Asianet Suvarna News Asianet Suvarna News

ಗ್ಯಾರಂಟಿ ಮೂಲಕ ಮತದಾರರಿಗೆ ಆಮಿಷ, ಶಾಸಕ ಸ್ಥಾನದಿಂದ ಅನರ್ಹರಾಗ್ತಾರಾ ಸಿದ್ಧರಾಮಯ್ಯ?

ರಾಜಕೀಯ ಪಕ್ಷಗಳು ಚುನಾವಣಾ ಪ್ರಕ್ರಿಯೆಯ ಶುದ್ಧತೆಯನ್ನು ಹಾಳುಮಾಡುವ ಅಥವಾ ಮತದಾರರ ಮೇಲೆ ಅನಗತ್ಯ ಪ್ರಭಾವ ಬೀರುವ ಭರವಸೆಗಳನ್ನು ನೀಡುವುದನ್ನು ಬಿಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

freebies electoral malpractice Voter moves Karnataka High Court to set aside election of CM Siddaramaiah san
Author
First Published Jul 21, 2023, 5:33 PM IST

ಬೆಂಗಳೂರು (ಜು.21): ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಆಯ್ಕೆಯಾಗಿರುವ ಸಿಎಂ ಸಿದ್ಧರಾಮಯ್ಯ ಅವರ ಶಾಸಕ ಸ್ಥಾನವನ್ನು ಅನೂರ್ಜಿತ ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್‌ನಲ್ಲಿಅರ್ಜಿ ಸಲ್ಲಿಸಲಾಗಿದೆ. ಇತ್ತೀಚೆಗೆ ರಾಜ್ಯದಲ್ಲಿ ಮುಕ್ತಾಯವಾದ ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್‌ ಪಕ್ಷ ಚುನಾವಣಾ ಪ್ರಕ್ರಿಯೆಯ ಶುದ್ಧತೆಯನ್ನು ಹಾಳುಮಾಡುವ ಅಥವಾ ಮತದಾರರ ಮೇಲೆ ಅನಗತ್ಯ ಪ್ರಭಾವ ಬೀರುವಂತ ಗ್ಯಾರಂಟಿ ಘೋಷಣೆಗಳನ್ನು ಪ್ರಕಟ ಮಾಡಿತ್ತು. ವರುಣಾ ಕ್ಷೇತ್ರದ ಮತದಾರ ಕೆ.ಎಂ.ಶಂಕರ ಸಲ್ಲಿಸಿದ್ದ ಅರ್ಜಿ ಶುಕ್ರವಾರ ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಅರ್ಜಿಯಲ್ಲಿನ ಕಚೇರಿ ಆಕ್ಷೇಪಣೆಗಳನ್ನು ಸರಿಪಡಿಸುವಂತೆ ಅರ್ಜಿದಾರರಿಗೆ ಸೂಚಿಸಿ ಜುಲೈ 28 ರಂದು ವಿಚಾರಣೆಗೆ ಪಟ್ಟಿ ಮಾಡಲಾಗಿದೆ.  ಹಿರಿಯ ನ್ಯಾಯವಾದಿ ಪ್ರಮೀಳಾ ನೇಸರ್ಗಿ ಮೂಲಕ ಸಲ್ಲಿಸಲಾದ ಮನವಿಯಲ್ಲಿ, ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 100 (1) (ಬಿ), (ಡಿ) (i), (ಡಿ) (ii), (ಡಿ) (iii), ಮತ್ತು (ಡಿ) (iv) ಅಡಿಯಲ್ಲಿ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದ್ದನ್ನು ಪ್ರಶ್ನೆ ಮಾಡಲಾಗಿದೆ.

