ಚಿತ್ರದುರ್ಗದಲ್ಲಿ ನಡೆದ ಮದಕರಿ ನಾಯಕ ಜಯಂತಿಯಲ್ಲಿ ನಟ ಕಿಚ್ಚ ಸುದೀಪ್ ವಿರುದ್ಧ ವಿ.ಎಸ್. ಉಗ್ರಪ್ಪ ನೀಡಿದ್ದ ವಿವಾದಾತ್ಮಕ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಉಗ್ರಪ್ಪ ಅವರ ಈ ಹೇಳಿಕೆಯನ್ನು ಖಂಡಿಸಿರುವ ಮಾಜಿ ಸಚಿವ ರಾಜುಗೌಡ, ಸುದೀಪ್ ಸಮಾಜದ ಆಸ್ತಿ ಎಂದು ಹೇಳಿ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ.

ಯಾದಗಿರಿ/ಚಿತ್ರದುರ್ಗ (ಅ.14): ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ವಿರುದ್ಧ ಕಾಂಗ್ರೆಸ್ ಮುಖಂಡ, ಮಾಜಿ ಸಂಸದ ವಿ.ಎಸ್. ಉಗ್ರಪ್ಪ (V.S. Ugrappa) ನೀಡಿದ್ದ ವಿವಾದಾತ್ಮಕ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಮಾಜಿ ಸಚಿವ ಎಸ್‌ಜಿ ರಾಜುಗೌಡ (Raju Gowda) ಅವರು ಉಗ್ರಪ್ಪ ಅವರ ವಿರುದ್ಧ ಹರಿಹಾಯ್ದಿದ್ದಾರೆ.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೋಡೆಕಲ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜುಗೌಡ, "ಉಗ್ರಪ್ಪ ಅವರೇ, ನಿಮ್ಮ ವಯಸ್ಸಿಗೆ ತಕ್ಕಂತೆ ಮಾತನಾಡಿ. ಏಕವಚನದಲ್ಲಿ ಮಾತನಾಡAದು ಸರಿಯಲ್ಲ" ಎಂದು ಕಟುವಾಗಿ ತರಾಟೆಗೆ ತೆಗೆದುಕೊಂಡರು.

ಸುದೀಪ್ ಸಮಾಜದ ಆಸ್ತಿ:

'ಯಾವುದೇ ಗಾಡ್ ಫಾದರ್ ಇಲ್ಲದೆ, ಕೇವಲ ತನ್ನ ಪರಿಶ್ರಮದಿಂದ 33 ವರ್ಷಗಳ ಕಾಲ ಚಿತ್ರರಂಗದಲ್ಲಿ ಬೆಳೆದು ನಿಂತಿರುವ ದೊಡ್ಡ ಕಲಾವಿದ ಸುದೀಪ್. ಅವರನ್ನು ಏಕವಚನದಲ್ಲಿ ನಿಂದಿಸುವುದು ಸರಿಯಲ್ಲ. ಮದಕರಿ ನಾಯಕ ಜಯಂತಿಗೆ ಸುದೀಪ್ ಬಂದಿದ್ದು ತಪ್ಪಾ? ಜನ ಸುದೀಪ್-ಸುದೀಪ್ ಅಂತ ಕೇಕೆ ಹಾಕಿದರೆ ನಿಮಗೆ ಏಕೆ ಹೊಟ್ಟೆ ಉರಿಯುತ್ತದೆ?' ಎಂದು ರಾಜುಗೌಡ ಪ್ರಶ್ನಿಸಿದರು. ಕಲಾವಿದನಿಗೆ ಯಾವುದೇ ಜಾತಿಯಿಲ್ಲ, ಸುದೀಪ್ ಕೇವಲ ನಟರಷ್ಟೇ ಅಲ್ಲ, ಅವರು ಸಮಾಜದ ಆಸ್ತಿ. ಕೂಡಲೇ ಉಗ್ರಪ್ಪ ಅವರು ಸುದೀಪ್ ಅವರ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

