ಜಯನಗರದಲ್ಲಿ ರ್‍ಯಾಪಿಡೋ ಸವಾರ ಮತ್ತು ಮಹಿಳಾ ಗ್ರಾಹಕಿ ನಡುವೆ ಬೀದಿ ಜಗಳ ನಡೆದು ಪರಸ್ಪರ ಹಲ್ಲೆ ನಡೆದಿದೆ. ಸಿಗ್ನಲ್ ಜಂಪ್ ಮತ್ತು ಮಾರ್ಗ ಬದಲಾವಣೆ ಕುರಿತು ಗ್ರಾಹಕಿ ಪ್ರಶ್ನಿಸಿದ್ದಕ್ಕೆ ಸವಾರ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ. ಸವಾರ ಮಾತ್ರ ಗ್ರಾಹಕಿಯೇ ಹಲ್ಲೆ ನಡೆಸಿದ್ದಾಗಿ ಹೇಳಿಕೊಂಡಿದ್ದಾನೆ.
ಬೆಂಗಳೂರು (ಜೂ.17) : ಪ್ರಯಾಣದ ವೇಳೆ ಕ್ಷುಲ್ಲಕ ಕಾರಣಕ್ಕೆ ರ್‍ಯಾಪಿಡೋ ಸ್ಕೂಟರ ಸವಾರ ಹಾಗೂ ಮಹಿಳಾ ಗ್ರಾಹಕಿ ಮಧ್ಯೆ ನಡು ರಸ್ತೆಯಲ್ಲಿ ಬೀದಿ ಜಗಳ ನಡೆದು ಪರಸ್ಪರ ಕೈ-ಕೈ ಮಿಲಾಯಿಸಿರುವ ಘಟನೆ ಜಯನಗರದ 3ನೇ ಹಂತದಲ್ಲಿ ನಡೆದಿದೆ.
ಬಿಟಿಎಂ ಲೇಔಟ್ ನಿವಾಸಿ ಶ್ರೇಯಾ ಮೇಲೆ ಹಲ್ಲೆ ನಡೆದಿದ್ದು, ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಬೈಕ್ ಸವಾರ ಸುಹಾಸ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನಂತರ ಆತನನ್ನು ಪತ್ತೆ ಹಚ್ಚಿ ಬೈಕ್ ಜಪ್ತಿ ಮಾಡಲಾಗಿದೆ. ಆರೋಪಿಗೆ ವಿಚಾರಣೆಗೆ ಹಾಜರಾಗುವಂತೆ ಜಯನಗರ ಪೊಲೀಸರು ನೋಟಿಸ್ ನೀಡಿದ್ದಾರೆ. ಆದರೆ ತನ್ನ ಮೇಲಿನ ಆರೋಪವನ್ನು ಸವಾರ ನಿರಾಕರಿಸಿದ್ದಾನೆ.
ಈ ಘಟನೆ ಬಗ್ಗೆ ದೂರು ನೀಡುವುದಕ್ಕೆ ಶ್ರೇಯಾ ಅವರಿಗೆ ಆಸಕ್ತಿ ಇರಲಿಲ್ಲ. ಆದರೆ ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಸ್ನೇಹಿತರ ಸಲಹೆ ಮೇರೆಗೆ ಮೂರು ದಿನಗಳ ಬಳಿಕ ಆಕೆ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಯುವತಿ ಆರೋಪವೇನು?:
ಬಿಟಿಎಂ ಲೇಔಟ್‌ನಿಂದ ಜೂನ್ 13ರಂದು ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಜಯನಗರದ ಮೂರನೇ ಹಂತಕ್ಕೆ ಬ್ಲ್ಯಾಕ್‌ಗೆ ರ್‍ಯಾಪಿಡೋ ಸ್ಕೂಟಿ ಬುಕ್ ಮಾಡಿದ್ದೆ. ಬುಕ್ ಆದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಸ್ಕೂಟರ್ ಬಂತು. ಆದರೆ ನಿಗದಿತ ಸ್ಥಳಕ್ಕೆ ತಲುಪಿದ ಬಳಿಕ ಅತಿವೇಗ ಹಾಗೂ ಸಿಗ್ನಲ್ ಜಂಪ್ ಮಾಡಿದ್ದನ್ನು ಸವಾರನನ್ನು ಪ್ರಶ್ನಿಸಿದ್ದೆ. ಇದಕ್ಕೆ ಆತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ. ಅಲ್ಲದೆ ಸಾರ್ವಜನಿಕವಾಗಿ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅನುಚಿತವಾಗಿ ವರ್ತಿಸಿದ್ದ. ಈ ನಡವಳಿಕೆಗೆ ನಾನು ವಿರೋಧಿಸಿದೆ. ಆಗ ನನ್ನ ಕಪಾಳಕ್ಕೆ ಹೊಡೆದು ರಸ್ತೆಗೆ ತಳ್ಳಿದ ಎಂದು ಶ್ರೇಯಾ ದೂರಿದ್ದಾರೆ.
