ಬೆಂಗಳೂರು(ಜ.23):  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ(ಕೆಐಎ) ದಕ್ಷಿಣ ರನ್‌ ವೇಯನ್ನು ಕ್ಯಾಟ್‌ ತ್ರಿಬಿ ಸೌಲಭ್ಯದೊಂದಿಗೆ ಮೇಲ್ದರ್ಜೆಗೇರಿಸಿದ ಬಳಿಕ ಗುರುವಾರ ಮೊಟ್ಟ ಮೊದಲ ಬಾರಿಗೆ ಮಂಜು ಕವಿದ ವಾತಾವರಣದಲ್ಲಿ ವಿಮಾನವೊಂದು ಇಳಿದಿದೆ.

ಲಕ್ನೋದಿಂದ ಬೆಳಗ್ಗೆ 7.41ರಕ್ಕೆ ಕೆಐಎ ವಿಮಾನ ನಿಲ್ದಾಣಕ್ಕೆ ಬಂದ 6ಇ-6389 ಸಂಖ್ಯೆಯ ಇಂಡಿಗೋ ವಿಮಾನವನ್ನು ಯಶಸ್ವಿಯಾಗಿ ಭೂಸ್ಪರ್ಶ ಮಾಡಿತು. ಈ ವಿಮಾನ ನಿಲ್ದಾಣಕ್ಕೆ ಬಂದಾಗ ರನ್‌ವೇ ಭಾಗದಲ್ಲಿ ದಟ್ಟಮಂಜು ಕವಿದಿದ್ದು ದೃಗೋಚರ ಪ್ರಮಾಣ ಅತ್ಯಂತ ಕಡಿಮೆಯಿತ್ತು. ಆದರೆ, ರನ್‌ ವೇ ಅನ್ನು ಕ್ಯಾಟ್‌ ತ್ರಿಬಿ ಸೌಲಭ್ಯದೊಂದಿಗೆ ಮೇಲ್ದರ್ಜೆಗೆ ಏರಿಸಿದ್ದರಿಂದ ವಿಮಾನವನ್ನೂ ಯಶಸ್ವಿಯಾಗಿ ಲ್ಯಾಂಡ್‌ ಮಾಡಲಾಗಿದೆ.

ದೇವನಹಳ್ಳಿ : ವಿಮಾನ ನಿಲ್ದಾಣದಲ್ಲಿ ದಾಖಲೆ ಪ್ರಮಾಣದ ಸರಕು ಸಾಗಣೆ

ರನ್‌ ವೇಗೆ ಕ್ಯಾಟ್‌ ತ್ರಿಬಿ ಸೌಲಭ್ಯ ಕಲ್ಪಿಸಿರುವುದರಿಂದ 50 ಮೀಟರ್‌ಗಳಷ್ಟು ಕಡಿಮೆ ದೃಗೋಚರ ಸಾಧ್ಯತೆ (50 ಮೀಟರ್‌ ಮುಂದಿನ ವಸ್ತುಗಳು ಮಸುಕಾಗುವ ಸ್ಥಿತಿ)ಯಿದ್ದರೂ ವಿಮಾನಗಳನ್ನು ಸುರಕ್ಷಿತವಾಗಿ ಲ್ಯಾಂಡ್‌ ಮಾಡಬಹುದು ಮತ್ತು 125 ಮೀಟರ್‌ ದೃಗೋಚರ ಸಾಧ್ಯತೆ ಇದ್ದಾಗಲೂ ವಿಮಾನ ಟೇಕಾಫ್‌ ಮಾಡಬಹುದಾಗಿದೆ.

ಈ ಸೌಲಭ್ಯ ಕಲ್ಪಿಸುವ ಮುನ್ನ ವಿಮಾನ ಇಳಿಸಲು 550 ಮೀಟರ್‌ ದೃಶ್ಯ ಗೋಚರ ಸಾಧ್ಯತೆ ಹಾಗೂ ವಿಮಾನ ಹಾರಿಸಲು 300 ಮೀಟರ್‌ಗಳಷ್ಟು ದೃಗೋಚರ ಸಾಧ್ಯತೆ ಇರಬೇಕಿತ್ತು. ಈ ಸೌಲಭ್ಯ ಅಳವಡಿಕೆಯಿಂದ ಹವಾಮಾನ ಪ್ರತಿಕೂಲ ಪರಿಸ್ಥಿತಿಯಲ್ಲೂ ವಿಮಾನಗಳ ಟೇಕಾಫ್‌ ಹಾಗೂ ಲ್ಯಾಂಡಿಂಗ್‌ ಸಾಧ್ಯವಾಗುತ್ತಿದೆ. ಅಂತೆಯೆ ಮಂಜು ಕವಿದ ವಾತಾವರಣದಿಂದ ವಿಮಾನಗಳನ್ನು ಬೇರೆ ನಿಲ್ದಾಣಕ್ಕೆ ಕಳುಹಿಸುವುದು, ವಿಮಾನ ವಿಳಂಬವಾಗಿ ಪ್ರಯಾಣಿಕರು ಪರದಾಡುವ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗಿದೆ.