ಒಕ್ಕಲಿಗ ಮೀಸಲಾತಿ ಹೋರಾಟಕ್ಕೆ ದೇವೇಗೌಡರ ಕುಟುಂಬದ ಬೆಂಬಲ ಸದಾ ಇರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ನಾಗಮಂಗಲ (ಡಿ.26): ಒಕ್ಕಲಿಗ ಮೀಸಲಾತಿ ಹೋರಾಟಕ್ಕೆ ದೇವೇಗೌಡರ ಕುಟುಂಬದ ಬೆಂಬಲ ಸದಾ ಇರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ತಾಲೂಕಿನ ಸೋಮವಾರ ನಡೆದ ಪಂಚರತ್ನ ರಥಯಾತ್ರೆ ವೇಳೆ ಬಿಂಡಿಗನವಿಲೆಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಈಗಾಗಲೇ ಒಕ್ಕಲಿಗರ ಮೀಸಲಾತಿ ವಿಚಾರ ಕುರಿತು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀಗಳೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿದ್ದೇನೆ. ಮೀಸಲಾತಿ ವಿಚಾರದಲ್ಲಿ ದೇವೇಗೌಡರ ಕುಟುಂಬ ಮತ್ತು ಜೆಡಿಎಸ್‌ ಪಕ್ಷದ ಹಿಂದೆ ಸರಿಯುವುದಿಲ್ಲ ಎಂದರು.

ಜೆಡಿಎಸ್‌ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದ 24ಗಂಟೆಯೊಳಗೆ ಸ್ತ್ರೀಶಕ್ತಿ ಸಂಘಗಳ ಸಂಪೂರ್ಣ ಸಾಲಮನ್ನಾ ಮಾಡುವ ಜೊತೆಗೆ ಆನ್‌ಲೈನ್‌ ರಮ್ಮಿ ಹಾಗೂ ಕ್ರಿಕೆಟ್‌ ದಂಧೆ ನಿಷೇಧಿಸುತ್ತೇನೆ ಎಂದರು. ರಸಗೊಬ್ಬರ ಸೇರಿದಂತೆ ರೈತರ ಕೃಷಿ ಪರಿಕರಗಳ ಬೆಲೆ ಗಗನಕ್ಕೇರಿದೆ. ರೈತರು ಬೆಳೆದ ಬೆಳೆಗಳಿಗೆ ಸಮರ್ಪಕ ಬೆಲೆ ಸಿಗುತ್ತಿಲ್ಲ. ಕೇಂದ್ರ ಸರ್ಕಾರ ರೈತರ ಸಂಕಷ್ಟವನ್ನು ಅರ್ಥಮಾಡಿಕೊಳ್ಳಬೇಕು. ಪ್ರಸ್ತುತ ಕೊಬ್ಬರಿ ಮತ್ತು ಅಡಿಕೆ ಬೆಲೆ ತೀವ್ರ ಕುಸಿತಗೊಂಡಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕೇಂದ್ರ ಸರ್ಕಾರ ಕೊಡದಿದ್ದರೂ ಸಹ ನಾವು ಕೊಬ್ಬರಿ, ಅಡಿಕೆ ಸೇರಿದಂತೆ ರೈತರ ಎಲ್ಲ ಬೆಲೆಗಳಿಗೆ ನ್ಯಾಯಸಮ್ಮತ ಬೆಲೆ ಕೊಡಿಸುವುದಾಗಿ ತಿಳಿಸಿದರು.

ಎರಡು ಬಾರಿ ಸಿಎಂ ಆಗಿ ಜನರ ಮಧ್ಯೆ ಇದ್ದು ಕೆಲಸ ಮಾಡಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

ನೌಕರರ ಹೋರಾಟಕ್ಕೆ ಬೆಂಬಲ ನೀಡುವಂತೆ ಎಚ್ಡಿಕೆಗೆ ಮನವಿ ಸಲ್ಲಿಕೆ: ಹಳೆ ಪಿಂಚಣಿ ಸೌಲಭ್ಯ ಮುಂದುವರೆಸಲು ರಾಜ್ಯ ಎನ್‌ಪಿಎಸ್‌ ಸರ್ಕಾರಿ ನೌಕರರು ನಡೆಸುತ್ತಿರುವ ಅನಿರ್ದಿಷ್ಟಹೋರಾಟಕ್ಕೆ ಬೆಂಬಲ ನೀಡುವಂತೆ ಕೋರಿ ತಾಲೂಕು ನೌಕರರ ಸಂಘದ ಸದಸ್ಯರು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪಟ್ಟಣದಲ್ಲಿ ಪಂಚರತ್ನ ರಥಯಾತ್ರೆಗೆ ಆಗಮಿಸಿದ್ದ ವೇಳೆ ಭೇಟಿ ಮಾಡಿದ ತಾಲೂಕು ಎನ್‌ಪಿಎಸ್‌ ನೌಕರರ ಸಂಘದ ಪದಾಧಿಕಾರಿಗಳು ಯೋಜನೆಯಿಂದ ನೌಕರ ಸಮುದಾಯದ ಮೇಲೆ ಆಗುವ ದುಷ್ಪರಿಣಾಮ ವಿವರಿಸಿದರು.

ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿಯಾಗಬೇಕು ಎಂದು ಒತ್ತಾಯಿಸಿ ಡಿ.19ರಿಂದ ಎನ್‌ಪಿಎಸ್‌ ನೌಕರರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಅವಧಿ ಮುಷ್ಕರ ಆರಂಭಿಸಿದ್ದಾರೆ. ಮುಷ್ಕರಕ್ಕೆ ಬಂದು ತಮ್ಮ ಬೆಂಬಲ ಸೂಚಿಸುವಂತೆ ಮನವಿ ಸಲ್ಲಿಸಲಾಯಿತು. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕುಮಾರಸ್ವಾಮಿ ಅವರು ಪಂಚರತ್ನ ಯಾತ್ರೆ ಮುಗಿದ ತಕ್ಷಣ ಪ್ರತಿಭಟನೆಯಲ್ಲಿ ಪಾಲ್ಗೊಳುವ ಭರವಸೆ ನೀಡಿದರು. ನಮ್ಮ ಪಕ್ಷ ಹಳೆ ಪಿಂಚಣಿ ಯೋಜನೆ ಮರು ಜಾರಿಯ ಪರವಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ನೌಕರರ ಹಿತಾಸಕ್ತಿಗೆ ವಿರುದ್ಧವಾಗಿರುವ ಎನ್‌ಪಿಎಸ್‌ ಯೋಜನೆ ರದ್ದುಪಡಿಸಿ ಓಪಿಎಸ್‌ ಜಾರಿ ಮಾಡುವ ಭರವಸೆ ನೀಡಿದರು.

ಬಿಜೆಪಿ ಹಣದ ಹೊಳೆ, ಕೆಲ ತಪ್ಪುಗಳಿಂದ ಸೋಲು: ಎಚ್‌.ಡಿ.ಕುಮಾರಸ್ವಾಮಿ

ಈ ವೇಳೆ ರಾಜ್ಯ ವಿಧಾನ ಪರಿಷತ್‌ ಸದಸ್ಯ ಬೋಜೇಗೌಡ, ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಚ್‌.ಟಿ.ಮಂಜು, ತಾಲೂಕು ನೌಕರರ ಸಂಘದ ಅಧ್ಯಕ್ಷ ಕೆ.ಜೆ.ನಂದಕುಮಾರ್‌, ಗೌರವಾಧ್ಯಕ್ಷ ವಾಸುದೇವ, ಕಾರ್ಯಧ್ಯಕ್ಷ ವೆಂಕಟೇಗೌಡ, ಉಪನ್ಯಾಸಕರಾದ ಮಂಜೇಗೌಡ, ಜಗದೀಶ್‌, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಆನಂದ್‌, ರಾಜ್ಯ ಪರಿಷತ್‌ ಸದಸ್ಯ ಎಚ್‌.ಕೆ.ಮಂಜುನಾಥ್‌, ಪ್ರೌಢಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಸತೀಶ್‌, ಸಂಘಟನಾ ಕಾರ್ಯದರ್ಶಿ ಎಚ್‌.ಜೆ.ಶ್ರೀನಿವಾಸ್‌, ಶ್ರೀರಂಗಪಟ್ಟಣದ ಎನ್‌ಪಿಎಸ್‌ ನೌಕರ ಸಂಘದ ಅಧ್ಯಕ್ಷರಾದ ಕುಮಾರ್‌, ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಮಧು ಹಾಗೂ ತಾಲೂಕಿನ ಎನ್ಪಿಎಸ್‌ ನೌಕರ ಹಾಗೂ ಒಪಿಎಸ್‌ ನೌಕರರು ಹಾಜರಿದ್ದರು.