ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆದ ಹಿಂದೂ ಮಹಾ ಗಣೇಶ ಉತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ಎಂಎಲ್‌ಸಿ ಸಿಟಿ ರವಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಿಂಧನೂರು (ಸೆ.3): ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆದ ಹಿಂದೂ ಮಹಾ ಗಣೇಶ ಉತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ಎಂಎಲ್‌ಸಿ ಸಿಟಿ ರವಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು ಆಪರೇಷನ್ ಕಮಲ, ಧರ್ಮಸ್ಥಳ ವಿವಾದ, ಮೈಸೂರು ದಸರಾ ಉದ್ಘಾಟನೆಗೆ ಭಾನು ಮುಷ್ತಾಕ್ ಆಯ್ಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಅವರು ತಮ್ಮ ಅಸಮಾಧಾನ ವ್ಯಕ್ತಪಡಿದರು.
ಆಪರೇಷನ್ ಕಮಲದ ಯೋಜನೆ ಇಲ್ಲ, ಜನಾಕ್ರೋಶದಿಂದ ಅಧಿಕಾರಕ್ಕೆ:
ಕಾಂಗ್ರೆಸ್‌ನವರು ಆರೋಪಿಸಿದಂತೆ ಬಿಜೆಪಿಯಿಂದ ಯಾವುದೇ ಆಪರೇಷನ್ ಕಮಲದ ಯೋಜನೆ ಇಲ್ಲ. ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗುತ್ತಿದ್ದೇವೆ. ಕಾಂಗ್ರೆಸ್‌ನವರೇ ಮಾಡಿರುವ ಒಂದು ಸರ್ವೇಯಲ್ಲಿ, ಇವತ್ತೇ ಚುನಾವಣೆ ನಡೆದರೆ ಬಿಜೆಪಿ-ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂದು ತೋರಿಸಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ತೀವ್ರವಾಗಿದ್ದು, ಅವರದ್ದೇ ಶಾಸಕರು ಮತ್ತು ಸಚಿವರಿಗೆ ಸರ್ಕಾರದ ಬಗ್ಗೆ ಅಸಮಾಧಾನವಿದೆ. ಅಭಿವೃದ್ಧಿಯಿಲ್ಲ, ಭ್ರಷ್ಟಾಚಾರವೇ ಸುದ್ದಿಯಾಗಿದೆ. ವಾಲ್ಮೀಕಿ ನಿಗಮ, ಭೋವಿ ನಿಗಮದ ಹಗರಣಗಳು ಇದಕ್ಕೆ ಸಾಕ್ಷಿಯಾಗಿವೆ. ನಾವು ಯಾವುದೇ ಅಡ್ಡಮಾರ್ಗ ಹಿಡಿಯುವುದಿಲ್ಲ, ರಾಜಮಾರ್ಗದಿಂದಲೇ 2028ರಲ್ಲಿ ಅಧಿಕಾರಕ್ಕೆ ಬರಲಿದ್ದೇವೆ ಎಂದರು.
