ಎಂಜಿನಿಯರಿಂಗ್‌, ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯಲಿಚ್ಛಿಸುವ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಜೆಇಇ, ನೀಟ್‌, ಸಿಇಟಿ ಸೇರಿದಂತೆ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸರ್ಕಾರದಿಂದಲೇ ಉಚಿತ ತರಬೇತಿ ಆರಂಭಿಸಲು ಗಂಭೀರ ಆಲೋಚನೆ ನಡೆದಿದೆ.

ಲಿಂಗರಾಜು ಕೋರಾ

ಬೆಂಗಳೂರು (ಅ.19): ಎಂಜಿನಿಯರಿಂಗ್‌, ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯಲಿಚ್ಛಿಸುವ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಜೆಇಇ, ನೀಟ್‌, ಸಿಇಟಿ ಸೇರಿದಂತೆ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸರ್ಕಾರದಿಂದಲೇ ಉಚಿತ ತರಬೇತಿ ಆರಂಭಿಸಲು ಗಂಭೀರ ಆಲೋಚನೆ ನಡೆದಿದೆ.

ಅಲ್ಲದೆ, ಸರ್ಕಾರಿ ಶಾಲೆ ಹಾಗೂ ಪಿಯು ಕಾಲೇಜುಗಳ ಕ್ರೀಡಾಸಕ್ತ ವಿದ್ಯಾರ್ಥಿಗಳಿಗೆ ವಿಶೇಷ ಕ್ರೀಡಾ ತರಬೇತಿ, ಕೆಲ ಉಚಿತ ಆರೋಗ್ಯ ಸೌಲಭ್ಯಗಳನ್ನು ಆರಂಭಿಸಲು ಕೂಡ ಚರ್ಚೆಗಳು ನಡೆದಿವೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಇಂತಹ ಮಹತ್ವಾಕಾಂಕ್ಷಿ ಯೋಜನೆಗಳಿಗೆ 31 ಕೋಟಿ ರು. ವೆಚ್ಚದಲ್ಲಿ ಈ ವರ್ಷವೇ ಕ್ರಿಯಾ ಯೋಜನೆ ರೂಪಿಸಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಜಾರಿಗೊಳಿಸುವ ಚರ್ಚೆಗಳು ನಡೆದಿವೆ. ಈ ಬಗ್ಗೆ ದೀಪಾವಳಿ ವೇಳೆಗೆ ಸ್ಪಷ್ಟಚಿತ್ರಣ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Karnataka Rains: ಕರ್ನಾಟಕದಲ್ಲಿ ಮಳೆಗೆ ನಾಲ್ವರ ಬಲಿ

ತೆರಿಗೆ ಇಲಾಖೆ ಪಾಲಾಗಿದ್ದ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಮತ್ತು ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯ 23 ಕೋಟಿ ರು. ಹಣ ಇಲಾಖೆಗೆ ವಾಪಸ್‌ ಆಗಿರುವುದೇ ಇಂತಹ ಯೋಜನೆಗಳ ಆರಂಭಕ್ಕೆ ದಾರಿಯಾಗುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯು ಕಾನೂನು ಹೋರಾಟದ ಫಲವಾಗಿ ಈ ಹಣ ವಾಪಸ್‌ ಬಂದಿದೆ. ಈ ಹಣದ ಜೊತೆಗೆ ಪ್ರಸಕ್ತ ಸಾಲಿನ ಕಲ್ಯಾಣ ಕಾರ್ಯಕ್ರಮದ ಏಳೆಂಟು ಕೋಟಿ ರು. ಸೇರಿಸಿ 31 ಕೋಟಿ ರು. ವೆಚ್ಚದಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಇದರಲ್ಲಿ ಪಿಯು ವಿದ್ಯಾರ್ಥಿಗಳಿಗೆ ಉಚಿತವಾಗಿ ಜೆಇಇ, ನೀಟ್‌, ಸಿಇಟಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕಾರ್ಯಕ್ರಮ ಸೇರಿಸುವಂತೆ ಇಲಾಖಾ ಸಚಿವರಾದ ಬಿ.ಸಿ.ನಾಗೇಶ್‌ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

