ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹಠ ಹಿಡಿದಿಲ್ಲ, ರಿಕ್ವೆಸ್ಟ್ ಅಷ್ಟೇ: ಸತೀಶ್ ಜಾರಕಿಹೊಳಿ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಗೆ ನಮ್ಮದೇನೂ ಹಠವಿಲ್ಲ, ಕೇವಲ ಒಂದು ಮನವಿ ಮಾತ್ರ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಹೈಕಮಾಂಡ್ ಬಳಿ ನಮ್ಮ ವಿಚಾರ ಹೇಳಲು ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರೂ ಸ್ವತಂತ್ರರಿದ್ದಾರೆ ಎಂದಿದ್ದಾರೆ.

ಮಂಗಳೂರು (ಫೆ.19): ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಗೆ ನಮ್ಮದೇನೂ ಹಠ ಇಲ್ಲ, ರಿಕ್ವೆಸ್ಟ್ ಮಾತ್ರ. ನಾವು ಹೋಗಿ ಹೈಕಮಾಂಡ್ ಬಳಿ ಪ್ರಾರ್ಥನೆ ಮಾಡೋದಷ್ಟೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ಬಳಿ ನಮ್ಮ ವಿಚಾರ ಹೇಳಲು ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರೂ ಸ್ವತಂತ್ರರಿದ್ದಾರೆ ಎಂದು ಹೇಳಿದರು.
ರಾಜಣ್ಣ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಕೆ.ಸಿ. ಚಂದ್ರಶೇಖರ್ ಅವರು ಹೈಕಮಾಂಡ್‌ಗೆ ದೂರು ನೀಡಿದ ಕುರಿತು ಪ್ರತಿಕ್ರಿಯಿಸಿದ ಜಾರಕಿಹೊಳಿ, ಕಾರ್ಯಾಧ್ಯಕ್ಷರು ಇಲ್ಲೇ ಇರುತ್ತಾರೆ. ರಾಜಣ್ಣ ಅವರನ್ನು ಕರೆಸಿ ಚರ್ಚೆ ನಡೆಸಿ, ಇಲ್ಲಿಯೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಿತ್ತು. ದೆಹಲಿಗೆ ಹೋಗುವ ಅಗತ್ಯ ಇರಲಿಲ್ಲ. ಕಾರ್ಯಾಧ್ಯಕ್ಷರ ಅಧೀನದಲ್ಲೇ ರಾಜಣ್ಣ ಇರೋದಲ್ವಾ ಎಂದರು.
ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯಲಿ ಎಂದು ಡಿಕೆ ಶಿವಕುಮಾರ್ ಅವರೇ ಹೇಳಿದ ಬಳಿಕ ಈ ಕುರಿತು ಚರ್ಚೆ ಮಾಡುವ ಅಗತ್ಯವೇ ಬರಲ್ಲ ಎಂದು ಹೇಳಿದರು.ದಲಿತ ಸಮಾವೇಶ ಇಲ್ಲ:
ಸದ್ಯಕ್ಕೆ ದಲಿತ ಸಮಾವೇಶ ನಡೆಸುವ ಯೋಚನೆ ಇಲ್ಲ ಎಂದು ಹೇಳಿದ ಸತೀಶ್ ಜಾರಕಿಹೊಳಿ, ಗೃಹ ಸಚಿವ ಡಾ.ಜಿ. ಪರಮೇಶ್ವರ್ ನೇತೃತ್ವದ ಸಮಾವೇಶ ಯಾವಾಗ ನಡೆಯುತ್ತದೆಯೋ ಸ್ಪಷ್ಟವಿಲ್ಲ. ಆ ಬಗ್ಗೆ ಅವರೇ ಮಾಹಿತಿ ನೀಡಲಿದ್ದಾರೆ. ಆದರೆ ದಲಿತ ಸಮಾವೇಶ ಇಲ್ಲವೇ ಇಲ್ಲ ಎಂದರು.ಗೃಹ ಸಚಿವರ ದೆಹಲಿ ಭೇಟಿ ವಿಚಾರದ ಕುರಿತಂತೆ ಪ್ರತಿಕ್ರಿಯಿಸಿ, ದೆಹಲಿ ಹೈಕಮಾಂಡ್ ಅಂದರೆ ದೇವಸ್ಥಾನ ಇದ್ದ ಹಾಗೆ. ಅಲ್ಲಿಗೆ ಯಾರು ಬೇಕಾದರೂ ಹೋಗಬಹುದು, ಯಾರು ಹೋಗುವುದಕ್ಕೂ ನಿರ್ಬಂಧ ಇಲ್ಲ. ನಾನು ಹೋದಾಗ ಪಕ್ಷ ಬೆಳೆಯಬೇಕು, ಮತ್ತೆ ಅಧಿಕಾರಕ್ಕೆ ಬರಬೇಕು ಎನ್ನುವುದನ್ನು ಹೈಕಮಾಂಡ್ ದೇವಾಲಯದಲ್ಲಿ ಬೇಡಿಕೊಂಡಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: ದಲಿತ ಸಮಾವೇಶದ ಬಗ್ಗೆ ಮಾಹಿತಿ ಇಲ್ಲ: ಸತೀಶ್ ಜಾರಕಿಹೊಳಿ | Satish Jarkiholi on Dalit samavesha | Suvarna News
ದಿವಾಳಿ ಮಾಡಿದ್ದೇ ಬಿಜೆಪಿ:
ಸರ್ಕಾರ ದಿವಾಳಿಯಾಗಿದೆ ಎಂದು ಮೊದಲ ದಿನದಿಂದಲೇ ಬಿಜೆಪಿ ನಾಯಕರು ಹೇಳಿಕೊಂಡು ಬಂದಿದ್ದಾರೆ. ದಿವಾಳಿ ಮಾಡಿಟ್ಟು ಹೋದವರು ಅವರೇ. ದುಡ್ಡಿಲ್ಲದೆ ಹೆಚ್ಚುವರಿ ಕೆಲಸ ಮಾಡಿ ಬಿಲ್ ಪೆಂಡಿಂಗ್ ಇಟ್ಟು ಹೋದವರು ಯಾರು? ಅವರು ಬಿಲ್ ರಿಲೀಸ್ ಮಾಡದೆ ಈಗ ಬಿಲ್ ಕೊಡಿಸಿ ಎಂದು ಪ್ರತಿಭಟಿಸ್ತಿದ್ದಾರೆ ಎಂದು ಟೀಕಿಸಿದರು.
ಮುಂದಿನ ಸಿಎಂ ಜಾರಕಿಹೊಳಿ ಎಂಬ ಕಾರ್ಯಕರ್ತರ ಹೇಳಿಕೆಗೆ ಪ್ರತಿಕ್ರಿಯಿಸಿ, ಪರಮೇಶ್ವರ್, ಡಿಕೆ ಶಿವಕುಮಾರ್, ನನ್ನ ಬಗ್ಗೆ ಅಭಿಮಾನಿಗಳು ಹೀಗೆ ಹೇಳುತ್ತಾರೆ. ಅದು ಕಾರ್ಯಕರ್ತರ ಪ್ರೀತಿ. ಸಿಎಂ ಸ್ಥಾನ ಸಿಗೋದು ಅಷ್ಟು ಸುಲಭ ಅಲ್ಲ ಎಂದರು.
ಇದನ್ನೂ ಓದಿ: ಎಚ್ಚರಿಕೆ ಗಿಚ್ಚರಿಕೆ ಎಲ್ಲ ನಡೆಯಲ್ಲ, ಡಿಸಿಎಂ ಸ್ಥಾನಕ್ಕೆ ಕಿರೀಟ ಇಲ್ಲ: ಡಿಕೆಶಿಗೆ ಸಚಿವ ರಾಜಣ್ಣ ತಿರುಗೇಟು
ಗೃಹಲಕ್ಷ್ಮಿ ಹಣ 2 ತಿಂಗಳಿನಿಂದ ಬಿಡುಗಡೆಯಾಗಿಲ್ಲ. ಅದು ಒಟ್ಟಿಗೇ ಬಿಡುಗಡೆ ಆಗಲಿದೆ. ಈ ಹಿಂದೆಯೂ 2 ತಿಂಗಳಿಗೊಮ್ಮೆ ಬಿಡುಗಡೆಯಾಗುತ್ತಾ ಬಂದಿದೆ. ಒಟ್ಟಾರೆ ಹಣ ಕೂಡಿಸಿ ಕೊಡುತ್ತಿದ್ದೇವೆ. ಯೋಜನೆ ನಿಲ್ಲಿಸಿಲ್ಲ. ತಾತ್ಕಾಲಿಕವಾಗಿ ತಡವಾಗಿದೆಯಷ್ಟೆ ಎಂದರು.