ತಮ್ಮ ಬಣದ ಶಕ್ತಿ ಹೆಚ್ಚಿಸಿಕೊಳ್ಳಲು ಮುಂದಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಣದ ಮುಖಂಡರು ರಮೇಶ್ ಜಾರಕಿಹೊಳಿ ಮತ್ತು ಶ್ರೀರಾಮುಲು ನಡುವೆ ಕೊಂಡಿಯಂತೆ ಕೆಲಸ ಮಾಡಿ ಉಭಯ ನಾಯಕರ ನಡುವೆ ಸ್ನೇಹ ಚಿಗುರೊಡೆಯುವಂತೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. 

ಬೆಂಗಳೂರು(ಜ.29):  ಶಾಸಕ ಗಾಲಿ ಜನಾರ್ದನ ರೆಡ್ಡಿ ಜತೆಗಿನ ಭಿನ್ನಾಭಿಪ್ರಾಯ ಹೊರಬಿದ್ದ ಬೆನ್ನಲ್ಲೇ ಮಾಜಿ ಸಚಿವರಾದ ಬಿ.ಶ್ರೀರಾಮುಲು ಮತ್ತು ರಮೇಶ್ ಜಾರಕಿಹೊಳಿ ಅವರ ನಡುವಿನ ಬಿರುಕು ತಕ್ಕಮಟ್ಟಿಗೆ ನಿವಾರಣೆಯಾಗಿದೆ. ತಮ್ಮ ಬಣದ ಶಕ್ತಿ ಹೆಚ್ಚಿಸಿಕೊಳ್ಳಲು ಮುಂದಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಣದ ಮುಖಂಡರು ರಮೇಶ್ ಜಾರಕಿಹೊಳಿ ಮತ್ತು ಶ್ರೀರಾಮುಲು ನಡುವೆ ಕೊಂಡಿಯಂತೆ ಕೆಲಸ ಮಾಡಿ ಉಭಯ ನಾಯಕರ ನಡುವೆ ಸ್ನೇಹ ಚಿಗುರೊಡೆಯುವಂತೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. 

ಒಂದೇ ಸಮಾಜದವರು: 

ಶ್ರೀರಾಮುಲು ಮತ್ತು ರಮೇಶ್ ಜಾರಕಿಹೊಳಿ ಅವರು ಒಂದೇ ಪಕ್ಷದವರಾಗಿದ್ದು, ಇಬ್ಬರೂ ವಾಲ್ಮೀಕಿ ಸಮುದಾಯಕ್ಕೆ ಸೇರಿದರೂ ಇಬ್ಬರ ನಡುವೆ ಸ್ನೇಹ ಸಂಬಂಧ ಇರಲಿಲ್ಲ. ಮಾತುಕತೆಯೂ ಅಷ್ಟಕ್ಕಷ್ಟೇ ಎನ್ನುವಂತಿತ್ತು. ಜಾರಕಿಹೊಳಿ ಬಿಜೆಪಿ ಸೇರುವ ಮೊದಲೂ ಸೇರ್ಪಡೆಯಾದ ಬಳಿಕವೂ ಅಷ್ಟೇ. ಉಭಯ ನಾಯಕರ ನಡುವೆ ಹೇಳಿಕೊಳ್ಳುವಂಥ ಆತ್ಮೀಯತೆ ಇರಲಿಲ್ಲ. ಇದಕ್ಕೆ ಪರಸ್ಪರ ಪ್ರತಿಸ್ಪರ್ಧಿಗಳಾಗ ಬಹುದು ಎಂಬ ಆತಂಕವೂ ಇದ್ದಿರಬಹುದು. ಹಿಂದೊಮ್ಮೆ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಬಗ್ಗೆ ಬಿಜೆಪಿ ಸರ್ಕಾರದ ವೇಳೆ ಪ್ರಸ್ತಾಪ ಕೇಳಿ ಬಂದಾಗ ರಮೇಶ್ ಜಾರಕಿಹೊಳಿ ಹಾಗೂ ಶ್ರೀರಾಮುಲು ಅವರ ಪೈಕಿ ಯಾರನ್ನು ಮಾಡಬೇಕು ಎಂಬಷ್ಟರ ಮಟ್ಟಿಗೆ ಗಂಭೀರ ಚರ್ಚೆ ನಡೆದಿತ್ತು.

ಬಳ್ಳಾರಿ ರಾಡಿ ತಿಳಿಗೊಳಿಸಲು ಹರಸಾಹಸ: ದಿಲ್ಲಿಗೆ ಬನ್ನಿ, ರಾಮುಲುಗೆ ಅಮಿತ್ ಶಾ ಬುಲಾವ್‌

ಕಳೆದ ವಾರ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್ ಅವರು ರಾಜ್ಯಕ್ಕೆ ಆಗಮಿಸಿ ಸರಣಿ ಸಭೆ ನಡೆಸಿದ ಬೆನ್ನಲ್ಲೇ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ನಡುವಿನ ಗುದ್ದಾಟ ಬಯಲಿಗೆ ಬಂದಿತ್ತು. ಸಂಡೂರು ವಿಧಾನಸಭಾ ಕ್ಷೇತ್ರದ ಉಪಚು ನಾವಣೆಯಲ್ಲಿ ಪಕ್ಷದಸೋಲಿಗೆ ಶ್ರೀರಾಮುಲು ಕಾರಣ ಎಂಬರ್ಥದಲ್ಲಿ ಪರಾಜಿತ ಅಭ್ಯರ್ಥಿ ಬಂಗಾರು ಹನುಮಂತು ಅವರು ದೂರು ನೀಡಿದ್ದು ಇದಕ್ಕೆ ಕಾರಣವಾಯಿತು.

ಕೋರ್ ಕಮಿಟಿ ಸಭೆ ಬಳಿಕ ಬದಲಾವಣೆ:

ಬಂಗಾರು ಹನುಮಂತು ನೀಡಿದ ದೂರಿನ ಬಗ್ಗೆ ಕೋರ್‌ಕಮಿಟಿ ಸಭೆಯಲ್ಲಿ ರಾಧಾಮೋಹನ್ ದಾಸ್ ಅಗರ್‌ವಾಲ್ ಅವರು ಪ್ರಸ್ತಾಪಿಸಿ ಪ್ರಶ್ನಿಸಿದ ಬಳಿಕ ಶ್ರೀರಾಮುಲು ಸಿಡಿದೆದ್ದರು. ಇದರ ಹಿಂದೆ ಜನಾರ್ದನ ರೆಡ್ಡಿ ಇದ್ದಾರೆ ಎಂದು ಹರಿಹಾಯ್ದರು. ಅದರ ಬೆನ್ನಲ್ಲೇ ರೆಡ್ಡಿ ಸುದೀರ್ಘ ಪತ್ರಿಕಾಗೋಷ್ಠಿ ನಡೆಸಿ ಶ್ರೀರಾಮುಲು ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ವಿಷಯದಲ್ಲಿ ಶ್ರೀರಾಮುಲು ಅವರು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿ ಸಿದ್ದು, ಯತ್ನಾಳ ಬಣದ ಮುಖಂಡರಿಗೆ ಮತ್ತೊಂದು ಅಸ್ತ ಸಿಕ್ಕಂತಾಯಿತು.

ನಾನು ನಿಮ್ಮ ಜೊತೆ ಇರುತ್ತೇನೆ: ಯತ್ನಾಳ್‌ಗೆ ರಾಮುಲು ಭರವಸೆ!

ತಕ್ಷಣ ಕಾರ್ಯಪ್ರವೃತ್ತರಾದ ಯತ್ನಾಳ ಬಣದ ಮುಖಂಡರು ರಮೇಶ್ ಜಾರಕಿಹೊಳಿ ಮತ್ತು ಶ್ರೀರಾಮುಲು ನಡುವಿನ ಭಿನ್ನಾಭಿ ಪ್ರಾಯ ನಿವಾರಿಸುವ ಪ್ರಯತ್ನ ಮಾಡಿದರು. ಉಭಯ ನಾಯಕರನ್ನು ಪರಸ್ಪರ ಮಾತುಕತೆ ನಡೆಸುವಂತೆ ವೇದಿಕೆ ಸೃಷ್ಟಿಸಿ ಸೌಹಾರ್ದ ವಾತಾವರಣ ನಿರ್ಮಾಣ ಮಾಡಿದರು. ಆ ಮೂಲಕ ಶ್ರೀರಾಮುಲು ಅವರನ್ನು ತಮ್ಮ ಬಣದತ್ತ ಸೆಳೆಯುವಲ್ಲಿ ಒಂದು ಹಂತದ ಯಶಸ್ಸು ಕಂಡರು ಎಂದು ಮೂಲಗಳು ತಿಳಿಸಿವೆ.

ಬೃಹತ್‌ ಸಮಾವೇಶಕ್ಕೆ ರಾಮುಲು ಚಿಂತನೆ?

ಶ್ರೀರಾಮುಲು ಅವರು ಬಳ್ಳಾರಿಯಲ್ಲಿ ಶಕ್ತಿ ಪ್ರದರ್ಶನ ಮಾಡುವ ಸಲುವಾಗಿ ವಾಲ್ಮೀಕಿ ಸಮುದಾಯದ ಬೃಹತ್ ಸಮಾವೇಶ ಆಯೋಜಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ, ವರಿಷ್ಠರ ಅನುಮತಿ ಇಲ್ಲದೆ ಇಂಥ ಸಮಾವೇಶ ಹಮ್ಮಿಕೊಳ್ಳುವುದು ಸರಿಯಲ್ಲ. ಹಾಗೆ ಮಾಡಿದಲ್ಲಿ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಬೇಕಾದೀತು ಎಂಬ ಎಚ್ಚರಿಕೆಯ ಸಲಹೆಯನ್ನು ರಮೇಶ್ ಜಾರಕಿಹೊಳಿ ಅವರು ರಾಮುಲುಗೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.