ರಾಜ್ಯದ ಹಲವೆಡೆ ಮಂಗಳವಾರವೂ ವರುಣನ ಆರ್ಭಟ ಮುಂದುವರಿದಿದ್ದು, ಸಿಡಿಲಬ್ಬರದ ಮಳೆಗೆ ನಾಲ್ವರು ಮೃತಪಟ್ಟಿದ್ದಾರೆ. ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಬೊಮ್ಮಲಗುಂಡ ಗ್ರಾಮದ ನಾಗಪ್ಪ (70) ಹಾಗೂ ನಾಗೇನಹಳ್ಳಿಯ ಜಾಜರ್‌ ಕಲ್ಲು ತಿಮ್ಮಣ್ಣ (70) ಎಂಬುವರು ಮೃತಪಟ್ಟಿದ್ದಾರೆ.  

ಬೆಂಗಳೂರು (ಅ.19): ರಾಜ್ಯದ ಹಲವೆಡೆ ಮಂಗಳವಾರವೂ ವರುಣನ ಆರ್ಭಟ ಮುಂದುವರಿದಿದ್ದು, ಸಿಡಿಲಬ್ಬರದ ಮಳೆಗೆ ನಾಲ್ವರು ಮೃತಪಟ್ಟಿದ್ದಾರೆ. ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಬೊಮ್ಮಲಗುಂಡ ಗ್ರಾಮದ ನಾಗಪ್ಪ (70) ಹಾಗೂ ನಾಗೇನಹಳ್ಳಿಯ ಜಾಜರ್‌ ಕಲ್ಲು ತಿಮ್ಮಣ್ಣ (70) ಎಂಬುವರು ಮೃತಪಟ್ಟಿದ್ದಾರೆ. ಧಾರವಾಡ ಜಿಲ್ಲೆ ಕುಂದಗೋಳದಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಸಿಡಿಲು ಬಡಿದು ಪಶುಪತಿಹಾಳ ಗ್ರಾಮದ ನಿವಾಸಿ ಪ್ರವೀಣ ಬಡಿಗೇರ (30) ಎಂಬುವರು ಮೃತಪಟ್ಟಿದ್ದಾರೆ. ಚಾಮರಾಜನಗರ ತಾಲೂಕಿನ ಚಂದಕವಾಡಿ ಗ್ರಾಮದಲ್ಲಿ ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ನಾಗರಾಜು (55) ಎಂಬುವರು ಮೃತಪಟ್ಟಿದ್ದಾರೆ.

ತೀರ್ಥಹಳ್ಳಿ ತಾಲೂಕಿನ ಕಾನುಕೊಪ್ಪದಲ್ಲಿ ಸಿಡಿಲು ಬಡಿದು ಸರಸ್ವತಿ ಶ್ರೀಧರ್‌ (50) ಎಂಬುವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮಧ್ಯೆ, ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಹೊಸಹಳ್ಳಿಯಲ್ಲಿ ಹಳ್ಳದ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಕೆಂಚಗಾನಹಳ್ಳಿಯ ಗಂಗಾಧರ್‌ ಹಾಗೂ ಗುಬ್ಬಿ ತಾಲೂಕಿನ ಕಲ್ಲೂರು ಕೆರೆಯ ಕೋಡಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಹನುಮಂತಯ್ಯ (47) ಎಂಬುವರ ಮೃತದೇಹಗಳು ಮಂಗಳವಾರ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಮೃತದೇಹವನ್ನು ಹಸ್ತಾಂತರಿಸಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಮಧ್ಯಾಹ್ನದ ಮೇಲೆ ಸುರಿದ ಮಳೆಗೆ ಸುಲ್ತಾನ್‌ಪೇಟೆಯಲ್ಲಿ ದ್ವಿಚಕ್ರ ವಾಹನಗಳು ಸಂಪೂರ್ಣವಾಗಿ ಮುಳುಗಿದ್ದು, ಲಕ್ಷಾಂತರ ರು.ನಷ್ಟವಾಗಿದೆ.

ತುಮಕೂರಲ್ಲಿ ನಿಲ್ಲದ ಮಳೆ: ಏಷ್ಯಾದ ಅತಿ ದೊಡ್ಡ ಸೋಲಾರ್‌ ಪಾರ್ಕ್‌ಗೆ ನುಗ್ಗಿದ ನೀರು..!