ಇಲಾಖೆಯ ಆಯುಕ್ತರಾದ ಡಾ.ಆರ್‌.ವಿಶಾಲ್‌ ಅವರ ನೇತೃತ್ವದಲ್ಲಿ ಕ್ರಿಯಾ ಯೋಜನೆ ಸಿದ್ಧವಾಗುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಜೊತೆಗೆ ಸರ್ಕಾರಿ ಶಾಲಾ, ಕಾಲೇಜು ಮಕ್ಕಳು ಕ್ರೀಡೆಯಲ್ಲಿ ಇನ್ನಷ್ಟುಉತ್ತಮ ಸಾಧನೆ ಮಾಡಬೇಕೆಂಬ ದೃಷ್ಟಿಯಿಂದ ವಿಶೇಷ ಕ್ರೀಡಾ ತರಬೇತಿ, ಕೆಲ ಆರೋಗ್ಯ ಸೌಲಭ್ಯಗಳನ್ನು ಒಳಗೊಂಡ ಕಾರ್ಯಕ್ರಮಗಳನ್ನು ಸೇರಿಸಲು ಚರ್ಚೆಗಳು ನಡೆಯುತ್ತಿವೆ. ಅಂದುಕೊಂಡಂತೆ ಎಲ್ಲವೂ ನಡೆದರೆ ಶುಲ್ಕ ಕಟ್ಟಿಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಪಡೆಯಲಾಗದೆ ವೈದ್ಯಕೀಯ, ಎಂಜಿನಿಯರಿಂಗ್‌ನಂತಹ ಶಿಕ್ಷಣದಿಂದ ವಂಚಿತರಾಗುತ್ತಿರುವ ರಾಜ್ಯದ 1200ಕ್ಕೂ ಹೆಚ್ಚು ಪಿಯು ಕಾಲೇಜುಗಳಲ್ಲಿನ ವಿಜ್ಞಾನ ನಿಖಾಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಈ ವರ್ಷದಿಂದಲೇ ತರಬೇತಿ ಆರಂಭವಾಗಲಿದೆ.

ತರಬೇತಿ ಹೇಗೆ?: ಡಿಸೆಂಬರ್‌ ವೇಳೆಗೆ ಕ್ರಿಯಾ ಯೋಜನೆಗೆ ಸರ್ಕಾರದ ಅನುಮತಿ ಪಡೆದು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಆರಂಭಿಸುವ ಲೆಕ್ಕಾಚಾರ ಇಲಾಖೆಯದ್ದು. ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಕಾಲೇಜಿನ ಸಮೀಪದ ಕಟ್ಟಡಗಳಲ್ಲಿ ಸಂಪನ್ಮೂಲಕ ವ್ಯಕ್ತಿಗಳಿಂದ ತರಬೇತಿ ಪ್ರಕ್ರಿಯೆ ನಡೆಸಲಾಗುತ್ತದೆ. ಇದಕ್ಕೆ ಹಾಲಿ ಇರುವ ಕೋಚಿಂಗ್‌ ಕೇಂದ್ರಗಳಲ್ಲಿ ತರಬೇತಿ ನೀಡುತ್ತಿರುವ ಅಥವಾ ಹೊಸ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳಲಿದೆ. ಬೋಧಕರಿಗೆ ನಿರ್ದಿಷ್ಟಗೌರವಧನವನ್ನೂ ನೀಡಲು ಉದ್ದೇಶಿಸಲಾಗಿದೆ.

ಕೊನೆಗೂ ಓಲಾ ಆಟೋ ದರ ಇಳಿಕೆ: ಮೀಟರ್‌ ದರಕ್ಕಿಂತ ಕೊಂಚ ಅಧಿಕ ದರಕ್ಕೆ ಓಲಾ

ಶಿಕ್ಷಣ ಕಲ್ಯಾಣ ನಿಧಿಗೆ ವಾಪಸ್‌ ಬಂದಿರುವ ತೆರಿಗೆ ರೂಪದ ಹಣವೂ ಸೇರಿ ಒಟ್ಟು 31 ಕೋಟಿ ರು. ವೆಚ್ಚದಲ್ಲಿ ಇಲಾಖೆಯು ಸರ್ಕಾರಿ ಶಾಲಾ, ಕಾಲೇಜು ಮಕ್ಕಳಿಗೆ ಶಿಕ್ಷಣ, ಆರೋಗ್ಯ, ಕ್ರೀಡೆ ಮತ್ತಿತರ ವಿಭಾಗದಲ್ಲಿ ಕೆಲ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಚರ್ಚೆ ನಡೆಸಲಾಗುತ್ತಿದೆ. ಇದರಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಅಂಶವನ್ನೂ ಸೇರಿಸಲಾಗುತ್ತಿದೆ. ಇಲಾಖಾ ಸಚಿವರ ಮಾರ್ಗದರ್ಶನದಲ್ಲಿ ದೀಪಾವಳಿ ವೇಳೆಗೆ ಕ್ರಿಯಾಯೋಜನೆ ರೂಪಿಸಿ ಸರ್ಕಾರದ ಅನುಮೋದನೆಗೆ ಕಳುಹಿಸಲಾಗುವುದು.
- ಡಾ.ಆರ್‌.ವಿಶಾಲ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