Arvind Kejriwal: ರಾಜ್ಯದಲ್ಲಿ ಆಪ್ ಜತೆ ರೈತ ಸಂಘದ ಶಕ್ತಿ ಸೇರ್ಪಡೆ
ದೆಹಲಿ, ಪಂಜಾಬ್ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದ ಆಮ್ ಆದ್ಮಿ ಪಕ್ಷವು ಕರ್ನಾಟಕ ರಾಜ್ಯವನ್ನು ಮುಂದಿನ ಗುರಿಯಾಗಿಸಿಕೊಂಡು ಬೆಂಗಳೂರಿನಲ್ಲಿ ಬೃಹತ್ ರೈತ ಸಮಾವೇಶದ ಮೂಲಕ ರಣ ಕಹಳೆ ಮೊಳಗಿಸಿದೆ.
ಬೆಂಗಳೂರು (ಏ.22): ದೆಹಲಿ, ಪಂಜಾಬ್ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದ ಆಮ್ ಆದ್ಮಿ ಪಕ್ಷವು (AAP) ಕರ್ನಾಟಕ (Karnataka) ರಾಜ್ಯವನ್ನು ಮುಂದಿನ ಗುರಿಯಾಗಿಸಿಕೊಂಡು ಬೆಂಗಳೂರಿನಲ್ಲಿ ಬೃಹತ್ ರೈತ ಸಮಾವೇಶದ ಮೂಲಕ ರಣ ಕಹಳೆ ಮೊಳಗಿಸಿದೆ. ಸಾವಿರಾರು ರೈತರ ಸಮ್ಮುಖದಲ್ಲಿ ರಾಜ್ಯ ರೈತ ಸಂಘವು ಆಮ್ ಆದ್ಮಿ ಪಕ್ಷಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ್ದು, ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ (Kodihalli Chandrashekhar), ನಿವೃತ್ತ ಕೆಎಎಸ್ ಅಧಿಕಾರಿ ಕೆ. ಮಥಾಯಿ ಸೇರಿದಂತೆ ಹಲವರು ದೆಹಲಿ ಮುಖ್ಯಮಂತ್ರಿ, ಆಪ್ ಸಂಚಾಲಕ ಅರವಿಂದ ಕೇಜ್ರಿವಾಲ್ (Arvind Kejriwal) ಸಮ್ಮುಖದಲ್ಲಿ ಆಪ್ ಸೇರ್ಪಡೆಯಾದರು.
ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಬೃಹತ್ ರೈತ ಸಮಾವೇಶವನ್ನು ರಾಗಿ ಮತ್ತು ಧಾನ್ಯದ ರಾಶಿಗೆ ಪೂಜೆ ಮಾಡುವ ಮೂಲಕ ಉದ್ಘಾಟಿಸಿದ ಅರವಿಂದ ಕೇಜ್ರಿವಾಲ್, 75 ವರ್ಷಗಳಿಂದ ರೈತರಿಗೆ ಎಲ್ಲ ಪಕ್ಷಗಳೂ ವಂಚಿಸುತ್ತ ಬಂದಿವೆ. ಈಗ ನೀವೇ ರಾಜಕೀಯಕ್ಕೆ ಬಂದು ನೀವು ಆಡಳಿತ ನಡೆಸಿ ಎಂದು ದೇಶದ ರೈತರಿಗೆ ಕರೆ ನೀಡಿದರು. ಕೇಂದ್ರ ಸರ್ಕಾರವು ದೆಹಲಿ ಸರ್ಕಾರದ ಮೇಲೆ ಸಿಬಿಐ, ಐಟಿ, ಇಡಿ ದಾಳಿ ನಡೆಸಿ ಯಾವುದೇ ಭ್ರಷ್ಟಾಚಾರ ದಾಖಲೆ ಸಂಗ್ರಹಿಸಲು ಆಗಿಲ್ಲ. ಈ ಮೂಲಕ ಕೇಂದ್ರ ಸರ್ಕಾರವೇ ನಮಗೆ 0% ಸರ್ಕಾರ ಎಂದು ಪ್ರಮಾಣಪತ್ರ ನೀಡಿದೆ. ಹೀಗಾಗಿ ರಾಜ್ಯದಲ್ಲಿ 40 ಪರ್ಸೆಂಟ್ ಸರ್ಕಾರ ತೊಲಗಿಸಿ 0% ಸರ್ಕಾರವನ್ನು ಅಧಿಕಾರಕ್ಕೆ ತನ್ನಿ. ಕೇವಲ ರಾಜ್ಯ ಮಾತ್ರವಲ್ಲ ದೇಶಾದ್ಯಂತ ರೈತರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿ ಎಂದು ಆಹ್ವಾನಿಸಿದರು.
ರಾಜ್ಯ ವಿಧಾನಸಭೆ ಚುನಾವಣೆ ಮೇಲೆ ಆಪ್ ಕಣ್ಣು, 21ಕ್ಕೆ ಬೆಂಗಳೂರಿಗೆ ಕೇಜ್ರೀವಾಲ್!
ರೈತ ಸಂಘದ ರಾಜಕೀಯ ಮುಖವಾಣಿ: ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ರಾಜ್ಯ ರೈತ ಸಂಘವು ಹಿಂದಿನಂತೆಯೇ ಸ್ವತಂತ್ರ ಸಂಘಟನೆಯಾಗಿ ಮುಂದುವರಿಯಲಿದೆ. ಆದರೆ ರಾಜಕೀಯವಾಗಿ ಆಮ್ ಆದ್ಮಿ ಪಾರ್ಟಿಗೆ ಸಂಪೂರ್ಣ ಬೆಂಬಲ ನೀಡಲಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿಯನ್ನು ಅಧಿಕಾರಕ್ಕೆ ತರಲು ರೈತ ಸಂಘದ ಕಾರ್ಯಕರ್ತರು ಹಗಲಿರುಳು ಶ್ರಮಿಸಲಿದ್ದಾರೆ. ನಾಡಿನ ಸಮಸ್ತ ರೈತರ ಹಿತಕ್ಕಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರೈತ ಸಂಘದ ರಾಜಕೀಯ ಮುಖವಾಣಿಯಾಗಿ ಆಪ್ ಇರಲಿದೆ ಎಂದು ಹೇಳಿದರು.
ರೈತರ ಮಕ್ಕಳು ಶಾಸಕರಾಗಬೇಕು: ಬಿಜೆಪಿಗೆ ಪರ್ಯಾಯ ಕಾಂಗ್ರೆಸ್, ಕಾಂಗ್ರೆಸ್‌ಗೆ ಪರ್ಯಾಯ ಜೆಡಿಎಸ್, ಈ ಮೂರೂ ಪಕ್ಷಗಳಿಗೆ ಪರ್ಯಾಯ ಆಮ್ ಆದ್ಮಿ ಪಕ್ಷ. ರಾಜ್ಯದ ವಿಧಾನಸೌಧದಲ್ಲಿ ಇರುವ 224 ಶಾಸಕರಲ್ಲಿ ಭ್ರಷ್ಟಾಚಾರಿಗಳು, ಕಚ್ಚೆ ಹರಕರು ಇದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿನ 17 ಮಂದಿ ತಮ್ಮ ಸೆಕ್ಸ್ ಸಿ.ಡಿ. ಹೊರಬರಬಾರದು ಎಂದು ತಡೆಯಾಜ್ಞೆ ತಂದಿದ್ದಾರೆ. ಇಂತಹವರನ್ನು ಇಟ್ಟುಕೊಂಡು ಮುಂದುವರೆಯಲು ನಿಮಗೆ ನೈತಿಕತೆ ಇದೆಯೇ? ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರವು ರೈತ ವಿರೋಧಿ ನೀತಿಗಳ ಮೂಲಕ ರಾವಣ ರೀತಿ ವರ್ತಿಸುತ್ತಿದೆ. ಮುಂದಿನ ರಾವಣನಿಗೆ ಆದ ಸ್ಥಿತಿಯೇ ಕೇಂದ್ರ ಬಿಜೆಪಿಗೆ ಉಂಟಾಗಲಿದೆ. ರಾಜ್ಯಾದ್ಯಂತ ರೈತರು ವಿಧಾನಸೌಧ ಪ್ರವೇಶಿಸಬೇಕು. ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರಬೇಕು. ಕೇಜ್ರಿವಾಲ್ ಪ್ರಧಾನ ಮಂತ್ರಿ ಆಗಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಕೃಷಿ ಮಾಡಬೇಕು ಎಂದರು. ಎರಡು ವಾರಗಳ ಹಿಂದೆಯಷ್ಟೇ ಆಪ್ ಸೇರ್ಪಡೆಯಾದ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಎಎಪಿ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ, ಆಮ್ ಆದ್ಮಿ ಪಾರ್ಟಿ ಮುಖಂಡರಾದ ಎಚ್.ಡಿ.ಬಸವರಾಜು, ಮೋಹನ್ ದಾಸರಿ ಸೇರಿ ಹಲವರು ಹಾಜರಿದ್ದರು.
ಎಎಪಿಗೆ ಮಥಾಯಿ ಸೇರ್ಪಡೆ: ಸಮಾವೇಶದಲ್ಲಿ ನಿವೃತ್ತ ಕೆಎಎಸ್ ಅಧಿಕಾರಿ ಕೆ.ಮಥಾಯಿಯವರು ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾದರು. ದಕ್ಷ ಅಧಿಕಾರಿ ಎಂದೇ ಹೆಸರು ಮಾಡಿರುವ ಮಥಾಯಿಯವರು, ಎಂದೂ ಭ್ರಷ್ಟಾಚಾರದೊಂದಿಗೆ ರಾಜಿ ಮಾಡಿಕೊಳ್ಳದ ತಮ್ಮ ನಡೆಯಿಂದಾಗಿ 18 ವರ್ಷಗಳ ವೃತ್ತಿ ಜೀವನದಲ್ಲಿ 28ಕ್ಕೂ ಹೆಚ್ಚು ಸಲ ವರ್ಗಾವಣೆಯ ಶಿಕ್ಷೆ ಅನುಭವಿಸಿದ್ದಾರೆ.
ಪೇನ್ ಕಿಲ್ಲರ್ ನುಂಗಿ ಕೇಜ್ರಿ ಭಾಷಣ: ಎರಡು ದಿನಗಳ ಹಿಂದೆ ಹಲ್ಲು ನೋವು ಇತ್ತು. ಅದಕ್ಕಾಗಿ ಆಪರೇಷನ್ ಆಗಿದೆ. ಹೀಗಾಗಿ ಹಲ್ಲಿನ ನೋವಿನಿಂದಾಗಿ ಮಾತನಾಡಬಾರದು ಎಂದು ನಿರ್ಧರಿಸಿದ್ದೆ. ಇಷ್ಟುಮಂದಿ ರೈತರಿದ್ದಾಗ ಮಾತನಾಡದೇ ಇರಬಾರದು ಎಂದು ಪೇನ್ ಕಿಲ್ಲರ್(ನೋವು ನಿವಾರಕ) ಪಡೆದು ಮಾತನಾಡುತ್ತಿದ್ದೇನೆ ಎಂದು ಕೇಜ್ರಿವಾಲ್ ಹೇಳಿದರು.
ಸಂತೋಷ್ ಆತ್ಮಹತ್ಯೆ ಕೇಸ್: ಎರಡೂ ಪಕ್ಷಗಳಿಗೆ ಮಾತನಾಡುವ ನೈತಿಕತೆ ಇಲ್ಲ: ಭಾಸ್ಕರ್ ರಾವ್
ಜೊಳ್ಳಿನ ರೀತಿ ತೂರಿ ಹೋಗಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮೂರು ಚೀಟಿಗಳನ್ನು ಹೊಂದಿದ್ದ ರಾಗಿಯನ್ನು ತೂರಿದರು. 40 ಪರ್ಸೆಂಟ್ ಸರ್ಕಾರ ಹೋಗಲಿ, ರೈತ ವಿರೋಧಿ ಸರ್ಕಾರ ಹೋಗಲಿ, ಕಣ್ಣೀರು ಹಾಕಿಸುವ ಸರ್ಕಾರ ತೊಲಗಲಿ ಎಂದು ಮೂರು ಚೀಟಿ ಬರೆದು ರಾಗಿಯಲ್ಲಿ ಹಾಕಲಾಗಿತ್ತು. ಜೊಳ್ಳಿನ ರೀತಿ ಇವೆಲ್ಲವೂ ತೂರಿ ಹೋಗಲಿ ಎಂದು ಹೇಳಿ ಅರವಿಂದ ಕೇಜ್ರಿವಾಲ್ ರಾಗಿ ತೂರಿದರು.