ಸಿಡಿಲು ಬಡಿದು ಇಬ್ಬರು ಸಾವು: ಸಿಡಿಲು ಬಡಿದು ಸಂಡೂರು ತಾಲೂಕಿನಲ್ಲಿ ಇಬ್ಬರು ಕೃಷಿ ಕಾರ್ಮಿಕರು ಮಂಗಳವಾರ ಸಂಜೆ ಮೃತಪಟ್ಟಿದ್ದಾರೆ. ಬೊಮ್ಮಲಗುಂಡ ಗ್ರಾಮದ ನಾಗಪ್ಪ (70) ಹಾಗೂ ನಾಗೇನಹಳ್ಳಿಯ ಜಾಜರ್‌ ಕಲ್ಲು ತಿಮ್ಮಣ್ಣ (70) ಮೃತಪಟ್ಟವರು. ಇದೇ ವೇಳೆ ಬೊಮ್ಮಲಗುಂಡ ನಾಗಪ್ಪರ ಮೇಕೆಯೂ ಸಿಡಿಲಿಗೆ ಬಲಿಯಾಗಿದೆ. ಸಂಡೂರು ಪಟ್ಟಣ ಹಾಗೂ ಚೋರನೂರು ಹೋಬಳಿಯಲ್ಲಿ ಉತ್ತಮ ಮಳೆಯಾಗಿದೆ. ಕೃಷಿ ಹಾನಿಯ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಳ್ಳಾರಿ ನಗರ ಹಾಗೂ ತಾಲೂಕಿನ ವಿವಿಧೆಡೆಗಳಲ್ಲಿ ಸಂಜೆ ಸುಮಾರು ಒಂದು ತಾಸಿಗೂ ಹೆಚ್ಚು ಹೊತ್ತು ಧಾರಾಕಾರ ಮಳೆಯಾಗಿದೆ. ಕುರುಗೋಡು, ಕಂಪ್ಲಿಯಲ್ಲಿ ತುಂತುರು ಮಳೆಯಾಗಿದೆ. ಸಿರುಗುಪ್ಪ ತಾಲೂಕಿನಲ್ಲಿ ಸಾಧಾರಣ ಮಳೆಯಾಗಿರುವ ವರದಿಯಾಗಿದೆ. ನಗರದಲ್ಲಿ ಸಂಜೆ 4 ಗಂಟೆ ವೇಳೆಗೆ ಮಳೆ ಶುರುವಿಟ್ಟುಕೊಂಡಿತು. ಸುಮಾರು ಒಂದು ತಾಸು ಸತತವಾಗಿ ಮಳೆ ಸುರಿದಿದ್ದರಿಂದ ರಸ್ತೆಗಳು ಹಳ್ಳ-ಕೊಳ್ಳಗಳಂತೆ ತುಂಬಿಕೊಂಡವು. ಸಾರ್ವಜನಿಕರು ಮಳೆನೀರಿನಲ್ಲಿಯೇ ಓಡಾಡುವ ದೃಶ್ಯ ಕಂಡು ಬಂತು.ಎಂದಿನಂತೆ ಮಳೆನೀರಿಗೆ ಇಲ್ಲಿನ ಪಾರ್ವತಿನಗರ, ವಿಶಾಲನಗರ, ಕೌಲ್‌ಬಜಾರ್‌, ರೇಣುಕಾನಗರ, ಕಪ್ಪಗಲ್‌ ರಸ್ತೆಗಳು ಕೆಲ ಹೊತ್ತು ಜಲಾವೃತಗೊಂಡವು. ಮಳೆ-ಗಾಳಿಗೆ ನಗರದಲ್ಲಿ ಸುಮಾರು 15ಕ್ಕೂ ಹೆಚ್ಚು ಮರಗಳು ಉರುಳಿ ಬಿದ್ದಿವೆ ಎಂದು ತಿಳಿದು ಬಂದಿದೆ.

ಮಳೆಯಿಂದ ಬೆಳೆಹಾನಿ: ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಷ್ಟು ಪರಿಹಾರ..!

ಮಳೆಯಿಂದ ಅನಂತಪುರ ರಸ್ತೆಯ ತಾರಾನಾಥ ಆಯುರ್ವೇದ ಆಸ್ಪತ್ರೆ ಬಳಿ ಆಟೋವೊಂದು ಪಲ್ಟಿಯಾಗಿದೆ. ಯಾವುದೇ ಅನಾಹುತ ಸಂಭವಿಸಿಲ್ಲ. ರಸ್ತೆ ನಿರ್ಮಾಣ ಹಾಗೂ ಪೈಪ್‌ಗಳ ಅಳವಡಿಕೆಗೆ ಗುಂಡಿ ತೋಡಲಾಗಿದ್ದು, ಮಳೆಯ ನೀರಿನಿಂದ ಕೆಸರು ಗದ್ದೆಯಂತಾದ ಜಾಗದಲ್ಲಿ ಆಟೋ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದಿದೆ. ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಯಾವುದೇ ಕ್ರಮ ವಹಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಮಧ್ಯಾಹ್ನದಿಂದ ನಗರದ ಅನೇಕ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಿತ್ತು.