೆಯನ್ನು ಖರೀದಿಸಲು ಆದೇಶಿಸಲಾಗಿದೆ. ಆರು ತಿಂಗಳು ಮೊದಲೇ ನೇಕಾರರಿಗೆ ಆದೇಶ ನೀಡಲು ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಕಾರ್ಯಕ್ರಮದಲ್ಲಿ ದಿವ್ಯಾನಂದಗಿರಿ ಮಹಾಸ್ವಾಮೀಜಿ, ಪೂರ್ಣಾನಂದ ಸ್ವಾಮೀಜಿ, ರೇಷ್ಮೆ, ಯುವಜನ ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ, ಸಂಸದ ಪಿ.ಸಿ.ಮೋಹನ್‌, ರಾಜ್ಯ ತೊಗಟವೀರ ಕ್ಷತ್ರಿಯ ನೇಕಾರ ಸಂಘ ಅಧ್ಯಕ್ಷ ಬಿ.ಎಸ್‌.ಸೋಮಶೇಖರ್‌, ಮಾಜಿ ಉಪಮೇಯರ್‌ ಎಸ್‌. ಹರೀಶ್‌, ಎಂ.ಡಿ. ಹರೀಶ್‌, ನೇಕಾರ ಸಮಾಜದ ಮುಖಂಡ ಎಂ.ಡಿ.ಲಕ್ಷ್ಮೀ ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

Follow Us:
Download App:
  • android
  • ios