Asianet Suvarna News Asianet Suvarna News

Karnataka Rains| ನಾಲ್ಕು ಪಟ್ಟು ಅಧಿಕ ಮಳೆ ಸುರಿಸಿದ ಹಿಂಗಾರು

*   ಬೀದರ್‌ ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ವಾಡಿಕೆಗಿಂತ ಅಧಿಕ ಮಳೆ
*   193 ತಾಲೂಕುಗಳಲ್ಲಿ ಭಾರೀ ಮಳೆ
*   ಮುಂಗಾರಿನ ಕೊರತೆ ಹಿಂಗಾರಿನಲ್ಲಿ ಚುಕ್ತಾ
 

Four Times More Rainfall in Karnataka on Post Monsoon grg
Author
Bengaluru, First Published Nov 21, 2021, 7:52 AM IST

ಬೆಂಗಳೂರು(ನ.21):  ರಾಜ್ಯದಲ್ಲಿ(Karnataka) ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮಾತ್ರ ಹೆಚ್ಚು ಮಳೆ ಸುರಿಸುತ್ತಿದ್ದ ಹಿಂಗಾರು ಮಳೆ(Post Monsoon) ಈ ಬಾರಿ ಇಡೀ ರಾಜ್ಯದಲ್ಲೇ ಭಾರಿ ಪ್ರಮಾಣದಲ್ಲಿ ಅಬ್ಬರಿಸಿದೆ. ನ.12 ರಿಂದ 18ರವರೆಗಿನ ಅವಧಿಯಲ್ಲಿ ವಾಡಿಕೆಗಿಂತ ನಾಲ್ಕು ಪಟ್ಟು ಹೆಚ್ಚು ಮಳೆ(Rain) ಸುರಿದಿದೆ.

ಸಾಮಾನ್ಯವಾಗಿ ನವೆಂಬರ್‌ ಮಧ್ಯ ಭಾಗದಲ್ಲಿ ರಾಜ್ಯದಲ್ಲಿ ಸರಾಸರಿ 1.1 ಸೆಂ.ಮೀ. ಹಿಂಗಾರು ಮಳೆ ಸುರಿಯುತ್ತಿತ್ತು. ಆದರೆ ಈ ಬಾರಿ 5.6 ಸೆಂ.ಮೀ ಮಳೆಯಾಗಿದ್ದು ವಾಡಿಕೆಗಿಂತ ಶೇ.397ರಷ್ಟು ಹೆಚ್ಚು ಮಳೆಯಾಗಿದೆ. ಬಂಗಾಳ ಕೊಲ್ಲಿ(Bay of Bengal) ಮತ್ತು ಅರಬ್ಬಿ ಸಮುದ್ರದಲ್ಲಿನ(Arabian Sea) ವಾಯುಭಾರ ಕುಸಿತ, ಮೇಲ್ಮೈ ಸುಳಿಗಾಳಿ ಮತ್ತು ನಿರ್ಮಾಣವಾಗುತ್ತಿರುವ ಕಡಿಮೆ ಒತ್ತಡ ಪ್ರದೇಶಗಳು ರಾಜ್ಯದಲ್ಲಿ ವ್ಯಾಪಕ ಮಳೆಗೆ ಕಾರಣವಾಗಿವೆ. ರಾಜ್ಯ ಸದ್ಯ ಅತಿ ಹೆಚ್ಚು ಮಳೆ ಪಡೆದ ವಿಭಾಗದಲ್ಲಿದೆ.

ಕಳೆದ ಒಂದು ವಾರದ ಅವಧಿಯಲ್ಲಿ ದಕ್ಷಿಣ ಒಳನಾಡಿನಲ್ಲಿ ಶೇ.654, ಮಲೆನಾಡು ಶೇ.480, ಕರಾವಳಿ ಶೇ.345 ಮತ್ತು ಉತ್ತರ ಒಳನಾಡು ಶೇ.158 ಹೆಚ್ಚು ಮಳೆಯಾಗಿದೆ. ರಾಜ್ಯದ ಒಟ್ಟು 31 ಜಿಲ್ಲೆಯಲ್ಲಿ 28 ಜಿಲ್ಲೆಗಳಲ್ಲಿ ಅತಿ ಹೆಚ್ಚು (ಶೇ.60ಕ್ಕಿಂತ ಹೆಚ್ಚು) ಮತ್ತು ಕೊಪ್ಪಳ(Koppal) ಮತ್ತು ಕಲಬುರಗಿಯಲ್ಲಿ(Kalaburagi) ಹೆಚ್ಚು (ಶೇ.20ರಿಂದ 59) ಮಳೆಯಾಗಿದೆ. ಕೇವಲ ಬೀದರ್‌ನಲ್ಲಿ ಮಾತ್ರ ಅತಿ ಕಡಿಮೆ ಮಳೆಯಾಗಿದ್ದು ಉಳಿದೆಲ್ಲ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ.

Karnataka Rain ಇನ್ನೂ 3 ದಿನ ರಾಜ್ಯಕ್ಕೆ ಎಚ್ಚರಿಕೆ : ಕರಾವಳಿ, ಮಲೆನಾಡಿನಲ್ಲಿ ಭಾರಿ ಮಳೆ

ಇನ್ನು ತಾಲೂಕುಗಳನ್ನು ಪರಿಗಣಿಸಿದರೆ ಕೇವಲ ಹತ್ತು ತಾಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬಿದ್ದಿದೆ. ಉಳಿದ 217 ತಾಲೂಕಿನ ಪೈಕಿ 193 ತಾಲೂಕಲ್ಲಿ ಅತಿ ಭಾರಿ ಮಳೆ ಸುರಿದಿದ್ದು ಉಳಿದ ತಾಲೂಕುಗಳಲ್ಲಿ ವಾಡಿಕೆ ಮತ್ತು ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ.

