ಕಾಂಗ್ರೆಸ್ ಗ್ಯಾರಂಟಿ: ಉಚಿತ 10 ಕೆಜಿ ಅಕ್ಕಿ ವಿತರಣೆ ವಿಳಂಬ ಸಾಧ್ಯತೆ?
ರಾಜ್ಯದಲ್ಲಿ ಎಷ್ಟು ಬಿಪಿಎಲ್ ಕಾರ್ಡ್ ಗಳಿವೆ?, ಬಿಪಿಎಲ್ ಕಾರ್ಡ್‌ಗಳಲ್ಲಿ ಇರುವ ಫಲಾನುಭವಿಗಳೆಷ್ಟು ಎಂಬ ಮಾಹಿತಿಯನ್ನ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ನೀಡುತ್ತಿರುವ ಅಧಿಕಾರಿಗಳು
ಬೆಂಗಳೂರು(ಮೇ.30): ಈವರೆಗೂ ಹೆಚ್ಚುವರಿ ಅಕ್ಕಿ ಖರೀದಿಗೆ ಸರ್ಕಾರ ಆದೇಶ ಮಾಡಿಲ್ಲ, ಹೀಗಾಗಿ ಅನ್ನಭಾಗ್ಯದ ಯೋಜನೆ ಅಡಿಯಲ್ಲಿ 10 ಕೆಜಿ ಅಕ್ಕಿ ವಿತರಣೆ ವಿಳಂಬವಾಗುವ ಸಾಧ್ಯತೆ ಇದೆ. ಅನ್ನಭಾಗ್ಯ ಗ್ಯಾರಂಟಿ ಯೋಜನೆ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಮಂಗಳವಾರ) ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಹಾರ ಇಲಾಖೆ ಅಧಿಕಾರಿಗಳ ಜೊತೆ ಸಚಿವ ಕೆ.ಎಚ್. ಮುನಿಯಪ್ಪ ಅವರು ಸಭೆ ನಡೆಸುತ್ತಿದ್ದಾರೆ. ಪಿಪಿಟಿ ಮೂಲಕ ಪಡಿತರ ಚೀಟಿ ಬಗ್ಗೆ ಅಧಿಕಾರಿಗಳಿಂದ ಸಚಿವರಿಗೆ ಮಾಹಿತಿ ನೀಡುತ್ತಿದ್ದಾರೆ.
ಸಭೆಯಲ್ಲಿ ಅಂಕಿ ಅಂಶಗಳ ಸಮೇತ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ. ರಾಜ್ಯದಲ್ಲಿ ಎಷ್ಟು ಬಿಪಿಎಲ್ ಕಾರ್ಡ್ ಗಳಿವೆ?, ಬಿಪಿಎಲ್ ಕಾರ್ಡ್‌ಗಳಲ್ಲಿ ಇರುವ ಫಲಾನುಭವಿಗಳೆಷ್ಟು ಎಂಬ ಮಾಹಿತಿಯನ್ನ ಅಧಿಕಾರಿಗಳು ನೀಡುತ್ತಿದ್ದಾರೆ.
ರಾಜ್ಯದಲ್ಲಿರುವ ಅಂತ್ಯೋದಯ ಕಾರ್ಡ್ - 10,90,360, ಅಂತ್ಯೋದಯ ಕಾರ್ಡ್‌ನಲ್ಲಿರುವ ಫಲಾನುಭವಿಗಳ ಸಂಖ್ಯೆ - 44,86,389, ರಾಜ್ಯದಲ್ಲಿರುವ BPL ಕಾರ್ಡ್‌ಗಳ ಸಂಖ್ಯೆ - 1,02,94,264. BPL ಕಾರ್ಡ್‌ಗಳಲ್ಲಿರುವ ಫಲಾನುಭವಿಗಳ ಸಂಖ್ಯೆ - 3,58,36,453. ರಾಜ್ಯ ಸರ್ಕಾರದ BPL ಕಾರ್ಡ್‌ಗಳು - 14,39,250. ರಾಜ್ಯ ಸರ್ಕಾರದ BPL ಕಾರ್ಡ್‌ಗಳಲ್ಲಿರುವ ಫಲಾನುಭವಿಗಳ ಸಂಖ್ಯೆ - 39,37,977 ಇದೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ಸರ್ಕಾರ ಸಹಾಯಧನ ನೀಡದಿದ್ರೆ ಸಾಲದ ಸುಳಿಯಲ್ಲಿ ಸಾರಿಗೆ ಇಲಾಖೆ
ಫಲಾನುಭವಿಗಳಿಗೆ ವಿತರಣೆ ಹೇಗೆ.?
