ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಶಾಸಕ ಬಿಪಿ ಹರೀಶ್ ವಿರುದ್ಧ ಎಫ್‌ಐಆರ್ ದಾಖಲು. ಪೊಲೀಸರು ಶಾಸಕರ ಮನೆಗೆ ಭೇಟಿ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಈ ಘಟನೆ ದಾವಣಗೆರೆಯಲ್ಲಿ ತೀವ್ರ ಚರ್ಚೆಗೆ ಗ್ರಾಸ.

ದಾವಣಗೆರೆ (ಸೆ.3): ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಹರಿಹರ ಬಿಜೆಪಿ ಶಾಸಕ ಬಿಪಿ ಹರೀಶ್ ಅವರ ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್ ದಾಖಲಾದ ಹಿನ್ನೆಲೆ, ಕೆಟಿಜೆ ನಗರ ಪೊಲೀಸರು ಶಾಸಕರ ದಾವಣಗೆರೆಯ ವಿಶ್ವೇಶ್ವರಯ್ಯ ಪಾರ್ಕ್ ಬಳಿಯ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ಇನ್ಸ್‌ಪೆಕ್ಟರ್ ಸುನೀಲಕುಮಾರ್ ನೇತೃತ್ವದಲ್ಲಿ ಹತ್ತಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಶಾಸಕ ಬಿಪಿ ಹರೀಶ್ ಅವರ ಮನೆಗೆ ತೆರಳಿದ್ದರು. ಆದರೆ ಶಾಸಕರು ಬೆಂಗಳೂರು ಪ್ರವಾಸದಲ್ಲಿದ್ದ ಕಾರಣ, ಅವರ ಮನೆಯಲ್ಲಿ ಕೇವಲ ಪತ್ನಿ ಮತ್ತು ಪುತ್ರ ಮಾತ್ರ ಇದ್ದರು. ಪೊಲೀಸರು ಕುಟುಂಬ ಸದಸ್ಯರಿಂದ ಮಾಹಿತಿ ಸಂಗ್ರಹಿಸಿ ಶಾಸಕ ಬಿಪಿ ಹರೀಶ್ ಅವರು ನಾಳೆ ಬೆಳಿಗ್ಗೆ ವಿಚಾರಣೆಗೆ ಹಾಜರಾಗುವಂತೆ ಕುಟುಂಬ ಸದಸ್ಯರಿಗೆ ಸೂಚನೆ ನೀಡಿ ಪೊಲೀಸರು ವಾಪಸ್ ಆಗಿದ್ದಾರೆ.

ಘಟನೆ ಹಿನ್ನೆಲೆ:

ಶಾಸಕ ಬಿಪಿ ಹರೀಶ್ ಅವರು ಎಸ್ಪಿ ಉಮಾ ಪ್ರಶಾಂತ್ ಅವರನ್ನು ಶಾಮನೂರು ಮನೆಯ 'ಪಮೋರಿಯನ್ ನಾಯಿ' ಎಂದು ಆಕ್ಷೇಪಾರ್ಹ ಪದ ಬಳಸಿ ಅವಮಾನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕಾರಣಕ್ಕೆ, ಸ್ವತಃ ಎಸ್ಪಿ ಉಮಾ ಪ್ರಶಾಂತ್ ಅವರು ಶಾಸಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಈ ಘಟನೆ ದಾವಣಗೆರೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಮುಂದಿನ ವಿಚಾರಣೆಯಲ್ಲಿ ಶಾಸಕರ ಹೇಳಿಕೆ ಮತ್ತು ಕಾನೂನು ಕ್ರಮದ ಬಗ್ಗೆ ಹೆಚ್ಚಿನ ಸ್ಪಷ್ಟತೆ ದೊರೆಯುವ ನಿರೀಕ್ಷೆಯಿದೆ.