Asianet Suvarna News Asianet Suvarna News

ಕೋಡಿಹಳ್ಳಿ ಬಣದ ರೈತರ ಮೇಲೆ ಜೆಡಿಎಸ್‌ನ ಮಸಿ: ಇಬ್ಬರಿಗೆ ಗಾಯ, ಆಸ್ಪತ್ರೆಗೆ ದಾಖಲು!

ರಾಜ್ಯ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್‌ ಬಣದ ಸದಸ್ಯರ ಮೇಲೆ ಜೆಡಿಎಸ್‌ ಕಾರ್ಯಕರ್ತರು ಮಸಿ ಎರಚಿರುವ ಘಟನೆ ಶನಿವಾರ ನಡೆದಿದೆ. 

fight between kodihalli chandrashekhar supporters and jds workers gvd
Author
Bangalore, First Published May 29, 2022, 3:05 AM IST

ಬೆಂಗಳೂರು (ಮೇ.29): ರಾಜ್ಯ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್‌ ಬಣದ ಸದಸ್ಯರ ಮೇಲೆ ಜೆಡಿಎಸ್‌ ಕಾರ್ಯಕರ್ತರು ಮಸಿ ಎರಚಿರುವ ಘಟನೆ ಶನಿವಾರ ನಡೆದಿದೆ. ಶನಿವಾರ ಪತ್ರಿಕಾಗೋಷ್ಠಿ ನಡೆಸಲು ಬೆಂಗಳೂರಿನ ಪ್ರೆಸ್‌ಕ್ಲಬ್‌ಗೆ ಕೋಡಿಹಳ್ಳಿ ಚಂದ್ರಶೇಖರ್‌ ಮತ್ತಿತರೆ ರೈತ ಮುಖಂಡರು ಆಗಮಿಸುತ್ತಿದ್ದ ವೇಳೆ ಏಕಾಏಕಿ ಜೆಡಿಎಸ್‌ ಪಕ್ಷದ ಸದಸ್ಯರು ಕೋಡಿಹಳ್ಳಿ ವಿರುದ್ಧ ಏರು ಧ್ವನಿಯಲ್ಲಿ ಮಾತನಾಡುತ್ತಾ ಮುನ್ನುಗ್ಗಿದರು. ಈ ವೇಳೆ ರೈತ ಸಂಘ ಮತ್ತು ಜೆಡಿಎಸ್‌ ಪಕ್ಷದ ಸದಸ್ಯರ ನಡುವೆ ನೂಕಾಟ, ತಳ್ಳಾಟ ನಡೆಯಿತು. ಈ ಹಂತದಲ್ಲಿ ರೈತರ ಮೇಲೆ ಕಪ್ಪು ಬಣ್ಣ ಎರಚಲಾಗಿದೆ.

ರೈತ ಸಂಘದ ಹೆಸರಿನಲ್ಲಿ ಕೋಡಿಹಳ್ಳಿ ಚಂದ್ರಶೇಖರ್‌ ದಂಧೆ ನಡೆಸುತ್ತಿದ್ದಾರೆ. ಪ್ರತಿಭಟನೆ ಹೆಸರಿನಲ್ಲಿ ಸಾರಿಗೆ ನೌಕರರು ಮುಂದಾದಾಗ ನೇತೃತ್ವ ವಹಿಸಿದ್ದ ಅವರು ಹಣ ಪಡೆದು ಪ್ರತಿಭಟನೆ ಕೈಬಿಟ್ಟಿದ್ದಾರೆ. ಈ ಸಂಬಂಧ ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ಜೆಡಿಎಸ್‌ ಕಾರ್ಯಕರ್ತರು ಆರೋಪಿಸಿದರು ಘಟನೆಯಲ್ಲಿ ಇಬ್ಬರು ರೈತ ಸಂಘದ ಕಾರ್ಯಕರ್ತರು ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಕೋಡಿಹಳ್ಳಿ ಚಂದ್ರಶೇಖರ್‌ ತಿಳಿಸಿದ್ದಾರೆ.

Arvind Kejriwal​: ರಾಜ್ಯದಲ್ಲಿ ಆಪ್‌ ಜತೆ ರೈತ ಸಂಘದ ಶಕ್ತಿ ಸೇರ್ಪಡೆ

ಚರ್ಚೆಗೆ ಸಿದ್ದ: ಘಟನೆ ಸಂಬಂಧ ಪ್ರತಿಕ್ರಿಯಿಸಿದ ಕೋಡಿಹಳ್ಳಿ ಚಂದ್ರಶೇಖರ್‌, ರೈತ ಸಂಘದ ಕಾರ್ಯಕರ್ತರ ಮೇಲೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಬೆಂಬಲಿಗರಿಂದ ದಾಳಿ ನಡೆಸುತ್ತಿದ್ದಾರೆ. ಮುಂದಿನ ಚುನಾವಣೆ ಬಗ್ಗೆ ಹತಾಶರಾಗಿ ಈ ರೀತಿಯ ಕೃತ್ಯಗಳನ್ನು ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ನನ್ನ ಹೋರಾಟಕ್ಕೆ ಸಂಬಂಧಿಸಿದಂತೆ ಗೊಂದಲವಿದ್ದಲ್ಲಿ ಚರ್ಚೆ ನಾನು ಸಿದ್ಧನಿದ್ದೇನೆ. ಆದರೆ, ನನ್ನ ಹೋರಾಟದ ಕುರಿತು ಚಾರಿತ್ರ್ಯವಧೆ ಮಾಡುವುದರಿಂದ ನಿಮ್ಮ ಪಕ್ಷಕ್ಕೆ ಯಾವುದೇ ಲಾಭವಾಗುವುದಿಲ್ಲ ಎಂದರು. ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರ ಜಾರಿ ಮಾಡುತ್ತಿರುವ ರೈತ ಕಾಯ್ದೆಗಳ ಪರವಾಗಿ ಇದ್ದಾರೆ. ಇದನ್ನು ನಾವು ರೈತ ಸಮೂಹಕ್ಕೆ ತಿಳಿಸುತ್ತಿದ್ದೇವೆ. ಜತೆಗೆ, ನಾನು ರಾಜಕೀಯ ಪ್ರವೇಶ ಮಾಡಿರುವುದರಿಂದ ಕುಮಾರಸ್ವಾಮಿ ಅವರು ಹತಾಶೆಗೆ ಒಳಗಾಗಿದ್ದು, ಈ ರೀತಿಯ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

Kodihalli Chandrashekar: ಪ್ರಧಾನಿ ಬಳಿ ಮಾತನಾಡುವ ಧಮ್‌, ಸಿಎಂ ಬೊಮ್ಮಾಯಿಗೆ ಎಲ್ಲಿದೆ?

ತನಿಖೆ ನಡೆಸಲಿ: ನಾನು ಏನಾದರೂ ಹಣ ಪಡೆದಿದ್ದಲ್ಲಿ ಅದು ಅಪರಾಧವಾಗಲಿದೆ. ಈ ಬಗ್ಗೆ ಸರ್ಕಾರ ತನಿಖೆ ನಡೆಸಿ ತಪ್ಪಿದ್ದರೆ ನನ್ನ ವಿರುದ್ಧ ಕ್ರಮ ಕೈಗೊಳ್ಳಲಿ. ರಾಜ್ಯದ ರೈತ ಚಳವಳಿ ಚಾರಿತ್ರಿಕ ಚಳವಳಿ. ಅದನ್ನು ನಾನು ಮುಂಚೂಣಿಯಲ್ಲಿ ಕಂಡಿದ್ದೇನೆ. ನಾನು ಭ್ರಷ್ಟಾಚಾರ ವಿರೋಧಿಸುವವನು, ನನ್ನ ನೈತಿಕತೆಗೆ ಮಸಿ ಬಳಿಯುವ ಪ್ರಯತ್ನ ಮಾಡಲಾಗುತ್ತಿದೆ. ನನ್ನ ವಿರುದ್ಧ ಆರೋಪ ಮಾಡುತ್ತಿರುವವರು ಯಾವುದೇ ಕೋರ್ಚ್‌ನ ನ್ಯಾಯಾಧೀಶರಲ್ಲ. ವಿನಾಕಾರಣ ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಲಾಗಿದೆ. ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಕೇಳಿದ್ದೇನೆ. ಈ ಬಗ್ಗೆ ಅವರಿಗೆ ನೀಡಬೇಕಾದ ಮಾಹಿತಿ ಸಲ್ಲಿಸುತ್ತೇನೆ. ನಾನು ತಪ್ಪು ಮಾಡಿದ್ದಲ್ಲಿ ಕ್ರಮ ಆಗಬೇಕು. ಸರ್ಕಾರವು ನನ್ನ ಮೇಲಿನ ಆರೋಪದ ಬಗ್ಗೆ ಸ್ವತಂತ್ರ ಸಂಸ್ಥೆಗೆ ತನಿಖೆಗೆ ನೀಡಲಿ ಎಂದು ಕೋಡಿಹಳ್ಳಿ ಆಗ್ರಹಿಸಿದರು.

Follow Us:
Download App:
  • android
  • ios