ಡಿಕೆ ಶಿವಕುಮಾರ ಮೇಲೆ ರಾಜಣ್ಣಂಗೆ ಪ್ರೀತಿ ಜಾಸ್ತಿ, ಪೆಟ್ಟು ಬಿದ್ದಷ್ಟು ಡಿಕೆಶಿಗೆ ಒಳಿತಾಗುವುದು: ಡಿಕೆ ಸುರೇಶ್
ಸಚಿವ ಕೆ.ಎನ್. ರಾಜಣ್ಣ ಸೇರಿದಂತೆ ಎಲ್ಲರಿಗೂ ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಉತ್ತಮ ಭಾವನೆಯಿದ್ದು, ಎಲ್ಲರೂ ಸೇರಿ ಅವರಿಗೆ ಒಳ್ಳೆಯದನ್ನೇ ಬಯಸುತ್ತಿದ್ದಾರೆ. ಕಲ್ಲಿಗೆ ಪೆಟ್ಟು ಬಿದ್ದಾಗಲೇ ಶಿಲೆಯಾಗಿ ಮಾರ್ಪಡುತ್ತದೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ತಿಳಿಸಿದ್ದಾರೆ.

ಬೆಂಗಳೂರು (ಫೆ.19): ಸಚಿವ ಕೆ.ಎನ್. ರಾಜಣ್ಣ ಸೇರಿದಂತೆ ಎಲ್ಲರಿಗೂ ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಉತ್ತಮ ಭಾವನೆಯಿದೆ. ಹೀಗಾಗಿ ಎಲ್ಲರೂ ಅವರ ಬಗ್ಗೆ ಮಾತನಾಡುತ್ತಾರೆ. ಎಲ್ಲರೂ ಸೇರಿ ಡಿ.ಕೆ. ಶಿವಕುಮಾರ್ ಅವರಿಗೆ ಒಳ್ಳೆಯದನ್ನೇ ಬಯಸುತ್ತಿದ್ದು, ಕಲ್ಲಿಗೆ ಪೆಟ್ಟು ಬಿದ್ದಾಗಲೇ ಶಿಲೆಯಾಗಿ ಮಾರ್ಪಡುತ್ತದೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ತಿಳಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಎಲ್ಲರೂ ಒಳ್ಳೆಯದನ್ನೇ ಬಯಸುತ್ತಿದ್ದಾರೆ. ಅದಕ್ಕೆ ಸಚಿವ ರಾಜಣ್ಣ ಅವರೂ ಹೊರತಲ್ಲ. ರಾಜಣ್ಣ ಅವರಿಗೆ ಡಿ.ಕೆ. ಶಿವಕುಮಾರ್ ಮೇಲೆ ಗೌರವ, ಪ್ರೀತಿ ಜಾಸ್ತಿಯಿದೆ. ಹೀಗಾಗಿ ಅವರ ಬಗ್ಗೆ ಮಾತನಾಡುತ್ತಾರೆ. ಯಾರಿಗಾದರೂ ಒಳ್ಳೆಯದಾಗಬೇಕಾದರೆ ಹತ್ತಾರು ಜನರ ಪೆಟ್ಟು ಬೀಳಬೇಕು. ಅದನ್ನು ತಪ್ಪಾಗಿ ತಿಳಿಯಬಾರದು. ಎಷ್ಟು ಪೆಟ್ಟು ಬೀಳುತ್ತದೆಯೋ ಅಷ್ಟು ಒಳ್ಳೆಯ ಶಿಲೆಯಾಗಿ ಹೊರಹೊಮ್ಮುತ್ತಾರೆ ಎಂದರು.
ರಾಜಣ್ಣ ಅವರ ಮಾತಿನಿಂದ ಪಕ್ಷಕ್ಕೆ ಮುಜುಗರವಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಸುರೇಶ್, ಆ ಬಗ್ಗೆ ನನಗೆ ಗೊತ್ತಿಲ್ಲ. ಎಐಸಿಸಿ ಅಧ್ಯಕ್ಷರು, ಮುಖ್ಯಮಂತ್ರಿಗಳು ಹಾಗೂ ರಾಜ್ಯದ ಉಸ್ತುವಾರಿಗಳು ಅದನ್ನು ಹೇಳಬೇಕು. ಹೀಗಾಗಿ ಮಾಧ್ಯಮದವರು ಅವರನ್ನೇ ಕೇಳಬೇಕು. ಅಲ್ಲದೆ, ಕೆಪಿಸಿಸಿ ಕಾರ್ಯಾಧ್ಯಕ್ಷರಿಗೆ ಕೊಂಬಿದೆಯೇ ಎಂದು ರಾಜಣ್ಣ ಅವರು ಹೇಳಿದ್ದಾರೆ. ಅವರಿಗೆ ಕೊಂಬಿದೆಯೇ ಅಥವಾ ಇಲ್ಲವೇ ಎಂಬುದನ್ನು ಪಕ್ಷ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹಠ ಹಿಡಿದಿಲ್ಲ, ರಿಕ್ವೆಸ್ಟ್ ಅಷ್ಟೇ: ಸತೀಶ್ ಜಾರಕಿಹೊಳಿ
ಖಾಲಿ ಇಲ್ಲದ ಹುದ್ದೆಗೆ ಚರ್ಚೆ ಬೇಡ:
ಮುಖ್ಯಮಂತ್ರಿ ಬದಲಾವಣೆ ಸಂದರ್ಭದಲ್ಲಿ ಶಾಸಕರ ಅಭಿಪ್ರಾಯ ಪಡೆಯಬೇಕು ಎಂದು ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ. ಸುರೇಶ್, ಆ ಬಗ್ಗೆ ಹೈಕಮಾಂಡ್ ನಾಯಕರನ್ನು ಕೇಳಬೇಕು. ಈಗ ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ. ಖಾಲಿ ಇಲ್ಲದ ಸ್ಥಾನಕ್ಕೆ ಚರ್ಚೆ ಮಾಡುವುದು ಅನಾವಶ್ಯಕ. ಈ ಬಗ್ಗೆ ಚರ್ಚೆ ಹುಟ್ಟು ಹಾಕಿದ್ದು ಯಾರು ಎಂಬುದು ನನಗೆ ತಿಳಿದಿಲ್ಲ ಎಂದರು.
ಗೃಹ ಸಚಿವ ಡಾ. ಜಿ.ಪರಮೇಶ್ವರ್ ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಭೇಟಿ ಮಾಡುತ್ತಿರುವ ಕುರಿತು ಉತ್ತರಿಸಿ, ದೆಹಲಿಗೆ ಹೋದವರೆಲ್ಲರೂ ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತಾರೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಡಾ. ಪರಮೇಶ್ವರ್ ಸೇರಿದಂತೆ ಇನ್ನಿತರ ಸಚಿವರು ದೆಹಲಿಗೆ ಆಗಾಗ್ಗೆ ಭೇಟಿ ನೀಡುತ್ತಾರೆ. ತಮ್ಮ ಇಲಾಖೆಯ ಕೆಲಸಗಳಿಗೆ ಹೋಗುತ್ತಿರುತ್ತಾರೆ. ಆಗ ಪಕ್ಷದ ನಾಯಕರನ್ನು ಭೇಟಿಯಾಗುವುದು ಸಹಜ ಎಂದು ಹೇಳಿದರು.
ಇದನ್ನೂ ಓದಿ: ಎಚ್ಚರಿಕೆ ಗಿಚ್ಚರಿಕೆ ಎಲ್ಲ ನಡೆಯಲ್ಲ, ಡಿಸಿಎಂ ಸ್ಥಾನಕ್ಕೆ ಕಿರೀಟ ಇಲ್ಲ: ಡಿಕೆಶಿಗೆ ಸಚಿವ ರಾಜಣ್ಣ ತಿರುಗೇಟು
ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ
ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ. ಸುರೇಶ್, ನಾನು ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದೇನೆ. ಜನರು ನನಗೆ ವಿಶ್ರಾಂತಿ ನೀಡಿದ್ದಾರೆ. ನಾನು ಚುನಾವಣೆಗೆ ನಿಲ್ಲುವ, ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದರು.