ಬೆಂಗಳೂರು(ಜು.09): ಮರಣಪತ್ರ (ಡೆತ್‌ ನೋಟ್‌) ಲಭಿಸಿದ ಬೆನ್ನೆಲ್ಲೇ ಬಸವನಗುಡಿ ಶ್ರೀ ಗುರುರಾಘವೇಂದ್ರ ಕೋ-ಆಪರೇಟಿವ್‌ ಸೊಸೈಟಿ ನಿವೃತ್ತ ಸಿಇಒ ವಾಸುದೇವ ಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಈಗ ಹನ್ನೊಂದು ಮಂದಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಸುಬ್ರಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುರುರಾಘವೇಂದ್ರ ಬ್ಯಾಂಕಿನ ಹಾಲಿ ಮುಖ್ಯಕಾರ್ಯನಿರ್ವಹಣಾಧಿಕಾರಿ, ರವಿ ಐತ್ಯಾಳ, ರಾಕೇಶ್‌, ಶ್ರೀಪಾದ ಹೆಗಡೆ, ಪ್ರಶಾಂತ್‌, ರಘುನಾಥ್‌, ರೆಡ್ಡಿ ಸಹೋದರರು, ಶಮಿನೇಶ್‌, ಕುಮಾರೇಶ್‌, ರಜತ್‌ ಹಾಗೂ ತಲ್ಲಂ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಮೃತರ ಹಿರಿಯ ಪುತ್ರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಲವಂತವಾಗಿ ತಂದೆಯಿಂದ ಸಹಿ:

‘ಬ್ಯಾಂಕ್‌ ಬೋರ್ಡ್‌ ಸದಸ್ಯರ ಅನುಮತಿಯಂತೆ ಸಾಲ ನೀಡಲಾಗಿತ್ತು. 2019ರಲ್ಲಿ ಅರ್‌ಬಿಐ ಆಡಿಟ್‌ ವೇಳೆ ಸರಿಯಾಗಿ ದತ್ತಾಂಶ ನೀಡಲಿಲ್ಲ. ಪರಿವೀಕ್ಷಣೆ ಸಂದರ್ಭದಲ್ಲಿ ತಮ್ಮ ತಂದೆಯಿಂದ ಬಲವಂತವಾಗಿ ದಾಖಲೆಗಳ ಮೇಲೆ ಸಹಿ ಪಡೆಯಲಾಗಿತ್ತು. ಬ್ಯಾಂಕಿನ ಮುಖ್ಯ ಕಚೇರಿ ನೆಟ್ಟಕಲ್ಲಪ್ಪ ಸರ್ಕಲ್‌ ಬಳಿಯಿದೆ. ಆದರೆ, ಅವ್ಯವಹಾರದ ಸಂಬಂಧ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರ ಬಗ್ಗೆಯೂ ಸಂಶಯವಿದೆ’ ಎಂದು ಮೃತರ ಪುತ್ರಿ ದೂರಿನಲ್ಲಿ ಆರೋಪಿಸಿದ್ದಾರೆ.

'ಕೊರೋನಾ ಸೋಂಕಿತ ಗರ್ಭಿಣಿಯರಿಗೆ ಪ್ರತ್ಯೇಕ ಆಸ್ಪತ್ರೆ'

‘ನಮ್ಮ ತಂದೆಯವರಿಗೆ ಬ್ಯಾಂಕ್‌ ವಹಿವಾಟಿನ ಬಗ್ಗೆ ತಿಳುವಳಿಕೆ ಇಲ್ಲದ ಕಾರಣ ಕಂಪ್ಯೂಟರ್‌ ಪಾಸ್‌ವರ್ಡ್‌ಗಳನ್ನು ತಮ್ಮ ಸಹೋದ್ಯೋಗಿಗಳಿಗೆ ನೀಡಿದ್ದರು. ಪ್ರಸುತ್ತ ಸಿಇಓ ಸಂತೋಷ್‌ ಕುಮಾರ್‌, ರವಿ ಐತ್ಯಾಳ, ರಾಕೇಶ್‌, ಶ್ರೀಪಾದ ಹೆಗಡೆ ಹಾಗೂ ಪ್ರಶಾಂತ್‌ ಸೇರಿಕೊಂಡು ಮಾನಸಿಕ ಹಿಂಸೆ ನೀಡಿದ್ದಾರೆ. ತಮ್ಮ ತಂದೆ ಮಾಡದ ತಪ್ಪಿಗೆ ಅವರನ್ನೇ ಹೊಣæಗಾರಿಕೆ ಮಾಡಿದ್ದಾರೆ. ಅದಕ್ಕಾಗಿ ನಮ್ಮ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಸಾವಿಗೂ ಮುನ್ನ ಬರೆದಿರುವ ಡೆತ್‌ನೋಟ್‌ ಪರಿಗಣಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು’ ಮಯ್ಯ ಪುತ್ರಿ ಮನವಿ ಮಾಡಿದ್ದಾರೆ. ಈ ಮೇರೆಗೆ ಆತ್ಮಹತ್ಯೆಗೆ ಪ್ರಚೋದನೆ (ಐಪಿಸಿ 306) ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.