'ನಿಮ್ಮ ಮನೆಯ ಮಗನೇ ನಿಮ್ಮ ಮಾತು ಕೇಳಲ್ಲ, ಇನ್ನು ನೀವು ಸುದೀಪ್ ಬಗ್ಗೆ ಮಾತನಾಡುತ್ತೀರಾ? 56% ಎಸ್‌ಸಿ/ಎಸ್‌ಟಿ ಮೀಸಲಾತಿ ಕೋರ್ಟ್‌ನಲ್ಲಿ ರದ್ದಾಗಲು ನಿಮ್ಮದೇ ಸರ್ಕಾರ ಕಾರಣ, ವೇದಿಕೆಯಲ್ಲಿ ಸುಮ್ಮನೆ ಡೈಲಾಗ್ ಹೊಡೆಯಬೇಡಿ. ಬೇಕಾದರೆ ನನ್ನ ಬಗ್ಗೆ ಅಥವಾ ಬಿ. ಶ್ರೀರಾಮುಲು ಬಗ್ಗೆ ಮಾತನಾಡಿ, ರಾಜಕೀಯ ಮಾಡಿ, ಆದರೆ ಯಾವುದೇ ಕಲಾವಿದರ ಬಗ್ಗೆ ಮಾತನಾಡಬೇಡಿ' ಎಂದು ರಾಜುಗೌಡ ಎಚ್ಚರಿಕೆ ನೀಡಿದರು.

ಅಷ್ಟಕ್ಕೂ ಉಗ್ರಪ್ಪ ಹೇಳಿದ್ದೇನು?:

ಚಿತ್ರದುರ್ಗದಲ್ಲಿ ಇತ್ತೀಚೆಗೆ ನಡೆದ ವೀರ ಮದಕರಿ ನಾಯಕ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಭಾಷಣ ಮಾಡುತ್ತಿದ್ದರು. ಈ ವೇಳೆ ಸಭೆಯಲ್ಲಿದ್ದ ಅಭಿಮಾನಿಗಳು 'ಕಿಚ್ಚ... ಕಿಚ್ಚ...' ಎಂದು ಘೋಷಣೆ ಕೂಗುವುದು ಹಾಗೂ ಕೇಕೆ ಹಾಕುವುದು ಹೆಚ್ಚಾಯಿತು. ಇದರಿಂದ ಸಿಟ್ಟಿಗೆದ್ದ ಉಗ್ರಪ್ಪ, ಭಾಷಣದ ಮಧ್ಯೆಯೇ ಗರಂ ಆಗಿದ್ದರು. ಸುದೀಪ್ ಅವರತ್ತ ನೇರವಾಗಿ ನೋಡುತ್ತಾ, 'ನಾಯಕರು ಎಂದು ಹೇಳಿಕೊಂಡು ಕೇಕೆ ಹಾಕಿಸಿಕೊಳ್ಳೋದಲ್ಲ. ನಿಜವಾಗಿಯೂ ನಾಯಕರ ಮಗನಾಗಿದ್ದರೆ ಮೀಸಲಾತಿ ಹೆಚ್ಚಳದ ಹೋರಾಟಕ್ಕೆ ಬಾ ಸುದೀಪ್' ಎಂದು ಬಹಿರಂಗವಾಗಿ ಸವಾಲು ಹಾಕಿದ್ದರು. ಉಗ್ರಪ್ಪ ಅವರ ಈ ಮಾತಿಗೆ ಸುದೀಪ್ ಅಭಿಮಾನಿಗಳು ಹಾಗೂ ರಾಜಕೀಯ ವಲಯದಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದ್ದು, ಇದೀಗ ರಾಜುಗೌಡ ಕೂಡ ಉಗ್ರಪ್ಪ ವಿರುದ್ಧ ಕಿಡಿಕಾರುವ ಮೂಲಕ ವಿವಾದವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.