ಬೆಂಗಳೂರಿನಲ್ಲಿ ಧಾರಾಕಾರ ಮಳೆ : 10ಕ್ಕೂ ಹೆಚ್ಚು ಮನೆಗಳು ಜಲಾವೃತ
- ಉತ್ತರಹಳ್ಳಿ ವಾಟರ್ ಸಪ್ಲೈ ಬಡಾವಣೆಯ ಮನೆಗಳಿಗೆ ಮಳೆ ನೀರು
- ಹಲವೆಡೆ ಬಿದ್ದ ಮರ, ಮುರಿದ ಕೊಂಬೆಗಳು
- ಬೆಂಗಳೂರಿನಲ್ಲಿ ಧಾರಾಕಾರ ಮಳೆ : 10ಕ್ಕೂ ಹೆಚ್ಚು ಮನೆಗಳು ಜಲಾವೃತ
ಬೆಂಗಳೂರು: ಸತತ ಎರಡನೇ ದಿನ ನಗರದಲ್ಲಿ ಬಿರುಸಿನ ಬೇಸಿಗೆ ಮಳೆಯಾಗಿದೆ. ರಾತ್ರಿ 7.30ರ ಸುಮಾರಿಗೆ ಪ್ರಾರಂಭಗೊಂಡ ಗುಡುಗು ಮತ್ತು ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ನಗರದ ಹಲವೆಡೆ ಮರ ಬಿದ್ದ, ಕೊಂಬೆ ಮುರಿದ ಪ್ರಕರಣಗಳು ವರದಿಯಾಗಿದೆ. ಹಲವು ತಗ್ಗು ಪ್ರದೇಶಗಳಲ್ಲಿ ಇರುವ ಬಡಾವಣೆಗಳಲ್ಲಿ ನೀರು ನಿಂತ ದೂರು ದಾಖಲಾಗಿದೆ. ಉತ್ತರಹಳ್ಳಿಯ (Uttarahalli) ಹೇಮಾವತಿ (Hemavati) ವಾಟರ್ ಸಪ್ಲೈ ಬಡಾವಣೆಯಲ್ಲಿ ನೀರು ನುಗ್ಗಿ ಹತ್ತಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದೆ.
ರಾಜಕಾಲುವೆ ಕಾಮಗಾರಿ ನಡೆಯುತ್ತಿದ್ದ ಕಾರಣ ನೀರನ್ನು ತಡೆ ಹಿಡಿದಿದ್ದ ಹಿನ್ನೆಲೆಯಲ್ಲಿ ಉತ್ತರಹಳ್ಳಿಯ ಹೇಮಾವತಿ ವಾಟರ್ ಸಪ್ಲೈ ನಗರಕ್ಕೆ ನೀರು ನುಗ್ಗಿದ್ದು ಮನೆಯಲ್ಲಿದ್ದ ಸರಕು ಸರಂಜಾಮುಗಳು ನೀರಲ್ಲಿ ಮುಳುಗಿದೆ.
Bengaluru Rain: ರಾಜಧಾನಿಯಲ್ಲಿ ಮಳೆ ಆರ್ಭಟ... ಬಿಸಿಲಿನ ಝಳ ತಣಿಸಲು ಬೇಕಿತ್ತು!
ನಗರದಲ್ಲಿ ಬೆಳಗ್ಗೆಯಿಂದಲೇ ಆಗಾಗ ಮೋಡ ಕವಿದ ವಾತಾವರಣ ಮೂಡುತ್ತಿತ್ತು. ಸಂಜೆ 6ರ ಬಳಿಕ ದಟ್ಟಮೋಡಗಳು ಆವರಿಸಲು ಪ್ರಾರಂಭಿಸಿ ತುಂತುರು ಮಳೆ ಸುರಿಯಲು ಪ್ರಾರಂಭಗೊಂಡಿತ್ತು. ಆದರೆ ರಾತ್ರಿ 7.30ರ ಹೊತ್ತಿಗೆ ಭರ್ಜರಿ ಮಳೆಯಾಗಿದೆ. ಮಳೆಗೆ ನಗರದ ಬಸವನಗುಡಿ (Basavanagudi), ಚಾಮರಾಜಪೇಟೆ (ChamarajaPete), ಬನ್ನೆರುಘಟ್ಟ (Bannerughatta), ಯಶವಂತಪುರದಲ್ಲಿ(Yashawantapura) ಬೃಹತ್ ಗಾತ್ರದ ಮರಗಳು ಉರುಳಿ ಬಿದ್ದಿವೆ. ಉಳಿದಂತೆ ಅನೇಕ ಕಡೆ ಮರದ ಕೊಂಬೆಗಳು ಮುರಿದಿದೆ. ಅಂಡರ್ ಪಾಸ್‌ಗಳಲ್ಲಿ ಮತ್ತು ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತೆ ಆಯಿತು.
