Asianet Suvarna News Asianet Suvarna News

ಮರಣ ಪ್ರಮಾಣಪತ್ರಕ್ಕೆ ಇ-ಕೆವೈಸಿ ಮಾದರಿ ಅನುಸರಿಸಿ: ಹೈಕೋರ್ಟ್‌

ಜನನ ಮತ್ತು ಮರಣ ಪ್ರಮಾಣಪತ್ರಕ್ಕೆ ಅದರದ್ದೇ ಆದ ಮಾನ್ಯತೆಯಿದೆ. ಅದನ್ನು ವಿಶ್ವಾಸಾರ್ಹತೆಯಿಂದ ಪರಿಗಣಿಸಲಾಗುತ್ತದೆ. ಹಾಗಾಗಿ, ಆಧಾರ್‌ನಲ್ಲಿ ಬಳಸುವಂತೆ ಇ-ಕೆವೈಸಿ ಮೂಲಕ ಮೃತ ವ್ಯಕ್ತಿಯನ್ನು ಗುರುತಿಸಿ ಪ್ರಮಾಣಪತ್ರ ವಿತರಿಸುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆದೇಶಿಸಿದ ಪೀಠ 

Follow E KYC Model for Death Certificate Says High Court of Karnataka grg
Author
First Published Nov 25, 2023, 10:43 AM IST

ಬೆಂಗಳೂರು(ನ.25):  ಮರಣ ಪ್ರಮಾಣಪತ್ರ ವಿತರಣೆ ಮಾಡುವ ಮುನ್ನ ಇ-ಕೆವೈಸಿ ಮಾದರಿ ಅನುಸರಿಸುವಂತೆ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ. ಬೆಂಗಳೂರಿನ ಸಾಯಿಲಕ್ಷ್ಮೀ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ, ಜನನ ಮತ್ತು ಮರಣ ಪ್ರಮಾಣಪತ್ರಕ್ಕೆ ಅದರದ್ದೇ ಆದ ಮಾನ್ಯತೆಯಿದೆ. ಅದನ್ನು ವಿಶ್ವಾಸಾರ್ಹತೆಯಿಂದ ಪರಿಗಣಿಸಲಾಗುತ್ತದೆ. ಹಾಗಾಗಿ, ಆಧಾರ್‌ನಲ್ಲಿ ಬಳಸುವಂತೆ ಇ-ಕೆವೈಸಿ ಮೂಲಕ ಮೃತ ವ್ಯಕ್ತಿಯನ್ನು ಗುರುತಿಸಿ ಪ್ರಮಾಣಪತ್ರ ವಿತರಿಸುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆದೇಶಿಸಿದೆ.

ಅಲ್ಲದೆ, ಆಸ್ಪತ್ರೆಯಲ್ಲಿ ವ್ಯಕ್ತಿ ಮೃತಪಟ್ಟ ಕೂಡಲೇ ಅವರ ವಿವರಗಳನ್ನು ಮೊದಲು ಇ-ಕೆವೈಸಿಯಲ್ಲಿ ಭರ್ತಿ ಮಾಡಬೇಕು, ನಂತರ ಅದನ್ನು ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿ ಮರಣ ಪ್ರಮಾಣಪತ್ರ ವಿತರಿಸಬೇಕು. ಇದರಿಂದ ಮರಣ ಪ್ರಮಾಣಪತ್ರ ವಿತರಣೆಯಲ್ಲಿ ದೋಷಗಳಾಗುವುದು ತಪ್ಪುತ್ತದೆ ಎಂದು ಬಿಬಿಎಂಪಿ ಮತ್ತು ರಾಜ್ಯ ಇ-ಆಡಳಿತ ಇಲಾಖೆ ಕಾರ್ಯದರ್ಶಿಗೆ ಸೂಚಿಸಿದೆ. ಹಾಗೆಯೇ, ಅರ್ಜಿದಾರರು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ ಅವರ ಪತಿಯ ಮರಣ ಪ್ರಮಾಣಪತ್ರವನ್ನು ಬಿಬಿಎಂಪಿ ಅಕಾರಿಗಳು 30 ದಿನಗಳಲ್ಲಿ ಅಗತ್ಯ ತಿದ್ದುಪಡಿ ಮಾಡಿ ಹೊಸ ಮರಣ ಪ್ರಮಾಣಪತ್ರ ವಿತರಿಸಬೇಕು ಎಂದು ನಿರ್ದೇಶಿಸಿದೆ.