ಅಂತ್ಯೋದಯ ಫಲಾನುಭವಿಗಳಿಗೆ ಕಾರ್ಡ್ ಲೆಕ್ಕದಲ್ಲಿ ಪಡಿತರ ವಿತರಣೆ ಮಾಡಲಾಗುತ್ತದೆ. ಪ್ರತಿ ಅಂತ್ಯೋದಯ ಕಾರ್ಡ್‌ಗೆ 35 ಕೆಜಿ ಅಕ್ಕಿ ಕೊಡಲಾಗುತ್ತಿದೆ. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮನೆಯ ಪ್ರತಿ ಸದಸ್ಯನಿಗೆ 6 ಕೆಜಿ ಅಕ್ಕಿ ಕೊಡಲಾಗ್ತಿದೆ. ಇದರಲ್ಲಿ 5 ಕೆಜಿ ಅಕ್ಕಿ ಸಂಪೂರ್ಣ ಕೇಂದ್ರ ಸರ್ಕಾರವೇ ನೀಡಲಿದೆ. 1 ಕೆಜಿ ಅಕ್ಕಿ ಮಾತ್ರ ರಾಜ್ಯ ಸರ್ಕಾರ ಹೆಚ್ಚುವರಿ ವಿತರಣೆ ಮಾಡುತ್ತಿದೆ. ರಾಜ್ಯ ಸರ್ಕಾರದ ಆದ್ಯತೇತರ ಏಕ ಸದಸ್ಯ ಪಡಿತರ ಚೀಟಿಗೆ 5 ಕೆ.ಜಿ ನೀಡಲಾಗ್ತಿದೆ. 2 ಮತ್ತು ಹೆಚ್ಚಿನ ಸದಸ್ಯರಿಗೆ 10 ಅಕ್ಕಿ ವಿತರಿಸಲಾಗ್ತಿದೆ. ರಾಜ್ಯ ಸರ್ಕಾರದ ಆದ್ಯತೇತರ BPL ಕಾರ್ಡ್ ಗೆ ಕೆಜಿಗೆ 15 ರೂಪಾಯಿ ಗೆ ವಿತರಿಸಲಾಗ್ತಿದೆ.
ಹೆಚ್ಚುವರಿ ಅಕ್ಕಿ ಖರೀದಿ ಹೇಗೆ..? ಎಲ್ಲಿಂದ..? ಖರ್ಚು ಎಷ್ಟು..?
ಈಗ ರಾಜ್ಯ ಸರ್ಕಾರ ನೀಡುತ್ತಿರುವ 6 ಕೆಜಿ ಅಕ್ಕಿಯಲ್ಲಿ 5 ಕೆಜಿ ಸಂಪೂರ್ಣ ಕೇಂದ್ರ ಸರ್ಕಾರ ಉಚಿತವಾಗಿ ನೀಡಲಿದೆ. ಹೀಗಾಗಿ ಹೆಚ್ಚುವರಿ 1 ಕೆಜಿ ಅಕ್ಕಿಯನ್ನ ಖರೀದಿಸಿ ಫಲಾನುಭವಿಗಳಿಗೆ ನೀಡಲು ಆಗ್ತಿರುವ ಖರ್ಚು ವಾರ್ಷಿಕ 1500 ಕೋಟಿ ರೂ. ಆಗುತ್ತದೆ. ಈಗ ಹೆಚ್ಚುವರಿ ನಾಲ್ಕು ಕೆಜಿ ಅಕ್ಕಿ ಖರೀದಿಗೆ 8 ರಿಂದ 9 ಸಾವಿರ ಕೋಟಿ ವಾರ್ಷಿಕ ಬೇಕಾಗುತ್ತದೆ. ಈ ಹಣವನ್ನ ರಾಜ್ಯ ಸರ್ಕಾರವೇ ಆಹಾರ ಇಲಾಖೆಗೆ ಒದಗಿಸಬೇಕು. ಅಕ್ಕಿಯನ್ನು ಕೇಂದ್ರ ಸರ್ಕಾರ FCI (Food Corporation of India) ಇಂದ ಖರೀದಿ ಮಾಡಲಾಗ್ತಿದೆ. ಈಗ ಹೆಚ್ಚುವರಿ ಅಕ್ಕಿ ಖರೀದಿಸಲು FCI ಗೆ ಮೊರೆ ಹೋಗಬೇಕಿದೆ. ಅಲ್ಲಿ ಅಕ್ಕಿ ಲಭ್ಯತೆ ಇಲ್ಲದೇ ಇದ್ದರೆ ಟೆಂಡರ್ ಕರೆಯಬೇಕಾಗಿದೆ.
ಸಭೆಗೆ ಸಿದ್ಧವಾಗುತ್ತಿರುವ ನೂತನ ಸಚಿವರು
ನಾಳೆ(ಬುಧವಾರ) ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಯಲಿದೆ. ಈ ಹಿನ್ನಲೆಯಲ್ಲಿ ನೂತನ ಸಚಿವರು ಸಭೆಗೆ ಸಿದ್ಧವಾಗುತ್ತಿದ್ದಾರೆ. ಗ್ಯಾರಂಟಿ ಅನುಷ್ಠಾನ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆ ಸಚಿವರು ರೆಡಿಯಾಗುತ್ತಿದ್ದಾರೆ. ಗ್ಯಾರಂಟಿ ಜಾರಿಗೊಳಿಸುವ ಮೂರು ಇಲಾಖೆಗಳ ಸಚಿವರ ಜತೆ ಸಿಎಂ ಸಿದ್ದರಾಮಯ್ಯ ಅವರು ಮೀಟಿಂಗ್ ನಡೆಸಲಿದ್ದಾರೆ.
ಗ್ಯಾರಂಟಿ ಬಗ್ಗೆ ಭಾಷಣದಲ್ಲಿ ಹೇಳಿದ್ರೆ ಸಿಎಂ ಅವರನ್ನೇ ಕೇಳಿ, ನನಗೆ ಗೊತ್ತಿಲ್ಲ: ಸಚಿವ ಶಿವಾನಂದ ಪಾಟೀಲ
ಹೀಗಾಗಿ ಇಂದು ಗ್ಯಾರಂಟಿ ಜಾರಿಗೊಳಿಸುವ ಮೂರು ಇಲಾಖೆಗಳ ಸಚಿವರ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದಾರೆ. ಕೆ.ಜೆ.ಜಾರ್ಜ್, ಮುನಿಯಪ್ಪ ಅವರು ವಿಧಾನಸೌಧದಲ್ಲಿ ಸಭೆ ನಡೆಸಿದರೆ, ಅತ್ತ ಸಾರಿಗೆ ಇಲಾಖೆ ಕಚೇರಿಯಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಸಭೆ ನಡೆಸುತ್ತಿದ್ದಾರೆ.
ಇಲಾಖಾವರು ಮಾಹಿತಿ ಸಮೇತ ಸಚಿವರು ನಾಳಿನ ಸಭೆಗೆ ಸಿದ್ಧವಾಗುತ್ತಿದ್ದಾರೆ. ಅನ್ನಭಾಗ್ಯ ಗ್ಯಾರಂಟಿ, ಸಚಿವ ಮುನಿಯಪ್ಪ ಅವರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ವ್ಯಾಪ್ತಿಗೆ ಬರಲಿದೆ, 200 ಯೂನಿಟ್ ಫ್ರೀ ವಿದ್ಯುತ್, ಸಚಿವ ಕೆ.ಜೆ.ಜಾರ್ಜ್ ಅವರ ಇಲಾಖೆ ವ್ಯಾಪ್ತಿಗೆ ಬರಲಿದೆ. ಮಹಿಳೆಯರಿಗೆ ಫ್ರೀ ಬಸ್ ವಿತರಣೆ, ಸಚಿವ ರಾಮಲಿಂಗಾರೆಡ್ಡಿ ಅವರ ಸಾರಿಗೆ ಇಲಾಖೆ ವ್ಯಾಪ್ತಿಗೆ ಬರಲಿದೆ.