ಧರ್ಮಸ್ಥಳ ವಿವಾದ: ಸಿಎಂ ಮತ್ತು ಗೃಹ ಸಚಿವರ ವಿರುದ್ಧ ಸಿಟಿ ರವಿ ಆಕ್ರೋಶ
ಧರ್ಮಸ್ಥಳದ ಬಗ್ಗೆ ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವರ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದ ಸಿಟಿ ರವಿ ಅವರು,ಸೌಜನ್ಯ ಕೊಲೆ ಪ್ರಕರಣವನ್ನು ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರ ತಲೆಗೆ ಕಟ್ಟುವಂತಹ ಮಾನಸಿಕತೆ ಎದ್ದು ಕಾಣುತ್ತಿದೆ. ಎನ್‌ಜಿಒಗಳಿಗೆ ಸಂಶಯಾಸ್ಪದವಾಗಿ ಹಣ ಬಂದಿರುವ ಮಾಹಿತಿಯಿದ್ದು, ಇದರ ಬಗ್ಗೆ ತನಿಖೆಯಾಗಬೇಕು. ಧರ್ಮಸ್ಥಳದ ಭಕ್ತಿ ಮತ್ತು ವೀರೇಂದ್ರ ಹೆಗಡೆಯವರ ಗೌರವವನ್ನು ನಾಶ ಮಾಡುವ ಷಡ್ಯಂತ್ರವಿದೆ. ಇದರ ಹಿಂದೆ ಮತಾಂತರ ಮಾಫಿಯಾ ಇದೆ. ಸಿಎಂನ ಹೇಳಿಕೆ ಸೌಜನ್ಯ ಮತ್ತು ವೀರೇಂದ್ರ ಹೆಗಡೆಯವರನ್ನು ಎದುರುಬದುರು ನಿಲ್ಲಿಸುವಂತಿದೆ, ಇದು ಸಂಪೂರ್ಣ ತಪ್ಪು. ಸೌಜನ್ಯ ಕೇಸ್‌ನ ಎಫ್‌ಐಆರ್‌ನಲ್ಲಿ ವೀರೇಂದ್ರ ಹೆಗಡೆಯವರ ವಿರುದ್ಧ ಯಾವುದೇ ಆರೋಪವಿಲ್ಲ. ಆರೋಪಿತ ಸಂತೋಷ್ ರಾವ್ ಜೈಲಿನಲ್ಲಿದ್ದ, ಆದರೆ ಪ್ರಾಸಿಕ್ಯೂಷನ್ ವೈಫಲ್ಯದಿಂದ ಬಿಡುಗಡೆಯಾದ. ಇದಕ್ಕೆ ಸಿಎಂ ಧರ್ಮಾಧಿಕಾರಿಗಳನ್ನು ದೂಷಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅವರು ಮುಂದುವರಿದು, ತಿಮ್ಮರೋಡಿ, ಮಟ್ಟಣ್ಣವರ್ ಎಂಬವರು ಕೇವಲ ಟೂಲ್ಸ್‌ಗಳಷ್ಟೇ. ಧರ್ಮಸ್ಥಳದ ವಿರುದ್ಧ ತಿಂಗಳುಗಟ್ಟಲೆ ಅವಹೇಳನ ಮಾಡಿದರೂ ಈ ಸರ್ಕಾರ ಯಾರನ್ನೂ ಬಂಧಿಸಿಲ್ಲ. ಆದರೆ ನಟಿ ರಮ್ಯ ವಿರುದ್ಧ ಕಮೆಂಟ್ ಮಾಡಿದ್ದಕ್ಕೆ 12 ಜನರನ್ನು ಬಂಧಿಸಲಾಯಿತು. ಇದರಿಂದ ಕಾಂಗ್ರೆಸ್ ಸರ್ಕಾರ ಧರ್ಮಸ್ಥಳ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದರು.
ಡಿಕೆ ಸುರೇಶ್ ಹೇಳಿಕೆಗೆ ಸಿಟಿ ರವಿ ತಿರುಗೇಟು:
'ಧರ್ಮಸ್ಥಳವನ್ನು ರಾಜಕೀಯ ವಸ್ತುವಾಗಿ ಮಾಡಿಕೊಂಡ ಬಿಜೆಪಿಗೆ ನಾಚಿಕೆ ಆಗಬೇಕು' ಎಂಬ ಡಿಕೆ ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ತಿರುಗೇಟು ನೀಡಿದ ಸಿಟಿ ರವಿ ಅವರು, ಭಾವನೆ ಇಲ್ಲದವರು ಮಾತ್ರ ಡಿಕೆ ಸುರೇಶ್‌ರಂತೆ ಮಾತನಾಡುತ್ತಾರೆ. ಧರ್ಮಸ್ಥಳದ ಬಗ್ಗೆ ನಮಗೆ ಭಾವನೆ ಇದೆ, ನಮ್ಮ ಪೂರ್ವಿಕರು ಕಷ್ಟದಲ್ಲಿ ಮಂಜುನಾಥನನ್ನು ಪ್ರಾರ್ಥಿಸಿದ್ದಾರೆ. ಆ ಭಾವನೆಯಿಂದಲೇ ನಾವು ಧರ್ಮಸ್ಥಳದ ಪರವಾಗಿ ಮಾತನಾಡುತ್ತಿದ್ದೇವೆ, ಧರ್ಮಸ್ಥಳ ಪರ ನಿಂತಿದ್ದೇವೆ ಎಂದರು.