ಠಾಣೆಗಳು ರಿಯಲ್‌ ಎಸ್ಟೇಟ್‌ ಒಪ್ಪಂದ ಕೇಂದ್ರಗಳಾಗಿವೆ: ಪೊಲೀಸರ ಧೋರಣೆ ಕಟುವಾಗಿ ಟೀಕಿಸಿದ ಹೈಕೋರ್ಟ್‌

ಪ್ರಕರಣದ ವಿವರ:

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅರ್ಜಿದಾರೆಯ ಪತಿ ಎಸ್.ಪಿ.ಲಕ್ಷ್ಮೀಕಾಂತ ಅವರು 2022ರ ನ.22ರಂದು ಬೆಂಗಳೂರಿನ ಜಯನಗರ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಮೃತಪಟ್ಟಿದ್ದರು. ಮರಣ ವಿಷಯ 2022ರ ನ.30ರಂದು ಆಸ್ಪತ್ರೆಯಲ್ಲಿ ನೋಂದಣಿಯಾಗಿದ್ದು, ಆ ಕುರಿತು ವೈದ್ಯಕೀಯ ಪ್ರಮಾಣ ಪತ್ರವನ್ನು ನೀಡಲಾಗಿತ್ತು. ತರುವಾಯ ಬಿಬಿಎಂಪಿಯು 2022ರ ಡಿ.9ರಂದು ಮರಣ ಪ್ರಮಾಣಪತ್ರ ನೀಡಿತ್ತು.

ಅಸ್ಪಷ್ಟ ದಾಖಲೆ ನೆಪಕ್ಕೆ ಕೋಟಾ ನಿರಾಕರಣೆ ಸಲ್ಲದು: ಹೈಕೋರ್ಟ್‌ ಅಭಿಪ್ರಾಯ

ಆದರೆ, ಅದರಲ್ಲಿ ಮೃತನ ತಂದೆ, ತಾಯಿ ಮತ್ತು ಪತ್ನಿಯ ಹೆಸರನ್ನು ತಪ್ಪಾಗಿ ನಮೂದಿಸಲಾಗಿತ್ತು. ಆ ದೋಷಗಳನ್ನು ಸರಿಪಡಿಸುವಂತೆ ಸಾಯಿಲಕ್ಷ್ಮಿ ಅವರು ಬಿಬಿಎಂಪಿಗೆ 2023ರ ಜ.9ರಂದು ಮನವಿ ಪತ್ರ ಸಲ್ಲಿಸಿದ್ದರು. ಆದರೆ, ಸಾಯಿ ಲಕ್ಷ್ಮಿ ಅವರ ಮನವಿ ತಿರಸ್ಕರಿಸಿ ಹಿಂಬರಹ ನೀಡಿದ್ದ ಬಿಬಿಎಂಪಿ, ಆಸ್ಪತ್ರೆ ನಮೂದಿಸಿದ್ದ ವಿವರ ಆಧರಿಸಿ ಮರಣಪ್ರಮಾಣಪತ್ರ ವಿತರಿಸಲಾಗಿದೆ, ಈಗ ಅದರಲ್ಲಿ ಯಾವುದೇ ದೋಷಗಳನ್ನು ಸರಿಪಡಿಸಲಾಗದು. ಹಾಗೆಯೇ, ತಿದ್ದುಪಡಿ ಮಾಡಬೇಕಾದರೆ ಸಂಬಂಧಿಸಿದ ನ್ಯಾಯಾಲಯದಿಂದ ಅನುಮತಿ ಪಡೆಯಬೇಕಾಗುತ್ತದೆ ಎಂದು 2022ರ ಜ.23ರಂದು ತಿಳಿಸಿತ್ತು. ಇದರಿಂದ ಆಕೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌, ಯಾವುದೇ ವ್ಯಕ್ತಿಯ ಸಾವು ಸಂಭವಿಸಿದ ಕೂಡಲೇ ಆಸ್ಪತ್ರೆಗಳು ಯಾರು ಮೃತಪಟ್ಟಿದ್ದಾರೆಂದು ಗುರುತಿಸಿ, ಮೃತ ವ್ಯಕ್ತಿಯ ಅಗತ್ಯ ದಾಖಲೆ ಪಡೆದು ಆ ವಿವರಗಳನ್ನು ಪ್ರಾಥಮಿಕ ಹಂತದಲ್ಲಿಯೇ ದಾಖಲಿಸಬೇಕು. ಅದನ್ನು ಸಂಬಂಧಿಸಿದ ಪ್ರಾಧಿಕಾರ ಅಥವಾ ಅಧಿಕಾರಿಗಳು ಪರಿಶೀಲಿಸಿ ನಂತರ ಮರಣ ಪ್ರಮಾಣಪತ್ರ ವಿತರಿಸಬೇಕು ಎಂದು ಸೂಚಿಸಿದೆ.

Latest Videos
Follow Us:
Download App:
  • android
  • ios