ರಾಜಾಜಿ ನಗರ (Rajajinagara), ವಿದ್ಯಾರಣ್ಯಪುರ (Vidhyaranyapura), ಜಯನಗರ (Jayanagara), ಜೆ.ಪಿ.ನಗರ (JP Nagar), ಶೇಷಾದ್ರಿಪುರ, ಶಿವಾನಂದ ಸರ್ಕಲ್, ಮೆಜೆಸ್ಟಿಕ್, ಕೆ.ಆರ್.ಸರ್ಕಲ್, ಶಿವಾಜಿ ನಗರ, ಎಂ.ಜಿ.ರೋಡ್, ಶಾಂತಿ ನಗರ, ಹಲಸೂರು, ಲಕ್ಕಸಂದ್ರ, ಚಾಮರಾಜಪೇಟೆ, ಬಸವನಗುಡಿ, ವಿಜಯ ನಗರ, ಗೋವಿಂದರಾಜ ನಗರ, ಚಂದ್ರಾಲೇ ಔಟ್, ಆರ್.ಟಿ.ನಗರ, ದೊಮ್ಮಲೂರು, ಆರ್.ಆರ್.ನಗರ, ಹೆಮ್ಮಿಗೆಪುರ, ಪೀಣ್ಯ, ಯಶವಂತಪುರ, ಉತ್ತರಹಳ್ಳಿ, ಸಂಪಂಗಿ ರಾಮನಗರದಲ್ಲಿ ಮಳೆಯ ಆರ್ಭಟ ಹೆಚ್ಚಿತ್ತು.
Karnataka Rains: ಕರ್ನಾಟಕದ ಹಲವೆಡೆ ಭಾರೀ ಮಳೆ: ಸಿಡಿಲು ಬಡಿದು ಇಬ್ಬರ ಸಾವು
ನಗರದ ಪ್ರಮುಖ ರಸ್ತೆಗಳಾದ ಮಾಗಡಿ ರಸ್ತೆ ಕಾಪೋರೇಷನ್ ವೃತ್ತ (Corporation Circle), ಎಂ.ಜಿ.ರಸ್ತೆ, ಕೆ.ಜಿ.ರಸ್ತೆ, ಕ್ವಿನ್ಸ್ ರಸ್ತೆ, ಜೆ.ಸಿ.ರೋಡ್, ಡಬಲ್ ರೋಡ್, ಕೆ.ಎಚ್.ರೋಡ್, ವಿಲ್ಸನ್ ಗಾರ್ಡನ್ ಮುಖ್ಯರಸ್ತೆ, ರಾಜಕುಮಾರ್ ರಸ್ತೆ, ವಿಜಯ ನಗರ ಮುಖ್ಯ ರಸ್ತೆ, ಆನಂದರಾವ್ ಸರ್ಕಲ್, ಕೆ.ಆರ್.ಸರ್ಕಲ್, ಶಿವಾನಂದ ಅಂಡರ್‌ಪಾಸ್, ಓಕಳಿಪುರಂ ಅಂಡರ್ ಪಾಸ್, ವಿಂಡ್ಸರ್ ಮ್ಯಾನರ್ ಅಂಡರ್ ಪಾಸ್ ಸೇರಿದಂತೆ ಸಂಪರ್ಕ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು, ಪಾದಚಾರಿಗಳು ಕಿರಿಕಿರಿ ಅನುಭವಿಸಿದರು.
ವಿದ್ಯಾಪೀಠದಲ್ಲಿ ಅತ್ಯಧಿಕ 7.3 ಸೆಂ.ಮೀ. ಮಳೆ
ವಿದ್ಯಾಪೀಠದಲ್ಲಿ ನಗರದಲ್ಲೇ ಅತಿ ಹೆಚ್ಚು 7.3 ಸೆಂ. ಮೀ ಮಳೆಯಾಗಿದೆ. ಸಂಪಂಗಿರಾಮ ನಗರ (Sampangi Ramanagara) 4.9 ಸೆಂ.ಮೀ, ವಿ.ವಿ.ಪುರ 4.5 ಸೆಂ.ಮೀ, ಬೊಮ್ಮನಹಳ್ಳಿ 4.2 ಸೆಂ.ಮೀ, ಬೆಳ್ಳಂದೂರು 4 ಸೆಂ.ಮೀ, ಅಂಜನಾಪುರ 3.6 ಸೆಂ.ಮೀ, ಗಾಳಿ ಆಂಜನೇಯ ದೇವಸ್ಥಾನ 3.7 ಸೆಂ.ಮೀ, ಆರ್.ಆರ್.ನಗರ ಮತ್ತು ಕೋರಮಂಗಲ ತಲಾ 3.4 ಸೆಂ.ಮೀ, ಬಿಇಎಂಎಲ್ ಬಡಾವಣೆ 3.1 ಸೆಂ.ಮೀ ಮಳೆಯಾಗಿದೆ.
ಬುಧವಾರ ಮಳೆಯಾದ್ದರಿಂದ 34 ಡಿಗ್ರಿ ಸೆಲ್ಸಿಯಸ್ ಮೀರಿದ್ದ ನಗರದ ಗರಿಷ್ಠ ಉಷ್ಣತೆ 31.5 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ಗುರುವಾರ ಮಳೆಯ ಸಾಧ್ಯತೆ ಕಡಿಮೆ ಇದ್ದು ನಗರದ ಗರಿಷ್ಠ ಮತ್ತು ಕನಿಷ್ಠ ಉಷ್ಣತೆ ಕ್ರಮವಾಗಿ 34 ಮತ್ತು 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.