ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ನಡುವಿನ ಸಂಬಂಧ ಮುರಿದುಬಿದ್ದಿದೆ ಎಂದು ಶ್ರೀರಾಮುಲು ಘೋಷಿಸಿದ್ದಾರೆ. ಚುನಾವಣಾ ಸೋಲೇ ಇದಕ್ಕೆ ಕಾರಣ ಎಂದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿರುವ ಶ್ರೀರಾಮುಲು, ಪಕ್ಷ ಸಂಘಟನೆಗೆ ರಾಜ್ಯಾದ್ಯಂತ ಪ್ರವಾಸ ಮಾಡುವುದಾಗಿಯೂ ತಿಳಿಸಿದ್ದಾರೆ. ಒಡೆದ ಮನಸುಗಳನ್ನು ಒಂದುಗೂಡಿಸುವುದಾಗಿ ಹೇಳಿದ್ದಾರೆ.

ಹಗರಿಬೊಮ್ಮನಹಳ್ಳಿ: ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಜೊತೆಗಿನ ನನ್ನ ಸಂಬಂಧದಲ್ಲಿ ಬಿರುಕು ಬಿಟ್ಟಿದೆ. ಅದು ಎಂದಿಗೂ ಸರಿಹೋಗುವುದಿಲ್ಲ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ತಾಲೂಕಿನ ನಂದಿಪುರ ಗ್ರಾಮದಲ್ಲಿ ದೊಡ್ಡಬಸವೇಶ್ವರ ರಥೋತ್ಸವಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ವೈಯಕ್ತಿಕ ಜೀವನವೇ ಬೇರೆ, ರಾಜಕಾರಣವೇ ಬೇರೆ. ಆದರೆ, ನನ್ನ ಮತ್ತು ಜನಾರ್ದನ ರೆಡ್ಡಿ ಸಂಬಂಧ ಇಲ್ಲಿಗೆ ಅಂತ್ಯಗೊಂಡಂತೆ ಎಂದು ಹೇಳಿದರು.

ಚುನಾವಣೆ ಸೋಲಿನಿಂದಾಗಿ ಮಿಸ್‌ ಫೈರ್‌ ಆಗಿ ರೆಡ್ಡಿ ಜೊತೆ ಭಿನ್ನಾಭಿಪ್ರಾಯ: ಶ್ರೀರಾಮುಲು

ಬಿಜೆಪಿ ರಾಜ್ಯಾಧ್ಯಕ್ಷರನ್ನು ಬದಲಾಯಿಸುವುದಾದರೆ ನನಗೊಂದು ಅವಕಾಶ ಕೊಡಿ ಎಂದು ಕೇಳಿದ್ದೇನೆ. ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಮತ್ತು ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಹೈಕಮಾಂಡ್ ಏನೇ ತೀರ್ಮಾನ ಕೈಗೊಂಡರೂ ಸರಿ ಎಂದು ಹೇಳಿದರು.

ಕೂಡ್ಲಿಗಿ ಕ್ಷೇತ್ರದಿಂದ ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಕುರಿತು ಈಗಲೇ ಏನನ್ನೂ ಹೇಳಲಾಗದು. ಯಾವ ಕ್ಷೇತ್ರ ಎಸ್ಟಿಗೆ ಮೀಸಲಿರುವುದೋ ಆ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದರು.

ನಾನು ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಭವಿಷ್ಯವಿಲ್ಲ. ಹಾಗಾಗಿ, ಬಿಜೆಪಿ ಗೆಲ್ಲಿಸಲು ರಾಜ್ಯಾದ್ಯಂತ ಕೆಲಸ ಮಾಡುವೆ ಎಂದು ತಿಳಿಸಿದರು.

ರೆಡ್ಡಿ ಜೊತೆಗೆ ತಿಕ್ಕಾಟ ಬೆನ್ನಲ್ಲೇ ಚಿಗುರಿತು ದೋಸ್ತಿ: ರಾಮುಲು, ಜಾರಕಿಹೊಳಿ ಈಗ ಭಾಯಿ- ಭಾಯಿ!

ಒಡೆದ ಮನಸ್ಸುಗಳ ಒಂದಾಗಿಸಲು ಪ್ರವಾಸ
ಬಿಜೆಪಿಯಲ್ಲಿ ಒಡೆದ ಮನಸುಗಳ ನಾಯಕರು, ಹಿಂದೂ ಮುಖಂಡರನ್ನು ಒಗ್ಗೂಡಿಸಲು ಹಾಗೂ ಪಕ್ಷವನ್ನು ಸಂಘಟಿಸಲು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವುದು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಘೋಷಣೆ ಮಾಡಿದರು.

ಹರಿಹರ ತಾಲೂಕು ರಾಜನಹಳ್ಳಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಮುಂದೆ ಕರ್ನಾಟಕದಲ್ಲೂ ನಮ್ಮ ಪಕ್ಷವು ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ. ಈ ಹಿನ್ನೆಲೆ ಪಕ್ಷದಲ್ಲಿ ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ಪ್ರಯತ್ನ ನಾನು ಮಾಡುತ್ತೇನೆ. ರಾಜ್ಯದಲ್ಲಿ, ದೇಶದಲ್ಲಿ ಬಿಜೆಪಿಯನ್ನು ನಿರಂತರ ಅಧಿಕಾರಕ್ಕೆ ತರಲು ಪ್ರಯತ್ನ ಮಾಡುತ್ತೇನೆ ಎಂದರು.

ಸಮಾನ ಮನಸ್ಕರನ್ನೆಲ್ಲಾ ಒಂದು ಫ್ಲಾಟ್ ಫಾರಂಗೆ ತರುವ ಕೆಲಸ ಮಾಡುತ್ತೇನೆ. ಎಲ್ಲ ಜಿಲ್ಲೆಗಳಲ್ಲೂ ನಾನೇ ಯಾತ್ರೆ ಮಾಡುತ್ತೇನೆ. ಎಲ್ಲ ಕಡೆಗಳಲ್ಲಿ ಈಗಾಗಲೇ ಕರೆ ಮಾಡಿ, ಮಾತನಾಡಿದ್ದೇನೆ. ನನ್ನ ಯಾತ್ರೆ ಉದ್ದೇಶದಲ್ಲಿ ಯಾವುದೇ ಸ್ವಾರ್ಥವೂ ಇಲ್ಲ ಎಂದರು.

ಬಳ್ಳಾರಿ ದೋಸ್ತ್‌ಗಳಾದ ಬಿ.ಶ್ರೀರಾಮುಲು- ಗಾಲಿ ಜನಾರ್ದನ ರೆಡ್ಡಿ ಮತ್ತೆ ಒಂತಾಗುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಂದಿನ ದಿನಗಳಲ್ಲಿ ಪಕ್ಷದ ಹೈಕಮಾಂಡ್ ಕರೆದರೆ, ನಾನು ಹೋಗಿ ಮಾತನಾಡುತ್ತೇನೆ. ಒಡೆದ ಮನಸ್ಸುಗಳೆಂದರೆ ಎಲ್ಲರೂ ಸೇರುತ್ತೇವೆ ಎಂದರು.