ಬಿಜೆಪಿ ಹಣದ ಹೊಳೆ, ಕೆಲ ತಪ್ಪುಗಳಿಂದ ಸೋಲು: ಎಚ್.ಡಿ.ಕುಮಾರಸ್ವಾಮಿ
ಕಳೆದ ಉಪಚುನಾವಣೆಯಲ್ಲಿ ಜೆಡಿಎಸ್ ಸೋಲಿಸಿದ್ದು ಬಿಜೆಪಿಯ ಹಣದ ಹೊಳೆ, ನಮ್ಮ ಕೆಲ ತಪ್ಪುಗಳಿಂದ. ಈ ಬಾರಿ ಚುನಾವಣೆಯಲ್ಲಿ ಹಣದ ರಾಜಕೀಯ ನಡೆಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಕೆ.ಆರ್.ಪೇಟೆ (ಡಿ.26): ಕಳೆದ ಉಪಚುನಾವಣೆಯಲ್ಲಿ ಜೆಡಿಎಸ್ ಸೋಲಿಸಿದ್ದು ಬಿಜೆಪಿಯ ಹಣದ ಹೊಳೆ, ನಮ್ಮ ಕೆಲ ತಪ್ಪುಗಳಿಂದ. ಈ ಬಾರಿ ಚುನಾವಣೆಯಲ್ಲಿ ಹಣದ ರಾಜಕೀಯ ನಡೆಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಪಟ್ಟಣದಲ್ಲಿ ನಡೆದ ಜೆಡಿಎಸ್ ಪಂಚರತ್ನ ರಥಯಾತ್ರೆ ಬಹಿರಂಗ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಉಪಚುನಾವಣೆಯಲ್ಲಿ ಸೋಲು ಕಂಡಿದ್ದರೂ ಕ್ಷೇತ್ರದಲ್ಲಿ ಜೆಡಿಎಸ್ ಇನ್ನು ಬದುಕಿದೆ ಎಂಬುದನ್ನು ಕ್ಷೇತ್ರದ ಜನರು ತೋರಿಸಿದ್ದಾರೆ ಎಂದರು.
ಕೆ.ಆರ್.ಪೇಟೆಗೂ ದೇವೆಗೌಡರ ಕುಟುಂಬಕ್ಕೂ ಇರುವ ಭಾವನಾತ್ಮಕ ಸಂಬಂಧ ಮರೆಯಲಾಗದು. ಯಾರು ಟೋಪಿ ಹಾಕಿದ್ದಾರೆ, ಬೆನ್ನಿಗೆ ಚೂರಿಗೆ ಹಾಕಿದ್ದಾರೆ ಅವರನ್ನು ರಥಯಾತ್ರೆ ವೇಳೆ ಕೆ.ಆರ್.ಪೇಟೆಯಿಂದ ಹೊರಹಾಕುವ ಸಂದೇಶ ನೀಡಿದ್ದೀರಾ ಎಂದು ಸಚಿವ ನಾರಾಯಣಗೌಡಗೆ ಟಾಂಗ್ ನೀಡಿದರು. 2006ರಲ್ಲಿ ಎಂಜಿನಿಯರಿಂಗ್ ಕಾಲೇಜು, ವಿದ್ಯುತ್ ಸಬ್‌ಸ್ಟೇಷನ್ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ 700ರಿಂದ 800 ಕೋಟಿ ಕೊಟ್ಟಿದ್ದೆ. ಕಳೆದ ಮೈತ್ರಿ ಸರ್ಕಾರದಲ್ಲೂ ಹೆಚ್ಚಿನ ಅನುದಾನ ಕೊಡಲು ತೀರ್ಮಾನಿಸಿದ್ದೆ. ಅಷ್ಟರಲ್ಲಿ ಮೈತ್ರಿ ಸರ್ಕಾರವನ್ನ ತೆಗೆದರು.
ಎರಡು ಬಾರಿ ಸಿಎಂ ಆಗಿ ಜನರ ಮಧ್ಯೆ ಇದ್ದು ಕೆಲಸ ಮಾಡಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
34 ಮೃತ ರೈತ ಕುಟುಂಬಗಳನ್ನು ಭೇಟಿಯಾಗಲು ಬಂದಾಗ ಇಲ್ಲಿನ ಮಹಾನುಭಾವ ಜೇಬಿಗೆ ಕೈ ಹಾಕಲಿಲ್ಲ. ನಾನು ಸ್ವಂತ ಹಣದಲ್ಲಿ ಮೃತ ಕುಟುಂಬಗಳಿಗೆ ಪರಿಹಾರ ನೀಡಿದೆ ಎಂದು ಸಚಿವರ ವಿರುದ್ಧ ಕಿಡಿಕಾರಿದರು. ಕಳೆದ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ರೈತರ ಸಾಲಮನ್ನಾ ಮಾಡಲು ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸಿದೆ. ಸಿಎಂ ಆಗಿ ಮೆರೆಯಲು ಹೋಗಲಿಲ್ಲ. ನಮ್ಮ ಎಲ್ಲ ಕಾರ್ಯಕ್ರಮ ಮುಂದುವರೆಸಬೇಕೆಂಬ ಕಾಂಗ್ರೆಸ್ ನಾಯಕರ ಕಂಡಿಷನ್ ನಡುವೆ ಸಾಲಮನ್ನಾ ಮಾಡಿದೆ. ಆದರೆ, ನಾನು ಮಾಡಿದ ಸಾಲಮನ್ನಾ ಯೋಜನೆಯ ಹಣ ಇನ್ನೂ ಎರಡು ಲಕ್ಷ ಕುಟುಂಬಗಳಿಗೆ ತಲುಪಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಚಿವರ ಹೆಸರೆಳಲು ಅಸಹ್ಯವಾಗುತ್ತದೆ: ಇದೇ ವೇಳೆ ರೈತನೊಬ್ಬ ತನ್ನ ಸಮಸ್ಯೆಗೆ ಸ್ಪಂದಿಸದ ಸಚಿವ ನಾರಾಯಣಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಪತ್ರ ನೀಡಿದರು. ಇದನ್ನು ಓದುವಾಗ ಎಚ್‌ಡಿಕೆ ಕ್ಷೇತ್ರದ ಶಾಸಕ, ಸಚಿವರ ಹೆಸರೇಳೊಕು ನನಗೆ ಅಸಹ್ಯವಾಗುತ್ತದೆ. ರೈತರ ನೋವಿಗೆ ಸ್ಪಂದಿಸದಿರುವುದು ದುರಂತ. ಜೆಡಿಎಸ್ ಅಧಿಕಾರಕ್ಕೆ ಬಂದು ಪಂಚರತ್ನ ಕಾರ್ಯಕ್ರಮಗಳು ಜಾರಿಯಾದರೆ ಯಾವುದೇ ಜಾತಿಯ ಜನರು ಕಣ್ಣೀರು ಹಾಕುವ ಪರಿಸ್ಥಿತಿ ಬರಲ್ಲ ಎಂದು ಭರವಸೆ ನೀಡಿದರು.
ಬಡ ಮಹಿಳೆ ಕಣ್ಣೀರಿಗೆ ಸ್ಪಂದಿಸಿದ ಎಚ್ಡಿಕೆ: ಬುದ್ಧಿಮಾಂದ್ಯ ಮಗುವನ್ನು ವೇದಿಕೆಗೆ ಒತ್ತು ತಂದಿದ್ದ ಹರಿಹರಪುರದ ಮಹಿಳೆ ಕಣ್ಣೀರಿಡುತ್ತಾ ತನ್ನ ಅಸಹಾಯಕತೆ ಹೊರ ಹಾಕಿದರು. ಪತಿಗೆ ಕ್ಯಾನ್ಸರ್, ಹುಟ್ಟಿದಾಗಿಂದ ಮಗು ಬುದ್ಧಿಮಾಂದ್ಯ. ದಯವಿಟ್ಟು ಸಹಾಯ ಮಾಡಿ ಎಂದು ಕೋರಿದರು. ಮಹಿಳೆ ಸಮಸ್ಯೆ ಆಲಿಸಿ ಆರ್ಥಿಕ ಸಹಾಯ ಮಾಡಿ ಬಳಿಕ ಶಾಶ್ವತ ಪರಿಹಾರದ ಭರವಸೆ ನೀಡಿದರು. ಪಟ್ಟಣದಲ್ಲಿ ಪಂಚರತ್ನ ಯಾತ್ರೆ ಬಹಿರಂಗ ಸಭೆ ಮುಗಿದ ನಂತರ ಮಾಜಿ ಸಿಎಂ ಕುಮಾರಸ್ವಾಮಿ ಕ್ರಿಸ್‌ಮೆಸ್ ಹಬ್ಬದ ಹಿನ್ನೆಲೆಯಲ್ಲಿ ಚಚ್‌ರ್‍ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಜತೆಯಲ್ಲಿ ನಿಖಿಲ್ ಕುಮಾರಸ್ವಾಮಿ, ಶಾಸಕ ಪುಟ್ಟರಾಜು, ಅಭ್ಯರ್ಥಿ ಎಚ್.ಟಿ.ಮಂಜು ಇದ್ದರು. ಪಟ್ಟಣಕ್ಕೆ ಪಂಚರತ್ನ ರಥಯಾತ್ರೆ ಆಗಮಿಸಿದಾಗ ಸುಮಾರು 10 ಸಾವಿರ ಮಹಿಳೆಯರು ಪುರ್ಣಕುಂಭ ಹೊತ್ತು ಮಾಜಿ ಸಿಎಂ ಕುಮಾರಸ್ವಾಮಿಗೆ ಅದ್ಧೂರಿ ಸ್ವಾಗತ ನೀಡಿದರು. ಕಿಕ್ಕೇರಿ ರಸ್ತೆಯಿಂದ ದುರ್ಗಭವನ ಸರ್ಕಲ್, ಬಸ್ ಸ್ಟ್ಯಾಂಡ್ ಮೂಲಕ ಬಹಿರಂಗ ಕಾರ್ಯಕ್ರಮದ ವೇದಿಕೆ ತನಕ ಮೆರವಣಿಗೆ ನಡೆಸಿದರು. ಬಸ್ ನಿಲ್ದಾಣ ಎದುರು ಹೆಲಿಕಾಪ್ಪರ್ ಮೂಲಕ ಪುಷ್ಪವೃಷ್ಟಿಮಾಡಲಾಯಿತು.
ಅಭಿವೃದ್ಧಿಗಾಗಿ ಅಮಿತ್ ಶಾ ಮಂಡ್ಯಕ್ಕೆ ಬರುತ್ತಿಲ್ಲ: ಕುಮಾರಸ್ವಾಮಿ
ವೇದಿಕೆಯಲ್ಲಿ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ಅಂಜನಪ್ಪ, ಜಿಲ್ಲಾಧ್ಯಕ್ಷ ಡಿ.ರಮೇಶ್, ರಾಜ್ಯ ಸಹಕಾರ ಮಾರಾಟ ಮಂಡಳಿ ಸಹಕಾರ ಸಂಘದ ನಿರ್ದೇಶಕ ಚೋಳನಹಳ್ಳಿ ಪುಟ್ಟಸ್ವಾಮಿಗೌಡ, ಶೀಳನೆರೆ ಮೋಹನ್, ಜಿಪಂ ಮಾಜಿ ಅಧ್ಯಕ್ಷೆ ಗಾಯತ್ರಿ, ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್, ರಾಜ್ಯ ಜೆಡಿಎಸ್ ವಕ್ತಾರ ಅಶ್ವಿನ್, ಮುಖಂಡರಾದ ಹೊಸಹೊಳಲು ಬಾಬು, ಬ್ಯಾಲದಕೆರೆ ದೇವರಾಜು, ಶೆಟ್ಟಿನಾಯಕನಕೊಪ್ಪಲು ಸೋಮಶೇಖರ್, ಸಿಂಧಘಟ್ಟಗಿರೀಶ್, ರಿಕಳಲೆ ಗಣೇಶ್, ಹೊನ್ನೇನಹಳ್ಳಿ ನಾಗರಾಜು, ಎಚ್.ಟಿ.ಲೋಕೇಶ್, ಪ್ರದೀಪ್, ಪ್ರತಾಪ್ ಹಲವರಿದ್ದರು.