ಇದೇ ವೇಳೆ ಹಿಂಗಾರು ಋುತು ಪ್ರಾರಂಭಗೊಳ್ಳುವ ಅಕ್ಟೋಬರ್‌ 1 ರಿಂದ ನವೆಂಬರ್‌ 18ರ ತನಕ ವಾಡಿಕೆಯ 16.3 ಸೆಂ.ಮೀ. ಮಳೆ ರಾಜ್ಯದಲ್ಲಿ ಸುರಿಯುತ್ತಿತ್ತು, ಆದರೆ ಈ ಬಾರಿ 26.3 ಸೆಂ.ಮೀ ಮಳೆ ಪಡೆದಿದೆ. ವಾಡಿಕೆಗಿಂತ ಶೇ.62ರಷ್ಟುಹೆಚ್ಚು ಮಳೆ ಬಿದ್ದಿದೆ. ಉತ್ತರ ಒಳನಾಡಿನಲ್ಲಿ ಮಳೆ ಶೇ. 17ರಷ್ಟುಕೊರತೆಯಾಗಿದ್ದರೂ, ದಕ್ಷಿಣ ಒಳನಾಡು (ಶೇ. 115), ಮಲೆನಾಡು (ಶೇ.101) ಮತ್ತು ಕರಾವಳಿ (ಶೇ.99) ಹೆಚ್ಚು ಮಳೆ ಬಿದ್ದಿದೆ.

1800 ಕೆರೆಗಳು 50% ಭರ್ತಿ

ರಾಜ್ಯದ 3,639 ಸಣ್ಣ ನೀರಾವರಿ ಕೆರೆಗಳಲ್ಲಿ(Lake) ಶೇ. 49ಕ್ಕಿಂತ ಹೆಚ್ಚು ಕೆರೆಗಳು ತಮ್ಮ ಸಾಮರ್ಥ್ಯದ ಅರ್ಧಕ್ಕಿಂತ ಹೆಚ್ಚು ತುಂಬಿವೆ. ಶೇ.11 ಕೆರೆಗಳು ಇನ್ನೂ ಖಾಲಿ ಅಥವಾ ಅಲ್ಪ ಪ್ರಮಾಣದಲ್ಲಿ ನೀರನ್ನು ಹೊಂದಿವೆ. ಮುಂಗಾರು ಅಂತ್ಯದ ಸೆಪ್ಟೆಂಬರ್‌ 30ಕ್ಕೆ ಶೇ.45 ಕೆರೆಗಳು ಅರ್ಧ ತುಂಬಿದ್ದರೆ, ಶೇ.20 ಕೆರೆಗಳು ಖಾಲಿ ಅಥವಾ ಅಲ್ಪ ಪ್ರಮಾಣದ ನೀರನ್ನು ಹೊಂದಿದ್ದವು.

ಮುಂಗಾರಿನ ಕೊರತೆ ಹಿಂಗಾರಿನಲ್ಲಿ ಚುಕ್ತಾ

ರಾಜ್ಯದಲ್ಲಿ ಮುಂಗಾರು ಅವಧಿಯಲ್ಲಿ ಕೊರತೆಯಾಗಿದ್ದ ಮಳೆಯ ಪ್ರಮಾಣವನ್ನು ಹಿಂಗಾರು ಮಳೆ ಭರ್ತಿ ಮಾಡಿದೆ. ರಾಜ್ಯದಲ್ಲಿ ಮುಂಗಾರು(Monsoon) ಋುತುವಿನ ಜೂನ್‌ನಿಂದ ಸೆಪ್ಟೆಂಬರ್‌ ತನಕ ಹೆಚ್ಚು ಮಳೆ ಪಡೆಯುವ ಅವಧಿಯಾಗಿದೆ. ಈ ಸಮಯದಲ್ಲಿ ರಾಜ್ಯ ಶೇ.8ರಷ್ಟು ಮಳೆ ಕಡಿಮೆಯಾಗಿತ್ತು. ಮಲೆನಾಡು(Malenadu)ಮತ್ತು ಕರಾವಳಿಯಲ್ಲಿ(Coastal) ಕಡಿಮೆ ಮಳೆಯಾಗಿದ್ದರೆ, ಒಳನಾಡಿನಲ್ಲಿ ಮಳೆ ಪ್ರಮಾಣ ತುಸು ಹೆಚ್ಚಿತ್ತು. ಆದರೆ ಹಿಂಗಾರಿನಲ್ಲಿ ಉತ್ತರ ಒಳನಾಡಿನಲ್ಲಿ ಶೇ.3ರಷ್ಟುಮಳೆ ಕಡಿಮೆ ಆಗಿದೆ. ಆದರೆ ಉಳಿದ ಭಾಗದಲ್ಲಿ ವಾಡಿಕೆಗಿಂತ ಎರಡು ಪಟ್ಟು ಹೆಚ್ಚು (ದಕ್ಷಿಣ ಒಳನಾಡಿನಲ್ಲಿ ಶೇ.145, ಕರಾವಳಿ ಶೇ.112, ಮಲೆನಾಡು ಶೇ.111) ಮಳೆಯಾಗಿದೆ. ಜನವರಿಯಿಂದ ನವೆಂಬರ್‌ 20ರ ತನಕ 113.6 ಸೆಂ.ಮೀ ವಾಡಿಕೆ ಮಳೆ ಇರುವ ರಾಜ್ಯಕ್ಕೆ ಈಗಾಗಲೇ 129.2 ಸೆಂ.ಮೀ ಮಳೆ ಸುರಿದಿದೆ.
 

Follow Us:
Download App:
  • android
  • ios