ಇಂಗ್ಲೀಷ್‌ನಲ್ಲಿ ಮಾತನಾಡಿ ಹೊಡೆದಳು- ಬೈಕ್ ಸವಾರ:
ನಿಗದಿತ ಮಾರ್ಗದಲ್ಲಿ ಬರುವಾಗ ಮಾರ್ಗ ಮಧ್ಯೆ ಜಂಕ್ಷನ್‌ನಲ್ಲಿ ರೆಡ್ ಸಿಗ್ನಲ್ ಇತ್ತು. ಆಗ ಆಕೆಗೆ ಕಚೇರಿಗೆ ತೆರಳುವುದಕ್ಕೆ ತಡವಾಗಲಿದೆ ಎಂಬ ಕಾರಣಕ್ಕೆ ಪರ್ಯಾಯ ದಾರಿಯಲ್ಲಿ ಸಾಗಿದೆ. ಜಯನಗರದ ಹಂತಕ್ಕೆ ಬಂದಾಗ ಏಕಾಏಕಿ ಸ್ಕೂಟರ್ ನಿಲ್ಲಿಸುವಂತೆ ಆಕೆ ಹೇಳಿದರು. ಆದರೆ ನನ್ನ ಸ್ಕೂಟರ್ ಹಿಂದೆ ವಾಹನಗಳು ಬರುತ್ತಿದ್ದ ಕಾರಣ ಆಕೆ ಹೇಳಿದ ಸ್ಥಳದಿಂದ 100 ಮೀಟರ್ ದೂರದಲ್ಲಿ ನಿಲ್ಲಿಸಿದೆ. ಇಷ್ಟಕ್ಕೆ ಆಕೆ ಸಿಟ್ಟಿಗೆದ್ದಳು. ನನಗೆ ಏನ್ ಓದಿರೋದು ಎಂದೆಲ್ಲ ಇಂಗ್ಲೀಷ್‌ನಲ್ಲಿ ಮನಬಂದಂತೆ ನಿಂದಿಸಿದರು. ನನಗೆ ಸರಿಯಾಗಿ ಅರ್ಥವಾಗಲಿಲ್ಲ. ಆಗ ಕನ್ನಡದಲ್ಲಿ ಮಾತನಾಡುವಂತೆ ಹೇಳಿದೆ. ಆಗ ಕುತ್ತಿಗೆಗೆ ಕೈ ಹಾಕಿ ಹಲ್ಲೆ ನಡೆಸಿದಳು. ನನಗೆ ಹೊಡೆದ್ದನ್ನು ಅಲ್ಲೇ ಸಮೀಪದ ಕಟ್ಟಡದ ಕೆಲಸಗಾರರು ಸಾಕ್ಷಿಯಾಗಿದ್ದಾರೆ ಎಂದು ಸುಹಾಸ್ ಹೇಳಿದ್ದಾರೆ.
ನನ್ನ ಮೇಲೆ ಹಲ್ಲೆ ಸಂಬಂಧ ಘಟನೆ ನಡೆದ ದಿನವೇ ಆಕೆ ಕೆಲಸ ಮಾಡುತ್ತಿದ್ದ ಕಂಪನಿಗೆ ತೆರಳಿ ದೂರು ನೀಡಿದೆ. ಆಗ ವಿವಾದವನ್ನು ಹೆಚ್ಚು ಮುಂದುವರೆಸುವುದು ಬೇಡ ಎಂದು ಸಮಾಧಾನ ಹೇಳಿದರು. ಅಲ್ಲದೆ ಆಕೆಗೆ ಬುದ್ಧಿವಾದ ಹೇಳುವುದಾಗಿ ಕಂಪನಿಯ ಅಧಿಕಾರಿಗಳು ಹೇಳಿದರು. ಆದರೀಗ ಆಕೆಯೇ ಬಂದು ದೂರು ನೀಡಿದ್ದಾರೆ.
ಸುಹಾಸ್, ಸ್ಕೂಟರ್ ಸವಾರ
ನಿಗದಿತ ಮಾರ್ಗದ ಬದಲಾಗಿ ಬೇರೊಂದು ದಾರಿಯಲ್ಲಿ ಸವಾರ ಸ್ಕೂಟರ್ ಓಡಿಸಿದ. ಇದನ್ನು ಪ್ರಶ್ನಿಸಿದ್ದಕ್ಕೆ ಪದೇ ಪದೇ ಬ್ರೇಕ್ ಹಾಕಿ ಕಿರಿಕಿರಿ ಮಾಡಿದೆ. ಸಂಚಾರ ನಿಯಮ ಪಾಲಿಸುವಂತೆ ಹೇಳಿದ್ದಕ್ಕೆ ಆತ ಹಲ್ಲೆ ನಡೆಸಿದ
ಶ್ರೇಯಾ, ಸಂತ್ರಸ್ತೆ
ಸ್ಕೂಟರ್ ಸವಾರ ಮತ್ತು ಯುವತಿ ಪರಸ್ಪರ ಆರೋಪ ಮಾಡುತ್ತಿದ್ದಾರೆ. ಘಟನೆ ಸಂಬಂಧ ಎರಡು ಕಡೆ ವಿಡಿಯೋಗಳನ್ನು ಪರಿಶೀಲಿಸಲಾಗುತ್ತಿದೆ. ಆರೋಪಿಯನ್ನು ವಿಚಾರಣೆ ಸಹ ನಡೆಸಲಾಗಿದೆ.
ಲೋಕೇಶ್ ಭರಮಪ್ಪ ಜಗಲಾಸರ್, \B\Bಡಿಸಿಪಿ, ದಕ್ಷಿಣ ವಿಭಾಗ
