*  ನೀರಿನಲ್ಲಿ ಮುಳುಗಿದ ಕಾರು, ಬೈಕ್‌ಗಳು*  ರಸ್ತೆಯಲ್ಲಿ ನಿಂತ ಮಳೆ ನೀರಿನಿಂದಾಗಿ ವಾಹನ ಸಂಚಾರ ವ್ಯವಸ್ಥೆ ಅಸ್ತವ್ಯಸ್ತ*  ಸಿಡಿಲು ಬಡಿದು ಗದಗದಲ್ಲಿ 3, ಹಾನಗಲ್‌ನಲ್ಲಿ 1 ಸಾವು 

ಬೆಂಗಳೂರು(ಏ.17): ರಾಜ್ಯದ(Karnataka) ವಿವಿಧೆಡೆ ಬೇಸಿಗೆ ಮಳೆಯ(Rain) ಆರ್ಭಟ ಮುಂದುವರೆದಿದ್ದು, 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಗುಡುಗು-ಸಿಡಿಲು, ಬಿರುಗಾಳಿ ಸಹಿತ ಭಾರೀ ವರ್ಷಧಾರೆಯಾಗಿದೆ. ಶನಿವಾರ ಸಿಡಿಲು ಬಡಿದು ಗದಗದಲ್ಲಿ ಮೂವರು ಹಾಗೂ ಹಾವೇರಿಯಲ್ಲಿ ಓರ್ವ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ(Death). ಹಲವೆಡೆ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜನರು ಪರಿತಪಿಸಿದ್ದು, ಅನೇಕ ಕಡೆ ಮರ, ವಿದ್ಯುತ್‌ ಕಂಬಗಳು ಉರುಳಿ ಬಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

ಬೆಂಗಳೂರು, ಮಂಡ್ಯ, ದಾವಣಗೆರೆ, ಹಾಸನ, ಶಿವಮೊಗ್ಗ, ಬೆಳಗಾವಿ, ಧಾರವಾಡ-ಹುಬ್ಬಳ್ಳಿ, ಹಾವೇರಿ, ಗದಗ, ಉತ್ತರ ಕನ್ನಡದಲ್ಲಿ ಜೋರು ಮಳೆಯಾಗಿದ್ದು, ಚಿಕ್ಕಮಗಳೂರು, ಕೊಡಗು, ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಸಾಧಾರಣ ಮಳೆಯಾಗಿದೆ.

ಅನ್ನದಾತರು, ಜನರಿಗೆ ಸಂತಸದ ಸುದ್ದಿ: ಸತತ 4ನೇ ವರ್ಷವೂ ಉತ್ತಮ ಮುಂಗಾರು: ಐಎಂಡಿ!

ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಪರಸಾಪುರ ಗ್ರಾಮದಲ್ಲಿ ದನ ಮೇಯಿಸುತ್ತಿದ್ದ ಮುರಗೇಶ ಹೊಸಮನಿ (40), ಮಾಬೂಸಾಬ ದೊಡ್ಡಮನಿ (50) ಹಾಗೂ ಗದಗ ತಾಲೂಕಿನ ಡಂಬಳ ಹೋಬಳಿಯ ವೆಂಕಟಾಪರ ಗ್ರಾಮದ ಕುರಿಗಾಹಿ ಹನುಮಪ್ಪ ಸಿದ್ದಪ್ಪ ಮನ್ನಾಪೂರ ಸಿಡಿಲು ಬಡಿದು ಮೃತರಾಗಿದ್ದಾರೆ. ಇದೇ ಸಂದರ್ಭದಲ್ಲಿ ಮೂರು ಕುರಿಗಳು ಸಿಡಿಲಿಗೆ ಬಲಿಯಾಗಿವೆ.

ಭಾರೀ ಮಳೆಯ ಕಾರಣ ಹಾನಗಲ್‌ ಪಟ್ಟಣದಲ್ಲಿ ಮರದ ಕೆಳಗೆ ಆಶ್ರಯ ಪಡೆದಿದ್ದ ಟೈಲ್ಸ್‌ ಕಾರ್ಮಿಕ ವೀರೇಶ ಹೊಸಮನಿ (25) ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಇದೇ ವೇಳೆ ಇನ್ನಿಬ್ಬರು ತೀವ್ರ ಅಸ್ವಸ್ಥವಾಗಿದ್ದು, ಹುಬ್ಬಳ್ಳಿಯ ಕಿಮ್ಸ್‌ಗೆ ಸೇರಿಸಲಾಗಿದೆ.

ಶಿವಮೊಗ್ಗದಲ್ಲಿ ಮನೆ ಮೇಲೆ ಮರಬಿದ್ದಿದ್ದು, ಮನೆಯಲ್ಲಿದ್ದರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಳೆಯಿಂದಾಗಿ ಶಿರಸಿಯ ಮಂಜುಗುಣಿ ವೆಂಕಟರಮಣ ಸ್ವಾಮಿ ರಥೋತ್ಸವಕ್ಕೂ ಅಡಚಣೆ ಉಂಟಾಯಿತು.

2 ತಾಸು ಮಳೆಗೆ ನದಿಯಂತಾದ ರಸ್ತೆಗಳು!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ(Bengaluru) ಶನಿವಾರ ರಾತ್ರಿ ಸತತ ಎರಡು ಗಂಟೆ ಉಧೋ ಎಂದು ಸುರಿದ ಮುಂಗಾರು ಪೂರ್ವ ಭಾರೀ ಮಳೆಗೆ ನಗರದ ವಿವಿಧ ರಸ್ತೆಗಳಲ್ಲಿ 50ಕ್ಕೂ ಹೆಚ್ಚು ಮರ ಹಾಗೂ ಕೊಂಬೆಗಳು ಧರೆಗುರುಳಿವೆ. ಕೆಲವೆಡೆ ರಸ್ತೆಗಳಲ್ಲಿ ನಿಲ್ಲಿಸಿದ್ದ ವಾಹನಗಳು ಮುಳುಗಡೆಯಾಗಿವೆ. ವಿವಿಧ ಪ್ರದೇಶಗಳಲ್ಲಿ ಮನೆಗಳಿಗೆ ಮತ್ತೆ ನೀರು ನುಗ್ಗಿದ್ದು ಅಲ್ಲಿನ ಜನಜೀನವ ಅಸ್ತವ್ಯಸ್ತಗೊಂಡಿದೆ

ಕೆ.ಪಿ.ಅಗ್ರಹಾರ, ಮಹಾಲಕ್ಷ್ಮಿ ಲೇಔಟ್‌, ಗೋವಿಂದರಾಜನಗರ, ಮಲ್ಲೇಶ್ವರ, ರಾಜಾಜಿನಗರ, ಮಹಾಲಕ್ಷ್ಮಿಪುರ, ಮನುವನ, ಆರ್‌ಪಿಸಿ ಲೇಔಟ್‌ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಅಲ್ಲಿನ ನಿವಾಸಿಗಳು ರಾತ್ರಿ ಇಡೀ ಜಾಗರಣೆ ಮಾಡುವಂತಾಯಿತು. ಪ್ರತೀ ವರ್ಷ ಮಳೆ ಬಿದ್ದಾಗಲೂ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದರೂ ಸರ್ಕಾರ, ಬಿಬಿಎಂಪಿ(BBMP) ಅಧಿಕಾರಿಗಳು ಮಾತ್ರ ಸಮಸ್ಯೆ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಳ್ಳದೆ ನಮ್ಮ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ರಾತ್ರಿ ಧಾರಾಕಾರವಾಗಿ ಸುರಿದು ವಿವಿಧ ಪ್ರದೇಶಗಳಲ್ಲಿ 300ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅಲ್ಲಿನ ಜನರು ಹೈರಾಣಾಗಿದ್ದರು. ಬಳಿಕ ಶುಕ್ರವಾರ ಕೊಂಚ ಬಿಡುವು ನೀಡಿದ್ದ ಮಳೆರಾಯ ಮತ್ತೆ ಶನಿವಾರ ಅಬ್ಬರಿಸಿದ್ದು ಹಲವು ಮನೆಗಳಿಗೆ ನೀರು ನುಗ್ಗಿದೆ. ಮೆಜೆಸ್ಟಿಕ್‌, ಕೆ.ಆರ್‌.ಮಾರುಕಟ್ಟೆ, ಚಿಕ್ಕಪೇಟೆ, ಬಿವಿಕೆ ಅಯ್ಯಂಗಾರ್‌ ರಸ್ತೆ, ಸುಲ್ತಾನ್‌ ಪೇಟೆ, ಮನುವನ, ಆರ್‌ಪಿಸಿ ಲೇಔಟ್‌, ಗೋವಿಂದರಾಜನಗರ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್‌ ಸೇರಿದಂತೆ ವಿವಿಧೆಡೆ ರಸ್ತೆಗಳು ನದಿಯಂತಾಗಿ ಹರಿದವು. ಇದರಿಂದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿ ಕೆಲ ಕಾಲ ಸಂಚಾರ ದಟ್ಟಣೆಯುಂಟಾಗಿತ್ತು.

