ಅನ್ನದಾತರು, ಜನರಿಗೆ ಸಂತಸದ ಸುದ್ದಿ: ಸತತ 4ನೇ ವರ್ಷವೂ ಉತ್ತಮ ಮುಂಗಾರು: ಐಎಂಡಿ!
* ವಾಡಿಕೆಯ ಶೇ.99ರಷ್ಟುಮಳೆ ಅಂದಾಜು
* ಸತತ 4 ವರ್ಷವೂ ಉತ್ತಮ ಮುಂಗಾರು: ಐಎಂಡಿ
* ಅನ್ನದಾತರು, ಜನರಿಗೆ ಸಂತಸದ ಸುದ್ದಿ
ನವದೆಹಲಿ(ಏ,15): ರೈತರು ಹಾಗೂ ದೇಶದ ಜನತೆಗೆ ಸಂತಸದ ಸುದ್ದಿ. ಈ ಬಾರಿ ಸತತ 4ನೇ ವರ್ಷವೂ ಉತ್ತಮ ಮುಂಗಾರು ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
‘ಲಾ ನಿನಾ ವಿದ್ಯಮಾನದ ಪರಿಣಾಮ ಪ್ರಸಕ್ತ ವರ್ಷವೂ ನೈಋುತ್ಯ ಮಾನ್ಸೂನ್ ಅವಧಿ ಭಾರತದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ’ ಎಂದು ಅದು ಗುರುವಾರ ಈ ಸಾಲಿನ ಮುಂಗಾರು ಹಂಗಾಮಿನ ಅಂದಾಜು ಪ್ರಕಟಿಸಿದೆ.
2019, 2020 ಮತ್ತು 2021ರಲ್ಲಿ ಮಾನ್ಸೂನ್ ಅವಧಿಯ ನಾಲ್ಕು ತಿಂಗಳಲ್ಲಿ ಭಾರತದಲ್ಲಿ ಸಾಮಾನ್ಯ ಮಳೆಯಾಗಿತ್ತು. 2022ರಲ್ಲಿ ವಾಡಿಕೆಯ ಶೇ.99ರಷ್ಟುಮಳೆ ಸುರಿಯುವ ಸಾಧ್ಯತೆ ಶೇ.40ರಷ್ಟಿದ್ದು, 87 ಸೆಂ.ಮೀ. ದೀರ್ಘಾವಧಿ ಸರಾಸರಿ ಮಳೆ ಸುರಿಯಲಿದೆ. ಇದು ಉತ್ತಮ ಮಳೆ ಸುರಿಯುವ ಸೂಚಕ ಎಂದು ಅದು ತಿಳಿಸಿದೆ. ವಾಡಿಕೆಯ ಶೇ.96ರಿಂದ ಶೇ.104ರವರೆಗೆ ಸುರಿಯುವ ಮಳೆಗೆ ಉತ್ತಮ ಮಳೆ ಎನ್ನುತ್ತಾರೆ.
ಇನ್ನು ವಾಡಿಕೆಗಿಂತ ಹೆಚ್ಚು (ಶೇ.104ರಿಂದ ಶೇ.110) ಮಳೆ ಸುರಿವ ಸಾಧ್ಯತೆ ಶೇ.15ರಷ್ಟುಹಾಗೂ ಅತಿ ಭಾರೀ ಮಳೆ (ಶೇ.110ಕ್ಕಿಂತ ಹೆಚ್ಚು) ಸುರಿವ ಸಾಧ್ಯತೆ ಶೇ.5ರಷ್ಟಿದೆ. ವಾಡಿಕೆಗಿಂತ ಕಡಿಮೆ ಮಳೆ (ಶೇ.90ರಿಂದ ಶೇ.96) ಸುರಿವ ಸಾಧ್ಯತೆ ಶೇ.26 ಹಾಗೂ ಹಾಗೂ ಮಳೆ ಕೊರತೆ (ಶೇ.90ಕ್ಕಿಂತ ಕಡಿಮೆ) ಆಗಿವ ಸಾಧ್ಯತೆ ಶೇ.14ರಷ್ಟುಮಾತ್ರವಿದೆ ಎಂದು ಅದು ವಿವರಿಸಿದೆ.
ದೇಶದ ಮಧ್ಯ ಭಾಗ, ಹಿಮಾಲಯದ ತಪ್ಪಲಿನಲ್ಲಿ ಹಾಗೂ ವಾಯವ್ಯ ಭಾಗದಲ್ಲಿ ಸಹ ವಾಡಿಕೆಗಿಂತ ಹೆಚ್ಚು ಮಳೆ ಬೀಳುವುದು. ದೇಶದ ಈಶಾನ್ಯ ಹಾಗೂ ವಾಯವ್ಯ ಭಾಗದ ಕೆಲ ಪ್ರದೇಶಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.