ಜಿಲ್ಲೆಯಲ್ಲಿ ಹೃದಯಾಘಾತ ಮರಣ ಮೃದಂಗ ಮುಂದುವರೆದಿದೆ. ಸೋಮವಾರ ಒಂದೇ ದಿನ ಹಾಸನ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಐವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಹಾಸನ : ಜಿಲ್ಲೆಯಲ್ಲಿ ಹೃದಯಾಘಾತ ಮರಣ ಮೃದಂಗ ಮುಂದುವರೆದಿದೆ. ಸೋಮವಾರ ಒಂದೇ ದಿನ ಹಾಸನ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಐವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇದರೊಂದಿಗೆ ಕಳೆದ 40 ದಿನಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 23 ಜನರು ಹೃದಯಾಘಾತಕ್ಕೆ ಬಲಿಯಾದಂತೆ ಆಗಿದೆ. ಮೃತರ ಪೈಕಿ ಬಹುತೇಕರು 50ರ ವಯೋಮಾನಕ್ಕಿಂತ ಕೆಳಗಿನ ವಯೋಮಾನದವರಾಗಿದ್ದಾರೆ. ಯುವಕರು, ಮಧ್ಯವಯಸ್ಕರೇ ಈ ಸರಣಿ ಹೃದಯಾಘಾತದ ಘಟನೆಗಳಿಗೆ ತುತ್ತಾಗುತ್ತಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.

ಮಲಗಿದ್ದಲ್ಲೇ ಡಿ.ಗ್ರೂಪ್ ನೌಕರ ಸಾವು:

ಚನ್ನರಾಯಪಟ್ಟಣ ತಾಲೂಕಿನ ನಾಡಕಚೇರಿಯ ಡಿ.ಗ್ರೂಪ್ ನೌಕರ ಕುಮಾರ್ (57) ಅವರು ಶನಿವಾರ ರಾತ್ರಿ ಮನೆಯಲ್ಲಿ ಮಲಗಿದ್ದಾಗ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಚನ್ನರಾಯಪಟ್ಟಣ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ಕುಮಾರ್ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಟೀ ಕುಡಿಯುವಾಗ ಪ್ರೊಫೆಸರ್‌ ಸಾವು:

ಚನ್ನರಾಯಪಟ್ಟಣದ ನಿವಾಸಿ ಮುತ್ತಯ್ಯ (58) ಎಂಬುವರು ಹೊಳೆನರಸೀಪುರದ ತಾಲೂಕಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂಗ್ಲಿಷ್‌ ಪ್ರೊಫೆಸರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸೋಮವಾರ ಕಾಲೇಜಿಗೆ ತೆರಳುತ್ತಿದ್ದಾಗ ಹಾಸನ-ಮೈಸೂರು ಬೈಪಾಸ್ ರಸ್ತೆಯಲ್ಲಿರುವ ಕ್ಯಾಂಟಿನ್‌ನಲ್ಲಿ ಟೀ ಕುಡಿಯುವಾಗ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದವರು ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೆ ಅಸುನೀಗಿದ್ದಾರೆ.

ಬೇಲೂರಿನಲ್ಲಿ ಗೃಹಿಣಿ ಬಲಿ:

ಬೇಲೂರು ತಾಲೂಕಿನ ಜೆಪಿ ನಗರದ ನಿವಾಸಿ ಲೇಪಾಕ್ಷಿ (50) ಹಿಟ್ಟಿನ ಗಿರಣಿ ನಡೆಸುತ್ತಿದ್ದರು. ಸೋಮವಾರ ಮನೆಯಲ್ಲಿದ್ದಾಗ ಸುಸ್ತು ಎಂದಿದ್ದಾರೆ. ತಕ್ಷಣ ಅವರನ್ನು ಕುಟುಂಬಸ್ಥರು ಬೇಲೂರಿನ ತಾಲೂಕು ಆಸ್ಪತ್ರೆಗೆ ಒಯ್ಯುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

ಆಟೋ ಓಡಿಸುವಾಗಲೇ ಚಾಲಕ ಬಲಿ:

ಹಾಸನ ಜಿಲ್ಲೆಯ ರಂಗೋಲಿಹಳ್ಳದ ನಿವಾಸಿ ಸತ್ಯನಾರಾಯಣ್‌ ಎಂಬುವರು ಆಟೋ ಚಾಲನೆ ಮಾಡಿಕೊಂಡು ಹಾಸನಾಂಬ ದೇಗುಲದ ಹಿಂಭಾಗ ಹೊಸಲೈನ್‌ ರಸ್ತೆಯಲ್ಲಿ ತೆರಳುತ್ತಿದ್ದಾಗ ಹೃದಯಾಘಾತದಿಂದ ಅಸುನೀಗಿದ್ದಾರೆ.

ಹಳೇಬೀಡಿನಲ್ಲಿ 66 ವರ್ಷದ ವ್ಯಕ್ತಿ ಸಾವು:

ಬೇಲೂರು ತಾಲೂಕಿನ ಹಳೇಬೀಡಿನ ಪಟೇಲ್‌ ಈಶ್ವರಪ್ಪ(66) ಎಂಬುವರು ಶುಕ್ರವಾರ ಜಮೀನಿಗೆ ತೆರಳಿ ಮನೆಗೆ ವಾಪಸ್‌ ಮನೆಗೆ ಬಂದಾಗ ದಿಢೀರ್‌ ಕುಸಿದು ಬಿದ್ದಿದ್ದಾರೆ. ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸುವಾಗ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಆದರೆ, ಇದರಲ್ಲಿ ಮೂಲತಃ ಹಾಸನ ಜಿಲ್ಲೆಯವರಾಗಿದ್ದು, ಬೇರೆ ಊರುಗಳಲ್ಲಿ ನೆಲೆಸಿದ್ದವರ ಸಾವನ್ನು ಕೂಡ ಹಾಸನ ಜಿಲ್ಲೆಗೆ ತಳುಕು ಹಾಕಲಾಗುತ್ತಿದೆ. ಬೇರೆ ಬೇರೆ ಕಾರಣಕ್ಕೂ ಸಾವು ಸಂಭವಿಸಿದೆ. ಆದರೆ 8 ಜನ ಮಾತ್ರ ಹೃದಯಾಘಾತದಿಂದಲೇ ಸಾವನ್ನಪ್ಪಿದ್ದಾರೆ.

-ಡಾ.ಅನಿಲ್‌, ಡಿಎಚ್‌ಒ