ರಸ್ತೆಗಳಲ್ಲದೆ ಮೆಜೆಸ್ಟಿಕ್‌ ಬಸ್‌ ನಿಲ್ದಾಣ, ಓಕಳೀಪುರ ಜಂಕ್ಷನ್‌, ಶಿವಾನಂದ ವೃತ್ತದ ಕೆಳಸೇತುವೆ, ನಾಯಂಡಳ್ಳಿ ಜಂಕ್ಷನ್‌, ವಿಂಡ್ಸರ್‌ ಮ್ಯಾನರ್‌, ಆನಂದ್‌ರಾವ್‌ ವೃತ್ತ, ಚಾಲುಕ್ಯ ವೃತ್ತ, ಎಂ.ಜಿ.ರಸ್ತೆಯ ಮಹಾತ್ಮಗಾಂಧಿ ಪ್ರತಿಮೆ ಬಳಿ, ಶಿವಾಜಿ ನಗರದ ಬಸ್‌ ನಿಲ್ದಾಣ, ಮೈಸೂರು ರಸ್ತೆಯ ಗಾಳಿ ಆಂಜನೇಯ ದೇವಸ್ಥಾನ ಮುಂಭಾಗ, ಹೊಸಕೆರೆ ಹಳ್ಳಿ ಕ್ರಾಸ್‌ ಸೇರಿದಂತೆ ಹಲವೆಡೆ ಜಲಾವೃತಗೊಂಡು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಸುಲ್ತಾನ್‌ ಪೇಟೆಯಲ್ಲಿ ವಾಹನಗಳ ಮುಳುಗಡೆ

ಸುಲ್ತಾನ್‌ ಪೇಟೆಯ ರಾಜಕಾಲುವೆ ಪಕ್ಕದ ಮುಖ್ಯರಸ್ತೆಯು ಮಳೆಯಿಂದ ಸಂಪೂರ್ಣ ಜಲಾವೃತಗೊಂಡ ಪರಿಣಾಮ ರಸ್ತೆಯಲ್ಲಿ ನಿಲ್ಲಿಸಿದ್ದ ದ್ವಿಚಕ್ರವಾಹನಗಳು, ಕಾರು, ಆಟೋ ಸೇರಿದಂತೆ ಇತರೆ ವಾಹನಗಳು ಮುಳುಗಡೆಯಾಗಿದ್ದವು. ಸವಾರರು ನೀರು ಕಡಿಮೆಯಾಗುವವರೆಗೂ ತಮ್ಮ ವಾಹನಗಳನ್ನು ತೆಗೆದುಕೊಳ್ಳಲಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಫ್ಲೈಓವರ್‌ ಮೇಲೂ ನೀರು

ಮೈಸೂರು ರಸ್ತೆಯ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ, ನಾಯಂಡಹಳ್ಳಿ ಮೇಲ್ಸೇತುವೆ, ಶಾಂತಿನಗರ ಬಳಿಯ ಮೇಲ್ಸೇತುವೆ ಸೇರಿದಂತೆ ವಿವಿಧ ಮೇಲ್ಸೇತುವೆಗಳಲ್ಲೂ ಭಾರೀ ಪ್ರಮಾಣದ ನೀರು ನಿಂತ ಪರಿಣಾಮ ವಾಹನಗಳು ಸಂಚರಿಸುವಾಗ ನೀರು ಕಾರಂಜಿಯಂತೆ ಚಿಮ್ಮಿ, ಅಕ್ಕಪಕ್ಕದ ದ್ವಿಚಕ್ರವಾಹನಗಳ ಸವಾರರು ತೋಯ್ದು ಹೋಗುವಂತೆ ಮಾಡಿತು. ಮೇಲ್ಸೇತುವೆಯಲ್ಲಿ ಸಂಗ್ರಹವಾದ ನೀರು ಹರಿಯಲು ಇದ್ದ ಜಾಗ ಬ್ಲಾಕ್‌ ಆಗಿದ್ದರಿಂದ ಮೇಲ್ಸೇತುವೆಗಳು ಕೆರೆಯಂತಾಗಿದ್ದವು. ಸಾರ್ವಜನಿಕರೇ ನೀರು ತೆರವುಗೊಳಿಸಿದ ಕಾರ್ಯ ನಡೆಯಿತು.

ಬೆಂಗಳೂರಿನಲ್ಲಿ ಧಾರಾಕಾರ ಮಳೆ : 10ಕ್ಕೂ ಹೆಚ್ಚು ಮನೆಗಳು ಜಲಾವೃತ

55 ಮರ-ಕೊಂಬೆ ಮರ ಧರೆಗೆ

ಮಹದೇವಪುರದ ಸರ್ಜಾಪುರದ ಮುಖ್ಯರಸ್ತೆ, ಲಗ್ಗೆರೆಯ ಸಾಯಿಬಾಬಾ ದೇವಸ್ಥಾನದ ಬಳಿ, ತ್ಯಾಗರಾಜನಗರ ಇಎಸ್‌ಐ ಆಸ್ಪತ್ರೆ, ನಾಗದೇವನಹಳ್ಳಿಯ ಕಲ್ಯಾಣ ಮಂಟಪ ಬಳಿ, ಕೆಂಗೇರಿಯ ನ್ಯಾಷನಲ್‌ ಪಬ್ಲಿಕ್‌ ಶಾಲೆ ಹತ್ತಿರ, ಹನುಮಂತನಗರ, ರಾಜರಾಜೇಶ್ವರಿ ನಗರ, ರಾಜಾಜಿನಗರ, ಮಹಾಲಕ್ಷ್ಮೇನಗರ, ಗೋವಿಂದರಾಜನಗರ ಸೇರಿದಂತೆ ವಿವಿಧೆಡೆ 20ಕ್ಕೂ ಹೆಚ್ಚು ಮರ ಹಾಗೂ 35ಕ್ಕೂ ಹೆಚ್ಚು ರೆಂಬೆ, ಕೊಂಬೆಗಳು ಧರೆಗುರುಳಿವೆ.

ಇಂದೂ ಭಾರಿ ಮಳೆ ಸಾಧ್ಯತೆ

ಭಾನುವಾರವೂ ನಗರದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಕೇಂದ್ರ ನೀಡಿದೆ. ಕಳೆದ ನಾಲ್ಕು ದಿನಗಳಿಗೆ ಹೋಲಿಸಿದರೆ ಭಾನುವಾರ ಹೆಚ್ಚು ಮಳೆಯಾಗುವ ಸೂಚನೆಗಳಿವೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯದ ಹವಾಮಾನ ವಿದ್ಯಮಾನಗಳನ್ನು ಗಮನಿಸಿದರೆ ನಗರದಲ್ಲಿ ಏಪ್ರಿಲ್‌ 20ರವರೆಗೆ ಸಂಜೆ ಮಳೆಯಾಗುವ ಎಲ್ಲ ಸಾಧ್ಯತೆಗಳಿವೆ. ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ(Temperature) ಕ್ರಮವಾಗಿ 33 ಮತ್ತು 21 ಡಿಗ್ರಿ ಸೆಲ್ಸಿಯಸ್‌ ದಾಖಲಾಗುವ ಸಂಭವವಿವೆ ಎಂದು ಹವಾಮಾನ ಇಲಾಖೆ(Department of Meteorology) ತಿಳಿಸಿದೆ.