ರಾಜ್ಯದಲ್ಲಿ ಇಂಧನ ಬೆಲೆ ಹೆಚ್ಚಳ ಎಫೆಕ್ಟ್: ಗೋವಾ ಗಡಿಯತ್ತ ಕಾರವಾರ ವಾಹನಗಳು
ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ. ಆದರೆ ಕಾರವಾರಕ್ಕಿಂತ ಸಮೀಪದ ಗೋವಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ ₹9 ಕಡಿಮೆ ಆಗುವುದರಿಂದ ಗೋವಾ ಗಡಿ ಪೋಳೆಂ ಪೆಟ್ರೋಲ್ ಬಂಕ್‌ನಲ್ಲಿ ಜನಸಂದಣಿ ಇದ್ದರೆ, ಕಾರವಾರದ ಪೆಟ್ರೋಲ್ ಬಂಕ್‌ಗಳಿಗೆ ಗ್ರಾಹಕರು ಕಡಿಮೆಯಾಗಿದ್ದಾರೆ.
ಕಾರವಾರ (ಜೂ.19): ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ. ಆದರೆ ಕಾರವಾರಕ್ಕಿಂತ ಸಮೀಪದ ಗೋವಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ ₹9 ಕಡಿಮೆ ಆಗುವುದರಿಂದ ಗೋವಾ ಗಡಿ ಪೋಳೆಂ ಪೆಟ್ರೋಲ್ ಬಂಕ್‌ನಲ್ಲಿ ಜನಸಂದಣಿ ಇದ್ದರೆ, ಕಾರವಾರದ ಪೆಟ್ರೋಲ್ ಬಂಕ್‌ಗಳಿಗೆ ಗ್ರಾಹಕರು ಕಡಿಮೆಯಾಗಿದ್ದಾರೆ. ಕಾರವಾರದಿಂದ ಕೇವಲ 15 ಕಿಮೀ ದೂರದಲ್ಲಿ ಗೋವಾದ ಪೋಳೆಂ ಎಂಬಲ್ಲಿ ಎರಡು ಪೆಟ್ರೋಲ್ ಬಂಕ್‌ಗಳಿವೆ. ಅಲ್ಲಿ ಒಂದು ಲೀಟರ್ ಪೆಟ್ರೋಲ್‌ಗೆ ₹94 ಮಾತ್ರ.
ಅದೇ ಕಾರವಾರದಲ್ಲಿ ₹104.70 ಆಗಿದೆ. ಲೀಟರ್‌ಗೆ ₹9 ಕಡಿಮೆ ಇರುವುದರಿಂದ ಗೋವಾಕ್ಕೆ ಹೋಗಿ ಪೆಟ್ರೋಲ್ ಟ್ಯಾಂಕ್ ಫುಲ್ ಮಾಡಿಸಿಕೊಂಡು ಬರುತ್ತಿದ್ದಾರೆ. ಈ ಹಿಂದೆ ಪೆಟ್ರೋಲ್‌ಗೆ ಲೀಟರಿಗೆ ಕೇವಲ ₹6 ಕಡಿಮೆ ಆಗುತ್ತಿತ್ತು. ಇತ್ತೀಚೆಗೆ ರಾಜ್ಯದಲ್ಲಿ ₹3 ಹೆಚ್ಚಳ ಮಾಡಿರುವುದರಿಂದ ₹9 ಕಡಿಮೆಯಾಗಿದೆ. ಹೇಳಿಕೇಳಿ ಗೋವಾ ಮದ್ಯಪ್ರಿಯರಿಗೆ ಸ್ವರ್ಗ. ಈಗ ಮದ್ಯ ಸೇವನೆಯ ಜತೆಗೆ ಪೆಟ್ರೋಲ್ ಕೂಡ ಗಾಡಿಗೆ ಭರ್ತಿ ಮಾಡಿಕೊಂಡು ಬರುತ್ತಿದ್ದಾರೆ.
ಡೀಸೆಲ್ ಕೂಡ ರಾಜ್ಯಕ್ಕೆ ಹೋಲಿಸಿದರೆ ಗೋವಾದಲ್ಲಿ ಲೀಟರಿಗೆ ಸುಮಾರು ₹5 ಕಡಿಮೆ ಆಗಿದೆ. ಗೋವಾಕ್ಕೆ ಪ್ರಯಾಣ ಬೆಳೆಸಿದವರು ಅಥವಾ ಗೋವಾ ಗಡಿಯಲ್ಲಿ ಇರುವವರು ತಮ್ಮ ವಾಹನಗಳಿಗೆ ಡೀಸೆಲ್ ಕೂಡ ಗೋವಾದಲ್ಲೇ ಹಾಕಿಸುತ್ತಿದ್ದಾರೆ. 5 ವರ್ಷಗಳಿಗೂ ಮುನ್ನ ಗೋವಾದಲ್ಲಿ ಪೆಟ್ರೋಲ್ ಬೆಲೆ ಕರ್ನಾಟಕಕ್ಕಿಂತ ಪ್ರತಿ ಲೀಟರ್ ಗೆ ಸುಮಾರು ₹15 ಕಡಿಮೆ ಇತ್ತು. ಆಗ ಕಾರವಾರದ ಪೆಟ್ರೋಲ್ ಬಂಕ್‌ಗಳು ಭಣಭಣಗುಡುತ್ತಿದ್ದವು.
ಸೆಕ್ಯೂರಿಟಿ ಗಾರ್ಡ್‌ಗಳನ್ನು ಅಪಹರಿಸಿ ಸುಲಿಗೆ ಮಾಡಿದ್ದ ಆರೋಪಿಗಳ ಬಂಧನ
ನಂತರ ಗೋವಾದಲ್ಲಿ ತೆರಿಗೆ ಹೆಚ್ಚಳ ಮಾಡಿದ್ದರಿಂದ ರಾಜ್ಯಕ್ಕಿಂತ ₹5- 6 ಗಳಷ್ಟೇ ಕಡಿಮೆ ಆಗುವಂತಾಯಿತು. ಇದರಿಂದ ಪೆಟ್ರೋಲ್ ಹಾಕಿಸಲೆಂದೆ ಗೋವಾಕ್ಕೆ ಹೋಗುವವರ ಪ್ರಮಾಣ ಇಳಿಮುಖವಾಗಿ ಕಾರವಾರದ ಪೆಟ್ರೋಲ್ ಬಂಕ್‌ಗಳಲ್ಲಿ ಜನಸಂದಣಿ ಹೆಚ್ಚಿತು. ಈಗ ಮತ್ತೆ ಕರ್ನಾಟಕದಲ್ಲಿ ಪೆಟ್ರೋಲ್ ತೆರಿಗೆ ಹೆಚ್ಚಿಸಿದ್ದರಿಂದ ಲೀಟರ್‌ಗೆ ₹9 ಕಡಿಮೆಯಾಗಿದ್ದು, ಕಾರವಾರಿಗರು ಪೆಟ್ರೋಲ್‌ಗಾಗಿ ಗೋವಾದತ್ತ ಮುಖ ಮಾಡುತ್ತಿದ್ದಾರೆ. ಹಾಗೆ ಪೆಟ್ರೋಲ್, ಡೀಸೆಲ್ ತೆರಿಗೆ ಹೆಚ್ಚಳ ಮಾಡಿರುವುದರಕ್ಕೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿದೆ.