ಬೆಂಗಳೂರು(ಸೆ.13): ನಗರದ ರೇಸ್‌ ಕೋರ್ಸ್‌ ರಸ್ತೆಯಲ್ಲಿರುವ ಕಾಂಗ್ರೆಸ್‌ ಭವನದಲ್ಲಿ ನಡೆಯುತ್ತಿದ್ದ ಇಂಡಿಯನ್‌ ನ್ಯಾಷನಲ್‌ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ (ಇಂಟಕ್‌) ಘಟಕದ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ವೇಳೆ ಕಾಂಗ್ರೆಸ್‌ ನಾಯಕರು ಕೈಕೈ ಮಿಲಾಯಿಸಿದ ಘಟನೆ ನಡೆದಿದೆ.

ಕೇಂದ್ರ ಸರ್ಕಾರದ ವಿರುದ್ಧ ಸೆಪ್ಟೆಂಬರ್‌ 23ರಂದು ಇಂಟಕ್‌ ಸೇರಿದಂತೆ ಕಾಂಗ್ರೆಸ್‌ನ ಇತರ ಅಂಗ ಸಂಸ್ಥೆಗಳಿಂದ ಪ್ರತಿಭಟನೆ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ಕಾರ್ಮಿಕ ಕೋಶ ಮತ್ತು ಇಂಟಕ್‌ನ ರಾಜ್ಯಾಧ್ಯಕ್ಷರಾಗಿರುವ ಎಸ್‌.ಎಸ್‌.ಪ್ರಕಾಶಂ ಮತ್ತು ಇಂಟಕ್‌ನ ನಿಕಟ-ಪೂರ್ವ ಅಧ್ಯಕ್ಷ ರಾಕೇಶ್‌ ಮಲ್ಲಿ ಮತ್ತವರ ಬೆಂಬಲಿಗರ ಮಧ್ಯೆ ಮಾತಿನ ಜಟಾಪಟಿ ಆರಂಭವಾಗಿದ್ದು, ಅದು ಹೊಯ್‌-ಕೈ ಹಂತಕ್ಕೆ ತಲುಪಿದೆ.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ರಾಜ್ಯ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಶಫಿವುಲ್ಲಾ ಉಭಯ ನಾಯಕರನ್ನು ಸಮಾಧಾನಪಡಿಸಿದ್ದಾರೆ.

ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಬದಲಾವಣೆ: ಹೊಸಬರಿಗೆ ರಾಜ್ಯದ ಕೈ ಹೊಣೆ..!

ಮಲ್ಲಿ ವಿರುದ್ಧ ದೂರು:

ಈ ನಡುವೆ, ಮಲ್ಲಿ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದಾರೆ. ಕಾಂಗ್ರೆಸ್‌ ಕಚೇರಿಯಲ್ಲೇ ಪ್ರಕಾಶಂ ಮೇಲೆ ಹಲ್ಲೆ ನಡೆಸಿದ್ದಾರೆ. ಆದ್ದರಿಂದ ಮಲ್ಲಿ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಇಂಟಕ್‌ನ ರಾಷ್ಟ್ರೀಯ ಅಧ್ಯಕ್ಷ ಜಿ.ಸಂಜೀವ ರೆಡ್ಡಿ ಅವರಿಗೆ ದೂರು ನೀಡಲಾಗುವುದು ಎಂದು ರಾಜ್ಯ ಇಂಟಕ್‌ನ ಕಾರ್ಯದರ್ಶಿ ವೆಂಕಟೇಶ್‌ ಹೇಳಿದ್ದಾರೆ.