ಪ್ರಿಯಾಂಕ್ ಖರ್ಗೆ, ವಾಟ್ ಈಸ್ ಯುವರ್ ಪಾರ್ಟಿ ಸ್ಟಾಂಡ್?
ಇದೇ ವೇಳೆ 'ತಿಮ್ಮರೋಡಿ, ಮಟ್ಟಣ್ಣವರ್‌ಗೆ ಆರ್‌ಎಸ್‌ಎಸ್ ಹಿನ್ನೆಲೆ' ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಸಿಟಿ ರವಿ ಅವರು, ನಮ್ಮ ಪಕ್ಷದ ನಿಲುವು ಸ್ಪಷ್ಟವಾಗಿದೆ. ನಾವು ಧರ್ಮಾಧಿಕಾರಿಗಳ ಪರ, ಧರ್ಮದ ಪರ ನಿಂತಿದ್ದೇವೆ. ಕಾಂಗ್ರೆಸ್‌ನ ನಿಲುವು ಏನು? ನೀವು ಯಾರ ಪರ ನಿಂತಿದ್ದಿರಿ? ಮೊಹಮ್ಮದ್ ಸಮೀರ್ ಆಂಟಿಸಿಪೇರಟಿ ಬೇಲ್ ತಗೋತಾನೆ. ತಿಮರೋಡಿಗೆ ಒಂದೇ ದಿನಕ್ಕೆ ಬೇಲ್ ಸಿಗತ್ತೆ.ನಮ್ಮನ್ನೇಲ್ಲಾ ಭಾರತ್ ಮಾತಾಕಿ ಜೈ ಅಂದ್ರೆ, ಜೈ ಶ್ರೀರಾಮ್ ಅಂದ್ರೆ ವಾರಗಟ್ಟಲೇ ಜೈಲಿಗೆ ಹಾಕಿದ್ರಿ. ನಮ್ಮನ್ನ ತೆಗೆದುಕೊಂಡು ಹೋಗಿ ಮಂಡ್ಯ,ಬಳ್ಳಾರಿ, ಶಿವಮೊಗ್ಗಕ್ಕೆ ಹಾಕ್ತಿದ್ರಿ. ಈಗ ಇದರ ಹಿಂದಿನ ಡೈರೆಕ್ಟರ್ ಯಾರೂ ಅಂತ ಗೊತ್ತಾಗಲ್ವಾ? ಕಾನ್ಫಿಡೆನ್ಸಿಯಲ್ ರಿಪೋರ್ಟ್ ಅಂತ ಎಸ್ ಪಿ ಕಡೆಯಿಂದ ಕಳಸ್ತಿದ್ರಿ. ಇದು ಕಾನ್ಫಿಡೆನ್ಸಿಯನ್ ರಿಪೋರ್ಟ್ ಅಂತ ಜಡ್ಜ್ ಗೆ ಕೊಡ್ತಿದ್ರಿ. ಆದ್ರೆ ಇವ್ರಿಗೆ ಆಂಟಿಸಿಪೇಟರಿ ಬೇಲ್! ಒಂದೇ ದಿನಕ್ಕೆ ಬೇಲ್ ಸಿಗತ್ತೆ ಅಂದ್ರೆ ಇದರ ಹಿಂದೆ ಯಾರಿದ್ದಾರೆ? ಅಂಗೈ ಹುಣ್ಣಿಗೆ ಕನ್ನಡಿ ಬೇಕಾ? ನಾನು ಕಾನೂನು ವ್ಯವಸ್ಥೆ ಬಗ್ಗೆ ಹೇಳ್ತಿಲ್ಲ. ಅದು ಸರಿಯಾಗಿಯೇ ಇದೆ. ನಾನು 15ನೇ ವರ್ಷ ಇದ್ದಾಗ ಮೊದಲ ಪೊಲೀಸ್ ಕೇಸ್ ಬಿದ್ದಿತ್ತು, ಶಾಸಕ ಆದಾಗ 64 ಕೇಸ್ ಬಿದ್ದಿತ್ತು. ಆ ಕಾರಣಕ್ಕೆ ಈ ವ್ಯವಸ್ಥೆ ಇಂಟರ್ನಲಿ ಹೇಗೆ ಕೆಲಸ ಮಾಡತ್ತೆ ಅಂತ ನನಗೆ ಚೆನ್ನಾಗಿ ಗೊತ್ತು. ರಮ್ಯಾಗೆ ಅವಹೇಳ ಆದ್ರೆ 12 ಅರೆಸ್ಟ್ ಮಾಡಿದ್ರಿ. ವೀರೇಂದ್ರ ಹೆಗಡೆಯವರ ಅವಹೇಳನ ಮಾಡಿದ ಎಷ್ಟು ಜನರನ್ನ ಅರೆಸ್ಟ್ ಮಾಡಿದ್ರಿ ಯಾಕೆ ಅರೆಸ್ಟ್ ಮಾಡಿಲ್ಲ? ಅರೆಸ್ಟ್ ಮಾಡಿಲ್ಲ ಅಂದ್ರೆ ಕಾಣದ ಕೈಗಳು ತೆರೆಮರೆಯಲ್ಲಿ ಕೆಲಸ ಮಾಡ್ತಿವೆ ಅಂತ ಅರ್ಥ ಆಗತ್ತಲ್ಲ ಪ್ರಿಯಾಂಕ ಖರ್ಗೆ ಅವರೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ದಸರಾ ಉದ್ಘಾಟನೆಗೆ ಭಾನು ಮುಷ್ತಾಕ್ ಆಯ್ಕೆ ವಿವಾದ:
ಮೈಸೂರು ದಸರಾ ಉದ್ಘಾಟನೆಗೆ ಭಾನು ಮುಷ್ತಾಕ್ ಆಯ್ಕೆಯಾದ ವಿಚಾರದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಿಟಿ ರವಿ, ತಾಯಿ ಭುವನೇಶ್ವರಿ ಬುರ್ಕಾ ಆಹಾಕೋಕೆ ಆಗತ್ತೇನ್ರಿ? ಒಂದು ವೇಳೆ ಇಸ್ಲಾಂ ಬಗ್ಗೆ ಭಾನು ಮುಷ್ತಾಕ್ ಅವರು ಅಗೌರವಾಗಿ ಮಾತನಾಡಿದ್ರೆ, ಅವರನ್ನ ಕಲ್ಲಲ್ಲಿ ಹೊಡೆದು ಸಾಯಿಸಿ ಬಿಡ್ತಿದ್ರು. ಭಾನು ಮುಷ್ತಾಕ್ ಅವ್ರಿಗೆ ಕನ್ನಡ ಧ್ವಜ. ಅರಿಶಿನ-ಕುಂಕುಮ,ಭುವನೇಶ್ವರಿ ಬಗ್ಗೆ ಅವರ ಭಾವನೆ ಪೂರಕವಾಗಿಲ್ಲ.ಅವರು ಮುಸ್ಲಿಮರಾಗಿ ಆಗಿ ಹುಟ್ಟಿರಬಹುದು. ಈ ನೆಲದ ಸಂಸ್ಕೃತಿ, ಅವರ ಭಾವನೆಯನ್ನ ಧಿಕ್ಕರಿಸತ್ತೆ. ತಾಯಿ ಭುವನೇಶ್ವರಿ ಬುರ್ಕಾ ಹಾಕೋಕೆ ಆಗತ್ತೇನ್ರಿ ಎಂದು ಖಾರವಾಗಿ ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯಗೆ ಸಿಟಿ ರವಿ ಪ್ರಶ್ನೆ:
. ಭುವನೇಶ್ವರಿ ಕುಂಕುಮ ಇಡಬೇಕು, ಆರತಿ ಬೆಳಗಬೇಕು.. ತಾಯಿ ಭುವನೇಶ್ವರಿಗೆ ಬುರ್ಕಾ ಹಾಕೋಕೆ ಆಗಲ್ಲ, ಈ ನೆಲಕ್ಕೆ ಒಂದು ಸಂಸ್ಕೃತಿ ಇದೆಯಲ್ಲ. ನಾವು ಇಸ್ಲಾಂ ಬಗ್ಗೆ ಖುರಾನ್ ಬಗ್ಗೆ ಮೊಹಮ್ಮದ್ ಪೈಗಂಬರ್ ಬಗ್ಗೆ ಮಾತನಾಡಿದ್ರೆ,ಸಹಿಸಿಕೊಳ್ತಾರಾ? ಅದನ್ನ ಸಹಿಸೋದಿಲ್ಲ. ಒಂದು ವೇಳೆ ಇಸ್ಲಾಂ ಬಗ್ಗೆ ಭಾನು ಮುಷ್ತಾಕ್ ಅವರು ಅಗೌರವಾಗಿ ಮಾತನಾಡಿದ್ರೆ, ಅವರನ್ನ ಕಲ್ಲಲ್ಲಿ ಹೊಡೆದು ಸಾಯಿಸಿ ಬಿಡ್ತಿದ್ರು. ನೀವು ಮಾತನಾಡಿದ ಭಾವನೆ ಸರಿಯಿಲ್ಲ ವಿಷಾಧ ವ್ಯಕ್ತಪಡಿಸಿ ಅಂತ ಹೇಳಿದ್ದೇವೆ. ನೀವು ಇಲ್ಲಿರೋ ಬಹುಸಂಖ್ಯಾತರಲ್ಲ, ಅಲ್ಪ ಸಂಖ್ಯಾತರಾಗಿದ್ದು ಹಾಗೇ ಮಾತನಾಡಬಾರ್ದು. ಬಹು ಸಂಖ್ಯಾತರ ಭಾವನೆಗೆ ಧಕ್ಕೆ ತರೋ ಹಾಗೆ ಮಾತನಾಡಬಾರ್ದು. ಮುಖ್ಯಂತ್ರಿಗಳು ನೀವು ಅವರ ಆಯ್ಕೆ ಸಮರ್ಥನೆ ಮಾಡಿಕೊಂಡಿದ್ದಿರಿ. ನೀವು ಅವರ ಮಾತನ್ನ ಸಮರ್ಥಸ್ತಿರಾ ಸಮರ್ಥಿಸಲ್ಲ ಅನ್ನೋದಾದ್ರೆ ನೀವು ಕ್ಷಮೆ ಕೇಳಿ ಅಂತ ಹೇಳಬೇಕಿತ್ತಲ್ವಾ? ನಿಮಗೆ ಓಟಿಗಿಂತ ನಾಡು-ನುಡಿ ಬಗ್ಗೆ ಗೌರವ ಇದ್ರೆ ನೀವು ಈ ಬಗ್ಗೆ ಮಾತನಾಡಬೇಕಿತ್ತಲ್ಲ ಎಂದು ಕಿಡಿಕಾರಿದರು.