ಕಾಯ್ದೆಯ ಸೆಕ್ಷನ್ 123(1)(ಎ)(ಬಿ)(ii), 123(1)(ಬಿ)(ಬಿ), 123(2), 123(4) ಮತ್ತು 123(6) ಅಡಿಯಲ್ಲಿ ಸಿಎಂ ಸಿದ್ಧರಾಮಯ್ಯ ವಿವಿಧ ಭ್ರಷ್ಟ ಕೃತ್ಯಗಳನ್ನು ಎಸಗಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.  ಸಿದ್ದರಾಮಯ್ಯ ಅವರ ಆಯ್ಕೆಯನ್ನು ಅನೂರ್ಜಿತಗೊಳಿಸಬೇಕು ಮತ್ತು ಅವರು ಕಾಯಿದೆ ಮತ್ತು ಸಂವಿಧಾನದ ನಿಬಂಧನೆಗಳನ್ನು ಉಲ್ಲಂಘಿಸಿರುವುದರಿಂದ ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಅವರನ್ನು ಅನರ್ಹ ಮಾಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಪಕ್ಷದ ವಿವಿಧ ನಾಯಕರು ಆನ್‌ಲೈನ್‌ನಲ್ಲಿ ಹಂಚಿಕೊಂಡ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಉಲ್ಲೇಖಿಸಿ, ಅಭ್ಯರ್ಥಿಗಳು ತಮ್ಮ ರಾಜಕೀಯ ಪಕ್ಷದ ಬಲದಿಂದ ಕರಪತ್ರಗಳನ್ನು ನೀಡುವುದನ್ನು ಕಾಯಿದೆ ಅಥವಾ ಸಂವಿಧಾನವು ಎಂದಿಗೂ ಕಲ್ಪಿಸಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.  "ರಾಜಕೀಯ ಪಕ್ಷಗಳು ಚುನಾವಣಾ ಪ್ರಕ್ರಿಯೆಯ ಶುದ್ಧತೆಯನ್ನು ಹಾಳುಮಾಡುವ ಅಥವಾ ತಮ್ಮ ಹಕ್ಕು ಚಲಾಯಿಸುವಲ್ಲಿ ಮತದಾರರ ಮೇಲೆ ಅನಗತ್ಯ ಪ್ರಭಾವ ಬೀರುವ ಭರವಸೆಗಳನ್ನು ನೀಡುವುದನ್ನು ಬಿಡಬೇಕು" ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯು ಕರ್ನಾಟಕದ ಜನತೆಗೆ ಐದು ಭರವಸೆಗಳನ್ನು ನೀಡಿತ್ತು. 'ಗೃಹ ಜ್ಯೋತಿ' ಯೋಜನೆಯ ಅನ್ವಯ ಎಲ್ಲಾ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್, 'ಗೃಹ ಲಕ್ಷ್ಮಿ' ಅನ್ವಯ ಕುಟುಂಬದ ಪ್ರತಿಯೊಬ್ಬ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ, 'ಅನ್ನ ಭಾಗ್ಯ' ಮೂಲಕ ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ ತಿಂಗಳಿಗೆ 10 ಕಿಲೋಗ್ರಾಂಗಳಷ್ಟು ಆಹಾರ ಧಾನ್ಯ, 'ಯುವ ನಿಧಿ' ಮೂಲಕ ನಿರುದ್ಯೋಗಿ ಪದವೀಧರರಿಗೆ ಎರಡು ವರ್ಷಕ್ಕೆ ತಿಂಗಳಿಗೆ 3 ಸಾವಿರ ರೂಪಾಯಿ ಮತ್ತು ನಿರುದ್ಯೋಗಿ ಡಿಪ್ಲೊಮಾ ಹೊಂದಿರುವವರಿಗೆ ಎರಡು ವರ್ಷಗಳವರೆಗೆ ತಿಂಗಳಿಗೆ 1500 ರೂಪಾಯಿ ಹಾಗೂ 'ಶಕ್ತಿ' ಯೋಜನೆಯ ಮೂಲಕ ಸಾಮಾನ್ಯ KSRTC/BMTC ಬಸ್ಸುಗಳಲ್ಲಿ ರಾಜ್ಯದಾದ್ಯಂತ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣ ಭರವಸೆಗಳನ್ನು ನೀಡಿತ್ತು. ಈ ಐದು ಗ್ಯಾರಂಟಿಗಳು, ಮನವಿಯ ಪ್ರಕಾರ, ಕಾಯಿದೆಯ ಸೆಕ್ಷನ್ 123 (2) ಅಡಿಯಲ್ಲಿ ಲಂಚ ಮತ್ತು ಅನಗತ್ಯ ಪ್ರಭಾವಕ್ಕೆ ಸಮನಾಗಿರುತ್ತದೆ.

ರಾಹುಲ್‌ಗೆ ಜೈಲು ಶಿಕ್ಷೆಗೆ ಕಾರಣನಾದ ಬಿಜೆಪಿ ನಾಯಕನಿಂದ ಸುಪ್ರೀಂಗೆ ಕೇವಿಯಟ್‌ ಸಲ್ಲಿಕೆ

ಸಿದ್ದರಾಮಯ್ಯ ಅವರ ಒಪ್ಪಿಗೆಯೊಂದಿಗೆ ಪ್ರಣಾಳಿಕೆಯನ್ನು ಪ್ರಕಟಿಸಲಾಗಿದೆ ಮತ್ತು ಅದರೊಂದಿಗೆ ವರುಣಾ ಕ್ಷೇತ್ರದ ಮತದಾರರಿಗೆ ತಮ್ಮ ಪಕ್ಷಕ್ಕೆ ಮತ ಹಾಕುವಂತೆ ಪ್ರೇರೆಪಿಸುವ ಭರವಸೆಗಳ ಲಂಚವನ್ನು ನೀಡಲಾಗಿದೆ ಎಂದು ಹೇಳಿದೆ. ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡುವುದರಿಂದ ಕೆಲವು ಗ್ಯಾರಂಟಿಗಳು ಭಾರತೀಯ ಸಂವಿಧಾನದ 14 ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ರಾಹುಲ್‌ ಗಾಂಧಿ ಸಂಸತ್‌ ಸದಸ್ಯತ್ವ ಅನರ್ಹತೆ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Follow Us:
Download App:
  • android
  • ios